​ಮುಂದಿನ ಮೂನ್ ಮಿಷನ್‌ನಿಂದ ಚಂದ್ರಯಾನ-2 ಯೋಜನಾ ನಿರ್ದೇಶಕಿ ಔಟ್

Update: 2019-12-18 03:39 GMT

ಬೆಂಗಳೂರು: ಚಂದ್ರಯಾನ-2 ಯೋಜನಾ ನಿರ್ದೇಶಕಿ ಎಂ.ವನಿತಾ ಅವರನ್ನು ಚಂದ್ರಯಾನ-3 ತಂಡದಿಂದ ಕೈಬಿಡಲಾಗಿದೆ. ವನಿತಾ ಅವರ ಹುದ್ದೆಗೆ ಇಸ್ರೋ ಕೇಂದ್ರ ಕಚೇರಿಯ ಪಿ.ವೀರಮುತುವೇಲು ಅವರನ್ನು ನೇಮಕ ಮಾಡಲಾಗಿದೆ. ಚಂದ್ರಯಾನ ಮಿಷನ್ ಮುಖ್ಯಸ್ಥರಾಗಿ ರಿತು ಕರಿಧಾಲ್ ಮುಂದುವರಿಯಲಿದ್ದಾರೆ.

ಚಂದ್ರಯಾನ-2ನ ಎಲ್ಲ ವ್ಯವಸ್ಥೆಗಳ ಹೊಣೆಗಾರಿಕೆಯನ್ನು ವನಿತಾ ತಂಡ ಹೊಂದಿತ್ತು. ಆದರೆ ಚಂದ್ರಯಾನ-2ನ ವಿಕ್ರಮ್ ಲ್ಯಾಂಡರ್ ಚಂದ್ರನ ಮೇಲ್ಮೈನಲ್ಲಿ ಸುಗಮವಾಗಿ ಉಳಿಯಲು ವಿಫಲವಾಗಿತ್ತು. ವನಿತಾ ಅವರ ವರ್ಗಾವಣೆಗೆ ಇಸ್ರೋ ಯಾವುದೇ ಅಧಿಕೃತ ಕಾರಣ ನೀಡಿಲ್ಲ.

ಚಂದ್ರಯಾನ-2 ಮಿಷನ್‌ಗೆ ಕರಿಧಾಲ್ ಅವರನ್ನು ಮಿಷನ್ ಡೈರೆಕ್ಟರ್ ಹಾಗೂ ವನಿತಾ ಅವರನ್ನು ಪ್ರಾಜೆಕ್ಟ್ ಡೈರೆಕ್ಟರ್ ಆಗಿ ನೇಮಕ ಮಾಡಿದ್ದಕ್ಕೆ ವ್ಯಾಪಕ ಶ್ಲಾಘನೆ ವ್ಯಕ್ತವಾಗಿತ್ತು. ವನಿತಾ ಅವರನ್ನು ವರ್ಗಾಯಿಸುವ ಸಂಬಂಧ ನ. 28ರಂದು ಇಸ್ರೋ ಆದೇಶ ಹೊರಡಿಸಿದೆ. "ಚಂದ್ರಯಾನ-2 ಯೋಜನಾ ನಿರ್ದೇಶಕಿಯಾಗಿರುವ ವಿಜ್ಞಾನಿ ಎಂ.ವನಿತಾ ಅವರನ್ನು ಪಿಡಿಎಂಎಸ್‌ಎ ವಿಭಾಗದ ಉಪ ನಿರ್ದೇಶಕರಾಗಿ ನಿಯೋಜಿಸಲಾಗಿದೆ. ವನಿತಾ ಅವರ ಹುದ್ದೆಗೆ ವಿಜ್ಞಾನಿ/ ಎಂಜಿನಿಯರ್ ಪಿ.ವೀರಮುತುವೇಲು ಅವರನ್ನು ಇಸ್ರೋ ಕೇಂದ್ರ ಕಚೇರಿಯಿಂದ ವರ್ಗಾಯಿಸಲಾಗಿದ್ದು, ಚಂದ್ರಯಾನ-3 ಯೋಜನಾ ನಿರ್ದೇಶಕರಾಗಿ ನಿಯೋಜಿಸಲಾಗಿದೆ" ಎಂದು ಆದೇಶದಲ್ಲಿ ವಿವರಿಸಲಾಗಿದೆ.

ಡಿ. 7ರಂದು ನೀಡಿರುವ ಮತ್ತೊಂದು ಆದೇಶದಲ್ಲಿ ವೀರಮುತುವೇಲು ಅವರನ್ನು ಪ್ರಾಜೆಕ್ಟ್ ಮ್ಯಾನೇಜ್‌ಮೆಂಟ್ ತಂಡದ ಮುಖ್ಯಸ್ಥರಾಗಿಯೂ ನಿಯೋಜಿಸಲಾಗಿದೆ. ಎಲ್ಲ ಉಪ ಪ್ರಾಜೆಕ್ಟ್ ಡೈರೆಕ್ಟರ್‌ಗಳು ಇದರ ಸದಸ್ಯರಾಗಿರುತ್ತಾರೆ. ನ. 14ರಂದು ಚಂದ್ರಯಾನ-3 ಯೋಜನಾ ಕಾರ್ಯವನ್ನು ಅಧಿಕೃತವಾಗಿ ಆರಂಭಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News