ವಿನಾಶದತ್ತ ಸಾಗುತ್ತಿದ್ದ ಆರ್ಥಿಕತೆಯನ್ನು ನಾವು ಸುಸ್ಥಿರಗೊಳಿಸಿದ್ದೇವೆ: ಪ್ರಧಾನಿ ಮೋದಿ

Update: 2019-12-20 10:32 GMT

ಹೊಸದಿಲ್ಲಿ: ಐದಾರು ವರ್ಷಗಳ ಹಿಂದೆ ವಿನಾಶದತ್ತ ಸಾಗುತ್ತಿದ್ದ ಭಾರತದ ಆರ್ಥಿಕತೆಯನ್ನು ಕೇಂದ್ರ ಸರಕಾರ ಬಚಾವ್ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿಕೊಂಡಿದ್ದಾರೆ.

ಶುಕ್ರವಾರ '100 ಇಯರ್ಸ್ ಆಫ್ ಅಸ್ಸೋಚಾಂ' ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ, "ಐದಾರು ವರ್ಷಗಳ ಹಿಂದೆ ನಮ್ಮ ಆರ್ಥಿಕತೆ ವಿನಾಶತ್ತ ಸಾಗುತ್ತಿತ್ತು. ನಮ್ಮ ಸರಕಾರ ಅದಕ್ಕೆ ಸ್ಥಿರತೆ ಒದಗಿಸಿರುವ ಜತೆಗೆ ಆರ್ಥಿಕ ಶಿಸ್ತು ತರಲು ಕೂಡ ಶ್ರಮಿಸಿದೆ. ಕೈಗಾರಿಕೆಗಳ ದಶಕಗಳ ಕಾಲದ ಬೇಡಿಕೆಗಳನ್ನು ಈಡೇರಿಸಲು ನಾವು ಗಮನ ನೀಡಿದ್ದೇವೆ'' ಎಂದರು.

"ನಮ್ಮ ಸರಕಾರ ಭಾರತದ ಅರ್ಥವ್ಯವಸ್ಥೆಯನ್ನು ಆಧುನೀಕರಣಗೊಳಿಸಲು ಬಯಸಿದೆ. ಸರಕಾರದ ಶ್ರಮದ ಫಲವಾಗಿ ಇಂದು 13 ಬ್ಯಾಂಕುಗಳು ಮತ್ತೆ ಲಾಭ ಗಳಿಸಲು ಆರಂಭಿಸಿವೆ. ಬ್ಯಾಂಕ್ ವಿಲೀನ ಪ್ರಕ್ರಿಯೆಯನ್ನೂ ತ್ವರಿತಗೊಳಿಸಿದ್ದೇವೆ'' ಎಂದು ಪ್ರಧಾನಿ ಹೇಳಿದರು.

ದೇಶವನ್ನು 5 ಟ್ರಿಲಿಯನ್ ಡಾಲರ್ ಆರ್ಥಿಕತೆಯನ್ನಾಗಿಸುವ ಸರಕಾರದ ಗುರಿಯ ಕುರಿತು ಮಾತನಾಡಿದ ಆವರು "ಈ ಗುರಿಯನ್ನು ನಾನು ನಿಗದಿಪಡಿಸಿದಾಗ ಅದರ ವಿರುದ್ಧ ಋಣಾತ್ಮಕ ಅಭಿಯಾನ ನಡೆಯಬಹುದೆಂಬ ಅರಿವಿತ್ತು. ಇದೇನು ಅರೆಕ್ಷಣದ ತೀರ್ಮಾನವಲ್ಲ. ಈ ಕುರಿತು ಐದು ವರ್ಷಗಳಿಂದ ಚರ್ಚೆ ನಡೆದಿತ್ತು'' ಎಂದು ಹೇಳಿದರು.

ದೇಶದ ಜಿಡಿಪಿ ದರ ಕಳೆದ ಆರು ತ್ರೈಮಾಸಿಕದ ಅವಧಿಯಲ್ಲಿ ಸತತ ಕುಸಿಯುತ್ತಿರುವ ನಡುವೆ ಪ್ರಧಾನಿಯ ಈ ಹೇಳಿಕೆಗಳು ಬಂದಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News