ಹಿಂದೂರಾಷ್ಟ್ರ: ಸಂವಿಧಾನಕ್ಕೆ ಸವಾಲು

Update: 2020-01-26 18:22 GMT

ಬಾಬಾ ಸಾಹೇಬ ಅಂಬೇಡ್ಕರ್ ಅವರ ನೇತೃತ್ವದಲ್ಲಿ ರೂಪುಗೊಂಡ ಸಂವಿಧಾನದ ನಿರ್ದೇಶನದಂತೆ ದೇಶ ಈವರೆಗೆ ನಡೆದುಕೊಂಡು ಬಂದಿದೆ. ಆದರೆ, ಈಗ ಜಾತಿ ಮತ, ಭೇದವೆನ್ನದೆ ಸರ್ವರಿಗೂ ಸಮಾನಾವಕಾಶ ನೀಡಿದ ಈ ಸಂವಿಧಾನಕ್ಕೆ ಹಿಂದೆಂದೂ ಕಂಡರಿಯದ ಗಂಡಾಂತರ ಎದುರಾಗಿದೆ. ಈಗಿರುವ ಸಂವಿಧಾನ ಬದಲಿಸಿ ಹಿಂದೂರಾಷ್ಟ್ರ ನಿರ್ಮಾಣ ಮಾಡುವ ಘೋಷಣೆ ಕೇಳಿ ಬರುತ್ತದೆ .ಈ ಹಿಂದೂ ರಾಷ್ಟ್ರ ನಿರ್ಮಾಣದ ಮೊದಲ ಹೆಜ್ಜೆಯಾಗಿ ಮೋದಿ ನಾಯಕತ್ವದ ಕೇಂದ್ರದ ಬಿಜೆಪಿ ಸರಕಾರ ಪೌರತ್ವ ಕಾಯ್ದೆ ಗೆ ತಿದ್ದುಪಡಿ ತಂದಿದೆ. ಮೊದಲು ಪೌರತ್ವ ಕಾಯ್ದೆಗೆ ತಿದ್ದುಪಡಿ ಎಂದು ತಂದು ಅದರ ಬೆನ್ನ ಹಿಂದೆ ರಾಷ್ಟ್ರೀಯ ಪೌರತ್ವ ನೋಂದಣಿ ಎಂದು ಹೇಳಲಾಯಿತು. ಇದಕ್ಕೆ ವಿರೋಧ ಬಂದಾಗ, ‘ರಾಷ್ಟ್ರೀಯ ಜನಸಂಖ್ಯಾ ನೋಂದಣಿ’ ಎನ್ನುತ್ತಿದೆ. ಇದು ಅಂತಿಮವಾಗಿ ಸಂವಿಧಾನ ಮುಗಿಸುವ ಹುನ್ನಾರವಾಗಿದೆ. ಅಂತಲೇ ದೇಶ ವ್ಯಾಪಿ ಇದರ ವಿರುದ್ದ ಜನಾಕ್ರೋಶ ವ್ಯಕ್ತವಾಗುತ್ತಿದೆ.

ಕೇಂದ್ರದ ಮೋದಿ ನೇತೃತ್ವದ ನಾಗಪುರ ನಿಯಂತ್ರಿತ ಮೋದಿ ಸರಕಾರ ಜಾರಿಗೆ ತಂದಿರುವ ಪೌರತ್ವ (ತಿದ್ದುಪಡಿ) ಕಾಯ್ದೆ (ಎನ್‌ಆರ್‌ಸಿ, ಸಿಎಎ ಮತ್ತು ಎನ್‌ಪಿಆರ್) ವಿರುದ್ಧ ರಾಷ್ಟ್ರವ್ಯಾಪಿ ಜನಾಕ್ರೋಶ ಭುಗಿಲೆದ್ದಿದೆ. ಕಳೆದ ಒಂದು ತಿಂಗಳಿಂದ ಎಲ್ಲ ನಗರ, ಪಟ್ಟಣಗಳಲ್ಲಿ ನಿತ್ಯ ಪ್ರತಿಭಟನೆಗಳು ನಡೆಯುತ್ತಿವೆ. ಅಲ್ಪಸಂಖ್ಯಾತರು ಮಾತ್ರವಲ್ಲ, ದಲಿತ, ಹಿಂದುಳಿದ ವರ್ಗಗಳ ಜನರು ಎಲ್ಲ ಸಮುದಾಯಗಳ ಆರೋಗ್ಯವಂತ ಮನಸ್ಸುಗಳನ್ನು ಹೊಂದಿದ ಮನುಷ್ಯ ಪ್ರೇಮಿಗಳು ಈ ಆಂದೋಲನದಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಆದರೂ ಇಂಥ ಚಳವಳಿಗಳಿಗೆ ಮಣಿಯದೆ ಪೌರತ್ವ ತಿದ್ದುಪಡಿ ಕಾಯ್ದೆಗೆ ತರುವುದಾಗಿ ಕೇಂದ್ರ ಗೃಹ ಸಚಿವ ಅಮಿತ ಶಾ ದಾಷ್ಟದ ಮಾತುಗಳನ್ನಾಡುತ್ತಿದ್ದರೆ. ಶೂದ್ರರ ಗತಿ ಇದಾದರೆ ಭಾರತದ ಒಟ್ಟು ಜನಸಂಖ್ಯೆಯ ಶೇ. 25ರಷ್ಟಿರುವ ದಲಿತರು ಮತ್ತು ಆದಿವಾಸಿಗಳ ಪರಿಸ್ಥಿತಿ ಇನ್ನೂ ಶೋಚನೀಯ. ಜಾತಿ ಶ್ರೇಣೀಕರಣದ ಆಧಾರದಲ್ಲಿ ಇವರು ಸಾಮಾಜಿಕ ನ್ಯಾಯದಿಂದ ವಂಚಿತರಾಗಿ ಹೇಳಿದಂತೆ ಕೇಳಿಕೊಂಡು ಬಿದ್ದಿರಬೇಕಾಗುತ್ತದೆ. ಈ ಪೌರತ್ವ ಕಾನೂನು ತಂದು ಯಾವುದೇ ದಾಖಲೆಗಳಿಲ್ಲದ ಇವರನ್ನು ಅವರು ಪಡೆಯುತ್ತಿರುವ ಮೀಸಲಾತಿ ಸೌಲಭ್ಯದಿಂದ ವಂಚಿತರನ್ನಾಗಿ ಮಾಡಿ ಅತಂತ್ರ ಸ್ಥಿತಿಗೆ ದಬ್ಬಿ ಮೋಜು ನೋಡುವ ಮಸಲತ್ತು ನಡೆದಿದೆ.

1925ರಲ್ಲಿ ಜನ್ಮತಾಳಿದ ಆರೆಸ್ಸೆಸ್‌ಗೆ ಬರುವ 2025ರಲ್ಲಿ ನೂರು ವರ್ಷ ತುಂಬುತ್ತದೆ. ಈ ಶತಮಾನೋತ್ಸವದ ಸಂದರ್ಭದಲ್ಲಿ ಭಾರತದ ಈಗಿರುವ ಪ್ರಜಾಮತ ಮತ್ತು ಸಂವಿಧಾನವನ್ನು ಕಿತ್ತೆಸೆದು ಸಾವರ್ಕರ್, ಗೊಳ್ವಲಕರ ಪರಿಕಲ್ಪನೆಯ ಹಿಂದೂ ರಾಷ್ಟ್ರ ನಿರ್ಮಿಸುವುದು ಸಂಘದ ಗುರಿಯಾಗಿದೆ. ಅದಕ್ಕೆ ಪೂರ್ವ ತಯಾರಿಗಾಗಿ ಈ ಪೌರತ್ವ ತಿದ್ದುಪಡಿ ಕಾಯ್ದೆ ತರಲಾಗಿದೆ.

ಇಂಥ ಸೂಕ್ಷ್ಮ್ಮ ಸನ್ನಿವೇಶದಲ್ಲಿ ಆರ್‌ಎಸ್‌ಎಸ್ ಮತ್ತು ಸಾವರ್ಕರ್ ಕಲ್ಪನೆಯ ಹಿಂದೂ ರಾಷ್ಟ್ರ ಅಂದರೆ ಏನು ಎಂಬ ಬಗ್ಗೆ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾಗಿದೆ. ಡಾ.ಅಂಬೇಡ್ಕರ್ ಅವರು ‘ಭಾರತವು ಹಿಂದೂ ರಾಷ್ಟ್ರವಾದರೆ ನಾಶವಾಗುತ್ತದೆ’ ಎಂದು ಹೇಳಿದ್ದರು. ಬಾಬಾಸಾಹೇಬರು ಆ ಮಾತು ಯಾಕೆ ಹೇಳಿದರು ಎಂಬ ಬಗ್ಗೆ ನಾವು ಯೋಚಿಸಬೇಕಾಗಿದೆ.

ಎಂಬತ್ತು ವರ್ಷಗಳ ಹಿಂದೆ ಜರ್ಮನಿಯ ಹಿಟ್ಲರ್ ಮತ್ತು ಇಟಲಿಯ ಮುಸ್ಸೊಲಿನಿಯಿಂದ ಎರವಲು ತಂದ ಜನಾಂಗ ದ್ವೇಷದ ಸಿದ್ಧಾಂತಕ್ಕೆ ಹಿಂದುತ್ವದ ಲೇಪನ ಮಾಡಿ ಜನರ ತಲೆ ಕೆಡಿಸಲಾಗುತ್ತಿದೆ. ಆಧುನಿಕ ಜಗತ್ತು ಈಗಾಗಲೇ ಒಪ್ಪಿಕೊಂಡ ಯಾವ ಮೌಲ್ಯಗಳು ಹಿಂದೂರಾಷ್ಟ್ರದ ಪರಿಕಲ್ಪನೆಯಲ್ಲಿ ಇಲ್ಲ. ಅಂತಲೆ ಇದರಲ್ಲಿ ಜಾತಿ ಬಿಟ್ಟರೆ ಇನ್ನೇನೂ ಇಲ್ಲ ಎಂದು ಬಾಬಾಸಾಹೇಬರು ಹೇಳುತ್ತಿದ್ದರು. ಇಂದಿಗೂ ಇಲ್ಲಿ ಅಸ್ಪ್ಪಶ್ಯರನ್ನು ನಾಯಿ, ಬೆಕ್ಕುಗಳಿಗಿಂತ ಕೀಳಾಗಿ ಕಾಣಲಾಗುತ್ತದೆ. ಈ ಧರ್ಮದಲ್ಲಿ ಮಹಿಳೆಯ ಕೆಲಸ ಅಡಿಗೆ ಮನೆಗೆ ಮತ್ತು ಪತಿ ಸೇವೆಗೆ ಸೀಮಿತ. ಇದನ್ನು ಮೋಹನ ಭಾಗವತರು ಮತ್ತೆ ಮತ್ತೇ ಹೇಳುತ್ತಲೇ ಇದ್ದಾರೆ. ಸಂವಿಧಾನದ ಬಲದಿಂದ ಹಾಗೂ ತಮ್ಮ ಪ್ರಾಬಲ್ಯದಿಂದ ಶೂದ್ರರಾದ ಜಾಟರು, ಯಾದವರು, ಒಕ್ಕಲಿಗರು, ಲಿಂಗಾಯತರು ,ರೆಡ್ಡಿಗಳು ಈಗ ರಾಜಕೀಯ ಅಧಿಕಾರದ ಉನ್ನತ ಸ್ಥಾನದಲ್ಲಿ ಇದ್ದರೂ ಹಿಂದೂರಾಷ್ಟ್ರ ನಿರ್ಮಾಣವಾದರೆ ಈ ಅಧಿಕಾರ ತಪ್ಪಿ ಹೋಗುತ್ತದೆ.

ದೇಶದ ಶೇ. 85ರಷ್ಟು ಹಿಂದೂಗಳನ್ನು ಒಂದು ಮಾಡಿ ಮುಸ್ಮಿಮರಿಗೆ ಪೌರತ್ವ ನಿರಾಕರಿಸಿ ಅವರನ್ನು ಹೊರಗಿಟ್ಟು, ಡಿಟೆನ್ಷನ್ ಸೆಂಟರ್‌ಗೆ ತಳ್ಳಿ ‘ಹಿಂದೂ ರಾಷ್ಟ್ರ’ ನಿರ್ಮಿಸುವುದು ಆರೆಸ್ಸೆಸ್ ಗುರಿಯಾಗಿದೆ. ಸಂಘದ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೊಳ್ವ್ವಾಲ್ಕರ್ ಇದನ್ನು ತಮ್ಮ ‘ಬಂಚ್ ಆಫ್ ಥಾಟ್ಸ್’ ( ಕನ್ನಡದಲ್ಲಿ ಚಿಂತನ ಗಂಗಾ) ಸ್ಪಷ್ಟವಾಗಿ ಉಲ್ಲೇಖಿಸಿದ್ದಾರೆ. ಸಂಘದ ಅಂತಿಮ ಗುರಿ ಹಿಂದೂ ರಾಷ್ಟ್ರ ನಿರ್ಮಾಣ ಎಂದು ಹೇಳುತ್ತಲೆ ಇದ್ದಾರೆ. ಅದಕ್ಕೆ ಪೂರಕವಾಗಿ ಜನಸಾಮಾನ್ಯರ ನಡುವೆ ಹಿಂದೂರಾಷ್ಟ್ರದ ಭ್ರಮೆಯ ಬೀಜಗಳನ್ನು ಬಿತ್ತಲಾಗಿದೆ ಹಿಂದೂರಾಷ್ಟ್ರ ಅಂದರೆ ಏನೆಂದು ಗೊತ್ತಿಲ್ಲದ ಶೂದ್ರ, ಅತಿ ಶೂದ್ರ ಹಾಗೂ ಬುಡಕಟ್ಟು ಸಮುದಾಯಗಳ ಜನ ಅದರಲ್ಲೂ ಯುವಕರು ತಮಗೆ ಅರಿವಿಲ್ಲದೆ ಧರ್ಮದ ಮತ್ತೇರಿಸಿಕೊಂಡು ಮನುವಾದಿಗಳು ತೋಡಿದ ಖೆಡ್ಡಾಕ್ಕೆ ಬೀಳುತ್ತಿದ್ದಾರೆ.

ಭಾರತವನ್ನು ಹಿಂದೂರಾಷ್ಟ್ರ ಮಾಡುವ ಸಂಘಪರಿವಾರದ ಸಿದ್ಧಾಂತ ಅತ್ಯಂತ ಅಪಾಯಕಾರಿಯಾಗಿದೆ. ಈಗಿರುವ ಸಂವಿಧಾನದಲ್ಲಿ ಈ ದೇಶದ ಎಲ್ಲ ಧರ್ಮ, ಜನಾಂಗ, ಭಾಷೆಗಳಿಗೆ ಸಮಾನ ಅವಕಾಶವಿದೆ. ಆದರೆ, ನಾಳೆ ಇದು ಹಿಂದೂ ರಾಷ್ಟ್ರವಾದರೆ ಇಲ್ಲಿ ಹುಟ್ಟಿ ಬೆಳೆದು ಶತಮಾನಗಳಿಂದ ನೆಲೆ ಕಂಡು ಕೊಂಡ ಮುಸ್ಲಿಮರ್, ಕ್ರೈಸ್ತರ ಪರಿಸ್ಥಿತಿ ಏನು? ಅದು ಹೋಗಲಿ, ಈ ನೆಲದ ಅತ್ಯಂತ ಪ್ರಾಚೀನ ಧರ್ಮಗಳಾದ ವೈದಿಕೇತರ ಧರ್ಮಗಳಾದ ಜೈನ,ಬೌದ್ಧ್ದ, ಧರ್ಮ ಗಳ ಸ್ಥಾನ ಮಾನವೇನು? ವೈದಿಕಶಾಹಿಯ ವಿರುದ್ಧ ಬಂಡೆದ್ದು ಅಸ್ತಿತ್ವಕ್ಕೆ ಬಂದ ಸಿಖ್,ಲಿಂಗಾಯತ ಧರ್ಮಗಳ ಗತಿಯೇನು?

ಜೈನರಿಗೆ ,ಬೌದ್ಧರಿಗೆ ,ಸಿಖ್ಖರಿಗೆ ,ಲಿಂಗಾಯತರಿಗೆ, ‘ನೀವೆಲ್ಲ ಹಿಂದೂಗಳು’ ಎಂದು ಆರೆಸ್ಸೆಸ್ ಹೇಳಬಹುದು. ಆದರೆ ತಾವು ಹಿಂದುಗಳೆಂದು ಈ ಧರ್ಮಗಳ ಅನುಯಾಯಿಗಳು ಒಪ್ಪಿಕೊಳ್ಳುವರೇ? ಈಗಾಗಲೆ ಜೈನ, ಬೌದ್ಧ, ಸಿಖ್,ಲಿಂಗಾಯತ ಧರ್ಮ ಗಳ ಜನ ತಾವು ಹಿಂದೂಗಳೆಲ್ಲ ಎಂದು ಬಹಿರಂಗವಾಗಿ ಹೇಳಿ ಪ್ರತ್ಯೇಕ ಅಸ್ತಿತ್ವ ಉಳಿಸಿಕೊಂಡಿದ್ದಾರೆ. ಜೈನಧರ್ಮ ದ ಐಡೆಂಟಿಟಿ ಸರಕಾರವೇ ಧೃಢ ಪಡಿಸಿದೆ. ಹಾಗಿದ್ದರೆ ಹಿಂದೂರಾಷ್ಟ್ರ ಯಾರಿಗಾಗಿ,ಅದರ ಗೊತ್ತು ಗುರಿಗಳೇನು? ಇದಕ್ಕೆ ಸಂಘಪರಿವಾರದ ನಾಯಕರು ಬಹಿರಂಗವಾಗಿ ಉತ್ತರಿಸುವುದಿಲ್ಲ. ಅವರ ಒಳಗಿರುವ ಮಸಲತ್ತು ಈ ಎಲ್ಲ ಧರ್ಮಗಳನ್ನು ನಿರ್ನಾಮ ಮಾಡಿ ಪುರೋಹಿತ ಶಾಹಿ ಹಿಂದೂತ್ವ ಹೇರುವುದಾಗಿದೆ.

ನೇಪಾಳ ಈಗ ಹಿಂದೂರಾಷ್ಟ್ರವಲ್ಲ. ಜಾತ್ಯತೀತ ಜನತಾಂತ್ರಿಕ ರಾಷ್ಟ್ರ. ನೇಪಾಳ ಹಿಂದೂರಾಷ್ಟ್ರ ಆಗಿದ್ದಾಗಲೂ ಕ್ಷತ್ರಿಯ ರಾಜನ ಕೈಯಲ್ಲಿ ಅಧಿಕಾರ ಬಿಟ್ಟರೆ ಹಿಂದೂ ಧರ್ಮದ ಗ್ರಂಥ ಮನುಸ್ಮೃತಿಯಿಂದ ಅಲ್ಲಿ ಆಡಳಿತ ನಡೆಯಲಿಲ್ಲ. ಏಕೆಂದರೆ ವಿಶ್ವ ಸಂಸ್ಥೆ ಮಾನವ ಹಕ್ಕುಗಳಿಗೆ ಸಂಬಂಧಿಸಿದಂತೆ ಘೋಷಣೆಗೆ ಇದು ವ್ಯತಿರಿಕ್ತವಾಗಿದೆ.

ವಾಸ್ತವವಾಗಿ ಹಿಂದೂ ರಾಷ್ಟ್ರ ಅಂದರೆ ಏನು? ಯಾವುದೇ ಧರ್ಮವನ್ನಾಧರಿಸಿದ ರಾಷ್ಟ್ರದಲ್ಲಿ ಇರುವಂತೆ ಇಲ್ಲಿ ಕೂಡ ಎರಡು ಅಂಶಗಳು ಮುಖ್ಯವಾಗಿರುತ್ತವೆ. ಧರ್ಮ ಪ್ರತಿಪಾದಿಸುವ ಮೌಲ್ಯಗಳು ಮತ್ತು ಸಿದ್ಧಾಂತವನ್ನು ಕಾನೂನು ರೂಪದಲ್ಲಿ ಜಾರಿಗೆ ತರುವುದು. ಎರಡನೆಯದಾಗಿ, ಜಾತಿ, ಧರ್ಮ ಮತ್ತು ಲಿಂಗದ ಆಧಾರದಲ್ಲಿ ಜನರನ್ನು ಒಡೆದು ಯಾರು ಏನು ಮಾಡಬೇಕು? ಏನು ಮಾಡಬಾರದು? ಯಾವ ಆಹಾರ ಸೇವಿಸಬೇಕು? ಯಾವುದನ್ನು ಸೇವಿಸಬಾರದು? ಎಂದು ನಿರ್ಬಂಧಿಸುವುದು. ಇದು ಹಿಂದೂರಾಷ್ಟ್ರದ ಒಳ ಮರ್ಮ. ಆದರೆ, ಭಾರತದಲ್ಲಿ ಈಗಿರುವ ಸಂವಿಧಾನ ಇದಕ್ಕೆ ಅಡ್ಡಿಯಾಗಿದೆ. ಜಾತಿ, ಧರ್ಮ, ಭಾಷೆ, ಲಿಂಗದ ಆಧಾರದಲ್ಲಿ ತಾರತಮ್ಯಕ್ಕೆ ಇಲ್ಲಿ ಅವಕಾಶವಿಲ್ಲ. ಈ ಸಂವಿಧಾನ ಹಿಂದೂರಾಷ್ಟ್ರ ನಿರ್ಮಾಣಕ್ಕೆ ಮುಖ್ಯ ಅಡ್ಡಿಯಾಗಿದೆ. ಕ್ರಮೇಣ ಇದನ್ನು ಬದಲಿಸುವುದು ಸಂಘ ಪರಿವಾರದ ಹಿಡನ್ ಅಜೆಂಡಾ ಆಗಿದೆ.

ಈ ಎಲ್ಲ ವಿದ್ಯಮಾನಗಳಿಂದ ದೇಶ ಈಗ ವಿನಾಶದ ಅಂಚಿಗೆ ಬಂದು ನಿಂತಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಕ್ರಮೇಣ ಮುಸ್ಲಿಮರು ಮತ್ತು ಕ್ರೈಸ್ತರಿಗೆ ಇರುವ ರಾಜಕೀಯ ಹಕ್ಕುಗಳನ್ನು ನಿರಾಕರಿಸಬಹುದು. ಹಿಂದೂ ರಾಷ್ಟ್ರ ಎಂಬುದು ಹಿಂದುಗಳಲ್ಲೆ ಬಹುಸಂಖ್ಯಾತರಾದ ಶೂದ್ರ, ಅತಿ ಶೂದ್ರ ಸಮುದಾಯಗಳ ಮತ್ತು ಬುಡಕಟ್ಟು ಜನರ ಹಕ್ಕುಗಳನ್ನೂ ಮತ್ತು ಅಧಿಕಾರವನ್ನು ಕಿತ್ತು ಕೊಳ್ಳುತ್ತದೆ.

 ಭಾರತವನ್ನು ಹಿಂದೂರಾಷ್ಟ್ರ ಮಾಡಬೇಕೆಂದರೆ ಅದಕ್ಕೆ ಸಂವಿಧಾನ ಅಡ್ಡಿಯಾಗಿದೆ. ಹಾಗೆಂದು ಒಮ್ಮೆಲೆ ಸಂವಿಧಾನವನ್ನು ಬದಲಿಸಲು ಆಗುವದಿಲ್ಲ. ಅದರ ಬದಲಾಗಿ ಪೌರತ್ವ( ತಿದ್ದುಪಡಿ) ಕಾನೂನು ತಂದು ಹಿಂದುಗಳಲ್ಲದವರಿಗೆ ಇರುವ ಸೌಕರ್ಯಗಳನ್ನು ಕಿತ್ತುಕೊಳ್ಳಬಹುದು. ದನದ ಮಾಂಸ ಸೇವನೆ ನಿರ್ಬಂಧ, ಈಗಾಗಲೇ ಅಘೋಷಿತವಾಗಿ ಜಾರಿಯಲ್ಲಿದೆ. ಗುಜರಾತ್‌ನಲ್ಲಿ ಕ್ರೈಸ್ತ ರು ತಮ್ಮ ಧಾರ್ಮಿಕ ಮಹತ್ವದ ವೈನ್ ಸೇವಿಸುವಂತಿಲ್ಲ. ಈಗ ಪೌರತ್ವ ಕಾನೂನಿಗೆ ತಂದಿರುವ ತಿದ್ದುಪಡಿ ಮುಸ್ಲಿಮರನ್ನು ಗುರಿಯಾಗಿರಿಸಿಕೊಂಡಿದೆ. ಅವರಿಗಿರುವ ಎಲ್ಲ ಸಾಂವಿಧಾನಿಕ ಸೌಲಭ್ಯಗಳನ್ನು ಕಿತ್ತುಕೊಂಡು ದ್ವಿತೀಯ ದರ್ಜೆಯ ನಾಗರಿಕರನ್ನಾಗಿ ಮಾಡುವ ಉದ್ದೇಶ ಹೊಂದಿದೆ.

ಇದಕ್ಕೆ ಪೂರಕವಾಗಿ ಆರೆಸ್ಸೆಸ್ ಕಾರ್ಯಕರ್ತರು ಐದಾರು ದಶಕಗಳಿಂದ ಮುಸ್ಲಿಮರ ಬಗ್ಗೆ ಹಿಂದೂಗಳಲ್ಲಿ ಅಪಪ್ರಚಾರ ಮಾಡಿ ಸುಳ್ಳಿನ ಮೇಲೆ ಸುಳ್ಳು ಹೇಳಿ ತಮಗೆ ಪೂರಕವಾದ ವಾತಾವರಣ ಉಂಟು ಮಾಡಲು ಯತ್ನಿಸುತ್ತ ಬಂದಿದ್ದಾರೆ. ಜಾತ್ಯತೀತ ಪಕ್ಷಗಳಿಂದ ಇದಕ್ಕೆ ಪ್ರತಿಯಾಗಿ ಜನ ಮಾನಸ ತಲುಪುವ ಕಾರ್ಯ ಯೋಜನೆ ರೂಪುಗೊಳ್ಳಲಿಲ್ಲ. ಕಾಂಗ್ರೆಸನಂಥ ದೊಡ್ಡ ಸೆಕ್ಯುಲರ್ ಪಕ್ಷಗಳ ಹೊಣೆಗೇಡಿತನ ಮತ್ತು ಅವಕಾಶವಾದ, ಕಾಂಗ್ರೆಸ್ ವಿರೋಧಿ ರಾಜಕೀಯಕ್ಕಾಗಿ ತಮ್ಮ ಪಕ್ಷಗಳನ್ನೇ ವಿಸರ್ಜಿಸಿದ ಸೋಶಿಯಾಲಿಸ್ಟರ ಮೂರ್ಖತನ ಕೂಡ ದೇಶ ಅಡ್ಡ ಹಾದಿ ಹಿಡಿಯಲು ಕಾರಣ.

ಇನ್ನು ಫ್ಯಾಶಿಸಂ ಬಗ್ಗೆ ಅರಿವಿರುವ ಕಮ್ಯುನಿಸ್ಟ್ ಪಕ್ಷಗಳು ಕೂಡ ಕಾರ್ಮಿಕರ ಆರ್ಥಿಕ ಹೋರಾಟದಲ್ಲಿ ಮುಳುಗಿ ಈ ಅಪಾಯವನ್ನು ಕಡೆಗಣಿಸಿದವು. ಆರ್ಥಿಕ, ಸಾಮಾಜಿಕ ಹೋರಾಟದಲ್ಲಿ ತೊಡಗಿದರೆ ಕೋಮುವಾದವನ್ನು ಹಿಮ್ಮೆಟ್ಟಿಸಬಹುದು ಎಂಬ ಎಡಪಂಥೀಯ ಪಕ್ಷಗಳ ಕಲ್ಪನೆ ಹುಸಿಯಾಗಿದೆ. ಇಂಥ ಆರ್ಥಿಕ ಬೇಡಿಕೆಗಳ ಹೋರಾಟದಲ್ಲಿ ಭಾಗವಹಿಸುವ ಸಂಘಟಿತ ಕಾರ್ಮಿಕರೇ ರಾಮ ಜನ್ಮ ಭೂಮಿ ಯಾತ್ರೆಯಲ್ಲಿ ಪಾಲ್ಗೊಂಡ ಅನೇಕ ಉದಾಹರಣೆಗಳನ್ನು ನಾನು ಕೊಡಬಲ್ಲೆ. ಈ ವೈಫಲ್ಯ ಇಂದಿನ ಪರಿಸ್ಥಿತಿ ಗೆ ಕಾರಣ.

ನಮ್ಮ ಪಕ್ಕದ ನೇಪಾಳ 2008ರ ವರೆಗೆ ಹಿಂದು ರಾಷ್ಟ್ರ ವಾಗಿತ್ತು. ಕ್ಷತ್ರಿಯ ರಾಜವಂಶ ಆ ದೇಶವನ್ನು ಆಳುತ್ತಿತ್ತು. ವಿಶ್ವ ಹಿಂದೂ ಪರಿಷತ್‌ನ ನಾಯಕರಾಗಿದ್ದ ಅಶೋಕ ಸಿಂಘಾಲ್ ಇದರ ಬಗ್ಗೆ ವಿಶೇಷ ಅಭಿಮಾನ ಹೊಂದಿದ್ದರು. ಆದರೆ ಅಲ್ಲಿನ ಜನ ಸುದೀರ್ಘ ಹೋರಾಟ ನಡೆಸಿ ಅರಸೊತ್ತಿಗೆಯನ್ನು ಕಿತ್ತೆಸೆದರು. ನೇಪಾಳವನ್ನು ಜಗತ್ತಿನ ಏಕೈಕ ‘ಹಿಂದೂ ರಾಷ್ಟ್ರ’ ಎಂದು ಏಕೆ ಕರೆಯುತ್ತಿದ್ದರೆಂದರೆ ಅಲ್ಲಿನ ರಾಜ್ಯಾಧಿಕಾರ ಮನುಸ್ಮೃತಿಯಲ್ಲಿ ಹೇಳಿದಂತೆ ಕ್ಷತ್ರಿಯ ರಾಜನ ಕೈಯಲ್ಲಿತ್ತು. ಅಂತಲೆ ಅದು ಸಂಘ ಪರಿವಾರಕ್ಕೆ ಹೆಮ್ಮೆಯ ರಾಷ್ಟ್ರವಾಗಿತ್ತು.

ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಗಾಂಧೀಜಿ ಜನಿಸಿದ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ಮಾಡುವುದು ಸುಲಭ ಸಾಧ್ಯವಲ್ಲ. ಈಗ ನಡೆದ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧದ ಹೋರಾಟ ಇದಕ್ಕೆ ಸಾಕ್ಷಿಯಾಗಿದೆ. ಎಲ್ಲ ಪ್ರತಿಪಕ್ಷಗಳು ಸೋಮಾರಿತನದಿಂದ ಆಕಳಿಸುತ್ತಿದ್ದಾಗ ಜನಸಾಮಾನ್ಯರೆ ಬೀದಿಗಿಳಿದರು.

ವಿದ್ಯಾವಂತ ತರುಣ ,ತರುಣಿಯರು ಹೋರಾಟದ ಮುಂಚೂಣಿಗೆ ನಿಂತರು.ಈಗ ಈ ಹೋರಾಟ ಒಂದು ನಿರ್ಣಾಯಕ ಹಂತ ತಲುಪುವ ಗುರಿಯತ್ತ ಸಾಗುತ್ತಿದೆ. ಇಂದಿಲ್ಲ, ನಾಳೆ ಅಧಿಕಾರ ಮತ್ತು ಮತಾಂಧತೆಯ ಮದದಿಂದ ಮತ್ತೇರಿಸಿಕೊಂಡು ಹೂಂಕರಿಸುತ್ತಿರುವವರಿಗೆ ಜನ ಪಾಠ ಕಲಿಸುತ್ತಾರೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News