ಮತ್ತೆ ದೇಶ ವಿಭಜನೆಯ ಗಂಡಾಂತರ

Update: 2019-12-19 08:55 GMT

ಸಂವಿಧಾನ ವಿರೋಧಿಯಾದ ಈ ಪೌರತ್ವ ತಿದ್ದುಪಡಿ ಮಸೂದೆ ಸದ್ಯಕ್ಕೆ ಮುಸ್ಲಿಮರಿಗೆ ಗಂಡಾಂತರಕಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಇತರ ದಲಿತ, ಹಿಂದುಳಿದ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳಿಗೆ ಇದು ಕಂಟಕಕಾರಿಯಾಗಲಿದೆ. ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಹುನ್ನಾರವಿದೆ. ಅಂತಿಮವಾಗಿ ಭಾರತದ ಏಕತೆ, ಸಮಗ್ರತೆಗೆ ಇದು ಅಪಾಯಕಾರಿಯಾಗಿದೆ.


ಕೇಂದ್ರ ಗೃಹ ಸಚಿವ ಅಮಿತ್ ಶಾ ಸಂಸತ್ತಿನ ಉಭಯ ಸದನಗಳಲ್ಲಿ ಮಂಡಿಸಿ ಅಂಗೀಕಾರ ಪಡೆದ ಪೌರತ್ವ ತಿದ್ದುಪಡಿ ಮಸೂದೆಯ ವಿರುದ್ಧ ದೇಶದ ಬಹುತೇಕ ಕಡೆ ಜನಾಕ್ರೋಶ ವ್ಯಕ್ತವಾಗುತ್ತಿದೆ. ಜನ ಬಂಡಾಯವನ್ನು ಹತ್ತಿಕ್ಕಲು ಅಸ್ಸಾಂ, ತ್ರಿಪುರಾಗಳಿಗೆ ಅರೆ ಸೇನಾ ಪಡೆಗಳನ್ನು ಕರೆಸಲಾಗಿದೆ. ಈಶಾನ್ಯ ಭಾರತದ ಬಹುತೇಕ ಕಡೆ ಕರ್ಫ್ಯೂ ಹೇರಲಾಗಿದೆ. ಕಾಶ್ಮೀರದಲ್ಲಿ ಮಾಡಿದಂತೆ ಇಲ್ಲೂ ಇಂಟರ್‌ನೆಟ್ ನಿಷೇಧಿಸಲಾಗಿದೆ. ಇದನ್ನು ಒಕ್ಕೊರಲಿನಿಂದ ವಿರೋಧಿಸಬೇಕಾಗಿದ್ದ ಪ್ರತಿಪಕ್ಷಗಳು ಇಬ್ಭಾಗವಾಗಿವೆ. ಸಂಯುಕ್ತ ಜನತಾದಳ, ಅಣ್ಣಾ ಡಿಎಂಕೆ, ತೆಲುಗುದೇಶಂ, ಪಾಸ್ವಾನರ ಎಲ್‌ಜೆಪಿ, ಅಠಾವಳೆಯ ಆರ್‌ಪಿಐ ಮುಂತಾದ ಪಕ್ಷಗಳು ಈ ಫ್ಯಾಶಿಸ್ಟ್ ಮಸೂದೆ ಬೆಂಬಲಿಸಿವೆ. ಇದನ್ನು ಕಾಂಗ್ರೆಸ್, ಎಡಪಂಥೀಯ ಪಕ್ಷಗಳು, ಡಿಎಂಕೆ, ಸಮಾಜವಾದಿ ಪಕ್ಷಗಳು ವಿರೋಧಿಸಿವೆ. ಶಿವಸೇನೆ ಕೂಡ ಇದನ್ನು ವಿರೋಧಿಸಿದೆ. ಆದರೆ, ಸಂಸತ್ತಿನ ಮತದಾನದಲ್ಲಿ ಗೈರು ಆಗಿತ್ತು.

ಈ ಪೌರತ್ವ ಮಸೂದೆ ಬಿಜೆಪಿ ಸರಕಾರದ ದಿಢೀರ್ ಆದ್ಯತೆಯಲ್ಲ. ಆ ಪಕ್ಷದ ಸೈದ್ಧಾಂತಿಕ ಸ್ಫೂರ್ತಿಯಾದ ಆರೆಸ್ಸೆಸ್ ಪ್ರತಿಪಾದಿಸುತ್ತಿದ್ದ ಸಿದ್ಧಾಂತವನ್ನೇ ಮೋದಿ ಸರಕಾರ ಈ ಪೌರತ್ವ ಕಾನೂನಿನ ಮೂಲಕ ಜಾರಿಗೆ ತರಲು ಹೊರಟಿದೆ. ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೊಳ್ವಾಲ್ಕರ್ ತಮ್ಮ ಪುಸ್ತಕಗಳಲ್ಲಿ ಪ್ರತಿಪಾದಿಸಿದ ಅಂಶಗಳೇ ಮಸೂದೆಯ ರೂಪವನ್ನು ತಾಳಿವೆ. ಜರ್ಮನಿಯ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್‌ನನ್ನು ಹಾಡಿ ಹೊಗಳುತ್ತಿದ್ದ ಗೊಳ್ವಾಲ್ಕರ್, ‘ಜರ್ಮನ್ ಜನಾಂಗದ ಶ್ರೇಷ್ಠತೆ ಎತ್ತಿ ಹಿಡಿದ ಹಿಟ್ಲರ್ ಹಿಂದುಗಳಿಗೆ ಮಾದರಿಯಾಗಬೇಕು’ ಎಂದು ಹೇಳಿದ್ದರು. ಜನಾಂಗ ಶ್ರೇಷ್ಠತೆ ಹೆಸರಿನಲ್ಲಿ ಲಕ್ಷಾಂತರ ಯಹೂದಿಗಳನ್ನು ಚಿತ್ರ ಹಿಂಸೆ ನೀಡಿ ಕೊಂದ ಹಿಟ್ಲರ್‌ನನ್ನು ಗೊಳ್ವಾಲ್ಕರ್ ರಾಷ್ಟ್ರ ನಿರ್ಮಾಣಕ್ಕೆ ಮಾದರಿಯಾಗಿಟ್ಟುಕೊಂಡರು. ‘ಭಾರತದಲ್ಲಿ ಮುಸಲ್ಮಾನರು, ಕ್ರೈಸ್ತರು ಮತ್ತು ಕಮ್ಯುನಿಸ್ಟರು ಶತ್ರುಗಳು. ಮುಸ್ಲಿಮರು ಇಲ್ಲಿ ಬದುಕಬೇಕಾದರೆ ಎರಡನೇ ದರ್ಜೆಯ ಪ್ರಜೆಗಳಾಗಿ ಇರಬೇಕು. ಯಾವುದೇ ನಾಗರಿಕ ಸೌಕರ್ಯ ಕೇಳಬಾರದು’ ಎಂದು ಗೊಳ್ವಾಲ್ಕರ್ ಹೇಳಿದ್ದರು. ಈಗ ಅಮಿತ್ ಶಾ ತಮ್ಮ ಗುರುವಿನ ಸಿದ್ಧಾಂತವನ್ನು ಈ ಮಸೂದೆ ಮೂಲಕ ಜಾರಿಗೆ ತರಲು ಹೊರಟಿದ್ದಾರೆ.

ಒಂದು ಧರ್ಮದ ಆಧಾರದಲ್ಲಿ ರಾಷ್ಟ್ರವೊಂದನ್ನು ಕಟ್ಟುವ ಸಿದ್ಧಾಂತ ಮೂಲತಃ ವಿದೇಶದಿಂದ ಅಂದರೆ ಜರ್ಮನಿಯ ನಾಝಿ ಹಿಟ್ಲರ್‌ನಿಂದ ಮತ್ತು ಇಟಲಿಯ ಮುಸ್ಸೋಲಿನಿಯಿಂದ ಎರವಲು ಪಡೆದ ಸಿದ್ಧಾಂತ. ಸಾವಿರಾರು ವರ್ಷಗಳಿಂದ ಹಲವಾರು ಜನಾಂಗಗಳ, ಧರ್ಮಗಳ, ಭಾಷೆಗಳ, ಧರ್ಮಗಳ ಸುಂದರ ಹೂದೋಟವಾದ ಭಾರತಕ್ಕೆ ಏಕ ಧರ್ಮ, ಏಕ ಸಂಸ್ಕೃತಿ, ಏಕ ಭಾಷೆಯ ಸಿದ್ಧಾಂತ ಹೊಂದಾಣಿಕೆ ಆಗುವುದಿಲ್ಲ. ಯುರೋಪಿನ ಪುಟ್ಟ ಪುಟ್ಟ ದೇಶಗಳು ಒಂದೇ ಸಮುದಾಯಕ್ಕೆ ಸೇರಿದ ಅತಿ ಕಡಿಮೆ ಜನಸಂಖ್ಯೆಯ ದೇಶಗಳಾಗಿವೆ. ಸುಮಾರು ಒಂದು ಕೋಟಿ, ಎರಡು ಕೋಟಿ, ಬಹಳೆಂದರೆ ಐದು ಕೋಟಿ ಜನಸಂಖ್ಯೆ ಹೊಂದಿರುವ ಆ ದೇಶಗಳಲ್ಲಿ ಬಹುತೇಕ ಒಂದೇ ಧರ್ಮದ, ಒಂದೇ ಭಾಷೆ, ಒಂದೇ ಸಂಸ್ಕೃತಿ ಜನ ಸಿಗುತ್ತಾರೆ. ಆದರೆ, ಭಾರತ ಹಾಗಲ್ಲ. ಇದು ವಿಭಿನ್ನ ಜನ ಸಮುದಾಯಗಳ, ಧರ್ಮಗಳ, ಭಾಷೆಗಳ ಜನರಿರುವ 130 ಕೋಟಿ ಜನಸಂಖ್ಯೆ ಹೊಂದಿರುವ ದೇಶ. ಇಲ್ಲಿ ಜರ್ಮನಿಯ ಹಿಟ್ಲರ್‌ನಿಂದ ಸಾವಕರ, ಗೊಳ್ವಾಲ್ಕರ್ ಎರವಲು ತಂದಿರುವ ರಾಷ್ಟ್ರ ನಿರ್ಮಾಣದ ಸಿದ್ಧಾಂತ ಹೊಂದಾಣಿಕೆ ಆಗುವುದಿಲ್ಲ.

ಆದರೆ, ಆರೆಸ್ಸೆಸ್ ಸ್ಥಾಪನೆಯಾಗಿದ್ದೇ ಈ ಸಿದ್ಧಾಂತಗಳ ಅಡಿಪಾಯದ ಮೇಲೆ. ಕಳೆದ ಶತಮಾನದ 30ರ ದಶಕದಲ್ಲಿ ನಾಗ್ಪುರದಲ್ಲಿ ಆರೆಸ್ಸೆಸ್ ಸ್ಥಾಪನೆಗೂ ಮುನ್ನ ಸ್ಥಾಪಕ ಕೇಶವ ಬಲಿರಾಮ ಹೆಡಗೆವಾರರು ಬಿ.ಎಸ್. ಮೂಂಜೆ ಅವರನ್ನು ಇಟಲಿಗೆ ಕಳಿಸಿಕೊಟ್ಟು ಮುಸ್ಸೋಲಿನಿಯ ಫ್ಯಾಶಿಸ್ಟ್ ಪಾರ್ಟಿಯ ಸಿದ್ಧಾಂತ ಮತ್ತು ಕಾರ್ಯಕ್ರಮ ಅಧ್ಯಯನ ಮಾಡಿಕೊಂಡು ಬರಲು ತಿಳಿಸಿದ್ದರು. ಮೂಂಜೆ ಅವರು ಅಲ್ಲಿ ಮುಸ್ಸೋಲಿನಿಯನ್ನು ಭೇಟಿ ಮಾಡಿ ಬಂದು ನಾಗ್ಪುರದಲ್ಲಿ ಆರೆಸ್ಸೆಸ್ ಅಡಿಪಾಯಕ್ಕೆ ತಾತ್ವಿಕ ನೆಲೆ ಒದಗಿಸಿದರು.
ಕಳೆದ ಶತಮಾನದ ಮೂರನೇ ಮತ್ತು ನಾಲ್ಕನೇ ದಶಕದಲ್ಲಿ ಜರ್ಮನಿಯಲ್ಲಿ ಹಿಟ್ಲರ್ ಹೀಗೆ ಮಾಡಿದ. ಆರ್ಯ ಜನಾಂಗದ ಶ್ರೇಷ್ಠತೆಯನ್ನು ಪ್ರತಿಪಾದಿಸುತ್ತಿದ್ದ ಹಿಟ್ಲರ್ ಆರ್ಯರು ಮತ್ತು ಯಹೂದಿಗಳ ದಾಖಲೆ ಸಂಗ್ರಹಿಸಲು ಮುಂದಾದ. ಇದು ದೇಶಕ್ಕಾಗಿ ಎಂದು ಹೇಳಿದ. ಕೊನೆಗೆ ಯಹೂದಿಗಳಿಗಿರುವ ನಾಗರಿಕ ಸೌಕರ್ಯಗಳನ್ನು ಒಂದೊಂದಾಗಿ ಅಪಹರಿಸಿ ಅವರನ್ನು ಪ್ರತ್ಯೇಕಿಸಿ ಕಾನ್ಸೆಂಟ್ರೇಶನ್ ಕ್ಯಾಂಪ್‌ಗಳಿಗೆ, ಗ್ಯಾಸ್ ಚೇಂಬರ್‌ಗಳಿಗೆ ದಬ್ಬಿ ವಿಲ ವಿಲ ಒದ್ದಾಡಿಸಿ ಕೊಂದ. ಈಗ ಮೋದಿ ಸರಕಾರ ಮಾಡಲು ಹೊರಟಿದ್ದು ಅದನ್ನೆ. ಪೌರತ್ವ ನೋಂದಣಿ ಹೆಸರಿನಲ್ಲಿ ಉಳಿದ ಸಮುದಾಯಗಳಿಂದ ಮುಸಲ್ಮಾನರನ್ನು ಪ್ರತ್ಯೇಕಿಸಿ ಅವರ ಮೂಲಭೂತ ನಾಗರಿಕ ಸೌಕರ್ಯಗಳನ್ನು ಕಿತ್ತುಕೊಳ್ಳುವುದು ಇವರ ಗುರಿಯಾಗಿದೆ. ಹಿಟ್ಲರ್ ಕಾನ್ಸೆಂಟ್ರೇಶನ್ ಕ್ಯಾಂಪ್‌ಗಳನ್ನು ಮಾಡಿದಂತೆ ಇವರು ಡಿಟೆನ್ಷನ್ ಸೆಂಟರ್‌ಗಳನ್ನು ನಿರ್ಮಿಸುತ್ತಿದ್ದಾರೆ. ಪೌರತ್ವ ನೋಂದಣಿಯಲ್ಲಿ ದಾಖಲೆಗಳಿಲ್ಲದ ಮುಸಲ್ಮಾನರನ್ನು ಈ ಡಿಟೆನ್ಷನ್ ಸೆಂಟರ್‌ಗಳಿಗೆ ದಬ್ಬುವುದು ಇವರ ಹುನ್ನಾರವಾಗಿದೆ.

ಆದರೆ, ನಮ್ಮ ಸಂವಿಧಾನದಲ್ಲಿ ಇದಕ್ಕೆ ಅವಕಾಶವಿಲ್ಲ. ಜಾತಿ, ಧರ್ಮ, ಭಾಷೆ, ಬಣ್ಣದ ಆಧಾರದಲ್ಲಿ ಯಾವುದೇ ತಾರತಮ್ಯ ಮಾಡಬಾರದು ಎಂದು ನಮ್ಮ ಸಂವಿಧಾನ ಹೇಳುತ್ತದೆ. ಆದರೆ, ಅಮಿತ್ ಶಾ ಮಂಡಿಸಿದ ಈ ಮಸೂದೆ ಭಾರತದ ನಾಗರಿಕತ್ವ ನೀಡುವ ವಿಷಯದಲ್ಲಿ ಧರ್ಮದ ಆಧಾರದಲ್ಲಿ ತಾರತಮ್ಯ ಮಾಡುತ್ತದೆ. ಪಾಕಿಸ್ತಾನ, ಅಫ್ಘಾನಿಸ್ತಾನ ಹಾಗೂ ಬಾಂಗ್ಲಾದೇಶದಿಂದ ಭಾರತಕ್ಕೆ ವಲಸೆ ಬಂದಿರುವ ಹಾಗೂ ಬರುತ್ತಿರುವ ಹಿಂದೂ, ಸಿಖ್, ಜೈನ್, ಪಾರ್ಸಿ ಹಾಗೂ ಕ್ರೈಸ್ತರಿಗೆ ಭಾರತದ ಪೌರತ್ವ ನೀಡಿ ಮುಸಲ್ಮಾನ ವಲಸಿಗರಿಗೆ ನಿರಾಕರಿಸುತ್ತದೆ. ಇದು ಪಕ್ಷಪಾತವಲ್ಲದೇ ಮತ್ತೇನು? ಧರ್ಮನಿರಪೇಕ್ಷತೆ ಭಾರತದ ಸಂವಿಧಾನದ ಜೀವಾಳವಾಗಿದೆ. ಅದನ್ನು ಉಲ್ಲಂಘಿಸಲು ಬಹುಮತವಿರುವ ಸರಕಾರಕ್ಕೂ ಅವಕಾಶವಿಲ್ಲ. ನ್ಯಾಯಾಲಯದ ಕಟ್ಟೆ ಹತ್ತಿದರೆ ಏನಾಗುತ್ತದೆ ಎಂಬುದನ್ನು ಕಾಯ್ದು ನೋಡಬೇಕಾಗಿದೆ.

ನೆರೆಯ ದೇಶಗಳಲ್ಲಿ ಧಾರ್ಮಿಕ ಅಲ್ಪಸಂಖ್ಯಾತರ ಮೇಲೆ ಧರ್ಮದ ಕಾರಣಕ್ಕಾಗಿ ದೌರ್ಜನ್ಯ ನಡೆದಿದ್ದರೆ ಅಂಥವರು ಅಕ್ರಮ ವಲಸಿಗರಾಗಿ ಭಾರತಕ್ಕೆ ಬಂದರೆ, ಅವರಿಗೆ ಪೌರತ್ವ ನೀಡುವ ಉದ್ದೇಶ ಈ ಮಸೂದೆಯಲ್ಲಿ ಅಡಕವಾಗಿದೆ. ಆದರೆ, ಮ್ಯಾನ್ಮಾರ್‌ನಲ್ಲಿ ರೊಹಿಂಗ್ಯಾ ಮುಸ್ಲಿಮರು ಅಲ್ಲಿ ಧಾರ್ಮಿಕ ದೌರ್ಜನ್ಯಕ್ಕೊಳಗಾಗಿ ಭಾರತಕ್ಕೆ ಅಕ್ರಮ ವಲಸಿಗರಾಗಿ ಬಂದರೆ ಅವರಿಗೆ ಪೌರತ್ವ ನೀಡುವ ಅಂಶ ಈ ಪೌರತ್ವ ತಿದ್ದುಪಡಿ ಮಸೂದೆಯಲ್ಲಿ ಏಕಿಲ್ಲ?
ಪೌರತ್ವ ತಿದ್ದುಪಡಿ ಮಸೂದೆಗೆ ರಾಷ್ಟ್ರಪತಿ ಗುರುವಾರ ಮಧ್ಯರಾತ್ರಿ ಅಂಕಿತ ಹಾಕಿದ್ದಾರೆ. ಇನ್ನೊಂದೆಡೆ ಅಸ್ಸಾಂ, ತ್ರಿಪುರಾ ಮುಂತಾದ ಈಶಾನ್ಯ ರಾಜ್ಯಗಳಲ್ಲಿ ಜನಾಕ್ರೋಶ ಭುಗಿಲೆದ್ದಿದೆ. ಸದ್ಯಕ್ಕೆ, ಇದು ತಣ್ಣಗಾಗುವ ಲಕ್ಷಣಗಳು ಕಾಣುತ್ತಿಲ್ಲ.

ಸಂವಿಧಾನ ವಿರೋಧಿಯಾದ ಈ ಪೌರತ್ವ ತಿದ್ದುಪಡಿ ಮಸೂದೆ ಸದ್ಯಕ್ಕೆ ಮುಸ್ಲಿಮರಿಗೆ ಗಂಡಾಂತರಕಾರಿಯಾಗಿದ್ದರೂ ಮುಂದಿನ ದಿನಗಳಲ್ಲಿ ಇತರ ದಲಿತ, ಹಿಂದುಳಿದ, ಅಲೆಮಾರಿ ಮತ್ತು ಆದಿವಾಸಿ ಸಮುದಾಯಗಳಿಗೆ ಇದು ಕಂಟಕಕಾರಿಯಾಗಲಿದೆ. ಮಹಿಳೆಯರನ್ನು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಹುನ್ನಾರವಿದೆ. ಅಂತಿಮವಾಗಿ ಭಾರತದ ಏಕತೆ, ಸಮಗ್ರತೆಗೆ ಇದು ಅಪಾಯಕಾರಿಯಾಗಿದೆ.

ಈ ಗಂಡಾಂತರವನ್ನು ತಡೆಗಟ್ಟಿ ಹಿಮ್ಮೆಟ್ಟಿಸದಿದ್ದರೆ ಈ ಭಾರತಕ್ಕೆ ಮುಂದೆ ದೊಡ್ಡ ಅಪಾಯ ಕಾದಿದೆ. ಜರ್ಮನಿಯ ದುರಂತ ಮರುಕಳಿಸಲಿದೆ. ಪ್ರಜಾಪ್ರಭುತ್ವ ಮತ್ತು ಬಹುಮುಖಿ ಭಾರತದಲ್ಲಿ ಸಹನೆ ಹಾಗೂ ಶಾಂತಿಯಲ್ಲಿ ನಂಬಿಕೆ ಹೊಂದಿದವರು ಈಗ ತಮ್ಮೆಲ್ಲ ಭಿನ್ನಾಭಿಪ್ರಾಯ ಬದಿಗೊತ್ತಿ ಒಂದಾಗಬೇಕಾಗಿದೆ. ಸ್ವಾತಂತ್ರ ಚಳವಳಿ ಕಾಲದ ಅಸಹಕಾರ ಆಂದೋಲನ ಮತ್ತೆ ನಡೆಯಬೇಕಾಗಿದೆ. ಅದೊಂದೇ ಉಳಿದ ದಾರಿಯಾಗಿದೆ. ಎಲ್ಲದಕ್ಕೂ ಮೊದಲು ದೇಶದ ಅಧಿಕಾರ ಸೂತ್ರ ಹಿಡಿದು ಕೂತಿರುವ ಸಂವಿಧಾನ ವಿರೋಧಿ ಫ್ಯಾಶಿಸ್ಟ್ ಶಕ್ತಿಗಳನ್ನು ಹೊರ ದಬ್ಬಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News