ಮುದ್ರಾ ಯೋಜನೆಯಡಿ ಶೇ.3ರಷ್ಟು ಸಾಲಗಳು ಕೆಟ್ಟಸಾಲಗಳಾಗಿ ಪರಿಣಮಿಸಿವೆ: ಕೇಂದ್ರ ಸರಕಾರ

Update: 2019-12-03 15:36 GMT

ಹೊಸದಿಲ್ಲಿ, ಡಿ.3: ಪ್ರಧಾನ ಮಂತ್ರಿ ಮುದ್ರಾ ಯೋಜನೆ (ಪಿಎಂಎಂವೈ)ಯಡಿ ವಿತರಿಸಲಾದ 6.04 ಲ.ಕೋ.ರೂ. ಸಾಲಗಳ ಪೈಕಿ ಸುಮಾರು ಶೇ.3ರಷ್ಟು ಕೆಟ್ಟಸಾಲಗಳಾಗಿ ಪರಿಣಮಿಸಿವೆ ಎಂದು ಸರಕಾರವು ಮಂಗಳವಾರ ರಾಜ್ಯಸಭೆಯಲ್ಲಿ ತಿಳಿಸಿದೆ.

ಪಿಎಂಎಂವೈ ಜಾರಿಗೆ ಬಂದಾಗಿನಿಂದ ಮಾರ್ಚ್,2019ಕ್ಕೆ ಇದ್ದಂತೆ ಒಟ್ಟು 6.04 ಲಕ್ಷ ಕೋಟಿ ರೂ.ಸಾಲಗಳನ್ನು ವಿತರಿಸಲಾಗಿದ್ದು, ಈ ಪೈಕಿ 17,251.52 ಕೋ.ರೂ.ಗಳು ಅನುತ್ಪಾದಕ ಆಸ್ತಿಗಳಾಗಿ ಪರಿಣಮಿಸಿವೆ ಮತ್ತು ಇದು ಒಟ್ಟು ಸಾಲದ ಶೇ.2.86ರಷ್ಟಾಗಿದೆ ಎಂದು ಶೆಡ್ಯೂಲ್ಡ್ ವಾಣಿಜ್ಯ ಬ್ಯಾಂಕುಗಳು ಮತ್ತು ಪ್ರಾದೇಶಿಕ ಗ್ರಾಮೀಣ ಬ್ಯಾಂಕುಗಳು ವರದಿ ಮಾಡಿವೆ ಎಂದು ಸಹಾಯಕ ವಿತ್ತಸಚಿವ ಅನುರಾಗ ಠಾಕೂರ್ ತಿಳಿಸಿದ್ದಾರೆ.

ಪಿಎಂಎಂವೈ ಜಾರಿಗೆ ಸಂಬಂಧಿಸಿದಂತೆ ಸಾಲದ ಅರ್ಜಿಗಳ ನಿರಾಕರಣೆ, ಸಾಲ ನೀಡಿಕೆಯಲ್ಲಿ ವಿಳಂಬ ಮತ್ತು ಕೆಲವು ಸಂದರ್ಭಗಳಲ್ಲಿ ಸಹಭದ್ರತೆ/ಖಾತರಿದಾರರನ್ನು ಒದಗಿಸುವಂತೆ ಅರ್ಜಿದಾರರಿಗೆ ಒತ್ತಾಯದಂತಹ ಯಾವುದೇ ದೂರು ಬಂದರೆ ಅದನ್ನು ಆಯಾ ಬ್ಯಾಂಕಿನ ಸಮನ್ವಯದೊಂದಿಗೆ ಬಗೆಹರಿಸಲಾಗುವುದು ಎಂದರು.

ಪ್ರತ್ಯೇಕ ಪ್ರಶ್ನೆಗೆ ಉತ್ತರಿಸಿದ ಸಚಿವರು,ಕಳೆದ ಐದು ಹಣಕಾಸು ವರ್ಷಗಳಲ್ಲಿ ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳ ಒಟ್ಟು ಶಾಖೆಗಳ ಸಂಖ್ಯೆ ಮಾರ್ಚ್ 2014ರಲ್ಲಿದ್ದ 78,939ರಿಂದ ಮಾರ್ಚ್ 2019ಕ್ಕೆ 87,580ಕ್ಕೆ ಏರಿಕೆಯಾಗಿದೆ ಎಂದು ತಿಳಿಸಿದರು.

ಸಾರ್ವಜನಿಕ ಕ್ಷೇತ್ರದ ಬ್ಯಾಂಕುಗಳು 2014-15, 2015-16, 2016-17, 2017-18 ಮತ್ತು 2018-19ರ ಹಣಕಾಸು ವರ್ಷಗಳಲ್ಲಿ ಅನುಕ್ರಮವಾಗಿ 47,658 ಕೋ.ರೂ., 56,847 ಕೋ.ರೂ., 9,048 ಕೋ.ರೂ., 1,24,275 ಕೋ.ರೂ. ಮತ್ತು 1,86,632 ಕೋ.ರೂ. ಸಾಲಗಳನ್ನು ರೈಟ್ ಆಫ್ ಅಥವಾ ಆಯವ್ಯಯ ಪಟ್ಟಿಯಲ್ಲಿ ವಜಾ ಮಾಡಿವೆ. ಈ ಪೈಕಿ ಕೃಷಿ ಮತ್ತು ಸಹ ಚಟುವಟಿಕೆಗಳಿಗೆ ಸಂಬಂಧಿತ ಸಾಲಗಳ ಮೊತ್ತ ಅನುಕ್ರಮವಾಗಿ 2,833 ಕೋ.ರೂ.,6,361 ಕೋ.ರೂ.,7,091 ಕೋ.ರೂ.,10345 ಕೋ.ರೂ. ಮತ್ತು 12,556 ಕೋ.ರೂ.ಗಳಾಗಿವೆ ಎಂದೂ ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News