ಸಿಎಎ ವಿರುದ್ಧ ಸುಪ್ರೀಂ ಮೆಟ್ಟಿಲೇರಲು ಅಸ್ಸಾಂ ಸಾಮಾಜಿಕ ಹೋರಾಟಗಾರರು ಸಜ್ಜು

Update: 2019-12-19 08:37 GMT
ಫೈಲ್ ಫೋಟೊ

ಹೊಸದಿಲ್ಲಿ,ಡಿ.16: ನರೇಂದ್ರ ಮೋದಿ ಸರಕಾರದ ಪೌರತ್ವ (ತಿದ್ದುಪಡಿ) ಕಾಯ್ದೆ (ಸಿಎಎ)ಯ ವಿರುದ್ಧ ದೇಶಾದ್ಯಂತ ಭುಗಿಲೆದ್ದಿರುವ ಪ್ರತಿಭಟನೆಗಳ ನಡುವೆಯೇ ಕಾಯ್ದೆಯನ್ನು ಸರ್ವೋಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಲು ಅಸ್ಸಾಮಿನ ಸಾಮಾಜಿಕ ಹೋರಾಟಗಾರರು ಸಜ್ಜಾಗಿದ್ದಾರೆ.

ಮಾಜಿ ಶಿಕ್ಷಕ ಹಾಗೂ ಹೋರಾಟಗಾರ ಹಿರೇನ್ ಗೊಹೇನ್,ಹಿರಿಯ ಪತ್ರಕರ್ತ ಮಂಜಿತ್ ಮಹಂತ,ಮಾಜಿ ಅಸ್ಸಾಂ ಡಿಜಿಪಿ ಹರೇಕೃಷ್ಣ ಡೇಕಾ, ಪತ್ರಕರ್ತ ಹಾಗೂ ರಾಜಕಾರಣಿ ಹೈದರ್ ಹುಸೈನ್,ಶಂತನು ಬರ್ಥಾಕೂರ್ ಮತ್ತು ಸಾಮಾಜಿಕ ಹೋರಾಟಗಾರ ಹಾಗೂ ಚಿತ್ರ ನಿರ್ಮಾಪಕ ದೇಬೇನ್ ತಮುಲಿ ಅವರು ಸಂಸತ್ತಿನ ಹಿಂದಿನ ಅಧಿವೇಶನದಲ್ಲಿ ಮೊದಲ ಬಾರಿಗೆ ಪೌರತ್ವ (ತಿದ್ದುಪಡಿ) ಮಸೂದೆಯು ಮಂಡನೆಯಾದಾಗಲೂ ಅದರ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ತಕರಾರು ಅರ್ಜಿಯನ್ನು ಸಲ್ಲಿಸಿದ್ದರು. ಆದರೆ ಸರಕಾರವು ಮಸೂದೆಯನ್ನು ರಾಜ್ಯಸಭೆಯಲ್ಲಿ ಮಂಡಿಸಿಲ್ಲವೆಂಬ ಕಾರಣ ನೀಡಿ ಸರ್ವೋಚ್ಚ ನ್ಯಾಯಾಲಯವು ಅರ್ಜಿಯನ್ನು ತಿರಸ್ಕರಿಸಿತ್ತು.

‘ಅಲ್ಲಿ ಇಲ್ಲಿ ಕೆಲವು ಅಹಿತಕರ ಘಟನೆಗಳು ನಡೆದಿದ್ದರೂ ಅಸ್ಸಾಮಿನಲ್ಲಿ ಸುದೀರ್ಘ ಕಾಲದಿಂದ ಕೋಮು ಸೌಹಾರ್ದತೆಯ ವಾತಾವರಣವನ್ನು ನಾವು ಕಾಯ್ದುಕೊಂಡು ಬಂದಿದ್ದೇವೆ. ಹೀಗಾಗಿ ನಮ್ಮ ಹೋರಾಟವು ಜಾತ್ಯತೀತ ಭಾರತಕ್ಕಾಗಿ ಹೋರಾಟಕ್ಕೆ ಕೊಡುಗೆಯಾಗಿದೆ. ಸಿಎಎ ಅನ್ನು ಪ್ರಶ್ನಿಸಿ ಸರ್ವೋಚ್ಚ ನ್ಯಾಯಾಲಯದಲ್ಲಿ ನಾವು ಹೊಸದಾಗಿ ಅರ್ಜಿಯನ್ನು ಸಲ್ಲಿಸಲಿದ್ದೇವೆ ’ಎಂದು ಸುದ್ದಿಸಂಸ್ಥೆಯೊಂದಿಗೆ ಮಾತನಾಡಿದ ಗೊಹೇನ್ ತಿಳಿಸಿದರು.

ಗೊಹೇನ್ ಸಿಎಎ ವಿರುದ್ಧ ಪ್ರತಿಭಟನೆಯನ್ನು ನಡೆಸುತ್ತಿರುವ ‘ಅಸ್ಸಾಂ ನಾಗರಿಕ ಸಮಾಜ’ದ ಪ್ರಮುಖರೂ ಆಗಿದ್ದಾರೆ. ಉದ್ದೇಶಿತ ಕಾನೂನನ್ನು ವಿರೋಧಿಸಿದ್ದಕ್ಕಾಗಿ ಕಳೆದ ಜನವರಿಯಲ್ಲಿ ಸಂಘಟನೆ ಮತ್ತು ಗೊಹೇನ್ ವಿರುದ್ಧ ಪೊಲೀಸರು ದೇಶದ್ರೋಹ ಪ್ರಕರಣವನ್ನು ದಾಖಲಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News