ತ್ರಿವಳಿ ಕೊಲೆ, ತಾಯಿ-ಮಗಳ ಅತ್ಯಾಚಾರ ನಡೆಸಿದ ದುಷ್ಕರ್ಮಿಯ ಬಂಧನ

Update: 2019-12-03 09:57 GMT

ಲಕ್ನೋ: ಆಝಂಘರ್ ನ ಮುಬಾರಕ್‍ ಪುರ್ ಪ್ರದೇಶದ ದಂಪತಿ ಹಾಗೂ ಶಿಶುವನ್ನು ಕೊಂದು ದಂಪತಿಯ ಇತರ ಇಬ್ಬರು ಮಕ್ಕಳ ಮೇಲೆ ಗಂಭೀರ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸೋಮವಾರ ಪೊಲೀಸರು 38 ವರ್ಷದ ದುಷ್ಕರ್ಮಿ ನಾಸಿರುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ.

ಆತ ಹರ್ಯಾಣ, ದಿಲ್ಲಿ ಹಾಗೂ ಪಶ್ಚಿಮ ಬಂಗಾಳದಲ್ಲೂ ಇಂತಹದ್ದೇ ಭೀಭತ್ಸ ಕೃತ್ಯ ನಡೆಸಿದ್ದಾನೆಂದು ಪೊಲೀಸ್ ವಿಚಾರಣೆಯಿಂದ ತಿಳಿದು ಬಂಧಿದೆ.

ತಾನು 30 ವರ್ಷದ ಮಹಿಳೆ, ಆಕೆಯ ಪತಿ ಹಾಗೂ ನಾಲ್ಕು ತಿಂಗಳ ಮಗುವನ್ನು ಕೊಂದು ನಂತರ ಮಹಿಳೆಯ ಶವದ ಅತ್ಯಾಚಾರ ನಡೆಸಿದ್ದಷ್ಟೇ ಅಲ್ಲದೆ ದಂಪತಿಯ 10 ವರ್ಷದ ಪುತ್ರಿಯ ಮೇಲೆ ಅತ್ಯಾಚಾರಗೈದಿರುವುದಾಗಿ ಆತ ಬಾಯ್ಬಿಟ್ಟಿದ್ದಾನೆ ಎನ್ನಲಾಗಿದೆ.

ದಂಪತಿ ಹಾಗೂ ಮಗುವನ್ನು ಕೊಂದ ನಂತರ ಆತ ಆ ಮನೆಯಲ್ಲಿ ಮಹಿಳೆಯ ಮೃತದೇಹದ ಜತೆ ಲೈಂಗಿಕ ಕ್ರಿಯೆಯಲ್ಲಿ ಮೂರು ಗಂಟೆಗಳ ಕಾಲ ತೊಡಗಿ ತನ್ನ ಕೃತ್ಯವನ್ನು ವೀಡಿಯೋ ಚಿತ್ರೀಕರಣ ನಡೆಸಿ ನಂತರ ಅದನ್ನು ತನ್ನ ನಾದಿನಿಗೆ ತೋರಿಸಿದ್ದನೆನ್ನಲಾಗಿದ್ದು ಅದನ್ನು ನೋಡಿ ಆಕೆ ಹೌಹಾರಿದ್ದಳು. ಈ ಕೃತ್ಯ ನಡೆಸುವ ಮುನ್ನ ಆತ ಔಷಧಿ ಸೇವಿಸಿದ್ದನಲ್ಲದೆ ಕಾಂಡೋಂಗಳನ್ನೂ ತನ್ನ ಜತೆ ಕೊಂಡು ಹೋಗಿದ್ದ. ಚಾಕು ಹಾಗೂ ಭಾರವಾದ ಕಲ್ಲನ್ನು ಬಳಸಿ ಕೊಲೆ ನಡೆಸಿದ್ದ ಎಂದು ಆಝಂಘರ್ ಎಸ್‍ಪಿ ತ್ರಿವೇಣಿ ಸಿಂಗ್ ಹೇಳಿದ್ದಾರೆ.

ನವೆಂಬರ್ 24ರ ರಾತ್ರಿ ಎಲ್ಲರೂ ಮಲಗಿದ್ದ ವೇಳೆ ಆತ ಆ ಮನೆ ಪ್ರವೇಶಿಸಿ ಈ ಕೃತ್ಯ ನಡೆಸಿದ್ದಾನೆ. ದಂಪತಿಯ ಐದು ವರ್ಷದ  ಮಗನ ಮೇಲೂ ಹಲ್ಲೆ ನಡೆಸಿದ್ದಾನೆ.

ಆರೋಪಿಯನ್ನು ಪೊಲೀಸರು ಆತನ ಮನೆಯಿಂದ ಬಂಧಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News