ಹೆತ್ತವರ ಹುಟ್ಟಿದ ಸ್ಥಳದ ಮಾಹಿತಿ ಕೇಳುವ ಪ್ರಾಯೋಗಿಕ ಎನ್‍ಪಿಆರ್ ಫಾರ್ಮ್ ಅಂತಿಮಗೊಳಿಸಿದ ಕೇಂದ್ರ?

Update: 2020-01-01 13:28 GMT
ಸಾಂದರ್ಭಿಕ ಚಿತ್ರ

ಹೊಸದಿಲ್ಲಿ: ಈ ವರ್ಷದ ಎಪ್ರಿಲ್ ತಿಂಗಳಿನಿಂದ ಎನ್‍ಪಿಆರ್ ಗಾಗಿ ಮಾಹಿತಿ ಸಂಗ್ರಹ ಕಾರ್ಯ ಆರಂಭವಾಗುವುದು ಎಂದು ಕೇಂದ್ರ ಸರಕಾರ ಘೋಷಿಸಿರುವ ಬೆನ್ನಿಗೇ ತಂದೆ,ತಾಯಿಯ ಹುಟ್ಟಿದ ಸ್ಥಳದ ಮಾಹಿತಿಯನ್ನೂ ಕೇಳುವ ಹಾಗೂ ಪ್ರಾಯೋಗಿಕವಾಗಿ ಬಳಸಲ್ಪಟ್ಟ ಎನ್‍ಪಿಆರ್ ಫಾರ್ಮ್ ಅನ್ನು ಕೇಂದ್ರ ಸರಕಾರ ಅಂತಿಮಗೊಳಿಸಿ ಅನುಮೋದನೆ ನೀಡಿರಬಹುದು, ಎಂದು ‘ದಿ ಹಿಂದು’ ವರದಿ ಮಾಡಿದೆ. ಈ ಫಾರ್ಮ್ ಅನ್ನು ಹಲವಾರು ಮಂದಿಗೆ ಸ್ಯಾಂಪಲ್ ಆಗಿ ನೀಡಿದಾಗ ಯಾರಿಂದಲೂ ಆಕ್ಷೇಪ ಬಂದಿಲ್ಲದ ಕಾರಣ ಅದೇ ಫಾರ್ಮ್ ಮುಂದುವರಿಸುವ ಸಾಧ್ಯತೆಯಿದೆಯೆನ್ನಲಾಗಿದೆ.

ಸೆಪ್ಟೆಂಬರ್ 2019ರಲ್ಲಿ ನೀಡಲಾದ 'ಪ್ರಿ-ಟೆಸ್ಟ್' ಫಾರ್ಮ್‍ಗೆ ಸುಮಾರು 30 ಲಕ್ಷ ಜನ ಮಾಹಿತಿ ನೀಡಿದ್ದು ಈ ಕುರಿತು 74 ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಲಾಗಿದೆ. 2010ರಲ್ಲಿ ಎನ್‍ಪಿಆರ್ ಗಾಗಿ 15 ಮಾಹಿತಿಗಳನ್ನು ಕೇಳಲಾಗಿದ್ದರೆ ಈಗಿನ ಫಾರ್ಮ್‍ನಲ್ಲಿ ತಂದೆ ಹಾಗೂ ತಾಯಿಯು ಹುಟ್ಟಿದ ಸ್ಥಳ ಹಾಗೂ ಅವರು ಈ ಹಿಂದೆ ವಾಸವಿದ್ದ ಸ್ಥಳದ ಮಾಹಿತಿ ಕೇಳಲಾಗಿದೆ, ಜತೆಗೆ ಆಧಾರ್ ಸಂಖ್ಯೆ (ಐಚ್ಛಿಕ), ಮತದಾರರ ಗುರುತುಪತ್ರ ಸಂಖ್ಯೆ, ಮೊಬೈಲ್ ಫೋನ್ ಸಂಖ್ಯೆ ಹಾಗೂ ಚಾಲನಾ ಪರವಾನಗಿ ಸಂಖ್ಯೆಯನ್ನೂ ಕೇಳಲಾಗಿದೆ.

ಪ್ರಿ-ಟೆಸ್ಟ್ ವೇಳೆ ಯಾರಿಂದಲೂ ಪ್ರತಿಕೂಲ ಪ್ರತಿಕ್ರಿಯೆ ಬಾರದೇ ಇರುವುದರಿಂದ ಇದೇ ಫಾರ್ಮ್ ಅಂತಿಮಗೊಳ್ಳಬಹುದು ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಆದರೆ ಮಾಹಿತಿ ಸಂಗ್ರಹಕರು ಬರುವ ಕುರಿತು ಕುಟುಂಬಗಳಿಗೆ ಪೂರ್ವ ಮಾಹಿತಿ ನೀಡಲಾಗುವುದು ಹಾಗೂ ಅವರು ಅಗತ್ಯ ದಾಖಲೆಗಳನ್ನು ತೆಗೆದಿರಿಸಲು ಇದು ಅನುಕೂಲವಾಗಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News