ಏಕ್ತಾ-ರವಿ ದಂಪತಿಗೆ ಜಾಮೀನು: ಮತ್ತೆ ತಾಯಿಯ ಮಡಿಲು ಸೇರಿದ ಮಗು ಆಯ್ರಾ
ವಾರಣಾಸಿ : ಪೌರತ್ವ ತಿದ್ದುಪಡಿ ಕಾಯಿದೆ ವಿರುದ್ಧದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಕ್ಕೆ ಎರಡು ವಾರಗಳ ಹಿಂದೆ ವಾರಣಾಸಿಯಲ್ಲಿ ಪೊಲೀಸರಿಂದ ಬಂಧಿಸಲ್ಪಟ್ಟಿದ್ದ ಸಾಮಾಜಿಕ ಹೋರಾಟಗಾರ ದಂಪತಿ ಏಕ್ತಾ ಶೇಖರ್ ಮತ್ತಾಕೆಯ ಪತಿ ರವಿ ಶೇಖರ್ ಅವರಿಗೆ ಜಾಮೀನು ದೊರಕಿದ್ದು, ಇಂದು ಬಿಡುಗಡೆಗೊಂಡಿದ್ದಾರೆ. ಅಪ್ಪ ಅಮ್ಮನಿಂದ ದೂರವಾಗಿಬಿಟ್ಟಿದ್ದ ಮಗು ಆಯ್ರಾ(ಚಂಪಕ್) ಮತ್ತೆ ಅಮ್ಮನ ಮಡಿಲು ಸೇರಿದ್ದಾಳೆ.
ನಿಷೇಧಾಜ್ಞೆ ಹೊರತಾಗಿಯೂ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದ ಸುಮಾರು 60 ಮಂದಿಯನ್ನು ವಾರಣಾಸಿಯಲ್ಲಿ ಪೊಲೀಸರು ಡಿಸೆಂಬರ್ 19ರಂದು ಬಂಧಿಸಿದ್ದರು. ಬಂಧಿತರ ಪೈಕಿ ಖ್ಯಾತ ಹೋರಾಟಗಾರರಾದ ಏಕ್ತಾ ಹಾಗೂ ರವಿ ಶೇಖರ್ ಕೂಡ ಸೇರಿದ್ದರು. ವಾಯು ಮಾಲಿನ್ಯದ ವಿರುದ್ಧ ಹೋರಾಡುತ್ತಿರುವ ಕ್ಲೈಮೇಟ್ ಅಜೆಂಡಾ ಎಂಬ ಎನ್ ಜಿಒ ಸಂಘಟನೆಯನ್ನು ಅವರಿಬ್ಬರು ನಡೆಸುತ್ತಿದ್ದಾರೆ.
ಏಕ್ತಾ ಹಾಗೂ ರವಿ ಜತೆ ಬಂಧನಕ್ಕೊಳಗಾಗಿದ್ದ ಬನಾರಸ್ ಹಿಂದು ವಿವಿಯ ಕನಿಷ್ಠ ಎರಡು ಡಜನ್ ವಿದ್ಯಾರ್ಥಿಗಳಿಗೂ ಬುಧವಾರ ಜಾಮೀನು ದೊರಕಿದೆ. ಅಪ್ಪ ಅಮ್ಮ ಜೈಲು ಸೇರಿದ ನಂತರ ದಂಪತಿಯ 14 ತಿಂಗಳು ಪ್ರಾಯದ ಮಗಳು ಆಯ್ರಾಳನ್ನು ಸಂಬಂಧಿಕರು ನೋಡಿಕೊಂಡಿದ್ದರು. ಆಕೆಯನ್ನು ಮನೆಯಲ್ಲಿ ಪ್ರೀತಿಯಿಂದ ಚಂಪಕ್ ಎಂದು ಕರೆಯಲಾಗುತ್ತಿದೆ.