ಕಡುಬಡತನ: ಹಸಿವನ್ನು ಸಹಿಸಲಾಗದೆ ಮಣ್ಣನ್ನು ತಿಂದ ನಾಲ್ಕು ಮಕ್ಕಳು

Update: 2019-12-03 17:01 GMT
ಶ್ರೀದೇವಿಯವರ ಕುಟುಂಬ ವಾಸಿಸುತ್ತಿರುವ ಜೋಪಡಿ (Photo: thehindu.com)

ತಿರುವನಂತಪುರಂ: ಹಸಿವನ್ನು ಸಹಿಸಲು ಸಾಧ್ಯವಾಗದೆ ನಾಲ್ವರು ಮಕ್ಕಳು ಮಣ್ಣನ್ನು ತಿಂದ ಘಟನೆ ಕೇರಳದ ತಿರುವನಂತಪುರಂನ ಗ್ರಾಮವೊಂದರಲ್ಲಿ ನಡೆದಿದೆ. ಈ ಘಟನೆಯ ಬಗ್ಗೆ ವರದಿಯಾದ ನಂತರ ಕುಟುಂಬಕ್ಕೆ ಹಲವರು ಸಹಾಯಹಸ್ತ ಚಾಚುತ್ತಿದ್ದಾರೆ.

ಈ ಕುಟುಂಬದಲ್ಲಿ ತಾಯಿ ಶ್ರೀದೇವಿ ಜೊತೆ 6 ಮಕ್ಕಳಿದ್ದಾರೆ. ಹಿರಿಯ ಪುತ್ರನಿಗೆ 7 ವರ್ಷ ವಯಸ್ಸಾಗಿದ್ದರೆ, ಸಣ್ಣ ಮಗುವಿನ ವಯಸ್ಸು 3 ತಿಂಗಳು.

ಈ ಆಘಾತಕಾರಿ ಘಟನೆಯ ಬಗ್ಗೆ ವರದಿಯಾದ ನಂತರ ಜಿಲ್ಲಾ ಮಕ್ಕಳ ಸಂರಕ್ಷಣಾ ಸಮಿತಿ ಮಕ್ಕಳನ್ನು ತಮ್ಮ ವಶಕ್ಕೆ ಪಡೆದಿದೆ. ಕಿರಿಯ ಇಬ್ಬರು ಮಕ್ಕಳಿಗೆ ಎದೆಹಾಲು ನೀಡಬೇಕಾಗಿರುವುದರಿಂದ ಅವರನ್ನು ತಾಯಿಯ ಬಳಿ ಬಿಟ್ಟು ಬರಲಾಗಿದೆ. ಈ ಮಕ್ಕಳ ತಂದೆಯ ಮದ್ಯಪಾನಿಯಾಗಿದ್ದಾನೆ ಎಂದು ವರದಿಯಾಗಿದೆ.

ಕಡುಬಡತನದಿಂದ ಕೂಡಿರುವ ಈ ಕುಟುಂಬಕ್ಕೆ ತಿನ್ನಲು ಏನೂ ಇಲ್ಲ. ಇಲ್ಲಿನ ನಿವಾಸಿಗಳಲ್ಲಿ ಕೆಲವರು ಬಡತನದಿಂದ ಚಡಪಡಿಸುತ್ತಿರುವ ಈ ಕುಟುಂಬದ ಬಗ್ಗೆ ಮಾಹಿತಿ ನೀಡಿದ್ದರು. ಈ ಮಾಹಿತಿಯನ್ವಯ ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿಗಳು ಶ್ರೀದೇವಿಯವರ ಮನೆಗೆ ಬಂದಾಗ ಹಿರಿಯ ಪುತ್ರ ಮಣ್ಣನ್ನು ತಿನ್ನುತ್ತಿರುವುದು ಕಂಡುಬಂದಿತ್ತು. ಈ ಬಗ್ಗೆ ಆತನಲ್ಲಿ ವಿಚಾರಿಸಿದಾಗ ತನ್ನ ತಮ್ಮಂದಿರೂ ಕೂಡ ಹಸಿವು ತಾಳಲಾರದೆ ಮಣ್ಣು ತಿನ್ನುತ್ತಾರೆ ಎಂದು ತಿಳಿಸಿದ್ದ.

ಇದೀಗ ಮಕ್ಕಳನ್ನು ಮಕ್ಕಳ ರಕ್ಷಣಾ ಸಮಿತಿಗೆ ಹಸ್ತಾಂತರಿಸಿದ ನಂತರ ಶ್ರೀದೇವಿಯವರಿಗೆ ಉದ್ಯೋಗ ಕೊಡಿಸುವ ಭರವಸೆಯನ್ನು ಸ್ಥಳೀಯಾಡಳಿತ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News