ಜಾಮಿಯಾ, ಎಎಂಯು ವಿದ್ಯಾರ್ಥಿಗಳ ಮೇಲಿನ ದೌರ್ಜನ್ಯ ಖಂಡಿಸಿದ ಜಗತ್ತಿನಾದ್ಯಂತದ 10,000ಕ್ಕೂ ಅಧಿಕ ಗಣ್ಯರು

Update: 2019-12-19 09:45 GMT

ಹೊಸದಿಲ್ಲಿ, ಡಿ. 18: ದಿಲ್ಲಿಯ ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯ ಹಾಗೂ ಉತ್ತರಪ್ರದೇಶದ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯಗಳಲ್ಲಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ನಡೆಸಿದ ದೌರ್ಜನ್ಯವನ್ನು ಜಗತ್ತಿನಾದ್ಯಂತದ 10 ಸಾವಿರಕ್ಕೂ ಅಧಿಕ ಶಿಕ್ಷಣ ತಜ್ಞರು, ಬುದ್ಧಿಜೀವಿಗಳು, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ನಾಗರಿಕ ಸಮಾಜ ಸದಸ್ಯರು ಖಂಡಿಸಿದ್ದಾರೆ.

ಎರಡು ವಿಶ್ವವಿದ್ಯಾನಿಲಯಗಳ ವಿದ್ಯಾರ್ಥಿಗಳು, ಬೋಧಕ ಹಾಗೂ ಬೋಧಕೇತರರಿಗೆ ಇವರೆಲ್ಲ ನಿಶ್ಯರ್ತವಾಗಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಭಾರತದ ಸಂವಿಧಾನದಲ್ಲಿ ಪ್ರತಿಪಾದಿಸಿರುವ ಸಮಾನತೆ ಹಾಗೂ ಜಾತ್ಯತೀತ ಪೌರತ್ವದ ಹಕ್ಕನ್ನು ಪೌರತ್ವ ತಿದ್ದುಪಡಿ ಕಾಯ್ದೆ ಉಲ್ಲಂಘಿಸುತ್ತದೆ ಎಂದು ಅವರು ಹೇಳಿದ್ದಾರೆ.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯ ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು, ಬೋಧಕರು ಹಾಗೂ ಬೋಧಕೇತಕರಿಗೆ ನಿಶ್ಯರ್ತ ಬೆಂಬಲ ವ್ಯಕ್ತಪಡಿಸುತ್ತೇವೆ ಹಾಗೂ ವಿದ್ಯಾರ್ಥಿಗಳ ಮೇಲೆ ಪೊಲೀಸರು ಹಾಗೂ ಆಡಳಿತ ಕೈಗೊಂಡ ಹಿಂಸಾತ್ಮಕ ಕ್ರಮ ಖಂಡಿಸುತ್ತೇವೆ ಎಂದು ಅವರ ಹೇಳಿಕೆ ತಿಳಿಸಿದೆ. ಇದರೊಂದಿಗೆ ಶಾಂತಿಯುತ ಪ್ರತಿಭಟನೆ ನಡೆಸುವ ನಾಗರಿಕರ ಹಕ್ಕು ಹಾಗೂ ಚಿಂತನೆ, ಅಭಿವ್ಯಕ್ತಿ ಸ್ವಾತಂತ್ರದ ಮಿಲಿಟರೀಕರಣಗೊಳಿಸದ ಅವಕಾಶವಾಗಿ ವಿಶ್ವವಿದ್ಯಾನಿಲಯದ ಸ್ವಾಯತ್ತತೆಯನ್ನು ದೃಢೀಕರಿಸುತ್ತೇವೆ. ವಿದ್ಯಾರ್ಥಿಗಳು ಹಾಗೂ ವಿಶ್ವವಿದ್ಯಾನಿಲಯದ ಮೇಲಿನ ದೌರ್ಜನ್ಯ ಪ್ರಜಾಪ್ರಭುತ್ವ ಸಮಾಜದ ಮೂಲಭೂತ ನಿಯಮಗಳಿಗೆ ವಿರುದ್ಧವಾದದು ಎಂದು ಅವರು ಹೇಳಿದ್ದಾರೆ.

ನಾವು ತೀವ್ರ ಕಳವಳದಿಂದ ಪರಿಸ್ಥಿತಿ ಅವಲೋಕಿಸುತ್ತಿದ್ದೇವೆ. ತಾರತಮ್ಯ ಹಾಗೂ ಅನ್ಯಾಯದ ಕಾನೂನಿನ ವಿರುದ್ಧ ಶಾಂತಿಯುತವಾಗಿ ಪ್ರತಿಭಟನೆ ನಡೆಸಿದ ವಿದ್ಯಾರ್ಥಿಗಳು, ಬೋಧಕ, ಬೋಧಕೇತರರು ಮೇಲೆ ನಡೆದ ಹಿಂಸಾಚಾರವನ್ನು ನಾವು ವೌನವಾಗಿ ವಿರೋಧಿಸುತ್ತೇವೆ ಎಂದು ಅವರು ಹೇಳಿದ್ದಾರೆ. ಶಾಂತಿಯುತವಾಗಿ ಸೇರಿ ಪ್ರತಿಭಟನೆ ನಡೆಸಿದ ನಾಗರಿಕರು ಕ್ರಿಮಿನಲ್ ವರ್ತನೆ ತೋರಲು ಸಾಧ್ಯವಿಲ್ಲ. ಜಾಮಿಯಾ ಮಿಲ್ಲಿಯಾ ಇಸ್ಲಾಮಿಯ ವಿಶ್ವವಿದ್ಯಾನಿಲಯ ಹಾಗೂ ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದ ಕ್ಯಾಂಪಸ್‌ನಲ್ಲಿ ಪೊಲೀಸರು ನಡೆಸಿದ ದೌರ್ಜನ್ಯ ಭಾರತದ ಸಂವಿಧಾನದ ಅಡಿಯಲ್ಲಿ ಕಾನೂನು ಬಾಹಿರ ಎಂದು ಅವರು ಹೇಳಿದ್ದಾರೆ.

ಹೇಳಿಕೆಯ ಪತ್ರಕ್ಕೆ ಸಹಿ ಹಾಕಿದವರಲ್ಲಿ ರೋಮಿಲಾ ಥಾಪರ್, ನೋಮ್ ಚೋಮ್‌ಸ್ಕಿ, ಜುಡಿತ್ ಬಟ್ಲರ್ ನಿವೇದಿತಾ ಮೆನನ್, ಸುದೀಪ್ತೊ ಕವಿರಾಜ್, ವೀಣಾ ದಾಸ್, ಉಮಾ ಚಕ್ರವರ್ತಿ, ಪಾರ್ಥಾ ಚಟರ್ಜಿ, ಹೋಮಿ ಬಾಬಾ, ಅಕೀಲ್ ಬಿಲಿಗ್ರಾಮಿ, ತನಿಕಾ ಸರ್ಕಾರ್, ಮೆಹ್ಮೂದ್ ಮಮ್ದಾನಿ, ಶೆಲ್ಡಾನ್ ಪೊಲ್ಲಾಕ್ ಹಾಗೂ ಇತರರು ಸೇರಿದ್ದಾರೆ.

ಹಾರ್ವರ್ಡ್ ವಿಶ್ವವಿದ್ಯಾನಿಲಯ, ಪ್ರಿನ್ಸ್‌ಟನ್ ವಿಶ್ವವಿದ್ಯಾನಿಲಯ, ದಿ ಲಂಡನ್ ಸ್ಕೂಲ್ ಆಫ್ ಇಕಾನಾಮಿಕ್ಸ್, ಯುಸಿ ಬರ್ಕಲಿ, ಯಾಲೆ ವಿಶ್ವವಿದ್ಯಾನಿಲಯ, ಕ್ಯಾಂಬ್ರಿಜ್ ಹಾಗೂ ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಸೇರಿದಂದೆ 1,100ಕ್ಕೂ ಅಧಿಕ ವಿಶ್ವವಿದ್ಯಾನಿಲಯ, ಕಾಲೇಜು, ಶಿಕ್ಷಣ ಸಂಸ್ಥೆಗಳು ಈ ಪತ್ರಕ್ಕೆ ಸಹಿ ಹಾಕಿವೆ.

ಭಾರತದ ಪ್ರಮುಖ ಶಿಕ್ಷಣ ಸಂಸ್ಥೆಗಳಾದ ಜವಾಹರ್ ನೆಹರೂ ವಿಶ್ವವಿದ್ಯಾನಿಲಯ, ದಿಲ್ಲಿ ವಿಶ್ವವಿದ್ಯಾನಿಲಯ, ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ, ದಿ ಇಂಡಿಯನ್ ಸ್ಟೆಟಿಸ್ಟಿಕ್ ಇನ್‌ಸ್ಟಿಟ್ಯೂಟ್ ಹಾಗೂ ಟಾಟಾ ಇನ್‌ಸ್ಟಿಟ್ಯೂಟ್ ಆಫ್ ಫಂಡಮೆಂಟಲ್ ರಿಸರ್ಚ್‌ನ ಗಣ್ಯರು ಈ ಹೇಳಿಕೆಗೆ ಸಹಿ ಹಾಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News