ದೇಶದ ಉದ್ವಿಗ್ನ ಪರಿಸ್ಥಿತಿಗೆ ಬಿಜೆಪಿ-ಆರೆಸ್ಸೆಸ್ ಕಾರಣ: ಪಿಣರಾಯಿ ವಿಜಯನ್

Update: 2019-12-16 15:01 GMT

ತಿರುವನಂತಪುರ, ಡಿ. 16: ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಬಿಜೆಪಿಯೇತರ ಆಡಳಿತ ಇರುವ ಹಲವು ರಾಜ್ಯಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭ ಕೇರಳದಲ್ಲಿ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ನೇತೃತ್ವದಲ್ಲಿ ಆಡಳಿತ ಪಕ್ಷ ಹಾಗೂ ಪ್ರತಿಪಕ್ಷದ ನಾಯಕ ರಮೇಶ್ ಚೆನ್ನಿತ್ತಲ ನೇತೃತ್ವದಲ್ಲಿ ವಿಧಾನ ಸಭೆಯಲ್ಲಿ ತಿದ್ದುಪಡಿ ಕಾಯ್ದೆ ವಿರುದ್ಧ ಜಂಟಿಯಾಗಿ ಪ್ರತಿಭಟನೆ ನಡೆಸಲಾಯಿತು.

‘‘ಪ್ರಸಕ್ತ ಉದ್ವಿಗ್ನ ಪರಿಸ್ಥಿತಿಯನ್ನು ಆರೆಸ್ಸೆಸ್ ಜಂಟಿಯಾಗಿ ಸೃಷ್ಟಿಸಿದೆ. ಅವರು ತಮ್ಮ ಕಾರ್ಯಸೂಚಿ ಅನುಷ್ಠಾನಗೊಳಿಸಲು ಪ್ರಯತ್ನಿಸುತ್ತಿದ್ದಾರೆ’’ ಎಂದು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಹೇಳಿದ್ದಾರೆ.

‘‘ಭಾರತ ಜಾತ್ಯತೀತ ದೇಶ. ಇಲ್ಲಿ ಪ್ರತಿ ಧರ್ಮದ ಜನರಿಗೂ ಅವಕಾಶ ಇದೆ. ಪೌರತ್ವ ತಿದ್ದುಪಡಿ ಕಾಯ್ದೆ ಅಂಗೀಕರಿಸಿರುವುದು ದೇಶಾದ್ಯಂತ ವ್ಯಾಪಕ ಪ್ರತಿಭಟನೆಗೆ ಕಾರಣವಾಗಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಕೇರಳ ಸಂಘಟಿತವಾಗಿ ಹೋರಾಡುತ್ತಿದೆ ಎಂಬ ಸಂದೇಶ ರವಾನಿಸಲು ನಾವು ಪ್ರಯತ್ನಿಸುತ್ತಿದ್ದೇವೆ.’’ ಎಂದು ಅವರು ಹೇಳಿದರು. ‘‘ಮುಸ್ಲಿಮರನ್ನು ಪೌರತ್ವ ತಿದ್ದುಪಡಿ ಕಾಯ್ದೆಯಿಂದ ಹೊರಗಿಡಲಾಗಿದೆ. ಅಫ್ಘಾನ್ ಅನ್ನು ಸೇರಿಸಲಾಗಿದೆ. ಆದರೆ, ಮ್ಯಾನ್ಮಾರ್, ಶ್ರೀಲಂಕಾ, ನೇಪಾಳ ಹಾಗೂ ಭೂತಾನ್ ಅನ್ನು ಹೊರಗಿಡಲಾಗಿದೆ. ಇದು ಸ್ವೀಕಾರಾರ್ಹವಲ್ಲ. ಧರ್ಮದ ಆಧಾರದಲ್ಲಿ ಜನರನ್ನು ವಿಭಜಿಸುವುದು ಸಂವಿಧಾನ ವಿರೋಧಿ’’ ಎಂದು ಅವರು ಹೇಳಿದರು.

‘‘ಭಾರತೀಯ ಸಂಸ್ಕೃತಿ ಎಲ್ಲವನ್ನೂ ಒಪ್ಪಿಕೊಂಡಿದ್ದು, ಅದು ವೈವಿಧ್ಯತೆ ಹಾಗೂ ಎಲ್ಲ ಧರ್ಮವನ್ನು ಒಳಗೊಂಡಿದೆ. ಆಧುನಿಕ ಭಾರತ ಹಲವು ಹೋರಾಟಗಳಿಂದ ಕಟ್ಟಲ್ಪಟ್ಟಿದೆ. ಭಾರತ ಯಾವತ್ತೂ ತನ್ನ ಮೌಲ್ಯಗಳನ್ನು ಎತ್ತಿ ಹಿಡಿದಿದೆ. ಈ ಮೌಲ್ಯಗಳು ಕುಸಿದರೆ, ಅದು ದೇಶದ ಮೇಲೆ ಪರಿಣಾಮ ಬೀರಲಿದೆ. ಸಂವಿಧಾನದಲ್ಲಿ ಹೇಳಲಾದ ನೀತಿಗಳನ್ನು ನಾಶಮಾಡುವ ಯಾವುದೇ ನಿರ್ಧಾರವನ್ನು ನಾವು ಸ್ವೀಕರಿಸುವುದಿಲ್ಲ’’ ಎಂದು ಪಿಣರಾಯಿ ವಿಜಯನ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News