​ಮಹಾರಾಷ್ಟ್ರ: ಖಾಸಗಿ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇಕಡ 80 ಮೀಸಲು!

Update: 2019-11-29 03:37 GMT

ಮುಂಬೈ, ನ.29: ಭಾರತದ ಸಂವಿಧಾನದ ಪೀಠಿಕೆಯಿಂದ ಜಾತ್ಯತೀತ ಹಾಗೂ ಸಮಾಜವಾದಿ ಎಂಬ ಪದಗಳನ್ನು ಕಿತ್ತು ಹಾಕಬೇಕು ಎಂದು ಆಗ್ರಹಿಸಿದ್ದ ಶಿವಸೇನೆ ಇದೀಗ ಹೊಸ ನಿಲುವು ತಾಳಿದೆ. ಶಿವಸೇನೆ ನೇತೃತ್ವದಲ್ಲಿ ಮೂರು ಪಕ್ಷಗಳು ರಚಿಸಿಕೊಂಡಿರುವ ಸಮಾನ ಕನಿಷ್ಠ ಕಾರ್ಯಕ್ರಮ (ಸಿಎಂಪಿ) ಕಾರ್ಯಸೂಚಿಯ ಮೊದಲ ವಾಕ್ಯವೇ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಸಮ್ಮಿಶ್ರ ಸರ್ಕಾರ ಶ್ರಮಿಸುತ್ತದೆ ಎಂದು ಹೇಳಿದೆ.

ಉದ್ಧವ್ ಠಾಕ್ರೆ, ಜಯಂತ ಪಾಟೀಲ್ ಹಾಗೂ ಬಾಳಾ ಸಾಹೇಬ್ ಥೋರಟ್ ಸಹಿ ಮಾಡಿರುವ ಸಿಎಂಪಿ ಪ್ರಕಾರ, "ಸಂವಿಧಾನದಲ್ಲಿ ಪ್ರತಿಪಾದಿಸಲಾದ ಜಾತ್ಯತೀತ ಮೌಲ್ಯಗಳನ್ನು ಎತ್ತಿಹಿಡಿಯಲು ಈ ಮೈತ್ರಿಕೂಟ ಬದ್ಧವಾಗಿದೆ"

ಉದ್ಯಮಗಳಿಗೆ ತ್ವರಿತವಾಗಿ ಕ್ಲಿಯರೆನ್ಸ್ ನೀಡುವುದು, ವಿಸ್ತೃತ ವಿಮೆ ಸುರಕ್ಷೆ ಹೊಂದಿರುವ ಆರೋಗ್ಯ ಸೇವೆ, ಕೊಳಗೇರಿ ಪುನರ್ವಸತಿ ಮೂಲಕ ದೊಡ್ಡ ಮನೆಗಳ ಹಂಚಿಕೆಯಂಥ ಅಂಶಗಳು ಕೂಡಾ ಸೇರಿವೆ.

ಅಕಾಲಿಕ ಮಳೆಯಿಂದಾಗಿ ಬೆಳೆ ಕಳೆದುಕೊಂಡಿರುವ ರೈತರಿಗೆ ತಕ್ಷಣ ಪರಿಹಾರ ಹಾಗೂ ಸಾಲಮನ್ನಾ ನಿರ್ಧಾರ ಕೂಡಾ ಸಿಎಂಪಿಯ ಇನ್ನೊಂದು ಪ್ರಮುಖ ಅಂಶ. ಬೆಳೆ ನಷ್ಟಕ್ಕೆ ತಕ್ಷಣ ಪರಿಹಾರ ದೊರಕುವಂತೆ ಮಾಡುವ ನಿಟ್ಟಿನಲ್ಲಿ ಬೆಳೆ ವಿಮೆ ಯೋಜನೆಯ ಪರಿಷ್ಕರಣೆ ಮಾಡುವ ಜತೆಗೆ ರೈತರ ಉತ್ಪನ್ನಗಳಿಗೆ ಸೂಕ್ತ ಬೆಲೆ ದೊರಕಿಸಿಕೊಡುವ ಭರವಸೆಯನ್ನೂ ಸಿಎಂಪಿ ನೀಡಿದೆ.

ನಿರುದ್ಯೋಗ ಸಮಸ್ಯೆ ನಿವಾರಿಸುವ ನಿಟ್ಟಿನಲ್ಲಿ ಸರ್ಕಾರದ ಖಾಲಿ ಹುದ್ದೆಗಳನ್ನು ಭರ್ತಿ ಮಾಡುವ ಮತ್ತು ಖಾಸಗಿ ವಲಯದ ಉದ್ಯೋಗದಲ್ಲಿ ಸ್ಥಳೀಯರಿಗೆ ಶೇಕಡ 80 ಹುದ್ದೆಗಳನ್ನು ಮೀಸಲಿಡುವ ಭರವಸೆಯನ್ನೂ ನೀಡಲಾಗಿದೆ. ಸಿಎಂಪಿ ವಿವರಗಳನ್ನು ಜಯಂತ್ ಪಾಟೀಲ್ ಅವರು ಜಂಟಿ ಸುದ್ದಿಗೋಷ್ಠಿಯಲ್ಲಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News