"ಪ್ರಧಾನಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ"

Update: 2019-12-26 12:05 GMT

ಹೊಸದಿಲ್ಲಿ: ದೇಶದಲ್ಲಿ ಎಲ್ಲಿಯೂ ದಿಗ್ಬಂಧನ ಕೇಂದ್ರಗಳಿಲ್ಲ ಎಂದು `ಸುಳ್ಳು' ಹೇಳಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯನ್ನು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೇಶದಲ್ಲಿ ನಡೆಯುತ್ತಿರುವ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟವನ್ನು ತಣ್ಣಗಾಗಿಸುವ ಯತ್ನದಲ್ಲಿ ಪ್ರಧಾನಿ ದಿಲ್ಲಿಯಲ್ಲಿ ನಡೆದ ಸಾರ್ವಜನಿಕ ರ್ಯಾಲಿಯಲ್ಲಿ ಮಾತನಾಡುತ್ತಾ ಎನ್‍ಆರ್‍ ಸಿ ಕುರಿತು ಚರ್ಚೆ ನಡೆದಿಲ್ಲ, ದೇಶದಲ್ಲಿ ಎಲ್ಲಿಯೂ ದಿಗ್ಬಂಧನ ಕೇಂದ್ರಗಳಿಲ್ಲ ಎಂದು ಹೇಳಿದ್ದರು.

ಇದಕ್ಕೆ ಪ್ರತಿಕ್ರಿಯೆಯಾಗಿ ಅಸ್ಸಾಂನಲ್ಲಿನ ದಿಗ್ಬಂಧನ ಕೇಂದ್ರದ ಕುರಿತಾದ ವೀಡಿಯೋ ರಿಪೋರ್ಟ್ ಪೋಸ್ಟ್ ಮಾಡಿದ ರಾಹುಲ್ ಜತೆಗೆ #JhootJhootJhoot ಹ್ಯಾಶ್ ಟ್ಯಾಗ್ ಬಳಸಿದ್ದಾರೆ.

"ಆರೆಸ್ಸೆಸ್ ಪ್ರಧಾನ ಮಂತ್ರಿ ಭಾರತ ಮಾತೆಗೆ ಸುಳ್ಳು ಹೇಳುತ್ತಿದ್ದಾರೆ,'' ಎಂದು ಹಿಂದಿಯಲ್ಲಿ ಟ್ವೀಟ್ ಮಾಡಿದ ರಾಹುಲ್, ಜತೆಗೆ ಪ್ರಧಾನಿಯ ರಾಮಲೀಲಾ ಮೈದಾನ ಭಾಷಣದ ವೀಡಿಯೋ ಕ್ಲಿಪ್ ಅನ್ನೂ ಪೋಸ್ಟ್ ಮಾಡಿದ್ದಾರೆ.

ರಾಹುಲ್ ಟ್ವೀಟ್‍ಗೆ ಬಿಜೆಪಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ, "ರಾಹುಲ್ ಅವರು ಪ್ರಧಾನಿ ಕುರಿತು ಬಳಸಿರುವ ಭಾಷೆ ಆಕ್ಷೇಪಾರ್ಹ. ಅವರಿಂದ ಸಭ್ಯತೆ ಹಾಗೂ ಉತ್ತಮ ಭಾಷೆ ನಿರೀಕ್ಷಿಸುವುದು ತಪ್ಪಾಗುತ್ತದೆ,'' ಎಂದು ಪಕ್ಷದ ವಕ್ತಾರ ಸಂಬಿತ್ ಪಾತ್ರ ಪತ್ರಿಕಾಗೋಷ್ಠಿಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News