ಪೌರತ್ವ ತಿದ್ದುಪಡಿ ಮಸೂದೆ ಮಂಡನೆಗೆ ಕೇಂದ್ರ ಸಚಿವ ಸಂಪುಟ ಸಭೆ ಅಸ್ತು

Update: 2019-12-19 05:40 GMT

ಹೊಸದಿಲ್ಲಿ, ಡಿ.4: ವಿವಾದಾತ್ಮಕ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಚಿವ ಸಂಪುಟ ಅನುಮೋದನೆ ನೀಡಿದ್ದು ಇದನ್ನು ಈಗ ನಡೆಯುತ್ತಿರುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲೇ ಮಂಡಿಸಲಾಗುವುದು ಎಂದು ಕೇಂದ್ರ ಸಚಿವ ಪ್ರಕಾಶ್ ಜಾವಡೇಕರ್ ಹೇಳಿದ್ದಾರೆ.

ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರಗಳಾದ ಬಾಂಗ್ಲಾದೇಶ, ಅಫಘಾನಿಸ್ತಾನ ಮತ್ತು ಪಾಕಿಸ್ತಾನದಲ್ಲಿ ಕಿರುಕುಳಕ್ಕೆ ಒಳಗಾಗಿ ಭಾರತಕ್ಕೆ ವಲಸೆ ಬಂದು 6 ವರ್ಷದಿಂದ ಇಲ್ಲಿ ನೆಲೆಸಿರುವ ಹಿಂದುಗಳು, ಬೌದ್ಧರು, ಸಿಖ್, ಜೈನರು, ಪಾರ್ಸಿಗಳು ಹಾಗೂ ಕ್ರಿಶ್ಚಿಯನ್ನರಿಗೆ ಪೌರತ್ವ ನೀಡುವ ಉದ್ದೇಶದಿಂದ 1955ರ ಕಾನೂನಿಗೆ ತಿದ್ದುಪಡಿ ತಂದಿರುವ ಮಸೂದೆ ಇದಾಗಿದೆ.

ಕಳೆದ ಲೋಕಸಭೆಯಲ್ಲಿ ಇದಕ್ಕೆ ಅಂಗೀಕಾರ ದೊರಕಿದ್ದರೂ ರಾಜ್ಯಸಭೆಯಲ್ಲಿ ಮಂಡಿಸಿರಲಿಲ್ಲ. ಮೇ ತಿಂಗಳಿನಲ್ಲಿ ಲೋಕಸಭೆಯ ಅವಧಿ ಅಂತ್ಯಗೊಂಡ ಕಾರಣ ಮಸೂದೆಯೂ ರದ್ದಾಗಿದೆ. ಸಂಸತ್ತಿನಲ್ಲಿ ಶೀಘ್ರದಲ್ಲೇ ಮಸೂದೆ ಮಂಡನೆಯಾಗಲಿರುವ ಹಿನ್ನೆಲೆಯಲ್ಲಿ ಎಲ್ಲಾ ಸಂಸದರೂ ಸದನದಲ್ಲಿ ಹಾಜರಿರುವಂತೆ ಬಿಜೆಪಿ ತನ್ನ ಸಂಸದರಿಗೆ ಸೂಚನೆ ನೀಡಿದೆ. ಲೋಕಸಭೆಯಲ್ಲಿ ಮಸೂದೆಗೆ ಸುಲಭದಲ್ಲಿ ಅಂಗೀಕಾರ ಪಡೆದರೂ ರಾಜ್ಯಸಭೆಯಲ್ಲಿ ಅನುಮೋದನೆ ಪಡೆಯುವುದು ಸುಲಭವಲ್ಲ. ಕಾಂಗ್ರೆಸ್, ಟಿಎಂಸಿ, ಡಿಎಂಕೆ, ಸಮಾಜವಾದಿ ಪಕ್ಷ, ಆರ್‌ಜೆಡಿ ಹಾಗೂ ಎಡಪಕ್ಷಗಳು ಮಸೂದೆಯನ್ನು ತೀವ್ರವಾಗಿ ವಿರೋಧಿಸುತ್ತಿವೆ.

ಮಸೂದೆಯನ್ನು ಚಳಿಗಾಲದ ಅಧಿವೇಶನದಲ್ಲಿ ಮಂಡಿಸುವ ಸರಕಾರದ ನಿರ್ಧಾರಕ್ಕೆ ಈಶಾನ್ಯ ರಾಜ್ಯಗಳಿಂದ ತೀವ್ರ ವಿರೋಧ ಎದುರಾಗಿದೆ. ಮೇಘಾಲಯ ಹಾಗೂ ನಾಗಾಲ್ಯಾಂಡ್ ಮುಖ್ಯಮಂತ್ರಿಗಳು ಮಸೂದೆಯ ಸ್ವರೂಪದ ಬಗ್ಗೆ ಅಸಮಾಧಾನ ಸೂಚಿಸಿದ್ದರೆ ಅಸ್ಸಾಂ ಮುಖ್ಯಮಂತ್ರಿ ಸೊನೋವಾಲ್ ವೌನಧೋರಣೆಯ ಬಗ್ಗೆಯೂ ತೀವ್ರ ಆಕ್ಷೇಪ ವ್ಯಕ್ತವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News