ವಿಧಿ 370 ರದ್ದತಿಯಿಂದ ಕಾಶ್ಮೀರದಲ್ಲಿ ಭಯೋತ್ಪಾದನೆ ಘಟನೆ ಇಳಿಕೆ: ಸೇನಾ ವರಿಷ್ಠ ಮನೋಜ್ ಮುಕುಂದ್

Update: 2019-12-31 17:32 GMT

ಹೊಸದಿಲ್ಲಿ, ಡಿ. 31: ಪಾಕಿಸ್ತಾನ ಸರಕಾರ ಪ್ರಾಯೋಜಿತ ಭಯೋತ್ಪಾದನೆ ನಿಲ್ಲಿಸದೇ ಇದ್ದರೆ, ಭಯೋತ್ಪಾದನೆ ಬೆದರಿಕೆ ಮೂಲದ ಮೇಲೆ ಪೂರ್ವಭಾವಿಯಾಗಿ ದಾಳಿ ನಡೆಸುವ ಹಕ್ಕು ಭಾರತಕ್ಕಿದೆ ಎಂದು ಸೇನಾ ವರಿಷ್ಠ ಜನರಲ್ ಮನೋಜ್ ಮುಕುಂದ್ ನರವಣೆ ಮಂಗಳವಾರ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿದ್ದಾರೆ.

13 ಲಕ್ಷ ಯೋಧರ ಪಡೆಯ ಉಸ್ತುವಾರಿ ವಹಿಸಿಕೊಂಡ ಬಳಿಕ ವಿಶೇಷ ಸಂದರ್ಶನ ನೀಡಿದ ಜನರಲ್ ನರವಣೆ, ಗಡಿಯಲ್ಲಿ ಭಯೋತ್ಪಾದನೆ ನಡೆಸುವ ಉಗ್ರರನ್ನು ಶಿಕ್ಷಿಸಲು ಕಾರ್ಯತಂತ್ರ ರೂಪಿಸಲಾಗುವುದು ಎಂದರು.

ಸರಕಾರಿ ಪ್ರಾಯೋಜಿತ ಭಯೋತ್ಪಾದನೆಯಿಂದ ಗಮನ ಬೇರೆಡೆ ಸೆಳೆಯಲು ಪಾಕಿಸ್ತಾನ ಸೇನೆಯ ಎಲ್ಲ ಪ್ರಯತ್ನಗಳು ಸಂಪೂರ್ಣ ವಿಫಲವಾಗಿವೆ. ವಿಧಿ 370ನ್ನು ರದ್ದುಗೊಳಿಸಿದ ಬಳಿಕ ಕಾಶ್ಮೀರದಲ್ಲಿ ಭದ್ರತಾ ಪರಿಸ್ಥಿತಿ ಸುಧಾರಿಸಿದೆ ಎಂದರು.

ಪಾಕಿಸ್ತಾನ ಬೆಂಬಲಿತ ಭಯೋತ್ಪಾದನೆಯನ್ನು ಹೇಗೆ ನಿಗ್ರಹಿಸುತ್ತೀರಿ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಾಕಿಸ್ತಾನ ಪ್ರಾಯೋಜಿತ ಅಥವಾ ಬೆಂಬಲಿತ ಯಾವುದೇ ಭಯೋತ್ಪಾದನೆ ಕೃತ್ಯವನ್ನು ಹತ್ತಿಕ್ಕಲು ಹಲವು ಆಯ್ಕೆಗಳ ಬಗ್ಗೆ ಪರಿಶೀಲಿಸಲಿದ್ದೇವೆ ಎಂದರು. ಚೀನಾದೊಂದಿಗಿನ 3,500 ಕಿ.ಮೀ. ಗಡಿಯಲ್ಲಿ ಭದ್ರತಾ ಸವಾಲುಗಳ ಬಗ್ಗೆ ಮಾತನಾಡಿದ ಜನರಲ್ ನರವಣೆ, ಮರು ಸಮತೋಲನದ ಆದ್ಯತೆಗಳ ಒಂದು ಭಾಗವಾಗಿ ಗಮನವನ್ನು ಪಶ್ಚಿಮ ಗಡಿಯಿಂದ ಉತ್ತರ ಗಡಿಗೆ ಕೇಂದ್ರೀಕರಿಸಲಾಗುವುದು. ಉತ್ತರ ಗಡಿಯಲ್ಲಿ ಸಾಮರ್ಥ್ಯ ವೃದ್ಧಿಯನ್ನು ನಾವು ಮುಂದುವರಿಸಲಿದ್ದೇವೆ. ಆದುದರಿಂದ ಅಗತ್ಯ ಬಿದ್ದಾಗ ನಾವು ಸಿದ್ಧರಾಗಲಿದ್ದೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News