​ಪ್ರಯಾಣಿಕನಾಗಿ ವಿಮಾನಯಾನ ಕೈಗೊಂಡಿದ್ದ ಪೈಲಟ್‌ಗೆ ವಿಮಾನ ಚಾಲನೆ ಯೋಗ !

Update: 2019-12-01 03:35 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ತೀರಾ ಮಬ್ಬು ಬೆಳಕಿನಲ್ಲಿ ವಿಮಾನ ಇಳಿಸುವ ಬಗ್ಗೆ ವಿಶೇಷ ತರಬೇತಿ ಪಡೆದ ಪೈಲಟ್ ಒಬ್ಬರು ಪ್ರಯಾಣಿಕರಾಗಿ ವಿಮಾನಯಾನ ಕೈಗೊಂಡಿದ್ದ ವೇಳೆ ವಿಮಾನ ಚಾಲನೆ ಮಾಡುವ ಅಪರೂಪದ ಅವಕಾಶ ದೊರಕಿದ ಘಟನೆ ವರದಿಯಾಗಿದೆ.

ಶನಿವಾರ ಮುಂಜಾನೆ ಪುಣೆಯಿಂದ ದೆಹಲಿಗೆ ಬರುತ್ತಿದ್ದ ಇಂಡಿಗೊ ವಿಮಾನದಲ್ಲಿ ಈ ವಿಶೇಷ ಘಟನೆ ನಡೆದಿದೆ.

ದೆಹಲಿಯ ಇಂದಿರಾಗಾಂಧಿ ಅಂತರ್ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದಟ್ಟ ಮಂಜಿನ ಕಾರಣದಿಂದ ವಿಮಾನ ಇಳಿಸುವುದು ಕಷ್ಟಸಾಧ್ಯ ಎಂದು ಕಂಡುಬಂದಾಗ ಈ ಪ್ರಯಾಣಿಕನಲ್ಲಿ ವಿಮಾನ ಇಳಿಸುವಂತೆ ಮನವಿ ಮಾಡಲಾಯಿತು. ಪುಣೆಗೆ ಶುಕ್ರವಾರ ವಿಮಾನ ಒಯ್ದಿದ್ದ ಕ್ಯಾಪ್ಟನ್, 6E-6571 ವಿಮಾನದಲ್ಲಿ ದೆಹಲಿಯ ಮನೆಗೆ ವಾಪಸ್ಸಾಗುತ್ತಿದ್ದರು.

"ಬೋರ್ಡಿಂಗ್ ಪೂರ್ಣಗೊಂಡ ಬಳಿಕ ದೆಹಲಿಯಲ್ಲಿ ದೃಶ್ಯತೆ ಮಟ್ಟ ಇಳಿಕೆಯಾಗುತ್ತಿರುವುದು ತಿಳಿಯಿತು. ಸಾಮಾನ್ಯವಾಗಿ ಡಿಸೆಂಬರ್ ಮಧ್ಯಭಾಗದಿಂದ ದೆಹಲಿಗೆ ತೆರಳುವ ಮುಂಜಾನೆ ಹಾಗೂ ಸಂಜೆಯ ವಿಮಾನಗಳಿಗೆ ಮಬ್ಬು ಬೆಳಕಿನಲ್ಲಿ ಇಳಿಸುವ ಪರಿಣತಿ ಹೊಂದಿದ ಪೈಲಟ್‌ಗಳನ್ನು (ಕ್ಯಾಟ್ 3ಬಿ) ಕೂಡಾ ನಿಯೋಜಿಸುತ್ತೇವೆ. ಆದರೆ ಶನಿವಾರ ಮುಂಜಾನೆ ದಿಢೀರನೇ ದೃಶ್ಯತೆ ಪ್ರಮಾಣ ಕುಸಿದ ಹಿನ್ನೆಲೆಯಲ್ಲಿ ಏನು ಮಾಡಬೇಕೆಂದು ತೋಚದಾಯಿತು" ಎಂದು ಇಂಡಿಗೋ ಮೂಲಗಳು ಹೇಳಿವೆ.

6E-6571 ವಿಮಾನಕ್ಕೆ ನಿಯೋಜನೆಗೊಂಡಿದ್ದ ಕ್ಯಾಪ್ಟನ್ ಕ್ಯಾಟ್ 3-ಬಿ ತರಬೇತಿ ಪಡೆದಿರಲಿಲ್ಲ. ಆದರೆ ಸಹ ಪೈಲಟ್ ಈ ತರಬೇತಿ ಪಡೆದಿದ್ದರು. ಆದರೆ ಇದೇ ವಿಮಾನದಲ್ಲಿ ಕ್ಯಾಟ್-3ಬಿ ತರಬೇತಿ ಪಡೆದ ವ್ಯಕ್ತಿ ಪ್ರಯಾಣಿಕನಾಗಿ ವಿಮಾನದಲ್ಲಿರುವುದು ಗೊತ್ತಾಯಿತು. ಪ್ರಯಾಣಿಕರಿಗೆ ಅನಾನುಕೂಲತೆಯಾಗಬಾರದು ಎಂಬ ಕಾರಣಕ್ಕೆ ಆಂತರಿಕ ಅನುಮೋದನೆ ಪಡೆದುಕೊಂಡು ಈ ಹೊಣೆಗಾರಿಕೆ ವಹಿಸಲಾಯಿತು ಎಂದು ಸ್ಪಷ್ಟಪಡಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News