ಶಾಕಿಂಗ್ ನ್ಯೂಸ್: ಶೀಘ್ರದಲ್ಲೇ ಶೇ.50ರಷ್ಟು ಹೆಚ್ಚಲಿದೆ ಔಷಧಿಗಳ ಬೆಲೆ

Update: 2019-12-14 07:51 GMT

ಮುಂಬೈ: ಆ್ಯಂಟಿಬಯಾಟಿಕ್ಸ್, ಮಲೇರಿಯಾ ಗುಣಪಡಿಸಲು ನೀಡಲಾಗುವ ಔಷಧಿಗಳು, ಬಿಸಿಜಿ ಲಸಿಕೆ ಹಾಗೂ ವಿಟಮಿನ್-ಸಿ ಔಷಧಿ ಸೇರಿದಂತೆ 21 ಪ್ರಮುಖ ಔಷಧಿಗಳ ಬೆಲೆಗಳನ್ನು ಶೇ. 50ರ ತನಕ ಏರಿಸಲು ಫಾರ್ಮಾ ಕಂಪೆನಿಗಳಿಗೆ ಮೊದಲ ಬಾರಿ 'ಸಾರ್ವಜನಿಕ ಹಿತದೃಷ್ಟಿ'ಯಿಂದ ರಾಷ್ಟ್ರೀಯ ಫಾರ್ಮಾಸೂಟಿಕಲ್ಸ್ ಪ್ರೈಸಿಂಗ್ ಅಥಾರಿಟಿ ಅನುಮತಿ ನೀಡಿದೆ.

ಈಗಿನ ಸೀಲಿಂಗ್ ದರದಿಂದ ಶೇ. 50ರಷ್ಟು ಏರಿಕೆಗೆ ಪ್ರಾಧಿಕಾರ ಈ ಅನುಮತಿ ನೀಡಿದೆ. ಔಷಧಿ ದರ ನಿಯಂತ್ರಣ ಆದೇಶ 2013 ಇದರ 19ನೇ ಪ್ಯಾರಾದಲ್ಲಿದ್ದಂತೆ ತನ್ನ ``ಅಸಾಮಾನ್ಯ ಅಧಿಕಾರಗಳನ್ನು ಬಳಸಿ ಸಾರ್ವಜನಿಕ ಹಿತದೃಷ್ಟಿಯಿಂದ'' ಈ ನಿರ್ಧಾರ ಕೈಗೊಂಡಿದ್ದಾಗಿ  ಪ್ರಾಧಿಕಾರ ಹೇಳಿದೆ. ಇಲ್ಲಿಯ ತನಕ ಕಾರ್ಡಿಯಾಕ್ ಸ್ಟೆಂಟ್ ಹಾಗೂ ಇತರ ಇಂಪ್ಲಾಂಟ್‍ ಗಳ ಬೆಲೆ ಇಳಿಸುವ ಸಂದರ್ಭ ಈ ಅಧಿಕಾರವನ್ನು ಪ್ರಾಧಿಕಾರ ಬಳಸಿದ್ದರೆ ಇದೇ ಮೊದಲ ಬಾರಿ ದರ ಏರಿಕೆಗೆ ಅದನ್ನು ಬಳಸಿಕೊಂಡಿದೆ.

ಕೆಲವೊಂದು ಔಷಧಿಗಳ ಬೆಲೆ ಏರಿಸಲು ಫಾರ್ಮಾ ಕಂಪೆನಿಗಳು ಕಳೆದೆರಡು ವರ್ಷಗಳಿಂದ ಮಾಡುತ್ತಿರುವ ಮನವಿಗಳನ್ನು ಆಧರಿಸಿ ಪ್ರಾಧಿಕಾರ ಈ ಕ್ರಮ ಕೈಗೊಂಡಿದೆ.

ಡಿಸೆಂಬರ್ 9ರಂದು ನಡೆದ ಪ್ರಾಧಿಕಾರದ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದ್ದು, ಸತತ ಬೆಲೆ ನಿಯಂತ್ರಣಗೊಳಗಾಗಿರುವ ಹಾಗೂ ಕಡಿಮೆ ಬೆಲೆಗಳ  21 ಶೆಡ್ಯೂಲ್ಡ್  ಔಷಧಿಗಳ ಬೆಲೆ ಏರಿಕೆಗೆ ಈಗ ದಾರಿ ಮಾಡಿಕೊಟ್ಟಂತಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News