ಮರಣೋತ್ತರ ಪರೀಕ್ಷೆ ವರದಿ ನೀಡುತ್ತಿಲ್ಲ: ಸಿಎಎ ಪ್ರತಿಭಟನೆಯಲ್ಲಿ ಮೃತಪಟ್ಟವರ ಕುಟುಂಬದ ಆರೋಪ
ಮೀರತ್, ಜ. 4: ಮರಣೋತ್ತರ ಪರೀಕ್ಷೆಯ ವರದಿ ನೀಡಲು ಅಧಿಕಾರಿಗಳು ನಿರಾಕರಿಸುತ್ತಿದ್ದಾರೆ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಪ್ರತಿಭಟನೆ ಸಂದರ್ಭ ಮೀರತ್‌ನಲ್ಲಿ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಐವರಲ್ಲಿ ಇಬ್ಬರ ಕುಟುಂಬ ಆರೋಪಿಸಿದೆ.
‘‘ನನ್ನ ಕುಟುಂಬ ವರದಿ ಪಡೆಯಲು ಈಗಲೂ ಹೋರಾಟ ನಡೆಸುತ್ತಿದೆ’’ಎಂದು ಮೃತಪಟ್ಟ ಐವರಲ್ಲಿ ಓರ್ವನಾದ ಮೊಹ್ಸಿನ್‌ನ ಸಹೋದರ ಇಮ್ರಾನ್ ಹೇಳಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ದೊರಕಿಸಿ ಕೊಡಲು ಕಾಂಗ್ರೆಸ್‌ನ ಮಾಜಿ ಶಾಸಕ ಇಮ್ರಾನ್ ಮಸೂದ್ ಹಾಗೂ ರಾಷ್ಟ್ರೀಯ ಲೋಕ ದಳದ ನಾಯಕ ಜಯಂತ್ ಚೌಧರಿ ಅವರ ನೆರವು ಕೋರಿದ್ದೆವು. ಆದರೆ, ಅವರು ನೆರವು ನೀಡಿಲ್ಲ ಎಂದು ಅವರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ ಕೂಡ ನಮಗೆ ಇದುವರೆಗೆ ವರದಿ ಸಿಕ್ಕಿಲ್ಲ ಎಂದು ಪೊಲೀಸರು ನಮಗೆ ಹೇಳಿದ್ದಾರೆ ಎಂದು ಮೀರತ್‌ನಲ್ಲಿ ಡಿಸೆಂಬರ್ 20ರಂದು ಮೃತಪಟ್ಟ ಆಸಿಫ್‌ನ ಮಾವ ನೌಶದ್ ತಿಳಿಸಿದ್ದಾರೆ. ‘‘ವರದಿ ಪಡೆಯಲು ನಾವು ನಮ್ಮ ಕೌನ್ಸಿಲರ್, ಮಾಜಿ ಕೌನ್ಸಿಲರ್, ನಗರ ಕಾಂಗ್ರೆಸ್ ಅಧ್ಯಕ್ಷ ಹಾಗೂ ಇತರ ಹಲವರನ್ನು ಭೇಟಿಯಾಗಿದ್ದೇವೆ. ಆದರೆ, ಯಾವುದೇ ಪ್ರಯೋಜನ ಆಗಿಲ್ಲ’’ ಎಂದು ನೌಶಾದ್ ನೆರೆಯ ಮನೆಯ ವ್ಯಕ್ತಿ ಮುಹಮ್ಮದ್ ವಾಸಿಂ ತಿಳಿಸಿದ್ದಾರೆ. ವರದಿ ಪಡೆಯಲು ನೆರವು ನೀಡುವಂತೆ ಕೋರಿ ಕೆಲವು ಸಂತ್ರಸ್ತರ ಕುಟುಂಬಗಳು ನನ್ನನ್ನು ಭೇಟಿಯಾಗಿವೆ. ಅವರು ಭಯದಿಂದ ಬದುಕುತ್ತಿದ್ದಾರೆ ಎಂದು ಮೀರತ್ ನಗರ ಕಾಂಗ್ರೆಸ್‌ನ ಝಾಹಿದ್ ಅನ್ಸಾರಿ ಹೇಳಿದ್ದಾರೆ.
ಐವರು ಸಂತ್ರಸ್ತರ ಕುಟುಂಬಗಳು ಪೊಲೀಸ್ ಠಾಣೆಗೆ ಭೇಟಿ ನೀಡಲು ಹಿಂಜರಿಯುತ್ತಿವೆ. ತಮ್ಮನ್ನು ಪ್ರಕರಣದಲ್ಲಿ ಸಿಲುಕಿಸಬಹುದು ಎಂಬ ಭಯ ಅವರನ್ನು ಕಾಡುತ್ತಿದೆ ಎಂದು ಅವರು ಹೇಳಿದರು. ಪೊಲೀಸರು ಮರಣೋತ್ತರ ವರದಿ ನೀಡುತ್ತಿಲ್ಲ. ಯಾಕೆಂದರೆ, ಎಲ್ಲ ಸಾವುಗಳು ಗುಂಡಿನಿಂದ ಆದ ಗಾಯಗಳಿಂದ ಸಂಭವಿಸಿವೆ ಎಂದು ಕೆಲವು ನಿವಾಸಿಗಳು ಆರೋಪಿಸಿದ್ದಾರೆ.
‘‘ಪ್ರತಿಭಟನಾಕಾರರು ಪಿಸ್ತೂಲುಗಳನ್ನು ಬಳಿಸಿದ್ದಾರೆ. ಕೆಲವು ಜನರು ಗುಂಡಿನ ಗಾಯಗಳಿಂದ ಮೃತಪಟ್ಟಿದ್ದಾರೆ ಎಂದು ಪೊಲೀಸರು ಪ್ರತಿಪಾದಿಸಿದ್ದಾರೆ. ಮರಣೋತ್ತರ ಪರೀಕ್ಷೆಯ ವರದಿ ಇನ್ನೊಂದು ಕಥೆಯನ್ನು ಬಹಿರಂಗಗೊಳಿಸುವ ಸಾಧ್ಯತೆ ಇದೆ’’ ಎಂದು ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ನಡೆದ ಪ್ರತಿಭಟನೆಯಲ್ಲಿ ವಶಕ್ಕೆ ಒಳಗಾಗಿರುವರಿಗೆ ಕಾನೂನು ನೆರವು ನೀಡಲು ರೂಪಿಸಲಾದ ಜಮಾಅತ್ ಉಲೆಮಾ ಹಿಂದ್ ಸಮಿತಿಯ ಭಾಗವಾದ ವಕೀಲ ಅನೀಶ್ ಅಹ್ಮದ್ ತಿಳಿಸಿದ್ದಾರೆ.