ಭೋಪಾಲ್‌ನ ಭಾರತ ಭವನ ಭಗ್ನ ಗೊಂಡ ಕತೆ

Update: 2020-02-16 18:38 GMT

 ಅನೇಕತೆಯನ್ನು ನಿರ್ನಾಮ ಮಾಡಿ ಏಕ ಸಂಸ್ಕೃತಿ ಹೇರುವ ಫ್ಯಾಶಿಸ್ಟ್ ಕಾರ್ಯಸೂಚಿಗೆ ಭೋಪಾಲ್‌ನ ‘ಭಾರತ ಭವನ’ ಬಲಿಯಾಯಿತು. ಅಲ್ಲೀಗ ಮೊದಲಿನ ಕಲಾ ವೈಭವವಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳಿಲ್ಲ. ಹೀಗೆ ಬಹುಮುಖಿ ಭಾರತದ ಸಂಕೇತಗಳಾದ ಸಂಸ್ಥೆಗಳನ್ನು ಒಂದೊಂದಾಗಿ ನಾಶ ಮಾಡುತ್ತ ಬಂದ ಏಕ ಸಂಸ್ಕೃತಿಯ ಹರಿಕಾರರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನ್ನು ಕಬಳಿಸಲು ಯತ್ನಿಸಿದರು. ಆದರೆ, ಅಲ್ಲಿನ ವಿದ್ಯಾರ್ಥಿಗಳು ಸುದೀರ್ಘ ಹೋರಾಟ ನಡೆಸಿ ಅದನ್ನು ಉಳಿಸಿಕೊಂಡರು. ದೇಶಕ್ಕೆ ಹಲವಾರು ಪರಿಣಿತರನ್ನು ನೀಡಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು (ಜೆಎನ್‌ಯು) ಮುಗಿಸುವ ಹುನ್ನಾರ ಈಗಲೂ ನಡೆದಿದೆ.


ರಾಜಕೀಯ ಅಧಿಕಾರವನ್ನು ಸ್ವಾಧೀನ ಪಡಿಸಿಕೊಂಡಿರುವ ಮನುವಾದಿ ಫ್ಯಾಶಿಸ್ಟ್‌ಶಕ್ತಿಗಳು ತಮ್ಮ ಧರ್ಮಾಧಾರಿತ ರಾಷ್ಟ್ರ ಸ್ಥಾಪನೆಗೆ ಪ್ರಮುಖ ಅಡ್ಡಿಯಾಗಿರುವ ಸಾಂಸ್ಕೃತಿಕ ಲೋಕದ ಮೇಲೆ ಈಗ ಹದ್ದಿನ ಕಣ್ಣು ಹಾಕಿದ್ದಾರೆ. ಇದು ಜಗತ್ತಿನ ಚರಿತ್ರೆಯಲ್ಲಿ ಹೊಸದಲ್ಲ. ಕಳೆದ ಶತಮಾನದ ನಲವತ್ತರ ದಶಕದಲ್ಲಿ ಜರ್ಮನಿಯಲ್ಲಿ ನಾಝಿ ಸರ್ವಾಧಿಕಾರಿ ಅಡಾಲ್ಫ್ ಹಿಟ್ಲರ್ ಕೂಡ ಬರ್ಟೊಲ್ಡ್ ಬ್ರೆಕ್ಟ್ ನಂತಹ ನಾಟಕಕಾರನನ್ನು ಇದೇ ಪರಿ ಕಾಡಿದ್ದ. ತಿರುಗಿ ನಿಂತ ಚಾಪ್ಲಿನ್ ಕೂಡ ಆತನ ಕೆಂಗಣ್ಣಿಗೆ ಗುರಿಯಾಗಿದ್ದ. ಭಾರತದಲ್ಲಿ ಹಿಟ್ಲರ್ ಮತ್ತೆ ಹೊಸ ಅವತಾರ ತಾಳಿ ಬಂದಿದ್ದಾನೆ. ಕೇಂದ್ರದ ಅಧಿಕಾರ ಸೂತ್ರ ಹಿಡಿದವರ ಮೈಯಲ್ಲಿ ಹಿಟ್ಲರ್ ಭೂತ ಹೊಕ್ಕಿದೆ ಕರ್ನಾಟಕದಲ್ಲೂ ಅದೀಗ ಗೋಚರಿಸುತ್ತಿದೆ.

ಮೈಸೂರಿನ ರಂಗಾಯಣದಲ್ಲಿ ಇತ್ತೀಚೆಗೆ ನಡೆದ ವಿದ್ಯಮಾನಗಳು ಇದಕ್ಕೆ ಸಾಕ್ಷಿಯಾಗಿವೆ. ರಾಜ್ಯದ ಬಿಜೆಪಿ ಸರಕಾರದಿಂದ ನಿರ್ದೇಶಕನಾಗಿ ನೇಮಕಗೊಂಡ ಅಡ್ಡಂಡ ಕಾರ್ಯಪ್ಪ ತಾನು ಬಲಪಂಥೀಯ ಮತ್ತು ಬಿಜೆಪಿ ಬೆಂಬಲಿಗ ಎಂದು ಘೋಷಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ, ಅಪ್ರಸ್ತುತವಾಗಿ ಟಿಪ್ಪು ಸುಲ್ತಾನ್‌ರನ್ನು ಟೀಕೆ ಮಾಡಿ ಸಂಸ್ಕೃತಿ ಸಚಿವ ಸಿ.ಟಿ.ರವಿ ಅವರಿಂದ ಶಹಬ್ಬಾಸ್‌ಗಿರಿ ಪಡೆದಿದ್ದಾರೆ. ಈಗ ನಾನು ಹೇಳ ಹೊರಟಿರುವುದು ಅದರ ಬಗ್ಗೆ ಅಲ್ಲ. ರಂಗಾಯಣದಂತೆ ಹೆಸರು ಮಾಡಿದ್ದ ಭೋಪಾಲ್‌ನ ‘ಭಾರತ ಭವನ’. ಈ ಸ್ವಾಯತ್ತ ಸಂಸ್ಥೆಯನ್ನು ಇದೇ ಕರಾಳ ಶಕ್ತಿಗಳು ಹೇಗೆ ಹಾಳು ಮಾಡಿದರೆಂಬ ಘಟನೆ ನೆನಪಿಗೆ ಬಂದು ಅದರ ಬಗ್ಗೆ ಬರೆಯುತ್ತಿರುವೆ.

‘ಭಾರತ ಭವನ’ ದೇಶದ ಕಲಾವಿದರಿಂದಲೇ ಶಾಸನ ಬದ್ಧ ಮತ್ತು ಪ್ರಾಯೋಗಿಕವಾಗಿ ನಡೆಸಲ್ಪಡುವ ಏಕೈಕ ಸಾರ್ವಜನಿಕ ಟ್ರಸ್ಟ್ ಆಗಿತ್ತು. ಅದು ನ್ಯಾಷನಲ್ ಸ್ಕೂಲ್ ಆಫ್ ಡ್ರಾಮಾ ಅಥವಾ ಲಲಿತಾ ಕಲಾ ಅಕಾಡಮಿಯಂತಹ ಸರಕಾರದ ಸಂಸ್ಥೆಯಾಗಿರಲಿಲ್ಲ. ಸ್ವತಃ ಕವಿ ಮತ್ತು ಸಾಹಿತ್ಯ ವಿಮರ್ಶಕರಾಗಿದ್ದ ಐಎಎಸ್ ಅಧಿಕಾರಿ ಅಶೋಕ ವಾಜಪೇಯಿ ಭಾರತ ಭವನದ ಕಾರ್ಯದರ್ಶಿಯಾಗಿದ್ದರು. ಭಾರತ ಭವನಕ್ಕೆ ಮುಂಚೆ ಖ್ಯಾತ ಸೀತಾರ ವಾದಕ ಪಂಡಿತ ರವಿಶಂಕರ್ ಮತ್ತು ಹೆಸರಾಂತ ಕಲಾವಿದ ಎಂ.ಎಫ್.ಹುಸೇನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಭಾರತ ಭವನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಆಗ ದೇಶದ ವಿವಿಧ ಪ್ರದೇಶಗಳ ಕಲಾವಿದರು ಪಾಲ್ಗೊಳ್ಳುವಂತೆ ಮಾಡಿದ್ದು ಅದರ ಕಲಾತ್ಮಕ ಸ್ವಾಯತ್ತತೆ. ಈ ಸ್ವಾಯತ್ತತೆ ಭಾರತ ಭವನದ ಹಿರಿಮೆಯನ್ನು ಹೆಚ್ಚಿಸಿತು. ದೇಶದ ಬಹುಕಲಾ ಸಮುಚ್ಚಯ ಎಂದು ಇದು ಹೆಸರು ಮಾಡಿತ್ತು. ನಮ್ಮ ಬಿ.ವಿ.ಕಾರಂತರೂ ಇಲ್ಲಿ ಸೇವೆ ಸಲ್ಲಿಸಿದ್ದರು.

ಇಂತಹ ಭಾರತ ಭವನದ ಮೇಲೆ ಮಧ್ಯಪ್ರದೇಶದ ಆಗಿನ ಬಿಜೆಪಿ ಸರಕಾರದ ಹದ್ದಿನ ಕಣ್ಣು ಬಿತ್ತು. ಆಗಿನ ಮುಖ್ಯಮಂತ್ರಿ ಸುಂದರಲಾಲ್ ಪಾಟ್ವಾ ಅವರಿಗೆ ಇದನ್ನು ಭಾರತದ ಪ್ರಾಚೀನ ಆಧ್ಯಾತ್ಮಿಕ ಪರಂಪರೆಯ ಜ್ಞಾನದ ಜಾಗತಿಕ ಕೇಂದ್ರವನ್ನಾಗಿ ಮಾಡುವ ಹುಚ್ಚು ಹಿಡಿಯಿತು. ಅವರು ತಡ ಮಾಡಲಿಲ್ಲ. ಭಾರತ ಭವನ ಕಾಯ್ದೆಗೆ ತಕ್ಷಣ ತಿದ್ದುಪಡಿ ತಂದು ಅದರ ಸಾಂಸ್ಕೃತಿಕ ಸ್ವಾಯತ್ತತೆ ಯನ್ನು ನಾಶ ಮಾಡಿದರು. ಆಗ ಇದನ್ನು ಪ್ರತಿಭಟಿಸಿ, ಖ್ಯಾತ ಕಲಾವಿದರಾದ ಜಗದೀಶ್ ಸ್ವಾಮಿನಾಥನ್, ಎಂ.ಎಫ್. ಹುಸೇನ್, ಉಸ್ತಾದ್ ಅಮೀನುದ್ದೀನ್ ಡಾಗರ, ಉಸ್ತಾದ್ ವಿಲಾಯತಖಾನ್, ಕಿಶೋರಿ ಅಮೋಣಕರ, ಹಬೀಬ್ ತನ್ವೀರ್, ಹರಿಪ್ರಸಾದ ಚೌರಾಸಿಯಾ, ಚಿಟ್ಟಿಬಾಬು ಮುಂತಾದವರು ಧ್ವನಿಯೆತ್ತಿದರು. ಆದರೆ, ಪ್ರಯೋಜನವಾಗಲಿಲ್ಲ.

ಅದು 90ರ ದಶಕದ ಆರಂಭದ ಕಾಲಘಟ್ಟ. ಬಿಜೆಪಿ ರಾಜಕೀಯ ಕಾರ್ಯಸೂಚಿಯ ಭಾಗವಾಗಿ ಎಲ್.ಕೆ.ಅಡ್ವಾಣಿ ಅಯೋಧ್ಯೆಗೆ ರಥಯಾತ್ರೆ ಹೊರಟಿದ್ದರು. ದೇಶಾದ್ಯಂತ ಗಲಭೆ, ಹಿಂಸಾಚಾರ, ಬೆಂಕಿಸ್ಪರ್ಶದ ಘಟನೆಗಳು ನಡೆದು ಅಶಾಂತಿಯ ವಾತಾವರಣ ಉಂಟಾಯಿತು. ಅದೇ ಸುಮಾರಿಗೆ ಜಗದ್ವಿಖ್ಯಾತ ವಾಸ್ತುಶಿಲ್ಪಿ ಚಾರ್ಲ್ಸ್ ಕೊರಿಯಾರ ಕನಸಿನ ಕೂಸಾದ ಭೋಪಾಲ್‌ನ ‘ಭಾರತ ಭವನ’ ತನ್ನ ಸ್ವಾಯತ್ತತೆ ಕಳೆದುಕೊಂಡಿತು. ಮುಖ್ಯಮಂತ್ರಿ ಅದರ ಪದ ನಿಮಿತ್ತ ಅಧ್ಯಕ್ಷರಾದರು. ಮುಖ್ಯಮಂತ್ರಿಯ ಸಾಂಸ್ಕೃತಿಕ ಕಾರ್ಯದರ್ಶಿ ‘ಭಾರತ ಭವನ’ದ ಕಾರ್ಯದರ್ಶಿಯಾದರು.

ಅಯೋಧ್ಯೆಯ ಬಾಬರಿ ಮಸೀದಿ ಮೇಲೆ ನಡೆದ ದಾಳಿ ಹಾಗೂ ಭೋಪಾಲ್‌ನ ಭಾರತ ಭವನದ ಮೇಲೆ ನಡೆದ ಸರಕಾರಿ ಆಕ್ರಮಣ ಇವೆರಡೂ ಭಾರತದ ಮೊದಲ ಪ್ರಧಾನಿ ನೆಹರೂ ಮತ್ತು ಅಂಬೇಡ್ಕರ್ ಪರಿಕಲ್ಪನೆಯ ಜಾತ್ಯತೀತ ಪರಿಕಲ್ಪನೆಯ ಭಾರತವನ್ನು ಮನುವಾದಿ ಹಿಂದೂರಾಷ್ಟ್ರ ನಿರ್ಮಾಣ ಮಾಡುವ ಗತ ಕಾಲದ ‘ಸುವರ್ಣ’ ಯುಗಕ್ಕೆ ಕೊಂಡೊಯ್ಯುವ ಸಂಘಪರಿವಾರದ ರಹಸ್ಯ ಕಾರ್ಯ ಸೂಚಿಯ ಭಾಗವಾಗಿದ್ದವು.

ಆಗಿನಿಂದ ಆರಂಭವಾದ ಸಂಘಪರಿವಾರದ ಹಿಂದೂರಾಷ್ಟ್ರ ನಿರ್ಮಾಣದ ಪ್ರಯತ್ನ ಈಗ ಅತಿರೇಕದ ಹಂತಕ್ಕೆ ತಲುಪಿದೆ. ಅನೇಕತೆಯ ಬಹುಮುಖಿ ಭಾರತವನ್ನು ಏಕ ಸಾಂಸ್ಕೃತಿಕ ಘಟಕ ಮಾಡುವುದು ಅದರ ಉದ್ದೇಶವಾಗಿದೆ. ಎಲ್ಲವನ್ನೂ ವೇದಗಳ ಕಾಲಕ್ಕೆ ಕೊಂಡೊಯ್ಯುವುದು ಮತ್ತು ವೇದಗಳೇ ಎಲ್ಲದರ ಮೂಲವೆಂದು ವ್ಯಾಖ್ಯಾನಿಸುವುದು ಮತ್ತು ಕಲೆಗಳಿಗೂ ಮೂಲ ಭರತನ ನಾಟ್ಯಶಾಸ್ತ್ರ ಎನ್ನುವುದು ಅದರ ವಿತಂಡ ವಾದವಾಗಿದೆ.

ಭಾರತವೆಂದರೆ ಅನೇಕ ಧರ್ಮಗಳ, ಭಾಷೆಗಳ, ಸಂಸ್ಕೃತಿಗಳ ತವರೂರು. ಕ್ಲಾಸಿಕಲ್ ಪರಂಪರೆಗೆ ಸಂವಾದಿಯಾಗಿ ಜಾನಪದ ಪರಂಪರೆಗಳೂ ಇಲ್ಲಿವೆ. ಪ್ರಾದೇಶಿಕ ಕಲಾಪ್ರಕಾರಗಳಿವೆ. ಇವೆಲ್ಲ ಒಂದಕ್ಕೊಂದು ಹಾಸುಹೊಕ್ಕಾಗಿ ಬೆರೆತುಕೊಂಡಿವೆ. ಇವುಗಳನ್ನು ಹೊಸಕಿ ಹಾಕಿ ತಮ್ಮ ಮೂಗಿನ ನೇರಕ್ಕೆ ಏಕ ಸಂಸ್ಕೃತಿ ಹೇರುವುದು ಅಪಾಯಕಾರಿಯಾಗಿದೆ.

ಈ ಅನೇಕತೆಯನ್ನು ನಿರ್ನಾಮ ಮಾಡಿ ಏಕ ಸಂಸ್ಕೃತಿ ಹೇರುವ ಫ್ಯಾಶಿಸ್ಟ್ ಕಾರ್ಯಸೂಚಿಗೆ ಭೋಪಾಲ್‌ನ ‘ಭಾರತ ಭವನ’ ಬಲಿಯಾಯಿತು. ಅಲ್ಲೀಗ ಮೊದಲಿನ ಕಲಾ ವೈಭವವಿಲ್ಲ. ಸಾಂಸ್ಕೃತಿಕ ಚಟುವಟಿಕೆಗಳಿಲ್ಲ. ಹೀಗೆ ಬಹುಮುಖಿ ಭಾರತದ ಸಂಕೇತಗಳಾದ ಸಂಸ್ಥೆಗಳನ್ನು ಒಂದೊಂದಾಗಿ ನಾಶ ಮಾಡುತ್ತ ಬಂದ ಏಕ ಸಂಸ್ಕೃತಿಯ ಹರಿಕಾರರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ಪುಣೆಯ ಫಿಲಂ ಇನ್‌ಸ್ಟಿಟ್ಯೂಟ್‌ನ್ನು ಕಬಳಿಸಲು ಯತ್ನಿಸಿದರು. ಆದರೆ, ಅಲ್ಲಿನ ವಿದ್ಯಾರ್ಥಿಗಳು ಸುದೀರ್ಘ ಹೋರಾಟ ನಡೆಸಿ ಅದನ್ನು ಉಳಿಸಿಕೊಂಡರು. ದೇಶಕ್ಕೆ ಹಲವಾರು ಪರಿಣಿತರನ್ನು ನೀಡಿದ ಜವಾಹರಲಾಲ್ ನೆಹರೂ ವಿಶ್ವವಿದ್ಯಾನಿಲಯವನ್ನು (ಜೆಎನ್‌ಯು) ಮುಗಿಸುವ ಹುನ್ನಾರ ಈಗಲೂ ನಡೆದಿದೆ.

ಈ ಹಿನ್ನೆಲೆಯಲ್ಲಿ ಮೈಸೂರಿನ ರಂಗಾಯಣದ ಇತ್ತೀಚಿನ ವಿದ್ಯಮಾನಗಳನ್ನು ಗಮನಿಸಬೇಕು. ನೂತನ ಅಧ್ಯಕ್ಷರು ತಾನು ಬಲಪಂಥೀಯನಾದರೂ ಗಾಂಧಿ ನಾಟಕೋತ್ಸವ ಏರ್ಪಡಿಸಿದ್ದಾಗಿ ಸಮರ್ಥಿಸಿಕೊಳ್ಳುತ್ತಾರೆ. ಆದರೆ, ಬರಲಿರುವ ದಿನಗಳಲ್ಲಿ ರಂಗಾಯಣದ ಸ್ವರೂಪದಲ್ಲಿ ಬದಲಾವಣೆಯಾದರೆ ಅಚ್ಚರಿಪಡಬೇಕಿಲ್ಲ

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News