ನೂರ್ ಇನಾಯತ್ ಖಾನ್: ಚರಿತ್ರೆ, ಸಂಗೀತ ಮತ್ತು ದರ್ಶನ
ಇತಿಹಾಸದ ಹರಿಯು ಅತ್ಯಂತ ಕುತೂಹಲಕರವಾದುದು. ಅದರ ರೂಪಾಂತರಗಳು ಕೂಡ. ಟಿಪ್ಪುಸುಲ್ತಾನ್ ತನ್ನ ನಾಡಿಗಾಗಿ ಬ್ರಿಟಿಷರ ವಿರುದ್ಧ ಹೋರಾಡುತ್ತಾ ರಣರಂಗದಲ್ಲಿ ಹುತಾತ್ಮನಾದ ಈ ದೇಶ ಕಂಡ ಅಪರೂಪದ ಅರಸ. ಈ ನೆಲದ ಜನಗಳಿಗಾಗಿ ಕೊನೆಯವರೆಗೂ ಮಿಡಿದವನು. ರೈತರು, ದಲಿತರ ಸಂಕಟಗಳಿಗೆ ಸ್ಪಂದಿಸಿದವನು. ಕೃಷಿ, ಆರ್ಥಿಕತೆ, ರಾಜಕೀಯಗಳಲ್ಲಿ ವಿವಿಧ ಪ್ರಯೋಗಗಳನ್ನು ಮಾಡಿದಾತ. ಧಗಿಸುವ ಕನಸುಗಳನ್ನು ಮುಡಿದುಕೊಂಡು ಬದುಕಿನ ಬಹುತೇಕ ಸಮಯವನ್ನು ಸಾಮ್ರಾಜ್ಯ ಶಾಹಿಗಳ ವಿರುದ್ಧ ಹೋರಾಡಲು ರಣರಂಗದಲ್ಲಿ ಕಳೆದುಕೊಂಡವನು. ಆತನ ಬಲಿದಾನ ಅಲ್ಲಿಗೇ ಮುಗಿಯದೇ ಅದು ನಮ್ಮನ್ನು ಮತ್ತೆ ಬ್ರಿಟಿಷ್ ನೆಲದಲ್ಲೇ ಹೊಸದಾಗಿ ತೆರೆದುಕೊಳ್ಳುವ ಅಚ್ಚರಿಯನ್ನು ‘ನೂರ್ ಇನಾಯತ್ ಖಾನ್’ ಬದುಕಿನ ಮೂಲಕ ನಮ್ಮದಾಗಿಸಬಹುದು. ನೂರ್ ಇನಾಯತ್ ಖಾನ್ ಟಿಪ್ಪುವಿನ ಮರಿಮಗಳು. ಈಕೆಯ ಅಪ್ಪ ಹಜರತ್ ಇನಾಯತ್ ಖಾನ್ ಸೂಫಿ ಸಂಗೀತಗಾರ ಹಾಗೂ ದಾರ್ಶನಿಕ. ರಶ್ಯದಲ್ಲಿ ಹುಟ್ಟಿದ ನೂರ್, ಎರಡನೆಯ ಮಹಾಯುದ್ಧದಲ್ಲಿ ಇಂಗ್ಲೆಂಡಿನ ಗೂಢಚಾರಿಣಿಯಾಗಿ ಫ್ರಾನ್ಸಿಗೆ ಹೋಗಿ, ನಾಝಿಗಳ ಕೈಯಲ್ಲಿ ಸಿಕ್ಕಿ ಬಿದ್ದು, ಜರ್ಮನಿಯ ಡಕಾವ್ ಕಾನ್ಸಂಟ್ರೇಶನ್ ಕ್ಯಾಂಪ್‌ನಲ್ಲಿ ಸಜೀವ ದಹನವಾದವಳು. ಅವಳ ಪೂರ್ವಜನಾದ ಟಿಪ್ಪು, ಬ್ರಿಟಿಷರನ್ನು ಆಜನ್ಮ ವೈರಿಗಳೆಂದು ಪರಿಭಾವಿಸಿ ಜೀವನವಿಡೀ ಅವರ ವಿರುದ್ಧ ಹೋರಾಡುತ್ತ, ರಣರಂಗದಲ್ಲಿ ನೆತ್ತರು ಹರಿಸುತ್ತಾ ಪ್ರಾಣ ಬಿಟ್ಟರೆ, ಅವನ ವಂಶದ ಕುಡಿಯೊಂದು ಒಂದೂವರೆ ಶತಮಾನದನಂತರ, ಬ್ರಿಟಿಷರ ಪ್ರತಿನಿಧಿಯಾಗಿ ಹೋಗಿ ರಣರಂಗದಲ್ಲಿ ಜೀವಬಿಟ್ಟಿತು. ಆದರೆ ಇಲ್ಲಿ ಟಿಪ್ಪುವಾಗಲಿ, ನೂರ್ ಇನಾಯತ್ ಖಾನ್ ಆಗಲಿ ನಮಗೆ ಹತ್ತಿರವಾಗುವುದು ರಾಜಕೀಯೇತರವಾದ ಹಲವು ಸಂಗತಿಗಳಿಗಾಗಿ. ಈ ಹಿನ್ನೆಲೆಯಲ್ಲಿ ಚಂದ್ರಶೇಖರ್ ಮಂಡೆಕೋಲು ಅವರ ‘ನೂರ್ ಇನಾಯತ್ ಖಾನ್-ನಾಝಿ ಹೋರಾಟದ ಆರ್ದ್ರ ಕಾವ್ಯ’ ಮುಖ್ಯವಾಗುತ್ತದೆ.
ಹಿರಿಯ ವಿದ್ವಾಂಸರಾದ ಪುರುಷೋತ್ತಮ ಬಿಳಿಮಲೆ ಕೃತಿಯ ಕುರಿತಂತೆ ಹೀಗೆ ಅಭಿಪ್ರಾಯ ಪಡುತ್ತಾರೆ ‘‘ಈ ಪುಸ್ತಕವನ್ನು ಚರಿತ್ರೆಯ ಕಥನವೆಂದು ಓದತೊಡಗಿದರೆ, ಅದು ಸರ್ವಾಧಿಕಾರದ ವಿರುದ್ಧ ಹೋರಾಡುವ ವರ್ತಮಾನದ ನಿರೂಪಣೆಯಾಗಿ ಮೆಲ್ಲನೆ ಪರಿವರ್ತನೆ ಹೊಂದುತ್ತದೆ. ಪುಸ್ತಕದ ಕೇಂದ್ರದಲ್ಲಿರುವ ನೂರಳನ್ನು ಭಾರತೀಯ ಮೂಲದವಳೆಂಬ ರಾಷ್ಟ್ರೀಯ ಪ್ರಜ್ಞೆಯಲ್ಲಿ ಗ್ರಹಿಸಿಕೊಂಡು ಹೊರಟರೆ ಆಕೆ ನಮ್ಮ ಕೈ ಹಿಡಿದು ಅಮೆರಿಕ, ಬ್ರಿಟನ್, ರಶ್ಯ, ಫ್ರಾನ್ಸ್, ಜರ್ಮನಿಗಳ ಗಡಿ ಧಾಟಿಸಿ ಮುನ್ನುಗ್ಗಿಸುತ್ತಾಳೆ. ಸೂಫಿ ಸಂಗೀತದ ವಿಶ್ವಾತ್ಮಕ ಮಧುರ ಭಾವದೊಡನೆ ಓದು ಮುಂದುವರಿದರೆ, ಅದು ನಮ್ಮನ್ನು ಡಕಾವೋ ಕ್ಯಾಂಪ್‌ನ ಅಮಾನುಷ ಕ್ರೌರ್ಯದ ಮಗ್ಗುಲಲ್ಲಿ ನಿಲ್ಲಿಸಿ ತಳಮಳಗೊಳಿಸುತ್ತದೆ....’’
ಸೂಫಿ ಚಿಂತನೆಯ ಆಳ ಅಗಲಗಳನ್ನು ತನ್ನದಾಗಿಸಿಕೊಂಡಿರುವ ರಹಮತ್ ತರಿಕೆರೆ ಮಾತುಗಳು ಈ ಕೃತಿಯ ಇನ್ನೊಂದು ಹೊಸತೇ ಆದ ಆಯಾಮವನ್ನು ತೆರೆದುಕೊಡುತ್ತದೆ ‘‘...ಚರಿತ್ರೆ, ಸಂಗೀತ ಮತ್ತು ದರ್ಶನಗಳನ್ನು ವಸಾಹತುಶಾಹಿ ಆಳ್ವಿಕೆಯ ವಿದ್ಯಮಾನಗಳ ಚೌಕಟ್ಟಿನಲ್ಲಿಟ್ಟು ಕಾಣಿಸುವುದರಿಂದ, ಈ ಕೃತಿಯು ಏಕಕಾಲಕ್ಕೆ ತತ್ವಶಾಸ್ತ್ರ, ರಾಜಕಾರಣ ಹಾಗೂ ಚರಿತ್ರೆಯ ಕೃತಿಯಾಗಿದೆ. ಗಂಡು ಹೆಣ್ಣಿನ ಪ್ರೇಮ, ವ್ಯಕ್ತಿಗಳ ಅನುಭಾವದ ಸಾಧನೆ ಹಾಗೂ ಸಂಗೀತದ ಅಭಿರುಚಿಗಳ್ನು ಒಂದು ಕೇಂದ್ರಕ್ಕೆ ತರುತ್ತದೆ. ಈ ಮೂಲಕ ಭಾರತದ ಧಾರ್ಮಿಕ ಹಾಗೂ ಕಲಾತ್ಮಕ ಸಾಮರಸ್ಯದ ಅಪೂರ್ವ ಪರಂಪರೆಯನ್ನು ಕಾಣಿಸುತ್ತದೆ, ಈ ಪರಂಪರೆಯ ಒಳಗಿನ ಮಾನವೀಯ ಸಂಬಂಧಗಳನ್ನು ಶೋಧಿಸುತ್ತದೆ....’’
ಅಹರ್ನಿಶಿ ಪ್ರಕಾಶನ ಹೊರತಂದಿರುವ ಈ ಕೃತಿಯ ಒಟ್ಟು ಪುಟಗಳು 180. ಮುಖಬೆಲೆ 160 ರೂಪಾಯಿ. ಆಸಕ್ತರು 94491 74662 ದೂರವಾಣಿಯನ್ನು ಸಂಪರ್ಕಿಸಬಹುದು.