ಒಡೆಯ: ದುಷ್ಟರೊಂದಿಗೆ ಹೊಡೆದಾಡುವವನೇ ಈ ಒಡೆಯ..!
ದರ್ಶನ್ ಎಂದ ಮೇಲೆ ಹೊಡೆದಾಟ ದೃಶ್ಯ ಇರಲೇಬೇಕು. ಅವರ ಯಾವೊಬ್ಬ ಅಭಿಮಾನಿ ಕೂಡ ಹೊಡೆದಾಟವಿಲ್ಲದ ದರ್ಶನ್ ಪಾತ್ರವನ್ನು ಊಹಿಸಲಾರ. ಆದರೆ ಯಾರು ಹೊಡೆದರೂ, ಹೊಡೆಯದಿದ್ದರೂ ತಾವು ಮಾತ್ರ ಚಪ್ಪಾಳೆ ಹೊಡೆಯುವಂಥ ದೃಶ್ಯಗಳನ್ನೇ ನೀಡಿದ್ದಾರೆ ಎನ್ನುತ್ತಿದ್ದಾರೆ ಪ್ರೇಕ್ಷಕರು. ಅದಕ್ಕೆ ಒಡೆಯದಲ್ಲಿನ ನಾಯಕನ ಪಾತ್ರಕ್ಕೆ ನೀಡಿರುವ ಕತೆಯೇ ಕಾರಣ. ಹಾಗಂತ ಇದು ಪಕ್ಕಾ ಒರಿಜಿನಲ್ ಕತೆಯೇನಲ್ಲ. ಈಗಾಗಲೇ ತಮಿಳಲ್ಲಿ ತೆರೆಕಂಡಿರುವ ‘ವೀರಂ’ ಚಿತ್ರದ ರಿಮೇಕ್. ಆದರೆ ಎರಡನ್ನು ಪಕ್ಕದಲ್ಲಿರಿಸಿದರೆ ಯಾವುದು ರಿಮೇಕ್ ಯಾವುದು ಒರಿಜಿನಲ್ ಎಂದು ಗೊಂದಲಗೊಳ್ಳುವ ಹಾಗೆ ನಿರ್ದೇಶಿಸಬಲ್ಲ ಎಂ. ಡಿ. ಶ್ರೀಧರ್ ಅವರ ಮ್ಯಾನೇಜಿಂಗ್ ಡೈರೆಕ್ಷನ್ ಮೆಚ್ಚಲೇಬೇಕು.
ಸಾಮಾನ್ಯವಾಗಿ ಹೊಡೆದಾಡುವ ನಾಯಕನಲ್ಲಿ ಇನ್ನು ಮುಂದೆ ಕೈ ಎತ್ತ ಬೇಡ ಎಂದು ಮಾತು ತೆಗೆದುಕೊಳ್ಳುವ ತಾಯಿ ಅಥವಾ ಪ್ರೇಯಸಿಯಿಂದಾಗಿ ಆತನೇ ಏಟು ತಿನ್ನುವ ದೃಶ್ಯಗಳನ್ನು ನೋಡಿರುತ್ತೇವೆ. ಆದರೆ ಪ್ರೇಯಸಿ ಶಾಂತಿ ಪ್ರಿಯೆ ಎನ್ನುವ ಕಾರಣಕ್ಕಾಗಿ ತಾನು ಕೂಡ ಆಯುಧ ಕೈಗೆತ್ತುವುದಿಲ್ಲ ಎನ್ನುವ ಮೂಲಕ ನಮ್ಮ ನಾಯಕ ವಿಭಿನ್ನವಾಗುತ್ತಾನೆ. ಆದರೆ ಆ ಮಾತನ್ನು ಕೂಡ ಉಳಿಸಿಕೊಳ್ಳದೆ ಒಂದೆಡೆಯಿಂದ ನಿರಾಳವಾಗಿ ಶತ್ರುನಾಶ ಮಾಡುತ್ತಾ ಸಾಗುವ ಕ್ಯಾರೆಕ್ಟರ್ ದರ್ಶನ್ ಅಭಿಮಾನಿಗಳಿಗೆ ಖುಷಿ ನೀಡುತ್ತದೆ. ನಾಲ್ವರು ತಮ್ಮಂದಿರ ಒಳಿತಿಗಾಗಿ ಮದುವೆಯಾಗುವುದೇ ಬೇಡ ಎಂಬ ನಿರ್ಧಾರಕ್ಕೆ ಬಿದ್ದವನನ್ನು ಹೇಗೆ ತಮ್ಮಂದಿರೇ ಉಪಾಯದಿಂದ ಪ್ರೇಮದ ಬಲೆಯಲ್ಲಿ ಕೆಡವುತ್ತಾರೆ ಎನ್ನುವುದನ್ನು ಮನರಂಜನೀಯವಾಗಿ ತೋರಿಸಲಾಗಿದೆ.
ಮೇಲ್ನೋಟಕ್ಕೆ ಮುದ್ದಾನೆಯಂತೆ ಕಂಡರೂ ಮದ್ದಾನೆಯಂತೆ ಹೊಡೆದಾಡುವ ಒಡೆಯ ಗಜೇಂದ್ರನಾಗಿ ದರ್ಶನ್ ಎಂದಿನಂತೆ ಎಲ್ಲರ ಮನಗೆಲ್ಲುತ್ತಾರೆ. ದರ್ಶನ್‌ಗೆ ಜೋಡಿಯಾಗಿ ಶಾಕಾಂಬರೀ ದೇವಿ ಪಾತ್ರದಲ್ಲಿ ಸನಾ ತಿಮ್ಮಯ್ಯ ನವನಾಯಕಿಯಾಗಿ ಎಂಟ್ರಿ ನೀಡಿದ್ದಾರೆ. ವಜ್ರಮುನಿಯಂಥ ಪಾತ್ರ ಮಾತ್ರವಲ್ಲ, ಅದೇ ಹಳೆಯ ಶೈಲಿಯಂತೆ ನಾಯಕಿಗಿಂತಲೂ ಹೆಚ್ಚೇ ಮೇಕಪ್ ಹಾಕಿರುವ ಖಳನಾಗಿ ಶರತ್ ಲೋಹಿತಾಶ್ವ ಗಮನ ಸೆಳೆಯುತ್ತಾರೆ. ಆದರೆ ತಾನೋರ್ವ ಭಯಾನಕ ಖಳನೇ ಹೌದು ಎನ್ನುವುದನ್ನು ಮತ್ತೊಮ್ಮೆ ನೆನಪಿಸುವ ನರಸಿಂಹನ ಪಾತ್ರದಲ್ಲಿ ರವಿಶಂಕರ್ ಅಬ್ಬರಿಸಿದ್ದಾರೆ.
ಗಜೇಂದ್ರನ ಸ್ನೇಹಿತ, ಕಳ್ಳ ಬ್ರಹ್ಮಚಾರಿ ಮತ್ತು ಒಮ್ಮೆಯೂ ಯೂನಿಫಾರ್ಮ್ ನಲ್ಲಿ ಕಾಣಿಸಿಕೊಳ್ಳದ ಕಮಿಷನರ್ ಪಾತ್ರದಲ್ಲಿ ರವಿಶಂಕರ್ ಗೌಡ ನಟಿಸಿದ್ದಾರೆ. ಒಳ್ಳೆಯತನದ ಜಾತ್ರೆ ನಡೆಸುವ ಶ್ರೀನಿವಾಸನಾಗಿ ಎಂದಿನ ರೌದ್ರಾವತಾರಗಳಿಂದ ದೂರವಿರುವ ಪಾತ್ರದಲ್ಲಿ ಕೂಡ ದೇವರಾಜ್ ಆಕರ್ಷಕ ನಟನೆ ನೀಡಿರುವುದು ವಿಶೇಷ. ಒಡೆಯರ್ ಸಹೋದರಿ, ಜಾತ್ರೆಗೆ ಬರುವ ಚಂದದ ತಂಗಿಯಾಗಿ ಅಶ್ವಿನಿಗೌಡ ಅವರ ಅಭಿನಯವಿದೆ.
ತಂಗಿಯ ಗಂಡನಾಗಿ ಶಂಕರ್ ಅಶ್ವಥ್, ಒಡೆಯರ್ ತಮ್ಮ ಪರಂಧಾಮನಾಗಿ ಸಾಧುಕೋಕಿಲ, ಹೀಗೆ ತಾರೆಗಳ ಸುರಿಮಳೆಯಿಂದ ಚಿತ್ರ ಸಮೃದ್ಧವಾಗಿದೆ. ಸಾಧುಕೋಕಿಲ ಮತ್ತು ಚಿಕ್ಕಣ್ಣ ಕಾಂಬಿನೇಶನ್ ಹಾಸ್ಯ ನಗುವಿಗೆ ಕೊರತೆಯಾಗದಂತೆ ನೋಡಿಕೊಂಡಿದೆ. ಗಜೇಂದ್ರನ ತಮ್ಮಂದಿರಲ್ಲಿ ಯಶಸ್ ಸೂರ್ಯ ಮತ್ತು ಪಂಕಜ್ ನಾರಾಯಣ್ ಪಾತ್ರಗಳು ಗಮನ ಸೆಳೆಯುತ್ತವೆ. ಪೋಷಕ ಪಾತ್ರವಾಗಿ ಭವಾನಿ ಪ್ರಕಾಶ್ ಅವರು ಕೂಡ ಒಂದೇ ದೃಶ್ಯದಲ್ಲಿ ಮಿಂಚಿದ್ದಾರೆ.
ಪ್ರಮುಖವಾಗಿ ಯಾವ ತಾಂತ್ರಿಕತೆಗಿಂತಲೂ, ಯಾರೇನೇ ನಟಿಸಿದರೂ ದರ್ಶನ್ ಅವರ ಚಿತ್ರಗಳ ಮೂಲಕ ಮಾಸ್ ಅಭಿಮಾನಿಗಳು ಏನು ಬಯಸುತ್ತಾರೆಯೋ ಅದನ್ನು ನೀಡುವಲ್ಲಿ ನಿರ್ದೇಶಕರು ಗೆದ್ದಿದ್ದಾರೆ ಎಂದು ಹೇಳಬಹುದು. ಅದಕ್ಕೆ ಪೂರಕವಾದ ಸಂಭಾಷಣೆಗಳನ್ನು ರಚಿಸುವಲ್ಲಿ ಪ್ರಶಾಂತ್ ರಾಜಪ್ಪ ಅವರ ಕೈಚಳಕ ಎದ್ದು ಕಾಣುತ್ತದೆ. ಅದೇ ವೇಳೆ ಐಟಂ ಹಾಡು, ಅಶ್ಲೀಲ ಸಂಭಾಷಣೆಗಳಿಂದ ದೂರ ಉಳಿದು ಪ್ರೇಕ್ಷಕರು ಕುಟುಂಬ ಸಮೇತ ನೋಡುವುದಕ್ಕೂ ಯೋಗ್ಯವೆನಿಸುವ ಚಿತ್ರವಾಗಿ ಒಡೆಯ ಮೂಡಿಬಂದಿದೆ.
ನಿರ್ದೇಶನ: ಎಂ.ಡಿ ಶ್ರೀಧರ್
ತಾರಾಗಣ: ದರ್ಶನ್, ಸನಾ ತಿಮ್ಮಯ್ಯ, ದೇವರಾಜ್, ಚಿಕ್ಕಣ್ಣ, ಸಾಧು ಕೋಕಿಲ
ನಿರ್ಮಾಣ: ಸಂದೇಶ್ ನಾಗರಾಜ್