ದರ್ಶನಗಳ ಮಾನವಶಾಸ್ತ್ರೀಯ ಜಿಜ್ಞಾಸೆ

Update: 2023-09-13 05:39 GMT

ಭಾರತೀಯ ತತ್ವಶಾಸ್ತ್ರದ ವಿವಿಧ ಶಾಖೆಗಳ ಹಾಗೂ ಜ್ಞಾನ ಪರಂಪರೆಯ ವಿಶಿಷ್ಟ ವಿನ್ಯಾಸಗಳ ಓರ್ವ ಗಂಭೀರ ಚಿಂತಕ ಹಾಗೂ ಸಂಶೋಧಕರಾಗಿರುವ ಪ್ರೊ. ಶ್ರೀಪತಿ ತಂತ್ರಿಯವರು ಶಾಸ್ತ್ರ, ಪುರಾಣ, ರಾಮಾಯಣ, ಮಹಾಭಾರತ, ಭಗವದ್ಗೀತೆಯಂತಹ ಆರ್ಷೇಯ ಪಠ್ಯಗಳನ್ನು ಸಮಾಜಶಾಸ್ತ್ರೀಯ ಹಾಗೂ ಮಾನವಶಾಸ್ತ್ರೀಯ ದೃಷ್ಟಿಯಿಂದಲೇ ಅಧ್ಯಯನ ಮಾಡಿದವರು. ಭಾರತೀಯ ದರ್ಶನಗಳ ಕುರಿತು ಓರ್ವ ಸಮಾಜವಿಜ್ಞಾನಿಯಾಗಿ ಸುಮಾರು ಅರ್ಧ ಶತಮಾನದ ಅವಧಿಯಲ್ಲಿ ಅವರು ನಡೆಸಿರುವ ಅಧ್ಯಯನ ‘ಸನೂತನ ಧರ್ಮದರ್ಶನ’ (ಶಿವರಾಮ ಕಾರಂತರ ಮುನ್ನುಡಿಯೊಡನೆ), ‘ಸೃಷ್ಟಿಪ್ರಲಯ ಮರುಸೃಷ್ಟಿ’ (ಭಾರತದಿಂದ ಗ್ರೀಕ್‌ವರೆಗಿನ ಪ್ರಾಚೀನ ಪುರಾಣಗಳಲ್ಲಿ, ಶಿವರಾಮ ಕಾರಂತರ ಮುನ್ನುಡಿಯೊಂದಿಗೆ), ‘ಸನಾತನ ಧರ್ಮದ ಮಗ್ಗಲುಗಳು’ ಹಾಗೂ ‘ಆಜೀವಿಕರು ಮತ್ತು ಕೆಲವು ವೇದೋತ್ತರ ದಾರ್ಶನಿಕ ಬೆಳವಣಿಗೆಗಳು’ ಎಂಬ ನಾಲ್ಕು ಕೃತಿಗಳಲ್ಲಿ ಅಭಿವ್ಯಕ್ತಿಗೊಂಡಿದೆ. ಈ ನಾಲ್ಕು ಕೃತಿಗಳನ್ನು ಕೈಗೆತ್ತಿಕೊಂಡು ಅವುಗಳಲ್ಲಿ ಅವರು ಚರ್ಚಿಸಿರುವ ವಿಷಯಗಳನ್ನು ಸ್ಥೂಲವಾಗಿ ಪರಿಚಯಿಸುವ ಅವರ ‘ಭಾರತೀಯ ದರ್ಶನಗಳ ಇತಿಹಾಸ, ಒಂದು ಮಾನವಶಾಸ್ತ್ರೀಯ ವಿಮರ್ಶೆ’ ಒಂದು ಅಪೂರ್ವ ಗ್ರಂಥವಾಗಿದ್ದು ಮಂಗಳೂರು ವಿಶ್ವವಿದ್ಯಾನಿಲಯದಿಂದ ಅವರಿಗೆ ಡಿ.ಲಿಟ್ ಪದವಿ ದೊರಕಿಸಿ ಕೊಟ್ಟಿದೆ.

ಸ್ವಾಹಾದಿಂದ ನಮಃ, ವಿಷ್ಣುವಿನ ಇತಿಹಾಸ, ವೈಷ್ಣವಾಗಮ, ಗೀತೆ ಮತ್ತು ಮಹಾಭಾರತದಲ್ಲಿ ಕೃಷ್ಣ ವಾಸುದೇವ ಮೊದಲಾಗಿ ಹತ್ತು ಅಧ್ಯಾಯಗಳಲ್ಲಿ ಭಾರತೀಯ ಧರ್ಮದರ್ಶನವನ್ನು ವಿವರಿಸುತ್ತ ಪ್ರೊ. ತಂತ್ರಿಯವರು ದೇವ ಮತ್ತು ಮಾನವ ಜಗತ್ತಿನ ನಡುವಿನ ಸಂಬಂಧ ಸ್ವರೂಪವು ವೇದಕಾಲದಿಂದಾರಂಭಿಸಿ ಪುರಾಣ ಕಾಲದವರೆಗೆ ಹೇಗೆ ಸಾಗಿ ಬಂತು ಎನ್ನುವುದನ್ನು ವಿದ್ವತ್ಪೂರ್ಣವಾಗಿ ವಿಶ್ಲೇಷಿಸುತ್ತಾರೆ. ಗೀತೆಯಲ್ಲಿ ಅವತಾರಗಳ ಕಲ್ಪನೆ ಯಾಕೆ ಕಾಣುವುದಿಲ್ಲ? ಅಲ್ಲಿಲ್ಲದ ಅವತಾರಗಳ ಕಲ್ಪನೆ ಮಹಾಭಾರತದ ಶಾಂತಿಪರ್ವದಲ್ಲಿ ಸೇರಿದ್ದು ಹೇಗೆ? ಗೀತೆಯ ಸಾಂಖ್ಯಕ್ಕೂ ಮಹಾಭಾರತದ ಸಾಂಖ್ಯಕ್ಕೂ ನಡುವೆ ವ್ಯತ್ಯಾಸಕ್ಕೆ ಕಾರಣವೇನಿರಬಹುದು? ಎನ್ನುವ ಪ್ರಶ್ನೆಗಳನ್ನು ಉತ್ತರಿಸುವ ಪ್ರಯತ್ನ ಈ ಕೃತಿಯಲ್ಲಿದೆ.

ಜಾವಾ ದೇಶದ ರಾಮನ ಕತೆ ‘ಕಾಕಾಪೀನ್’, ಮಲಯಾ ದ್ವೀಪದ ‘ಹಿಕಾಯತ್ ಸೆರಿ ರಾಮಾ’, ‘ಸೆರೆತ್ ಕಾಂಡ’ ಹಾಗೂ ಚೀನಾದ ರಾಮನ ಕತೆಗಳ ಬಗ್ಗೆ ಬೆಳಕು ಚೆಲ್ಲುವ ವಿದ್ವಾಂಸ ತಂತ್ರಿಯವರು ಸೆರೆತ್ ಕಾಂಡದಲ್ಲಿ ಮುಸ್ಲಿಮ್ ಮತ್ತು ಹಿಂದೂ ಸಂಸ್ಕೃತಿಗಳೆರಡರ ಸಮನ್ವಯವನ್ನು ಗುರುತಿಸಿ ಗ್ರೀಸಿನ ‘Colossus’ ಕರ್ನಾಟಕ ಕರಾವಳಿಯ ‘ಬಬ್ಬರ್ಯ’ ದೈವವಾಗಿ ಪೂಜಿಸಲ್ಪಡುತ್ತಿದ್ದಾನೆ ಎಂಬ ಆಶ್ಚರ್ಯದ ವಿಷಯವನ್ನು ಬಹಿರಂಗಪಡಿಸುತ್ತಾರೆ.

‘ಭಾರತೀಯ ದರ್ಶನಗಳ ಇತಿಹಾಸ’ ಜಿಜ್ಞಾಸುಗಳಿಗೆ ಹಲವು ಹೊಸ ಸಂಗತಿಗಳನ್ನು ತಿಳಿಸುತ್ತದೆ. ಉದಾಹರಣೆಗೆ, ಗ್ರೀಕರು ದ್ರಾಕ್ಷಿಯ ಮಧುವನ್ನು ಕಲಶದಲ್ಲಿ ತುಂಬಿಕೊಂಡು ಅಗ್ನಿಗೆ ಅಥವಾ ಬಲಿಪೀಠಕ್ಕೆ ಸುರಿಯುತ್ತಿದ್ದರು, ನಮ್ಮ ಯಾಗಗಳಂತೆ ಅವರೂ ಪ್ರಾಣಿ ಬಲಿ ಕೊಡುತ್ತಿದ್ದರು. ಅಗ್ನಿಷ್ಟೋಮ, ವಾಜಸನೇಯ ಇತ್ಯಾದಿ ಯಜ್ಞಗಳಂತೆ. ನಮ್ಮ ಪುರುಷ ಯಜ್ಞದಂತೆ (ಶೂನಶ್ಯಪನ ಕತೆ) ಮೊದಲಲ್ಲಿ ನರಬಲಿಯೂ ಇದ್ದಿರಬೇಕು. ಮುಂದಕ್ಕೆ ಇದು ನಿಂತಿರಬೇಕು.

ಭಾರತದ ಮತ್ತು ಮಧ್ಯಪ್ರಾಚ್ಯ ಭೂಭಾಗದ ಅತ್ಯಂತ ಪ್ರಾಚೀನ ಕಾಲದ (ಕಿ.ಪೂ. 3000 ದಿಂದ ಕ್ರೈಸ್ತ ಧರ್ಮದ ಉದಯದವರೆಗಿನ) ಧರ್ಮಗಳ ಪುರಾಣಗಳಲ್ಲಿ ಕಾಣುವ ಪ್ರಲಯದ ಮತ್ತು ಮರುಸೃಷ್ಟಿಯ ಕತೆಗಳ ಹಾಗೂ ದೇವಜಗತ್ತಿನ ಒಂದು ಸಂಕ್ಷಿಪ್ತ ಅವಲೋಕನವನ್ನು ನೀಡುವ ಕೃತಿಕಾರರು ಗ್ರೀಕ್ ಪುರಾಣ ಮತ್ತು ಋಗ್ವೇದದ ನಡುವೆ ಎದ್ದು ಕಾಣುವ ಅನೇಕ ಸಾಮ್ಯತೆಗಳನ್ನು ಉದಾಹರಿಸುತ್ತಾರೆ. ಎಲ್ಲಾ ಪುರಾಣಗಳಲ್ಲಿ ಕಾಣುವ ಸೃಷ್ಟಿ, ಪ್ರಲಯ ಹಾಗೂ ಮರುಸೃಷ್ಟಿಯ ಕಲ್ಪನೆಯ ದೀರ್ಘವಾದ ವಿಶ್ಲೇಷಣೆ ರೋಚಕವಾಗಿದೆ.

ವೇದಗಳಿಂದ ತಿಲಕರವರೆಗೆ ಗಣಪತಿಯ ಆರಾಧನೆ ಸಾಗಿ ಬಂದ ಹಾದಿ, ಶಾಕ್ತದರ್ಶನ, ತಂತ್ರ ಆಗಮ, ದಕ್ಷಿಣ ಕನ್ನಡದ ಧಾರ್ಮಿಕ ಪರಂಪರೆ, ಚಂದ್ರಗುತ್ತಿ ಬತ್ತಲಸೇವೆಯ ಸಮಾಜಶಾಸ್ತ್ರೀಯ ವಿವೇಚನೆಯಲ್ಲದೆ ವಿಶ್ವದೇವತೆಗಳು, ಧರ್ಮಚರಿತ ಮಾನಸ, ದೇಗುಲಗಳ ಧಾರ್ಮಿಕ-ಸಾಂಸ್ಕೃತಿಕ ಪರಂಪರೆಯ ರಕ್ಷಣೆಯಂತಹ ಹತ್ತಾರು ವಿಷಯಗಳ ಬಗ್ಗೆ ಆಳವಾದ ಚಿಂತನೆ ನಡೆಸಿರುವ ತಂತ್ರಿಯವರು ಭಾರತೀಯ ತತ್ವಶಾಸ್ತ್ರ ಪರಂಪರೆಯಲ್ಲಿ ಅಲಕ್ಷ್ಯಕ್ಕೊಳಗಾಗಿರುವ ಆಜೀವಿಕ ದರ್ಶನದ ವಿಸ್ತೃೃತ ಚರ್ಚೆ ನಡೆಸುತ್ತಾರೆ.

ವೇದೇತರವಾದ ಬೌದ್ಧ-ಜೈನ ಮತಗಳ ಸಾಲಿನಲ್ಲಿ ಮೂರನೇ ಸಾಲಿನಲ್ಲಿ ನಿಲ್ಲುವ ಆಜೀವಿಕ ಮತವೂ ಸೇರಿದಂತೆ ಇವೆಲ್ಲವೂ ಒಟ್ಟಾಗಿ ವೇದ ವಿರೋಧಿಯಾಗಿ ಹುಟ್ಟಿ ಬೆಳೆದವುಗಳು, ನಿರೀಶ್ವರವಾದವನ್ನು ಬೆಂಬಲಿಸುವ ಚಿಂತನ ಧಾರೆಗಳು ಎಂಬ ವಿದ್ವಾಂಸರುಗಳ ಅಭಿಪ್ರಾಯವನ್ನು ತಂತ್ರಿಯವರು ಒಪ್ಪುವುದಿಲ್ಲ:

ಆಜೀವಿಕರಿಗೆ ಮುಕ್ತಿ ಎನ್ನುವುದು ‘ಸಂಸಾರಶುದ್ಧಿ’. ಜೀವವು ಬೇರೆ ಬೇರೆ ಶರೀರಗಳ ಮೂಲಕ ಮುಂದುವರಿಯುವುದು ಕೂಡ ಪೂರ್ವನಿರ್ಧಾರಿತ, ಅಂದರೆ ನಿಯತ್ತಿಗೆ ಬದ್ಧವಾಗಿಯೇ, ಜೈನ-ಬೌದ್ಧ ಸಾಹಿತ್ಯಗಳಲ್ಲಿ ಲಭಿಸುವಂತೆ ವೈದಿಕವೆಂದು ಕರೆಯುವ ಯಾವ ದರ್ಶನ ಪ್ರಕಾರಗಳಲ್ಲಿಯೂ ಆಜೀವಿಕರ ಬಗ್ಗೆ ಉಲ್ಲೇಖವಿಲ್ಲದಿರುವುದು ಆಶ್ಚರ್ಯ ಎನ್ನುವ ಒಳನೋಟ ಇಲ್ಲಿ ಕಾಣಿಸುತ್ತದೆ.

ಆಜೀವಿಕರೆಂದರೆ ಯಾರು? ಇಲ್ಲಿದೆ ಉತ್ತರ: ಹೊರನೋಟಕ್ಕೆ ಧೂಳು ಲೇಪಿತ ಶರೀರದ, ಬೊಗಸೆಯಲ್ಲಿ ಆಹಾರವನ್ನು ಸೇವಿಸುವ, ಜಟಾಧಾರಿ, ಅಲೆಮಾರಿ ಜೀವಿಗಳು. ಅತ್ಯಂತ ಕಠಿಣವಾದ ತಪಸ್ವಿಗಳು. ಇವರಲ್ಲಿ ಬಹುತೇಕರು ಜೈನ ಮುನಿಗಳಂತೆ ಪ್ರಾಯೋಪವೇಷದ ಮೂಲಕ ಸಾವನ್ನು ತಂದುಕೊಳ್ಳುತ್ತಿದ್ದರು.

ತಂತ್ರ-ಆಗಮದ ದೀರ್ಘವಾದ ವಿವರಗಳನ್ನು ನೀಡುವ ಪ್ರೊ. ತಂತ್ರಿಯವರು ಋಗ್ವೇದದ ಹಲವು ಸೂಕ್ತಗಳಲ್ಲಿ ಕಾಣಸಿಗುವ ‘ಪಂಚಜನಾಃ’ ಎಂಬ ಶಬ್ದವನ್ನು ವಿಶ್ಲೇಷಿಸುತ್ತ, 14ನೇ ಶತಮಾನದ ಸಾಯಣರು ‘ಪಂಚಜನಾಃ’ ಶಬ್ದವನ್ನು ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರ ಮತ್ತು ಪಂಚಮ ವರ್ಗದವರು ಎಂದು ವ್ಯಾಖ್ಯಾನಿಸಿದ್ದನ್ನು ವಿಮರ್ಶೆಗೊಳಪಡಿಸುತ್ತಾರೆ. ಋಗ್ವೇದದಲ್ಲಿ ಪಂಚಮ ವರ್ಣ ಬಿಡಿ, ಚತುರ್ವರ್ಣಗಳ ಉಲ್ಲೇಖ ಕೂಡ, ಪುರುಷ ಸೂಕ್ತದ ‘ಬ್ರಾಹ್ಮಣೋಸ್ಯ ಮುಖ ಮಾಸೀತ್ ಬಾಹೋ ರಾಜನ್ಯ ಕೃತ’ ಎನ್ನುವ ಒಂದು ಸಾಲು ಬಿಟ್ಟರೆ ಚತುರ್ವರ್ಣಗಳ ಉಲ್ಲೇಖ ಬೇರೆಲ್ಲೂ ದೊರಕುವುದಿಲ್ಲ ಎಂಬುದನ್ನು ಇಂದಿನ ಸಮಾಜದ ಸಕಲ ಅನಿಷ್ಟಗಳಿಗೂ ವರ್ಣ ವ್ಯವಸ್ಥೆಯೇ ಕಾರಣ ಎಂದು ವಾದಿಸುವವರು ಅರ್ಥ ಮಾಡಿಕೊಳ್ಳಬೇಕು.

ಒಟ್ಟಿನಲ್ಲಿ, ಭಾರತದ ಪ್ರಾಚೀನ ದೇವ ಜಗತ್ತಿನ ಸಂಬಂಧ ಯಾವ ರೀತಿ ಪಶ್ಚಿಮ ದೇಶಗಳಲ್ಲೂ ಅಲ್ಲಲ್ಲಿ ಮಿಣುಕಾಡುತ್ತಿದೆ ಎಂಬುದನ್ನು ಬೆನ್ನು ಹತ್ತಿ ಗುರುತಿಸುವ ಪ್ರೊ. ತಂತ್ರಿಯವರ ಶ್ಲಾಘನೀಯ ಪ್ರಯತ್ನ ಸಮಕಾಲೀನ ಭಾರತದಲ್ಲಿ ಅಪರೂಪವಾಗುತ್ತಿರುವ ತಾತ್ವಿಕ ದರ್ಶನಗಳ ಅಂತರ್ಶಿಸ್ತೀಯ ಅಧ್ಯಯನ ಕ್ಷೇತ್ರದಲ್ಲಿ ಒಂದು ಮೈಲುಗಲ್ಲು ಎನ್ನಬಹುದು.

(bhaskarrao599@gmail.com)

Tags:    

Writer - ವಾರ್ತಾಭಾರತಿ

contributor

Editor - Thouheed

contributor

Contributor - ಡಾ. ಬಿ. ಭಾಸ್ಕರ ರಾವ್

contributor

Similar News