ಇದು ಸಂವಿಧಾನ ರಕ್ಷ ಣೆಗಾಗಿ ನಡೆದ ಸಂಘರ್ಷ

Update: 2020-01-05 18:25 GMT

ಪೌರತ್ವ ಕಾನೂನು ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ಈಗ ದೇಶದಲ್ಲಿ ಆರಂಭವಾಗಿರುವ ಹೋರಾಟಕ್ಕೆ ನಾಯಕನೇ ಇಲ್ಲ. ಯಾವುದೇ ನಾಯಕನ ನೇತೃತ್ವವಿಲ್ಲದೆ ಯುವಜನರೇ ನಾಯಕತ್ವ ವಹಿಸಿ ನಡೆಸಿದ ಮೊದಲ ಹೋರಾಟವಿದು. ಇದರಲ್ಲಿ ಭಾಗವಹಿಸಿದ ಯುವಕ,ಯುವತಿಯರನ್ನು ನೋಡಿದಾಗ ಹೊಸ ಭರವಸೆ ಮೂಡುತ್ತದೆ.


ಕರಾಳ ಪೌರತ್ವ ಕಾನೂನಿನ ವಿರುದ್ಧ ದೇಶವ್ಯಾಪಿ ನಡೆದ ಹೋರಾಟದಿಂದ ಮೋದಿ, ಅಮಿತ್ ಶಾ ಜೋಡಿ ಕಂಗಾಲಾಗಿದೆ. ಇವರನ್ನು ನಿಯಂತ್ರಿಸುವ ನಾಗಪುರದ ಸಂವಿಧಾನೇತರ ಅಧಿಕಾರ ಕೇಂದ್ರವೂ ಗಾಬರಿಯಾಗಿದೆ. ಇದಕ್ಕೆ ಪ್ರತಿಯಾಗಿ ಸಂಘದ ಕಾರ್ಯಕರ್ತರು ಮನೆ ಮನೆಗೆ ಹೋಗಿ ಪ್ರಚಾರ ಆರಂಭಿಸಿದ್ದಾರೆ. ಹನ್ನೊಂದು ರಾಜ್ಯ ಸರಕಾರಗಳು ಇದನ್ನು ವಿರೋಧಿಸಿವೆ. ಕೇರಳ ವಿಧಾನ ಸಭೆ ಒಮ್ಮತದ ಗೊತ್ತುವಳಿ ಸ್ವೀಕರಿಸಿದೆ.

ಇದು ಯಾವುದೇ ಸ್ವಾರ್ಥ ಪರ ಬೇಡಿಕೆಗಳಿಗಾಗಿ ನಡೆದ ಹೋರಾಟವಲ್ಲ. ಸರ್ವರಿಗೂ ಸಮಾನಾವಕಾಶ ನೀಡಿರುವ ದೇಶದ ಸಂವಿಧಾನಕ್ಕೆ ಎದುರಾಗಿರುವ ಗಂಡಾಂತರದ ವಿರುದ್ಧ ಜನ ಒಂದಾಗಿದ್ದಾರೆ. ಎಲ್ಲರ ಕೈಯಲ್ಲೂ ರಾಷ್ಟ್ರ ಧ್ವಜ, ಗಾಂಧಿ, ಅಂಬೇಡ್ಕರ್ ಭಾವಚಿತ್ರಗಳು ಕಾಣುತ್ತಿವೆ.

ನಾನು ಕಳೆದ ಐದೂವರೆ ದಶಕಗಳಿಂದ ಅಂದರೆ ನನಗೆ ತಿಳಿವಳಿಕೆ ಬಂದಾಗಿನಿಂದ ಅನೇಕ ಹೋರಾಟ ನೋಡಿದ್ದೇನೆ. ಸ್ವತಃ ಭಾಗವಹಿಸಿದ್ದೇನೆ. ಸ್ವಾತಂತ್ರಾನಂತರ 1975ರಲ್ಲಿ ಜೆಪಿ ನೇತೃತ್ವದಲ್ಲಿ ನಡೆದ ಹೋರಾಟವನ್ನು ನೋಡಿದ್ದೇನೆ. ಆದರೆ, ಅದರೊಂದಿಗೆ ಸೈದ್ಧಾಂತಿಕ ಭಿನ್ನಾಭಿಪ್ರಾಯ ಇದ್ದುದರಿಂದ ಭಾಗವಹಿಸಿರಲಿಲ್ಲ. ಆ ಹೋರಾಟದ ನಂತರವೇ ಸಂಘ ಪರಿವಾರ ಚಿಗಿತು ಈ ಮಟ್ಟಿಗೆ ಬೆಳೆದು ನಿಂತಿದೆ.

ಅದೇನೇ ಇರಲಿ, ಆ ನಂತರ ಅಣ್ಣಾ ಹಜಾರೆ ನೇತೃತ್ವದಲ್ಲಿ ನಡೆದ ಕಾರ್ಪೊರೇಟ್ ಕೃಪಾಪೋಷಿತ ಹೋರಾಟದ ನಂತರ ಮೋದಿ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರು. ಕಳೆದ ಆರು ವರ್ಷಗಳಲ್ಲಿ ಈ ದೇಶವನ್ನು ದಿವಾಳಿಯ ಅಂಚಿಗೆ ತಂದು ನಿಲ್ಲಿಸಿದ್ದಾರೆ. ಈಗ ಅವರ ಬಳಿ ಹೇಳಲು ಏನೂ ಇಲ್ಲ. ಬಂಡವಾಳ ಖಾಲಿಯಾಗಿದೆ. ನೀಡಿದ ಭರವಸೆಗಳೆಲ್ಲ ಹುಸಿಯಾಗಿವೆ. ಜನಸಾಮಾನ್ಯರು ಬೆಲೆ ಏರಿಕೆ, ನಿರುದ್ಯೋಗದಂಥ ಸಮಸ್ಯೆಗಳಿಂದ ಕಂಗಾಲಾಗಿದ್ದಾರೆ. ನಾಡಿದ್ದು ದೇಶದ ದುಡಿಯುವ ವರ್ಗ ರಾಷ್ಟ್ರ ವ್ಯಾಪಿ ಮುಷ್ಕರ ನಡೆಸಲಿದೆ. ಇಂಥ ಸನ್ನಿವೇಶದಲ್ಲಿ ಜನರ ದಿಕ್ಕು ತಪ್ಪಿಸಲು ಪೌರತ್ವ ಕಾನೂನನ್ನು ತರಲಾಗಿದೆ.

ಈ ಪೌರತ್ವ ಕಾನೂನು ಸಂವಿಧಾನ ವಿರೋಧಿಯಾಗಿದೆ. ಇದರ ವಿರುದ್ಧ ಈಗ ದೇಶದಲ್ಲಿ ಆರಂಭವಾಗಿರುವ ಹೋರಾಟಕ್ಕೆ ನಾಯಕನೇ ಇಲ್ಲ. ಯಾವುದೇ ನಾಯಕನ ನೇತೃತ್ವವಿಲ್ಲದೆ ಯುವಜನರೇ ನಾಯಕತ್ವ ವಹಿಸಿ ನಡೆಸಿದ ಮೊದಲ ಹೋರಾಟವಿದು. ಇದರಲ್ಲಿ ಭಾಗವಹಿಸಿದ ಯುವಕ, ಯುವತಿಯರನ್ನು ನೋಡಿದಾಗ ಹೊಸ ಭರವಸೆ ಮೂಡುತ್ತದೆ. ಯಾವ ಸಂಘಟನೆಗೂ ಸೇರದ ಇತ್ತೀಚಿನವರೆಗೆ ಅಮೆರಿಕದಲ್ಲಿದ್ದ ಮೈಸೂರಿನ ಭವ್ಯಾನರಸಿಂಹಮೂರ್ತಿ ಎಂಬ ಯುವತಿಯ ಮಾತು ಕೇಳಿದರೆ, ಹೊಸ ಸ್ಫೂರ್ತಿ ಮೂಡುತ್ತದೆ. ಬೆಂಗಳೂರಿನಲ್ಲಿ ಪೌರತ್ವ ಕಾನೂನಿನ ವಿರುದ್ಧ ಹೋರಾಟದಲ್ಲಿ ಟೌನ್ ಹಾಲ್ ಮುಂದೆ ಹೆಸರಾಂತ ಲೇಖಕ ರಾಮಚಂದ್ರ ಗುಹಾ ಬಂಧನವಾದ ದಿನ ರಸ್ತೆಯಲ್ಲಿ ಬಿದ್ದಿದ್ದ ಭಿತ್ತಿ ಪತ್ರ ಎತ್ತಿಕೊಂಡು ಧಿಕ್ಕಾರ ಕೂಗಿದ ಭವ್ಯಾಳಂಥ ಯುವತಿಯರೇ ಈ ದೇಶದ ಭರವಸೆಯ ಬೆಳಕು.

ಈ ಹೋರಾಟದ ಇನ್ನೊಂದು ಮಹತ್ವದ ಆರೋಗ್ಯಕರ ಅಂಶವೆಂದರೆ ಮುಸ್ಲಿಮ್ ಸಮುದಾಯದ ಬಂಧುಗಳನ್ನು ಪ್ರತ್ಯೇಕಿಸುವ ಸಂಘಪರಿವಾರದ, ಸರಕಾರದ ಮಸಲತ್ತನ್ನು ಹಿಂದೂ, ಮುಸ್ಲಿಮ್, ಜೈನ, ಕ್ರೈಸ್ತ ಎನ್ನದೇ ಎಲ್ಲರೂ ಒಂದಾಗಿ ವಿರೋಧಿಸುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ಬಿಜೆಪಿ, ಸಂಘಪರಿವಾರ ಆರಂಭಿಸಿರುವ ಪ್ರಚಾರ ಅಭಿಯಾನಕ್ಕೆ ಜನ ಬೆಂಬಲ ಸಿಗುತ್ತಿಲ್ಲ.

ದಾವಣಗೆರೆ ನಗರದ ಎಸ್.ಒ.ಜಿ ಕಾಲನಿಯಲ್ಲಿ ಹಿಂದೂ, ಮುಸ್ಲಿಮರು ಮಾತ್ರವಲ್ಲ, ಎಲ್ಲ ಸಮುದಾಯದ ಜನರು ಒಟ್ಟಾಗಿ ವಾಸಿಸುತ್ತಾರೆ. ಅಲ್ಲಿ ಪೌರತ್ವ ಕಾನೂನಿನ ಪರವಾಗಿ ಪ್ರಚಾರ ಅಭಿಯಾನ ಮಾಡಲು ಬಂದಿದ್ದ ಬಿಜೆಪಿ ಕಾರ್ಯಕರ್ತರನ್ನು ಅಲ್ಲಿನ ನಿವಾಸಿಗಳು ವಾಪಸ್ ಕಳಿಸಿದ್ದಾರೆ. ಮಾಜಿ ವಿಧಾನಪರಿಷತ್ ಸದಸ್ಯರಾದ ಬಿಜೆಪಿಯ ಶಿವಯೋಗಿಸ್ವಾಮಿ ನೇತೃತ್ವದ ಕಾರ್ಯಕರ್ತರನ್ನು ತರಾಟೆಗೆ ತೆಗೆದುಕೊಂಡ ಇಲ್ಲಿನ ನಿವಾಸಿಗಳು, ‘ನಾವೆಲ್ಲ ಒಟ್ಟಾಗಿದ್ದೇವೆ ಹುಳಿ ಹಿಂಡಲು ಬರಬೇಡಿ’ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ

ಈ ದೇಶದಲ್ಲಿ ಸಾವಿರಾರು ವರ್ಷಗಳಿಂದ ಹಿಂದೂ, ಮುಸ್ಲಿಮ್, ಕ್ರೈಸ್ತ, ಜೈನ, ಸಿಖ್ ಹೀಗೆ ವಿಭಿನ್ನ ಸಮುದಾಯದ ಜನರು ಒಂದೇ ತಾಯಿಯ ಮಕ್ಕಳಂತೆ ಬದುಕುತ್ತಿದ್ದಾರೆ. ಒಂದೇ ಬಡಾವಣೆಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ಇದ್ದಾರೆ. ಅನೇಕ ಕಡೆ ವಿಭಿನ್ನ ಜಾತಿ, ಧರ್ಮಗಳ ಜನರಲ್ಲಿ ನೆಂಟಸ್ತಿಕೆಗಳೂ ಆಗಿವೆ ಹೀಗೇ ಹಾಲು ಜೇನಿನಂಥ ಬದುಕುತ್ತ, ಬದುಕನ್ನು ಕಟ್ಟಿಕೊಂಡವರ ನಡುವೆ ದ್ವೇಷದ ಅಡ್ಡಗೋಡೆ ನಿರ್ಮಿಸಿ ಕಲಹದ ದಳ್ಳುರಿ ಎಬ್ಬಿಸುವ ಪೈಶಾಚಿಕ ಕಾರ್ಯ ಮೊದಲು ಗುಜರಾತ್‌ನಲ್ಲಿ ಆರಂಭವಾಯಿತು. ಅಲ್ಲಿ ಮುಸ್ಲಿಮರು ಹಿಂದೂಗಳು ಇರುವ ಪ್ರದೇಶದಲ್ಲಿ ಜೊತೆಯಾಗಿ ವಾಸಿಸುವುದಿಲ್ಲ. ಈಗ ಗುಜರಾತ್ ಮಾದರಿಯನ್ನು ಇಡೀ ದೇಶದ ಮೇಲೆ ಹೇರಲು ಪೌರತ್ವ ಎಂಬ ವಿಷಯವನ್ನು ಮುನ್ನೆಲೆಗೆ ತಂದು ಸೋದರರ ನಡುವೆ ಕಲಹದ ಕಿಡಿ ಹೊತ್ತಿಸುವ ಹುನ್ನಾರ ನಡೆದಿದೆ. ಇದರ ಪರವಾಗಿ ಮನೆ ಮನೆಗೆ ಪ್ರಚಾರ ಕ್ಕಾಗಿ ಬರುತ್ತಿದ್ದಾರೆ. ಹಾಗೆ ಬಂದವರನ್ನು ಹತ್ತಿರ ಬಿಟ್ಡುಕೊಳ್ಳಬೇಡಿ. ದಾವಣಗೆರೆ ಜನರು ಇಟ್ಟ ಹೆಜ್ಜೆ ನಿಮ್ಮದೂ ಆಗಿರಲಿ.

ದೇಶದಲ್ಲಿ ಕೋಮು ಹಿಂಸಾಚಾರ ನಡೆದಾಗ ಮುಸಲ್ಮಾನರನ್ನು ಹಿಂದೂಗಳು, ಹಿಂದೂಗಳನ್ನು ಮುಸ್ಲಿಮರು ಕಾಪಾಡಿದ ಸಾವಿರಾರು ಉದಾಹರಣೆಗಳಿವೆ. ಹುಬ್ಬಳ್ಳಿಯಲ್ಲಿ 1983ರಲ್ಲಿ ಕೋಮು ಗಲಭೆ ನಡೆದಾಗ ವೀರಾಪುರ ಓಣಿಯಲ್ಲಿದ್ದ ನಮ್ಮ ಪುಟ್ಟ ಮನೆ ಇಂಥ ಆಸರೆಯ ತಾಣವಾಗಿತ್ತು. ನಮ್ಮ ಮನೆಯ ಸುತ್ತ ಮುತ್ತ ಮುಸ್ಲಿಮ್ ಬೀಡಿ ಕಾರ್ಮಿಕರು ವಾಸವಾಗಿದ್ದರು. ಆಗ ಗಲಭೆಕೋರರು ಕೈಯಲ್ಲಿ ತಲವಾರುಗಳನ್ನು ಹಿಡಿದುಕೊಂಡು ಮುಸ್ಲಿಮ್ ಬೀಡಿ ಕಾರ್ಮಿಕರ ಸಣ್ಣಪುಟ್ಟ ಮನೆಗಳಿಗೆ ದಾಳಿ ಮಾಡಲು ನೂರಾರು ಸಂಖ್ಯೆಯಲ್ಲಿ ಬರುತ್ತಿದ್ದರು. ಆಗ ಮುಸ್ಲಿಮ್ ಪುರುಷರು ತಮ್ಮ ಹೆಣ್ಣು ಮಕ್ಕಳು, ಮಕ್ಕಳು ಮತ್ತು ವಯೋವೃದ್ದರನ್ನು ರಾತ್ರಿ ನಮ್ಮ ಮನೆಯಲ್ಲಿ ಬಿಟ್ಡು ತಾವು ಬೇರೆ ಸುರಕ್ಷಿತ ಜಾಗಗಳಿಗೆ ಹೋಗುತ್ತಿದ್ದರು. ಆಗ ತಿಂಗಳವರೆಗೆ ಪ್ರಕ್ಷುಬ್ಧ ಪರಿಸ್ಥಿತಿ ಇತ್ತು. ಅಷ್ಟು ದೀರ್ಘ ಕಾಲ ನಮ್ಮ ಮನೆ ಈ ಸೋದರ, ಸೋದರಿಯರ ಆಶ್ರಯತಾಣವಾಗಿತ್ತು. ಇದು ಭಾರತದ ಬದುಕಿನ ಸೌಂದರ್ಯ. ಕುವೆಂಪು ಹೇಳಿದ ಸರ್ವಜನಾಂಗದ ಶಾಂತಿಯ ತೋಟ. ಇದನ್ನು ಇಂಥ ಮಸಲತ್ತುಗಳಿಂದ ನಾಶ ಮಾಡಲು ಸಾಧ್ಯವಿಲ್ಲ.

ಈಗ ಪೌರತ್ವ ಕಾನೂನಿನ ಹೆಸರಿನಲ್ಲಿ ಮುಸ್ಲಿಮರನ್ನು ಡಿಟೆನ್ಷನ್ ಸೆಲ್‌ಗೆ ಹಾಕಿ ನಂತರ ದಲಿತರ ಮತ್ತು ಮಹಿಳೆಯರ ಮೀಸಲು ವ್ಯವಸ್ಥೆಯನ್ನು ರದ್ದು ಗೊಳಿಸಿ ಅಂತಿಮವಾಗಿ ಸಂವಿಧಾನವನ್ನೇ ಬುಡಮೇಲು ಮಾಡಿ ಶ್ರೇಣೀಕೃತ ಜಾತಿ ವ್ಯವಸ್ಥೆಯನ್ನು ದೇಶದ ಮೇಲೆ ಬಲವಂತವಾಗಿ ಹೇರುವದು ಇವರ ಒಳಸಂಚಾಗಿದೆ. ಸಂವಿಧಾನದ ವಿರುದ್ಧ ನಡೆದ ಈ ಸಂಚನ್ನು ವಿಫಲಗೊಳಿಸುವುದೇ ದೇಶದ ಮುಂದಿನ ಇಂದಿನ ಮುಖ್ಯ ಸವಾಲಾಗಿದೆ. ಅತ್ಯಂತ ಸಂತಸದ ಸಂಗತಿ ಅಂದರೆ ಈ ಬಾರಿ ಬಿಸಿರಕ್ತದ ತರುಣ, ತರುಣಿಯರು ಈ ಹೋರಾಟದ ಮುಂಚೂಣಿಯಲ್ಲಿದ್ದಾರೆ. ಇವರೇ ಭಾರತದ ಭರವಸೆಯ ಬೆಳಕಾಗಿದ್ದಾರೆ.

ಇದನ್ನು ಸಹಿಸಲಾಗದ ಕೋಮವ್ಯಾಧಿಗಳು ಸೋಮಶೇಖರ ರೆಡ್ಡಿಯಂಥ ಅವಿವೇಕಿಯನ್ನು ಮುಂದೆ ಬಿಟ್ಟು ಅಲ್ಪಸಂಖ್ಯಾತರಿಗೆ ಬೆದರಿಕೆ ಹಾಕಿಸುತ್ತಿದ್ದಾರೆ.
‘ನಾವು ಶೇ.80 ರಷ್ಟಿದ್ದೇವೆ. ನಾವು ಖಡ್ಗ ಹಿಡಿದು ಬಂದರೆ ನೀವು ಉಳಿಯುವುದಿಲ್ಲ’ ಎಂದು ಈತ ಬಹಿರಂಗ ಸಭೆಯಲ್ಲಿ ಬೆದರಿಕೆ ಹಾಕುತ್ತಾನೆ. ಇದಕ್ಕೆ ಭವ್ಯಾ ಎಂಬ ಯುವತಿ ಉತ್ತರಿಸುತ್ತ, ‘ರೆಡ್ಡಿ ನೀನು ಹೇಳುವುದು ಸುಳ್ಳು. ನಾವು ಭಾರತೀಯರು ಶೇಕಡಾ 99ರಷ್ಟು ಇದ್ದೇವೆ. ನೀವು ಕೋಮುವಾದಿಗಳು ಶೇಕಡಾ 1ರಷ್ಟು ಇದ್ದೀರಿ’ ಎಂದು ನೀಡಿದ ಎಚ್ಚರಿಕೆ ಮುಟ್ಟಿ ನೋಡಿಕೊಳ್ಳುವಂತಿದೆ. ಭವ್ಯಾಳ ಮಾತು ನಮ್ಮೆಲ್ಲರ ಭಾರತೀಯರ ಮಾತಾಗಿದೆ ಅಂದರೆ ಅತಿಶಯೋಕ್ತಿಯಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ