ನೋಟು ರದ್ದತಿಯಲ್ಲಿ ಹಣ ಕಳೆದುಕೊಂಡ ಸಹೋದರಿಯರಿಗೆ ಪಿಂಚಣಿ !

Update: 2019-12-01 03:44 GMT
ಫೋಟೊ : ndtv.com

ಚೆನ್ನೈ: 500 ಹಾಗೂ 1000 ರೂ. ಮುಖಬೆಲೆಯ ನೋಟು ರದ್ದತಿ ವೇಳೆ 40 ಸಾವಿರ ರೂ. ಕಳೆದುಕೊಂಡಿದ್ದ ಇಬ್ಬರು ಹಿರಿಯ ಸಹೋದರಿಯರಿಗೆ ಮಾಸಿಕ ವೃದ್ಧಾಪ್ಯ ಪಿಂಚಣಿಯನ್ನು ಬಿಡುಗಡೆ ಮಾಡಲು ತಿರುಪ್ಪೂರು ಜಿಲ್ಲಾಡಳಿತ ಕ್ರಮ ಕೈಗೊಂಡಿದೆ.

ಪ್ರಿಯಾ ರಂಗಮ್ಮಾಳ್ ಮತ್ತು ಚಿನ್ನಾ ರಂಗಮ್ಮಾಳ್ ಎಪ್ಪತ್ತರ ಹರೆಯದವರಾಗಿದ್ದು, ತಮ್ಮ ವೈದ್ಯಕೀಯ ತುರ್ತು ಅಗತ್ಯತೆಗಳಿಗಾಗಿ ಹಾಗೂ ಮೃತಪಟ್ಟಾಗ ಅಂತ್ಯಸಂಸ್ಕಾರ ನೆರವೇರಿಸಲು ಅನುವಾಗುವಂತೆ 500 ರೂ. ಮತ್ತು 1000 ರೂ. ಮುಖಬೆಲೆಯ 40 ಸಾವಿರ ರೂ. ಮೌಲ್ಯದ ನೋಟುಗಳನ್ನು ರಹಸ್ಯವಾಗಿ ಬಚ್ಚಿಟ್ಟಿದ್ದರು. ಆದರೆ ಕಳೆದ ವರ್ಷ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಈ ಹಣವನ್ನು ನೀಡಿದಾಗ, ಅವರ ಬಳಿ ಇದ್ದ ಹಣಕ್ಕೆ ಯಾವ ಮೌಲ್ಯವೂ ಇಲ್ಲ; ಅದು ರದ್ದಾದ ನೋಟುಗಳು ಎನ್ನುವುದು ತಿಳಿಯಿತು.

"ಯಾವುದೇ ರದ್ದತಿಯಾದ ನೋಟುಗಳನ್ನು ಹೊಂದಿದ್ದೀರಾ ಎಂದು ಮೂರು ವರ್ಷ ಹಿಂದೆ ಮಕ್ಕಳು ಕೇಳಿದ್ದರು ಹಾಗೂ ಅದನ್ನು ವಿನಿಮಯ ಮಾಡಬೇಕಾಗುತ್ತದೆ ಎಂದು ಹೇಳಿದ್ದರು. ಆದರೆ ನಮ್ಮ ಕೈಯಿಂದ ಹಣ ಕಸಿಯಲು ಹೀಗೆ ಕೇಳುತ್ತಿದ್ದಾರೆ ಎಂಬ ಸಂಶಯದಿಂದ ಅಂಥ ಹಣ ಇಲ್ಲ ಎಂದು ಹೇಳಿದ್ದೆವು. ಆದರೆ ಇದರ ಬಗ್ಗೆ ನಮಗೇನೂ ತಿಳಿದಿರಲಿಲ್ಲ" ಎಂದು ಸಹೋದರಿಯರು ವಿವರಿಸಿದರು.

ಈ ಸಹೋದರಿಯರ ಪೈಕಿ ಒಬ್ಬಾಕೆ ಕ್ಷಯರೋಗದಿಂದ ಬಳಲುತ್ತಿದ್ದಾರೆ. ಇಬ್ಬರ ಗಂಡಂದಿರು ಕೂಡಾ ಎಳೆ ವಯಸ್ಸಿನಲ್ಲೇ ಮೃತಪಟ್ಟಿದ್ದರು. ಇದೀಗ ಕೂಲಿ ಕೆಲಸ ಮಾಡುವ ಮಕ್ಕಳ ಜತೆಗೆ ಗುಡಿಸಲಲ್ಲಿ ವಾಸವಾಗಿದ್ದಾರೆ.

ಇವರ ಸ್ಥಿತಿ ಬಗ್ಗೆ ಸ್ಥಳೀಯ ಪತ್ರಿಕೆಗಳಿಗೆ ನೆರೆಮನೆಯ ಮಣಿಮಾರನ್ ಮಾಹಿತಿ ನೀಡಿದ್ದರು. ವೃದ್ಧಾಪ್ಯದಲ್ಲಿ ಯಾವ ಆದಾಯವೂ ಇಲ್ಲದೇ ಸಂಕಷ್ಟದಲ್ಲಿದ್ದಾರೆ. ಸರ್ಕಾರ ಇವರ ಆರ್ಥಿಕ ಹಾಗೂ ಆರೋಗ್ಯ ಪರಿಸ್ಥಿತಿಯನ್ನು ಗಮನಿಸಿ, ರದ್ದತಿಯಾದ ನೋಟುಗಳ ಬದಲು ಹೊಸ ನೋಟುಗಳನ್ನು ನೀಡಬೇಕು ಎಂದು ಆಗ್ರಹಿಸಲಾಗಿತ್ತು.

ಆದರೆ ಇದರಿಂದ ಸ್ವಲ್ಪ ಮಟ್ಟಿಗಷ್ಟೇ ಪ್ರಯೋಜನವಾಗಬಹುದು ಎಂದು ಅವರ ಸಹೋದರ ಜಗನ್ನಾಥನ್, ಜಿಲ್ಲಾಧಿಕಾರಿ ಕೆ.ವಿಜಯ ಕಾರ್ತಿಕೇಯನ್‌ಗೆ ಹೇಳಿದ್ದರು. ಅವರಿಗೆ ಪಿಂಚಣಿ ನೀಡಿದರೆ ಒಳ್ಳೆಯದು ಎಂಬ ಸಲಹೆ ನೀಡಿದ್ದರು. ಅದರೆ ನೋಟು ವಿನಿಮಯ ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿದ ಜಿಲ್ಲಾಧಿಕಾರಿ ಇಬ್ಬರಿಗೂ ತಲಾ 1000 ರೂ. ಪಿಂಚಣಿ ನೀಡಲು ನಿರ್ಧರಿಸಿದ್ದಾರೆ. ಅವರ ಚಿಕಿತ್ಸೆಗೂ ವ್ಯವಸ್ಥೆ ಮಾಡಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News