ಸುಪ್ರೀಂ ಕೋರ್ಟ್ ಅರ್ಜಿ ತಿರಸ್ಕರಿಸಿದ ಬಗ್ಗೆ ‘ನಿರ್ಭಯಾ’ ತಾಯಿ ಪ್ರತಿಕ್ರಿಯೆ…

Update: 2019-12-18 17:43 GMT

ಹೊಸದಿಲ್ಲಿ, ಡಿ. 18: ನಿರ್ಭಯಾ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಓರ್ವ ದೋಷಿ ಸಲ್ಲಿಸಿದ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ. ಇದರೊಂದಿಗೆ ನಾಲ್ವರು ದೋಷಿಗಳು ಕೂಡ ಮರಣದಂಡನೆಗೆ ಒಳಗಾಗಲಿದ್ದು, ಇದು ತನಗೆ ತುಂಬಾ ಸಂತೋಷ ಉಂಟು ಮಾಡಿದೆ ಎಂದು ನಿರ್ಭಯಾ ತಾಯಿ ಆಶಾ ದೇವಿ ಹೇಳಿದ್ದಾರೆ.

‘‘ಇದು ಉತ್ತಮ ಬೆಳವಣಿಗೆ. ನಾವು ನ್ಯಾಯದ ಕಡೆ ಒಂದು ಹೆಜ್ಜೆ ಹತ್ತಿರ ಸಾಗಿದ್ದೇವೆ’’ ಎಂದು ಅವರು ಹೇಳಿದ್ದಾರೆ. ದೋಷಿ ಅಕ್ಷಯ್ ಕುಮಾರ್ ಸಿಂಗ್‌ನ ಮರು ಪರಿಶೀಲನಾ ಅರ್ಜಿಯನ್ನು ಸುಪ್ರೀಕೋರ್ಟ್ ತಿರಸ್ಕರಿಸಿರುವುದು ‘‘ನೋವು ಹಾಗೂ ಭೀತಿ ತುಂಬಿದ ಪ್ರಯಾಣ’’ದ ಒಂದು ಭಾಗ. ತನ್ನ ಪುತ್ರಿಯ ಅತ್ಯಾಚಾರಿಗಳನ್ನು ನೇಣಿಗೇರಿಸುವ ವರೆಗೆ ಈ ಪ್ರಯಾಣ ಅಂತ್ಯವಾಗುವುದಿಲ್ಲ ಎಂದು ನಿರ್ಭಯಾರ ಹೆತ್ತವರು ತಿಳಿಸಿದರು.

‘‘ನೋವು ಹಾಗೂ ಭೀತಿ ತುಂಬಿದ ಪ್ರಯಾಣದ ಒಂದು ಭಾಗ ಸುಪ್ರೀಂ ಕೋರ್ಟ್‌ನ ತೀರ್ಪು. ಏನು ಸಂಭವಿಸುತ್ತದೆ ಎಂದು ನಮಗೆ ಗೊತ್ತಿರಲಿಲ್ಲ. ಪ್ರತಿ ಕ್ಷಣ ಕೂಡ ಸಂದಿಗ್ದತೆಯಿಂದ ಕೂಡಿತ್ತು. ನ್ಯಾಯಾಲಯ ಇಂದು ಆತನ ಮರು ಪರಿಶೀಲನಾ ಅರ್ಜಿ ತಿರಸ್ಕರಿಸಿ, ಮರಣ ದಂಡನೆ ಎತ್ತಿ ಹಿಡಿದಿದೆ. ಆದರೆ, ಆತ ಗಾಳಿ ಹಾಗೂ ನೀರಿನ ಬಗ್ಗೆ ಮಾತನಾಡುತ್ತಿದ್ದಾನೆ (ದಿಲ್ಲಿಯಲ್ಲಿ ಅತ್ಯಧಿಕ ಮಟ್ಟದಲ್ಲಿ ವಾಯು ಮಾಲಿನ್ಯ ಇರುವುದರಿಂದ ಮರಣದಂಡನೆಯನ್ನು ರದ್ದುಗೊಳಿಸುವಂತೆ ಅಕ್ಷಯ್ ಕುಮಾರ್ ಸಿಂಗ್ ಮರು ಪರಿಶೀಲನಾ ಅರ್ಜಿಯಲ್ಲಿ ಮನವಿ ಮಾಡಿದ್ದ). ಅತ್ಯಾಚಾರಿಗಳನ್ನು ಗಲ್ಲಿಗೇರಿಸಿದ ದಿನ ನಾವು ಪ್ರಯಾಣದ ಅಂತ್ಯಕ್ಕೆ ತಲುಪಲಿದ್ದೇವೆ’’ ಎಂದು ನಿರ್ಭಯಾರ ತಂದೆ ಹೇಳಿದ್ದಾರೆ.

‘‘ಅಂತ್ಯದತ್ತ ಸಮೀಪಿಸುತ್ತಿದ್ದೇವೆ ಎಂಬ ಭಾವನೆ ಉಂಟಾಗಿದೆ. ಅತ್ಯಾಚಾರಿಗಳ ಮರಣದಂಡನೆ ನೋಡಲು ನಿರ್ಭಯ ಹೆತ್ತವರು ಮಾತ್ರ ಕಾಯುತ್ತಿಲ್ಲ. ಭಾರತದ ಮಹಿಳೆಯರು ಹಾಗೂ ಮಕ್ಕಳು ಕಾಯುತ್ತಿದ್ದಾರೆ’’ ಎಂದು ನಿರ್ಭಯಾ ಅವರ ತಾಯಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News