ಪೊಲೀಸರಿಗೆ ಗುಲಾಬಿ ನೀಡಿದ ಪೌರತ್ವ ಕಾಯ್ದೆ ವಿರೋಧಿ ಪ್ರತಿಭಟನಕಾರರು

Update: 2019-12-19 18:58 GMT

ಹೊಸದಿಲ್ಲಿ, ಡಿ. 19: ದೊಡ್ಡ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜಿಸಿದ ಹೊರತಾಗಿಯೂ ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ದಿಲ್ಲಿಯ ವಿವಿಧ ಭಾಗಗಳಲ್ಲಿ ಸಾವಿರಾರು ಜನರು ಗುರುವಾರ ಪ್ರತಿಭಟನೆ ನಡೆಸಿದರು.

ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿಗಳ ಪ್ರತಿಭಟನೆ ಹಿಂಸಾಚಾರದೊಂದಿಗೆ ಅಂತ್ಯಗೊಂಡ ಕೆಲವು ದಿನಗಳ ಬಳಿಕ ದಿಲ್ಲಿಯಲ್ಲಿ ಗುರುವಾರ ನಡೆದ ಪ್ರತಿಭಟನೆ ಸಂದರ್ಭ ಪ್ರತಿಭಟನಕಾರರು ಪೊಲೀಸ್ ಸಿಬ್ಬಂದಿಗೆ ಆಲಿವ್ ಎಲೆ ಹಾಗೂ ಕೆಂಪು ಗುಲಾಬಿಗಳನ್ನು ನೀಡುವ ಹೃದಯಸ್ಪರ್ಶಿ ಫೋಟೊ ಪ್ರಕಟಗೊಂಡಿದೆ. ಇಂತಹ ಒಂದು ಫೋಟೊದಲ್ಲಿ ಪ್ರತಿಭಟನಕಾರರು ನೆಲದಲ್ಲಿ ಮಂಡಿಯೂರಿ ಕುಳಿತು ಪೊಲೀಸ್ ಸಿಬ್ಬಂದಿಗೆ ಕೆಂಪು ಗುಲಾಬಿ ನೀಡುವುದು ಕಂಡು ಬಂದಿದೆ.

ಭಾವನದಲ್ಲಿರುವ ಸೂರಜ್ಮಲ್ ಕ್ರೀಡಾಂಗಣ, ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ಪೊಲೀಸರು ಪ್ರತಿಭಟನಕಾರರಿಗೆ ಲಘು ಉಪಹಾರ ನೀಡುವ ಮೂಲಕ ಜನರ ಹೃದಯ ಗೆದ್ದಿದ್ದಾರೆ. ಪೊಲೀಸರು ಪ್ರತಿಭಟನಕಾರರಿಗೆ ಬಾಳೆಹಣ್ಣು, ಆಹಾರದ ಪೊಟ್ಟಣ ಹಾಗೂ ಇತರ ತಿಂಡಿಗಳನ್ನು ನೀಡುತ್ತಿರುವುದು ಫೋಟೊ ಕೂಡ ಪ್ರಕಟಗೊಂಡಿದೆ. ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ದೇಶಾದ್ಯಂತ 8ನೇ ದಿನವಾದ ಇಂದು ಕೂಡ ಪ್ರತಿಭಟನೆ ನಡೆಯುತ್ತಿದೆ. ದಿಲ್ಲಿಯಲ್ಲಿ ನಿಷೇಧಾಜ್ಞೆ ಮೀರಿದ ನೂರಾರು ಪ್ರತಿಭಟನಕಾರರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News