ಬ್ಯಾಂಕ್ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್ ನಾಯಕ ಸುರ್ಜೆವಾಲಾಗೆ ಜಾಮೀನು

Update: 2019-12-18 14:59 GMT

ಅಹ್ಮದಾಬಾದ್,ಡಿ.18: ಇಲ್ಲಿಯ ಮಹಾನಗರ ನ್ಯಾಯಾಲಯವು ಅಹ್ಮದಾಬಾದ್ ಜಿಲ್ಲಾ ಸಹಕಾರಿ (ಎಡಿಸಿ) ಬ್ಯಾಂಕ್ ದಾಖಲಿಸಿರುವ ಮಾನನಷ್ಟ ಪ್ರಕರಣದಲ್ಲಿ ಕಾಂಗ್ರೆಸ್‌ನ ರಾಷ್ಟ್ರೀಯ ವಕ್ತಾರ ರಣದೀಪ್ ಸುರ್ಜೆವಾಲಾ ಅವರಿಗೆ ಬುಧವಾರ ಜಾಮೀನು ಮಂಜೂರು ಮಾಡಿದೆ.

ನ್ಯಾಯಾಲಯಕ್ಕೆ ಹಾಜರಾಗುವುದರಿಂದ ಕಾಯಂ ವಿನಾಯಿತಿಯನ್ನು ಕೋರಿ ಅರ್ಜಿಯೊಂದನ್ನು ಸುರ್ಜೆವಾಲಾ ಸಲ್ಲಿಸಿದ್ದು,ಫೆ.15ರಂದು ಅರ್ಜಿಯ ವಿಚಾರಣೆ ನಡೆಯಲಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ನಿರ್ದೇಶಕರಾಗಿರುವ ಎಡಿಸಿ ಬ್ಯಾಂಕ್ ಕಳೆದ ವರ್ಷದ ಜೂನ್ ‌ನಲ್ಲಿ ಈ ಪ್ರಕರಣ ದಾಖಲಿಸಿತ್ತು. 2016ರಲ್ಲಿ ನೋಟು ನಿಷೇಧವನ್ನು ಘೋಷಿಸಿದಾಗ ಕೇವಲ ಐದು ದಿನಗಳಲ್ಲಿ 745.58 ಕೋ.ರೂ.ಗಳ ನೋಟು ವಿನಿಮಯ ಹಗರಣದಲ್ಲಿ ಬ್ಯಾಂಕ್ ಭಾಗಿಯಾಗಿದೆ ಎಂದು ಸುರ್ಜೆವಾಲಾ ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದರು.

ಈ ಮಾನನಷ್ಟ ಮೊಕದ್ದಮೆಯು ಟ್ವೀಟ್ ಮೂಲಕ ಇದೇ ಆರೋಪವನ್ನು ಮಾಡಿದ್ದಕ್ಕಾಗಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರು ಆರೋಪಿಯಾಗಿರುವ ಪ್ರಕರಣದಿಂದ ಪ್ರತ್ಯೇಕವಾಗಿದೆ.

ಸುರ್ಜೆವಾಲಾ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗಲು ವಿಳಂಬಿಸಿದ್ದರಿಂದ ಕಳೆದ ಅಕ್ಟೋಬರ್‌ನಲ್ಲಿ ಅವರ ವಿರುದ್ಧ ಜಾಮೀನಿಗೆ ಅರ್ಹ ಬಂಧನ ವಾರಂಟ್‌ನ್ನು ಹೊರಡಿಸಲಾಗಿತ್ತು.

ಎಡಿಸಿ ಬ್ಯಾಂಕ್ ಮತ್ತು ಅದರ ಅಧ್ಯಕ್ಷ ಅಜಯ ಪಟೇಲ್ ದಾಖಲಿಸಿರುವ ಇನ್ನೊಂದು ಮಾನನಷ್ಟ ಮೊಕದ್ದಮೆಯಲ್ಲಿ ರಾಹುಲ್ ಗಾಂಧಿಯವರಿಗೆ ಈ ವರ್ಷದ ಜುಲೈನಲ್ಲಿ ಜಾಮೀನು ಮಂಜೂರಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News