ಪೌರತ್ವ ಮಸೂದೆ ಪರ ಮತ ಚಲಾಯಿಸುವಂತೆ ಭಾರೀ ಒತ್ತಡವಿತ್ತು: ಎಐಎಡಿಎಂಕೆ ರಾಜ್ಯಸಭಾ ಸದಸ್ಯ

Update: 2019-12-19 17:23 GMT

ಚೆನ್ನೈ: ತಮಿಳುನಾಡಿನಾದ್ಯಂತ ವಿದ್ಯಾರ್ಥಿಗಳು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ಪ್ರತಿಭಟಿಸುತ್ತಿರುವಂತೆಯೇ ಅತ್ತ  'ದಿ ಹಿಂದು' ಪತ್ರಿಕೆಗೆ ನೀಡಿದ ಸಂದರ್ಶನವೊಂದರಲ್ಲಿ ಆಡಳಿತ ಎಐಎಡಿಎಂಕೆಯ ರಾಜ್ಯಸಭಾ ಸಂಸದ ಎಸ್. ಆರ್. ಬಾಲಸುಬ್ರಹ್ಮಣ್ಯಂ ಮಾತನಾಡಿ, "ಮಸೂದೆ ಪರ ಮತ ಚಲಾಯಿಸುವಂತೆ ತಮ್ಮ ಪಕ್ಷದ ಮೇಲೆ ಭಾರೀ ಒತ್ತಡವಿತ್ತು" ಎಂದು ಹೇಳಿದ್ದಾರೆ.

ಎಐಎಡಿಎಂಕೆ ಮುಸ್ಲಿಮರ ವಿರುದ್ಧವಾಗಿಲ್ಲ ಎಂದು ಹೇಳಿಕೊಂಡ ಅವರು ಅದೇ ಸಮಯ, "ಬಿಜೆಪಿಯು ಹಿಂದು ರಾಷ್ಟ್ರ ಎಂಬ ಪದವನ್ನು ಬಹಿರಂಗವಾಗಿ ಬಳಕೆ ಮಾಡದೇ ಇದ್ದರೂ ಹಿಂದು ರಾಷ್ಟ್ರ ಸ್ಥಾಪನೆಗೆ ಯತ್ನಿಸುತ್ತಿದೆ'' ಎಂದು ಆರೋಪಿಸಿದರು.

ತಮಿಳುನಾಡಿನಲ್ಲಿ ಪ್ರತಿಭಟನೆಯ ಕಾವು ಹೆಚ್ಚುತ್ತಿರುವುದರಿಂದ ಜನರ ಆಕ್ರೋಶವನ್ನು ತಣ್ಣಗಾಗಿಸುವ ಯತ್ನವೆಂಬಂತೆ ಬಾಲಸುಬ್ರಹ್ಮಣ್ಯಂ ಮೇಲಿನ ಹೇಳಿಕೆ ನೀಡಿರಬಹುದೆಂದು ಊಹಿಸಲಾಗಿದೆ.

ಇನ್ನೊಂದು ಬೆಳವಣಿಗೆಯಲ್ಲಿ ಟಿವಿ ಚರ್ಚಾ ಕಾರ್ಯಕ್ರಮವೊಂದರಲ್ಲಿ ಎಐಎಡಿಎಂಕೆಯ ವಕ್ತಾರರೊಬ್ಬರು ಮುಸ್ಲಿಮರು ಭಾರತೀಯರಲ್ಲ, ಅವರು ಪಾಕಿಸ್ತಾನಕ್ಕೆ ಹೋಗಬೇಕು ಎಂದು ಹೇಳಿ ಪಕ್ಷಕ್ಕೆ ಇನ್ನಷ್ಟು ಮುಜುಗರ ಸೃಷ್ಟಿಸಿದರು. ಈ ಚರ್ಚೆಯಲ್ಲಿ ಭಾಗವಹಿಸಿದ್ದ ಬಿಜೆಪಿ ಪ್ರತಿನಿಧಿ ಅವರ ವಾದವನ್ನು ತಿರಸ್ಕರಿಸಿ ಮುಸ್ಲಿಮರು ಈ  ದೇಶಕ್ಕೆ ಸೇರಿದವರು ಎಂದು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News