ಈ ನಮ್ಮ ಪ್ರೀತಿಯ ಭಾರತಕ್ಕೆ ಏನಾಗಿದೆ?

Update: 2020-02-02 18:12 GMT

ಆಳುವ ವರ್ಗಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯ ಕುಸಿತದ ಬಗ್ಗೆ, ಜನರ ಆರೋಗ್ಯದ ಬಗ್ಗೆ, ಶಿಕ್ಷಣ ವ್ಯವಸ್ಥೆಯ ಬಗ್ಗೆ, ನಿರುದ್ಯೋಗ ನಿವಾರಣೆ ಬಗ್ಗೆ ಆಸಕ್ತಿ ಇಲ್ಲ. ಅದರ ಆದ್ಯತೆ ಕೋಮು ಆಧಾರಿತ ರಾಷ್ಟ್ರ ನಿರ್ಮಾಣ. ದೇಶದ ಮಾನ ಹರಾಜಾಗುತ್ತಿದ್ದರೂ ಉನ್ನತ ಅಧಿಕಾರ ಸ್ಥಾನದಲ್ಲಿ ಇರುವವರ ಮಾನ ಅದಕ್ಕೆ ಮುಖ್ಯವಾಗಿದೆ. ಇದು ಮುಂದೆಲ್ಲಿ ತಲುಪುವುದೋ ನೋಡಬೇಕು.


ಇಲ್ಲಿ ಕವನ ಬರೆದರೆ ದೇಶದ್ರೋಹದ ಆರೋಪಕ್ಕೆ ಗುರಿಯಾಗಬೇಕಾಗುತ್ತದೆ. ಶಾಲಾ ಮಕ್ಕಳ ನಾಟಕದ ಬಗೆಗೂ ಪ್ರಭುತ್ವಕ್ಕೆ ಸಹನೆಯಿಲ್ಲ. ಭಿನ್ನಾಭಿಪ್ರಾಯ ಹೊಂದಿದವರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸುವಂತಿಲ್ಲ. ಸ್ವಾಮಿ ಅಗ್ನಿವೇಶ್, ಅರವಿಂದ ಕೇಜ್ರಿವಾಲ್‌ರಂತಹವರು ಬೀದಿಯಲ್ಲಿ ಏಟು ತಿನ್ನುತ್ತಿದ್ದಾರೆ. ದಾಭೋಲ್ಕರ್, ಪನ್ಸಾರೆ, ಕಲಬುರ್ಗಿ, ಗೌರಿ ಲಂಕೇಶ್ ಅಂಥವರು ಗುಂಡಿಗೆ ಬಲಿಯಾದರು. ಕೊಂದವರಿಗೆ ಇನ್ನೂ ಶಿಕ್ಷೆಯಾಗಿಲ್ಲ.

ನಮ್ಮ ಕರ್ನಾಟಕದಲ್ಲೇ ಗಂಗಾವತಿಯ ಸಮೀಪದ ಕಾರ್ಯಕ್ರಮವೊಂದರಲ್ಲಿ ಪದ್ಯ ಓದಿದ ಸಿರಾಜ್ ಬಿಸರಳ್ಳಿಯ ಮೇಲೆ ರಾಜದ್ರೋಹದ ಆಪಾದನೆ ಹೊರಿಸಿ ಎಫ್‌ಐಆರ್ ಹಾಕಲಾಗಿದೆ. ಬೀದರ್‌ನಲ್ಲಿ ನಡೆದ ಘಟನೆ ಇದಕ್ಕಿಂತ ಆತಂಕಕಾರಿಯಾಗಿದೆ. ಅಲ್ಲಿನ ಶಾಹೀನ್ ಶಿಕ್ಷಣ ಸಂಸ್ಥೆಯ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವದಲ್ಲಿ ವಿದ್ಯಾರ್ಥಿಗಳು ಆಡಿದ ನಾಟಕವೊಂದು ವಿವಾದದ ಅಲೆ ಎಬ್ಬಿಸಿದೆ. ಈ ನಾಟಕದ ಸಂಭಾಷಣೆಯೊಂದರಲ್ಲಿ ಕೇಂದ್ರದ ಪೌರತ್ವ (ತಿದ್ದುಪಡಿ) ಕಾಯ್ದೆಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿಯವರನ್ನು ಟೀಕಿಸಲಾಗಿತ್ತೆಂದು ಆರೋಪಿಸಿ ಆ ಪ್ರಾಥಮಿಕ ಶಾಲೆಯ ಶಿಕ್ಷಕಿ ಫರೀದಾ ಬೇಗ್‌ಂ ಮತ್ತು ಶಾಲಾ ವಾರ್ಷಿಕೋತ್ಸವದಲ್ಲಿ ನಾಟಕ ಮಾಡಿದ 6ನೇ ತರಗತಿಯಲ್ಲಿ ಓದುತ್ತಿರುವ ಬಾಲಕಿಯ ತಾಯಿ ಅನೂಜಾ ಮಿನ್ನಾ ಅವರನ್ನು ಪೊಲೀಸರು ಜನವರಿ 30 ರಂದು ಸುದೀರ್ಘ ವಿಚಾರಣೆ ನಡೆಸಿ ಬಂಧಿಸಿದ್ದಾರೆ. ನಾಟಕದ ಸಂಭಾಷಣೆಯಲ್ಲಿ ಪ್ರಧಾನಿ ಹೆಸರಿನ ಉಲ್ಲೇಖ ಇರಲಿಲ್ಲ ಎಂದು ರಿಹರ್ಸಲ್ ಸಂದರ್ಭದಲ್ಲಿ ಸೇರಿಸಲಾಯಿತೆಂದು ಆ ಬಾಲಕಿಯ ತಾಯಿ ಹೇಳಿಕೆ ನೀಡಿದ್ದಾಳೆ.

ದೇಶದ್ರೋಹ, ರಾಜದ್ರೋಹದ ಹೊಸ ವ್ಯಾಖ್ಯಾನವೊಂದು ಈಗ ಬಳಕೆಯಾಗುತ್ತಿದೆ. ಈ ದೇಶದ ಅಧಿಕಾರ ಸೂತ್ರ ಹಿಡಿದ ಪಕ್ಷ ಮತ್ತು ಅದರ ನಾಯಕನನ್ನು ಟೀಕಿಸಿದರೆ ಅದು ರಾಜದ್ರೋಹ ಎಂದು ಪರಿಗಣಿಸಲ್ಪಡುತ್ತಿದೆ. ಅಷ್ಟೇ ಅಲ್ಲ, ಸಾಮಾಜಿಕ ನ್ಯಾಯಕ್ಕಾಗಿ, ದಲಿತ ದಮನಿತ ವರ್ಗಗಳ ಪರವಾಗಿ ಧ್ವನಿಯೆತ್ತಿದರೆ ಅದೂ ರಾಜದ್ರೋಹದ ಆರೋಪದ ವ್ಯಾಪ್ತಿಗೆ ಒಳಪಡುತ್ತದೆ. ಪುಣೆಯ ಭೀಮಾ ಕೋರೆಗಾಂವ್‌ನ ದಲಿತ ಹೋರಾಟಗಾರರು, ಚಿಂತಕರು ಇಂಥದೇ ಆರೋಪದ ಮೇಲೆ ಮಹಾರಾಷ್ಟ್ರದ ಜೈಲಿನಲ್ಲಿದ್ದಾರೆ. ಅವರ ಮೇಲಿನ ಆರೋಪದ ಸತ್ಯಾಸತ್ಯತೆ ಬಗ್ಗೆ ಮರು ತನಿಖೆಗೆ ಮಹಾರಾಷ್ಟ್ರ ಸರಕಾರ ಇತ್ತೀಚೆಗೆ ಮುಂದಾಯಿತು. ಆಗ ದಿಗಿಲುಗೊಂಡ ಕೇಂದ್ರ ಸರಕಾರ ಹಸ್ತಕ್ಷೇಪ ಮಾಡಿ ಇದನ್ನು ಎನ್‌ಐಎ (ರಾಷ್ಟ್ರೀಯ ತನಿಖಾ ಸಂಸ್ಥೆ)ಗೆ ಒಪ್ಪಿಸಿದೆ.

ಅದೇನೇ ಇರಲಿ ಶಾಲೆಯೊಂದರ 6ನೇ ತರಗತಿಯ ಬಾಲಕಿಯೊಬ್ಬಳು ಶಾಲಾ ಕಾರ್ಯಕ್ರಮದ ನಾಟಕದಲ್ಲಿ ಆಡಿದ ಮಾತಿಗಾಗಿ ಆ ಮಗುವಿನ ತಾಯಿ ಮತ್ತು ಶಿಕ್ಷಕಿಯನ್ನು ಜೈಲಿಗೆ ತಳ್ಳುವಷ್ಟು ಅತಿರೇಕಕ್ಕೆ ನಮ್ಮ ಪ್ರಜಾಪ್ರಭುತ್ವ ಬಂದು ನಿಂತಿದೆ.

ಈ ದೇಶದಲ್ಲಿ ಸಂವಿಧಾನದ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ಕೇಂದ್ರ ಸಚಿವನೇ ದಿಲ್ಲಿಯ ಬಹಿರಂಗ ಸಭೆಯಲ್ಲಿ, ‘ದೇಶ ಕೇ ಗದ್ದಾರೊಂಕೊ’ ಎಂದು ಕೂಗಿ, ‘ಗೋಲಿ ಮಾರೋ ಸಾಲೊಂಕೊ’ ಎಂದು ಘೋಷಣೆ ಹಾಕುತ್ತಾನೆ. ತನ್ನ ಪಕ್ಷದ ಕಾರ್ಯಕರ್ತರಿಂದ ಘೋಷಣೆ ಹಾಕಿಸುತ್ತಾನೆ. ಆತನ ವಿರುದ್ಧ ಎಫ್‌ಐಆರ್ ದಾಖಲಾಗಲಿಲ್ಲ. ಚುನಾವಣಾ ಆಯೋಗ ದೊಡ್ಡ ಮನಸ್ಸು ಮಾಡಿ 72 ತಾಸು ಆತ ಪ್ರಚಾರ ಮಾಡದಂತೆ ನಿರ್ಬಂಧಿಸಿತು ಅಷ್ಟೇ. ಈತ ಮಾತ್ರವಲ್ಲ, ನಮ್ಮ ಕರ್ನಾಟಕದ ಮಂತ್ರಿ ಸಿ.ಟಿ.ರವಿ, ಕೇಂದ್ರ ಮಂತ್ರಿ ಸುರೇಶ್ ಅಂಗಡಿ, ಸಂಸದ ಅನಂತ ಕುಮಾರ್ ಹೆಗಡೆ, ಬಸನಗೌಡ ಪಾಟೀಲ ಯತ್ನಾಳ್, ರೇಣುಕಾಚಾರ್ಯ ಹೀಗೆ ಒಬ್ಬರಲ್ಲ ಇಬ್ಬರಲ್ಲ ಆಳುವ ಪಕ್ಷದ ಮಂತ್ರಿ, ಶಾಸಕರ ಬಾಯಲ್ಲಿ ಗುಂಡು ಹಾಕಿ ಕೊಲ್ಲುವ ಮಾತುಗಳು ಹೊರ ಹೊಮ್ಮುತ್ತಲೇ ಇವೆ. ಅವರ ಮೇಲೆ ಯಾವ ಕೇಸೂ ಇಲ್ಲ. ಆದರೆ ಮೋದಿ ಹೆಸರಿನ ಉಲ್ಲೇಖವಿಲ್ಲದ ಸಿರಾಜ್ ಕವನದ ಕಾರಣಕ್ಕಾಗಿ ಆತನ ಮೇಲೆ ಕೇಸು ಹಾಕಲಾಗಿದೆ. ಅತ್ತ ಬೀದರ್‌ನಲ್ಲಿ ಆರು ವರ್ಷದ ಮಗು ನಾಟಕವೊಂದರಲ್ಲಿ ಹೇಳಿಕೊಟ್ಟ ಮಾತನ್ನು ಆಡಿತೆಂದು ಆಕೆಯ ತಾಯಿಯ ಮೇಲೆ ಎಫ್‌ಐಆರ್ ಹಾಕಿ ಜೈಲಿಗೆ ದಬ್ಬಲಾಗಿದೆ.

ಜಗತ್ತಿನಲ್ಲಿ ಭಾರತದಂಥ ದೇಶ ಇನ್ನೊಂದಿಲ್ಲ. ಇಷ್ಟೊಂದು ವೈವಿಧ್ಯಮಯವಾದ, ವಿಭಿನ್ನ ಸಂಸ್ಕೃತಿ, ಧರ್ಮಗಳ ಜನ ಒಂದಾಗಿ ಬದುಕುವ ಇನ್ನೊಂದು ರಾಷ್ಟ್ರ ಹುಡುಕಿದರೂ ಸಿಗುವುದಿಲ್ಲ. ಈ ದೇಶದಲ್ಲೀಗ 130 ಕೋಟಿ ಜನರಿದ್ದಾರೆ. 29 ರಾಜ್ಯಗಳಿವೆ. 22 ಅಧಿಕೃತ ಭಾಷೆಗಳಿವೆ. ಇಂಥ ಬಹುಮುಖಿ ದೇಶಕ್ಕೆ ಅತ್ಯಂತ ಸೂಕ್ತವಾದ ಸಂವಿಧಾನವನ್ನು ಬಾಬಾ ಸಾಹೇಬರು ನೀಡಿದ್ದಾರೆ. ಇದೆಲ್ಲ ನಿಜ ಆದರೂ ನಾವು ನೆಮ್ಮದಿಯಾಗಿಲ್ಲ. ಪರಸ್ಪರ ವಿಶ್ವಾಸ, ಸಹನೆ, ಭ್ರಾತೃತ್ವ ಭಾವನೆ ಮಾಯವಾಗಿದೆ. ಪ್ರಜೆಗಳನ್ನೇ ಸಂಶಯದಿಂದ ನೋಡುವ ಸರಕಾರ ನಮ್ಮಲ್ಲಿದೆ.

ಭಾರತ ಜಗತ್ತಿನ ಅತ್ಯಂತ ದೊಡ್ಡ ಪ್ರಜಾಪ್ರಭುತ್ವ ಎಂದು ಹೆಸರಾಗಿದೆ. ನಮಗೆ ಸಂವಿಧಾನ ಎಂಬ ಬೆಳಕನ್ನು ಕೊಟ್ಟ ಡಾ.ಅಂಬೇಡ್ಕರ್ ಅವರು ಮತ್ತು ಮೊದಲ ಪ್ರಧಾನಿ ಜವಾಹರಲಾಲ್ ನೆಹರೂ ಅವರು ಈ ಬಹುಮುಖಿಯಾದ ಆದರೆ ಪಾಳೆಗಾರಿ, ಸಾಮಂತಶಾಹಿ ಪಳೆಯುಳಿಕೆಯನ್ನು ಹೊಂದಿದ ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ಪೋಷಿಸಿ ಬೆಳೆಸಿದ್ದಾರೆ.

ಅವರೆಲ್ಲರ ಜೊತೆ ಈ ದೇಶದ ಜನ ಜತನದಿಂದ ಇದನ್ನು ಕಾಪಾಡಿಕೊಂಡು ಬಂದಿದ್ದಾರೆ. ನೆಹರೂ ಪ್ರಧಾನಿಯಾಗಿದ್ದಾಗ ಸೋಷಲಿಸ್ಟ್ ನಾಯಕ ರಾಮ ಮನೋಹರ್ ಲೋಹಿಯಾ ಸಂಸತ್ತಿನಲ್ಲಿ ಪ್ರಧಾನಿ ಎದುರಾ ಎದುರು ಅವರನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ಲೋಹಿಯಾ ಟೀಕೆ ಅನೇಕ ಬಾರಿ ವೈಯಕ್ತಿಕವಾಗಿರುತ್ತಿತ್ತು. ಆದರೂ ನೆಹರೂ ನಗುತ್ತಾ ಕಿವಿ ತೆರೆದು ಕೇಳಿಸಿಕೊಳ್ಳುತ್ತಿದ್ದರು. ನೆಹರೂ ಏಕೆ ಮೋದಿಯವರ ಪಕ್ಷದ ಅಟಲ್ ಬಿಹಾರಿ ವಾಜಪೇಯಿ ಕೂಡ ತಮ್ಮ ಬಗೆಗಿನ ಟೀಕೆಯ ಬಗ್ಗೆ ಅಸಹನೆ ಹೊಂದಿರಲಿಲ್ಲ. ಆದರೆ ಈಗ ಹಾಗಿಲ್ಲ, ಪುಟ್ಟ ಊರಿನ ಪುಟ್ಟ ಶಾಲೆಯ ವಾರ್ಷಿಕೋತ್ಸವದ ನಾಟಕವೊಂದರಲ್ಲಿ ಮಗುವೊಂದು ಸಂಭಾಷಣೆಯಲ್ಲಿ ಹೇಳಿಕೊಟ್ಟ ಮಾತನ್ನು ಆಡಿದ್ದಕ್ಕಾಗಿ ಆ ಮಗುವಿನ ತಾಯಿ ಜೈಲು ಪಾಲಾಗಬೇಕಾಗಿ ಬಂದಿದೆ. ಇದರಿಂದ ಮಗುವಿನ ಎಳೆ ಮನಸ್ಸಿನ ಮೇಲೆ ಆಗುವ ಪರಿಣಾಮ ಎಂಥದು ಎಂಬ ವಿವೇಚನೆಯೂ ಪೊಲೀಸರಿಗಿಲ್ಲ. ಇವರಿಗೆ ತಮ್ಮ ಪ್ರಧಾನಿಯ ಮಾನ ಮರ್ಯಾದೆ ಮುಖ್ಯ. ಮಗುವಿನ ಮಾತಿನಿಂದ ಅವಮಾನವಾಗುತ್ತದೆ, ರಾಜದ್ರೋಹವಾಗುತ್ತದೆ ಎಂಬುದು ಅವರ ವಾದ.

ಇದು ಭಾರತದ ಇಂದಿನ ಪರಿಸ್ಥಿತಿ. ಆಳುವ ವರ್ಗಕ್ಕೆ ದೇಶದ ಆರ್ಥಿಕ ಪರಿಸ್ಥಿತಿಯ ಕುಸಿತದ ಬಗ್ಗೆ, ಜನರ ಆರೋಗ್ಯದ ಬಗ್ಗೆ, ಶಿಕ್ಷಣ ವ್ಯವಸ್ಥೆಯ ಬಗ್ಗೆ, ನಿರುದ್ಯೋಗ ನಿವಾರಣೆ ಬಗ್ಗೆ ಆಸಕ್ತಿ ಇಲ್ಲ. ಅದರ ಆದ್ಯತೆ ಕೋಮು ಆಧಾರಿತ ರಾಷ್ಟ್ರ ನಿರ್ಮಾಣ. ದೇಶದ ಮಾನ ಹರಾಜಾಗುತ್ತಿದ್ದರೂ ಉನ್ನತ ಅಧಿಕಾರ ಸ್ಥಾನದಲ್ಲಿ ಇರುವವರ ಮಾನ ಅದಕ್ಕೆ ಮುಖ್ಯವಾಗಿದೆ. ಇದು ಮುಂದೆಲ್ಲಿ ತಲುಪುವುದೋ ನೋಡಬೇಕು.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News