ಪಾಕಿಸ್ತಾನದ ಗುರುದ್ವಾರದ ಮೇಲಿನ ದಾಳಿ: ಕೇಂದ್ರ ಸಚಿವರು,ಕಾಂಗ್ರೆಸ್ ನಾಯಕರ ಖಂಡನೆ

Update: 2020-01-04 14:31 GMT

ಹೊಸದಿಲ್ಲಿ,ಜ.4: ಪಾಕಿಸ್ತಾನದ ನಾನಕಾನಾ ಸಾಹಿಬ್ ಜಿಲ್ಲೆಯಲ್ಲಿರುವ,ಸಿಕ್ಖರ ಅತ್ಯಂತ ಪವಿತ್ರ ಯಾತ್ರಾಸ್ಥಳ ವಾಗಿರುವ ನಾನಕಾನಾ ಸಾಹಿಬ್ ಗುರುದ್ವಾರಾದ ಮೇಲೆ ಶುಕ್ರವಾರ ನಡೆದ ಗುಂಪುದಾಳಿಯನ್ನು ಭಾರತದ ರಾಜಕೀಯ ನಾಯಕರು ತೀವ್ರವಾಗಿ ಖಂಡಿಸಿದ್ದಾರೆ.

 ಗುರುದ್ವಾರದ ಮೇಲೆ ಕಲ್ಲುತೂರಾಟ ನಡೆಸಿದ್ದ ಗುಂಪು ಅಲ್ಲಿದ್ದವರನ್ನು ನಿಂದಿಸಿ,ಜೀವ ಬೆದರಿಕೆಗಳನ್ನೊಡ್ಡಿತ್ತು. ಘಟನೆಯನ್ನು ಖಂಡಿಸಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಶುಕ್ರವಾರ ಹೇಳಿಕೆಯೊಂದನ್ನು ಹೊರಡಿಸಿತ್ತು.

 ಗುರುದ್ವಾರಾದಲ್ಲಿ ಸಿಕ್ಖರ ಪವಿತ್ರ ಗ್ರಂಥವಾಗಿರುವ ಗುರು ಗ್ರಂಥ ಸಾಹಿಬ್‌ನ ಪಾರಾಯಣವನ್ನು ಮಾಡುವ ಪಾಠಿಯೋರ್ವರ ಪುತ್ರಿ ಜಗಜಿತ್ ಕೌರ್ ಎಂಬಾಕೆಯನ್ನು ಕಳೆದ ವರ್ಷ ಅಪಹರಿಸಿದ್ದ ಯುವಕನ ಕುಟುಂಬದ ನೇತೃತ್ವದಲ್ಲಿ ಶುಕ್ರವಾರದ ಗುಂಪು ದಾಳಿ ನಡೆದಿತ್ತು.

 ಪಾಕಿಸ್ತಾನದಲ್ಲಿಯ ಅಲ್ಪಸಂಖ್ಯಾತರ ಸ್ಥಿತಿಗೆ ಇನ್ನಷ್ಟು ಪುರಾವೆಗಳು ಬೇಕಿದ್ದರೆ ಈ ಘಟನೆಯಿದೆ. ಪಾಕ್‌ನಲ್ಲಿ ಧಾರ್ಮಿಕ ಅಲ್ಪಸಂಖ್ಯಾತರಿಗೆ ಕಿರುಕುಳ ನಿಜವಾದ ಸಂಗತಿಯಾಗಿದೆ. ಸಿಎಎ ವಿರೋಧಿಸುತ್ತಿರುವವರು ಗುರುದ್ವಾರದ ಬಳಿ ಗುಂಪು ಕೂಗುತ್ತಿದ್ದ ‘ಸಿಕ್ಖರನ್ನು ನಾವು ಕೊಲ್ಲುತ್ತೇವೆ ’ಎಂಬಂತಹ ಘೋಷಣೆಗಳನ್ನು ಕೇಳಬೇಕು ಎಂದು ಕೇಂದ್ರ ನಾಗರಿಕ ವಾಯುಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಅವರು ಶನಿವಾರ ಇಲ್ಲಿ ಹೇಳಿದರು.

ನಾನಕಾನಾ ಸಾಹಿಬ್ ಮೇಲಿನ ದಾಳಿಯು ಖಂಡನೀಯವಾಗಿದೆ ಎಂದು ಟ್ವೀಟಿಸಿರುವ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು, “ಧರ್ಮಾಂಧತೆಯು ಅಪಾಯಕಾರಿಯಾಗಿದೆ,ಶತಮಾನಗಳಷ್ಟು ಹಳೆಯದಾದ ಈ ವಿಷಕ್ಕೆ ಯಾವುದೇ ಗಡಿಗಳಿಲ್ಲ. ಪ್ರೀತಿ ಮತ್ತು ಪರಸ್ಪರ ಗೌರವ ಮತ್ತು ತಿಳುವಳಿಕೆ ಇದಕ್ಕೆ ಏಕೈಕ ಪ್ರತಿವಿಷವಾಗಿದೆ” ಎಂದಿದ್ದಾರೆ.

ದಾಳಿಯನ್ನು ‘ನಾಚಿಕೆಗೇಡು ’ಎಂದು ಕಾಂಗ್ರೆಸ್ ನಾಯಕರಾದ ಶಶಿ ತರೂರ್ ಮತ್ತು ಗುಲಾಂ ನಬಿ ಆಝಾದ್ ಅವರು ಬಣ್ಣಿಸಿದರೆ,ದಾಳಿ ಘಟನೆಗೆ ಪಾಕಿಸ್ತಾನ ಸರಕಾರವು ನೇರ ಹೊಣೆಗಾರನಾಗಿದೆ ಎಂದು ಪಕ್ಷದ ವಕ್ತಾರ ರಣದೀಪ್ ಸುರ್ಜೆವಾಲಾ ಹೇಳಿದರು.

ಪಾಕಿಸ್ತಾನದಲ್ಲಿ ಅಲ್ಪಸಂಖ್ಯಾತರಿಗೆ ಕಿರುಕುಳ ನಿಜವಾದ ಸಮಸ್ಯೆಯಾಗಿದೆ ಎಂದು ಹೇಳಿದ ಕೇಂದ್ರ ಸಚಿವೆ ಹರ್ಸಿಮ್ರತ್ ಕೌರ್ ಅವರು, ಸಿಎಎ ಅನ್ನು ವಿರೋಧಿಸುತ್ತಿರುವುದಕ್ಕಾಗಿ ಕಾಂಗ್ರೆಸ್ ಮತ್ತು ಪಂಜಾಬ್ ಸರಕಾರವನ್ನು ಟೀಕಿಸಿದರು.

ಪಾಕಿಸ್ತಾನದಲ್ಲಿಯ ತಮ್ಮ ಬಾಂಧವರ ಮೇಲಿನ ದಾಳಿಗಳನ್ನು ಭಾರತದಲ್ಲಿನ ಸಿಕ್ಖರು ಸಹಿಸುವುದಿಲ್ಲ ಎಂದು ಶಿರೋಮಣಿ ಅಕಾಲಿ ದಳದ ವಕ್ತಾರ ಮಂಜಿಂದರ್ ಸಿಂಗ್ ಸಿರ್ಸಾ ಹೇಳಿದರೆ,ಕೆಲವರಿಗೆ ಏನಾಗಿದೆ,ಅವರೇಕೆ ಶಾಂತಿಯಿಂದ ಬದುಕುತ್ತಿಲ್ಲ ಎನ್ನುವುದೇ ಅರ್ಥವಾಗುತ್ತಿಲ್ಲ ಎಂದು ಕ್ರಿಕೆಟಿಗ ಹರ್ಭಜನ್ ಸಿಂಗ್ ಅವರು ಟ್ವೀಟಿಸಿದ್ದಾರೆ. ಅವರು ಟ್ವೀಟ್‌ನ್ನು ಪಾಕ್ ಪ್ರಧಾನಿ ಇಮ್ರಾನ್‌ಖಾನ್‌ಅವರಿಗೂ ಟ್ಯಾಗ್ ಮಾಡಿದ್ದಾರೆ.

ಗುರುದ್ವಾರಾದಲ್ಲಿ ಸಿಕ್ಕಿಹಾಕಿಕೊಂಡಿರುವ ಭಕ್ತರ ರಕ್ಷಣೆಗಾಗಿ ತಕ್ಷಣ ಮಧ್ಯ ಪ್ರವೇಶಿಸುವಂತೆ ಪಂಜಾಬ ಮುಖ್ಯಮಂತ್ರಿ ಅಮರಿಂದರ್ ಸಿಂಗ್ ಅವರು ಶುಕ್ರವಾರ ಇಮ್ರಾನ್ ಖಾನ್‌ರನ್ನು ಆಗ್ರಹಿಸಿದ್ದರು.

 ನಾನಕಾನಾ ಸಾಹಿಬ್ ಗುರುದ್ವಾರದ ಮೇಲೆ ಗುಂಪು ದಾಳಿ ನಡೆದಿದ್ದನ್ನು ಶುಕ್ರವಾರ ಮಧ್ಯರಾತ್ರಿ ಹೊರಡಿಸಿದ ಹೇಳಿಕೆಯಲ್ಲಿ ನಿರಾಕರಿಸಿರುವ ಪಾಕಿಸ್ತಾನದ ವಿದೇಶಾಂಗ ಕಚೇರಿಯು,ಗುರುದ್ವಾರದ ಬಳಿಯ ಚಹಾದಂಗಡಿಯಲ್ಲಿ ಮುಸ್ಲಿಮರ ಎರಡು ಗುಂಪುಗಳು ಹೊಡೆದಾಡಿಕೊಂಡಿದ್ದವು. ತಕ್ಷಣ ಸ್ಥಳಕ್ಕೆ ಧಾವಿಸಿದ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ ಎಂದು ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News