ಗ್ರಾಹಕರ ಗಮನಕ್ಕೆ: ವೊಡಾ ಐಡಿಯಾ, ಏರ್‌ಟೆಲ್, ಜಿಯೋ ದರಗಳಲ್ಲಿ ಭಾರೀ ಏರಿಕೆ

Update: 2019-12-01 15:18 GMT

ಹೊಸದಿಲ್ಲಿ, ಡಿ.1: ತನ್ನ ಪ್ರಿಪೇಯ್ಡ್ ಗ್ರಾಹಕರಿಗೆ ಕರೆ ಮತ್ತು ಡಾಟಾ ಪ್ಲಾನ್ ದರಗಳನ್ನು ಡಿ.3ರಿಂದ ಶೇ.42ರಷ್ಟು ಹೆಚ್ಚಿಸುವುದಾಗಿ ಭಾರ್ತಿ ಏರ್‌ಟೆಲ್ ರವಿವಾರ ಪ್ರಕಟಿಸಿದೆ. ವೊಡಾಫೋನ್ ಐಡಿಯಾ ತನ್ನ ದರಗಳಲ್ಲಿ ಹೆಚ್ಚಳವನ್ನು ಪ್ರಕಟಿಸಿದ ಬೆನ್ನಿಗೇ ಏರ್‌ಟೆಲ್‌ನ ಈ ಪ್ರಕಟಣೆ ಹೊರಬಿದ್ದಿದೆ.

ಕಂಪನಿಯು ತನ್ನ ನೂತನ ಪ್ಲಾನ್‌ಗಳನ್ನೂ ಪ್ರಕಟಿಸಿದ್ದು,ಇವು ಏರ್‌ಟೆಲ್ ಗ್ರಾಹಕರು ‘ಅನಿಯಮಿತ ’ವರ್ಗದಲ್ಲಿ ಹಾಲಿ ತೆರುತ್ತಿರುವ ದರಗಳಿಗೆ ಹೋಲಿಸಿದರೆ ಶೇ.42ರವರೆಗೆ ದುಬಾರಿಯಾಗಿವೆ.

  ಏರ್‌ಟೆಲ್‌ನ ನೂತನ ಪ್ಲಾನ್ ದರಗಳನ್ನು ಪ್ರತಿ ದಿನಕ್ಕೆ ಕೇವಲ 50 ಪೈಸೆಯಿಂದ 2.85 ರೂ.ವರೆಗೆ ಹೆಚ್ಚಿಸಲಾಗಿದ್ದು, ಇವು ಧಾರಾಳ ಕರೆ ಮತ್ತು ಡಾಟಾ ಲಾಭಗಳನ್ನು ನೀಡಲಿವೆ ಎಂದು ಪ್ರಕಟಣೆ ತಿಳಿಸಿದೆ. ಏರ್‌ಟೆಲ್ ಎಕ್ಸ್‌ಟ್ರೀಮ್‌ನ ಬಳಕೆ ಸೇರಿದಂತೆ ಏರ್‌ಟೆಲ್ ಥ್ಯಾಂಕ್ಸ್‌ನ ಅಂಗವಾಗಿ ವಿಶೇಷ ಸೌಲಭ್ಯಗಳನ್ನೂ ಒದಗಿಸುವುದಾಗಿ ಕಂಪನಿಯು ತಿಳಿಸಿದೆ.

ವೊಡಾಫೋನ್ ಐಡಿಯಾ ಕೂಡ ಡಿ.3ರಿಂದ ತನ್ನ ಮೊಬೈಲ್ ಕರೆಗಳು ಮತ್ತು ಡಾಟಾ ದರಗಳನ್ನು ಹೆಚ್ಚಿಸುವುದಾಗಿ ರವಿವಾರ ಪ್ರಕಟಿಸಿದೆ.

ಕಂಪನಿಯು 2, 28, 84 ಮತ್ತು 365 ದಿನಗಳ ವ್ಯಾಲಿಡಿಟಿಗಳೊಂದಿಗೆ ತನ್ನ ನೂತನ ಪ್ಲಾನ್‌ಗಳನ್ನು ಘೋಷಿಸಿದೆ. ಈಗಿನ ಪ್ಲಾನ್‌ಗಳಿಗೆ ಹೋಲಿಸಿದರೆ ಹೊಸ ಪ್ಲಾನ್‌ಗಳು ಶೇ.42ರವರೆಗೆ ದುಬಾರಿಯಾಗಿವೆ.

ಇದೇ ರೀತಿ ಡಿಸೆಂಬರ್ 6ರಿಂದ ರಿಲಯನ್ಸ್ ಜಿಯೋ ಕೂಡ ಮೊಬೈಲ್ ಸೇವೆ ದರಗಳನ್ನು ಹೆಚ್ಚಿಸಲಿದೆ.

"ಅನ್ ಲಿಮಿಟೆಡ್ ವಾಯ್ಸ್ ಮತ್ತು ಡಾಟಾಗಳನ್ನೊಳಗೊಂಡ ಆಲ್ ಇನ್ ಒನ್ ಪ್ಲಾನ್ ಗಳನ್ನು ಜಿಯೋ ಪರಿಚಯಿಸಲಿದೆ. ಹೊಸ ಯೋಜನೆಯ ಮೊತ್ತ 40 ಶೇ.ದಷ್ಟು ಹೆಚ್ಚಳವಾಗಲಿದೆ. ಜಿಯೋ ಗ್ರಾಹಕರಿಗೆ 300 ಶೇ. ಹೆಚ್ಚಿನ ಲಾಭಗಳು ಲಭಿಸಲಿವೆ" ಎಂದು ಜಿಯೋ ಪ್ರಕಟನೆಯಲ್ಲಿ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News