‘ಧಾವತಿ’ ಬಯಲಾಗುವ ಬಗೆ
‘‘ಸಾಸಿವೆಯಷ್ಟು ಸುಖಕ್ಕೆ ಸಾಗರದಷ್ಟು ದುಃಖ ನೋಡಾ. ಗಳಿಗೆಯ ಬೇಟವ ಮಾಡಿಹೆನೆಂಬ ಪರಿಯ ನೋಡಾ. ತನ್ನನ್ನಿಕ್ಕಿ ನಿಧಾನವ ಸಾಧಿಸಿಹೆನೆಂದಡೆ ಬಿನ್ನಾಣ ತಪ್ಪಿತ್ತು ಗುಹೇಶ್ವರಾ’’ - ಅಲ್ಲಮ
ಕವಿಮಿತ್ರ ಗಂಗಪ್ಪ ತಳವಾರ್ ‘ಧಾವತಿ’ ಕಾದಂಬರಿಯ ಮೂಲಕ ಮತ್ತೆ ಕಾಣಿಸಿಕೊಳ್ಳುತ್ತಿದ್ದಾರೆ. ಹೊಸನುಡಿಗಟ್ಟುಗಳನ್ನು ಕಟ್ಟುವಲ್ಲಿ ಈ ಕಾಲಕ್ಕೆ ಮುಖಾಮುಖಿಗೊಳಿಸುವಲ್ಲಿ ಗಂಗಪ್ಪ ಮುಖ್ಯವಾದ ಕವಿ. ಪ್ರಸಕ್ತ ‘ಧಾವತಿ’ಯಲ್ಲಿಯೂ ಆ ಧಾವಂತವಿದೆ; ಹೊಸತನವಿದೆ. ಚಂದ್ರಿಯ ಮೂಲಕ ಮಾಲೂರು ಪ್ರದೇಶ ಮಾತಾಡುತ್ತಿದೆ. ದುರ್ಗಿಯ ಸಾವಿನಿಂದ ಆರಂಭವಾಗಿ ಚಂದ್ರಿಯ ಸಾವಿನೊಂದಿಗೆ ಧಾವತಿ ಕೊನೆಗೊಳ್ಳುತ್ತದೆ. ನಡುವಿನ ಬದುಕಿನ ವ್ಯಾಪಾರ ಇಡೀ ಕಾದಂಬರಿಯ ಹೂರಣ.
ಲಂಕೇಶರ ಕ್ಯಾತನೆಂಬ ಹುಡುಗ ತನ್ನ ಕಣ್ಣುಗಳ ಮೂಲಕ ನಗರದೊಳಗಿನ ಅದರಲ್ಲೂ ‘ಸ್ಲಂ’ ಜಗತ್ತಿನ ಲೋಕವನ್ನು ಅನಾವರಣಗೊಳಿಸಿದರೆ, ಪ್ರಸಕ್ತ ‘ಧಾವತಿ’ ಚಂದ್ರಿ ಎಂಬ ಹುಡುಗಿಯ ಕಣ್ಣುಗಳಿಂದ ಹಳ್ಳಿಯ ಬದುಕಿನ ಚಿತ್ರವನ್ನು ಕಂಡಿರಿಸುತ್ತದೆ. ಚಂದ್ರಿ ಬೆಳೆದಂತೆ ಹಳ್ಳಿಯ ಬದುಕು ಬೆಳೆಯುತ್ತ ಸಾಗುತ್ತದೆ. ಬಾಲ್ಯದಿಂದ ಚಂದ್ರಿಯ ಕಣ್ಣುಗಳಲ್ಲಿ ಕಾಣುವ ನೋವು, ಅವಮಾನ, ಸಹಿಸಿಕೊಳ್ಳಲೇಬೇಕಾದ ಪಾಡು, ಅನಿವಾರ್ಯವಾಗಿ ದೇಹ ಅರ್ಪಿಸಿಕೊಳ್ಳಲೇಬೇಕಾದ ಸ್ಥಿತಿ .. ಇವೆಲ್ಲ ಕಥನದ ನಡುಗೆಗೆ ಕಾರಣವಾಗಿದ್ದರೂ, ಕಥನದ ಉದ್ದೇಶ ವಸ್ತುವನ್ನು ನಮ್ಮ ಮುಂದಿಡುವುದಲ್ಲ. ಮಹಿಳಾ ಬದುಕಿನಲ್ಲಿ ಸಂಭವಿಸಬಹುದಾದ ಸಂಕಟಗಳನ್ನು ಅನಾವರಣಗೊಳಿಸುವುದು.
ನಿರಂಜನರ ‘ಕೊನೆಯ ಗಿರಾಕಿ’ಯ ಕಾಣಿಯ ಮೂಕವೇದನೆಯಂತೆ ಮೇಲ್ನೋಟಕ್ಕೆ ಕಥನ ಹರಡಿಕೊಳ್ಳುತ್ತದೆ. ಕಾಣಿ ಮೂಕಿಯಾಗಿದ್ದು ಮೂಕಸ್ವರದಲ್ಲಿ ವಿರೋಧಿಸುತ್ತಾಳೆ. ಇಲ್ಲಿ ಚಂದ್ರಿ ಪ್ರಭಾಕರನಿಂದ, ಗಂಡನಿಂದ, ಮೈದುನದಿಂದ, ಮೇಸ್ತ್ರಿ, ರಘುನಾಥ.. ಹೀಗೆ ಸಾಲು ಸಾಲು ಪುರುಷರಿಂದ ಒಪ್ಪಿತವಾಗಿಸಿ ಅತ್ಯಾಚಾರಕ್ಕೆ ಒಳಗಾಗುತ್ತಾಳೆ. ಈ ಒಪ್ಪಿತ ಅತ್ಯಾಚಾರ ಅತ್ಯಾಚಾರದ ವ್ಯಾಪ್ತಿಗೆ ಬರುವುದಿಲ್ಲ ಎಂಬ ಈ ಹೊತ್ತಿನ ಕಾನೂನಿನ ಅಡಿಯಲ್ಲಿ ನೋಡಬಹುದಾದರೂ, ತಮ್ಮ ಅಗತ್ಯಕ್ಕೆ ಮಾತ್ರ ಬಳಸಿ ಬಿಸಾಡುವ ಪುರುಷಾಳ್ವಿಕೆಯನ್ನು ಈ ಕಥನ ಚಿತ್ರಿಸುತ್ತದೆ. ಇಂಥ ಸಂದರ್ಭಗಳಲ್ಲಿ ಚಂದ್ರಿ ಪಾತ್ರ ಪ್ರತಿರೋಧಿಸುತ್ತಲೇ ಬದುಕನ್ನು ಹೆಣೆದುಕೊಳ್ಳುತ್ತಿರುತ್ತದೆ. ತನ್ನ ಬದುಕನ್ನು ಕಟ್ಟಿಕೊಳ್ಳುವ, ಸುಂದರ ಬದುಕಿಗಾಗಿ ಹಂಬಲಿಸುವ ಚಂದ್ರಿ ದಿಟ್ಟಮಹಿಳೆ. ಮುಗ್ಧ ಚಂದ್ರಿಯಿಂದ ಅಸಹಾಯಕ ಚಂದ್ರಿಯಾಗಿ ಸ್ವಂತ ಬದುಕನ್ನು ಕಟ್ಟಿಕೊಳ್ಳುವ ಸ್ವಾಭಿಮಾನಿಯಾಗಿ ಬದಲಾಗುವ ಚಂದ್ರಿಯ ಪಾತ್ರದಲ್ಲಿ ಸೂಕ್ಷ್ಮ ಎಳೆಗಳು ಇವೆ. ಅದು ಸಮಾಜ ಕಟ್ಟಿಕೊಂಡಿರುವ ನೈತಿಕ ಮೌಲ್ಯದ ನೆಲೆಯಲ್ಲಿ ಅಲ್ಲ. ನೈತಿಕ ಎಂಬುದು ಪುರುಷಾಳ್ವಿಕೆಯು ಮಾಡಿಕೊಂಡಿರುವ ರಕ್ಷಕವಚವಷ್ಟೇ. ಅಂಥ ರಕ್ಷಕವಚವನ್ನು ಮುರಿದೆಸೆಯುವ ಅನೇಕ ಸಾಲು ಸಾಲು ಮಹಿಳಾ ವ್ಯಕ್ತಿತ್ವಗಳು ನಮ್ಮ ಬದುಕಿನ ಸುತ್ತಲೂ ಇವೆ. ಅವುಗಳನ್ನು ದಾಟುವ ಮೂಲಕ ಪುರುಷಾಳ್ವಿಕೆಯ ದಾರ್ಷ್ಟ್ಯವನ್ನು ಕಡಿದೆಸೆಯುವ ಶಕ್ತಿಯನ್ನು ತಮ್ಮ ಬದುಕಿನ ಮೂಲಕವೇ ಸಿದ್ಧಿಸಿಕೊಂಡಿವೆ.
ಪರಂಪರೆಯ ಸಾಂಪ್ರದಾಯಿಕ ಮಹಿಳ ಪ್ರತಿಮೆಯನ್ನು ಒಡೆಯುತ್ತಲೇ ಬದುಕಿನ ಆತ್ಯಂತಿಕ ಸ್ಥಿತಿಯನ್ನು ತಲುಪಿಸುವುದು ಇಂಥ ಕಥನಗಳ ಬಹುಮುಖ್ಯ ಶಕ್ತಿ. ಅಂಥ ಧಾರೆಗಳನ್ನು ಒಳಗೊಳ್ಳುತ್ತಲೇ ‘ಧಾವತಿ’ ಈ ಕಾಲದ ಮೌಲ್ಯಗಳನ್ನು ಮುಖಾಮುಖಿಯಾಗಿಸುತ್ತದೆ. ಮಹಿಳಾ ದೃಷ್ಟಿಕೋನವೊಂದು ಹೇಗಿರಬೇಕು? ಎಂಬುದನ್ನು ಪುರುಷವ್ಯವಸ್ಥೆ ಬಯಸುತ್ತಿದೆಯೋ ಅದಕ್ಕೆ ಭಿನ್ನವಾಗಿ ಧಾವತಿ ಕಟ್ಟುತ್ತದೆ. ಪರಂಪರೆಯನ್ನು ಎಡತಾಕುವುದು ಹೀಗೆಯೇ. ಧಾವತಿ ಅಂಥ ನೆಲೆಗಳನ್ನು ಸೂಕ್ಷ್ಮವಾಗಿ ಹೆಣೆಯಲು ಸಣ್ಣ ಎಳೆಗಳನ್ನೇ ಆಯ್ದುಕೊಂಡಿದೆ. ಅದರ ಮೂಲಕ ಬದುಕನ್ನು ಕಟ್ಟಲು ಹೊರಡುತ್ತದೆ.
ಹಾಗೇ ನೋಡಿದರೆ ಚಂದ್ರಿಯ ಸುತ್ತಲೇ ಸುತ್ತುವ ‘ಧಾವತಿ’ ಸಮಕಾಲೀನ ಬದುಕನ್ನು ಆವರಿಸಿಕೊಳ್ಳುತ್ತದೆ. ಬದುಕಿನ ಅದಮ್ಯ ಪ್ರೀತಿ ಕೈಗೆ ಸಿಗುವಂತೆ ಕಾಣುತ್ತಲೇ ಎಟುಕದೇ ದೂರವೇ ಉಳಿದುಬಿಡುತ್ತದೆ. ಈ ‘ಧಾವತಿ’ ಮಾನಸಿಕ ಮತ್ತು ದೈಹಿಕವೆನಿಸುವ ನೋವು ಹೌದು. ಬಿಡುಗಡೆಯ ಸಂಕಟವೂ ಹೌದು. ಜೊತೆಗೆ ಆತುರಾತುರವಾಗಿ ಸಾಗುವ ದಾರಿ. ಚಂದ್ರಿ ತೆಗೆದುಕೊಳ್ಳುವ ಅನೇಕ ನಿರ್ಧಾರಗಳು ಇವುಗಳ ಸಿಕ್ಕುಗಳಲ್ಲೇ ಸಿಲುಕಿಬಿಡುತ್ತದೆ. ಆದುದರಿಂದಲೇ ಗಂಡಾಳ್ವಿಕೆಯ ನಡುವೆ ಹೆಣ್ಣಿನ ಬದುಕು ಚೂರಾಗುವ ಸುಡುವಾಸ್ತವ ಈ ಕಥನದ ಬಹುಮುಖ್ಯ ಭಾಗ. ಹಾಗೆ ನೋಡಿದರೆ ದುರ್ಗಿಯ ಬದುಕಿನಂತೆ ಚಂದ್ರಿಯ ಬದುಕು ಆಗಿಬಿಡುತ್ತದೆಯೇನೋ ಎಂಬ ಆತಂಕ ಮೊದಲಿಗೆ ಅನಿಸಿಬಿಡುತ್ತದೆ. ಆದರೆ ದುರ್ಗಿ ಬದುಕಿನ ಇನ್ನೊಂದು ಮಗ್ಗಲಿನಂತೆ ಚಂದ್ರಿಯದಾಗುತ್ತದೆ. ಮುಂದೆ ಚಂದ್ರಿಯ ಮಗಳ ಕತೆ ಏನಾಗುತ್ತದೆ ಎಂಬ ಪ್ರಶ್ನೆಯನ್ನು ಉಳಿಸಿಬಿಡುತ್ತದೆ. ಕಾಲ ಯಾವುದಾದರೇನು ಹೆಣ್ಣಿನ ಬದುಕು ಹೀಗೆ ನಿರಂತರವಾಗಿರುತ್ತದೆ ಎಂಬುದನ್ನು ಇದು ಸೂಚಿಸುತ್ತದೆಯೇನೋ? ಮಹಿಳೆಯ ಬದುಕು ಪುರುಷ ಹಾಕಿಕೊಟ್ಟಿರುವ ಸರಳರೇಖೆಯಲ್ಲಿ ಆರಂಭವಾಗಿ ಕೊನೆಯಾಗುವುದಿಲ್ಲ. ಅದು ಪುರುಷ ವ್ಯವಸ್ಥೆ ವಿಧಿಸಿರುವ ನಿಷೇಧಗಳನ್ನು ಅಪ್ಪಿಕೊಂಡಂತೆ ಕಾಣಬಹುದು. ಆದರೆ ಕಾಲಕ್ರಮೇಣ ಅವನ್ನು ಪ್ರಶ್ನಿಸುವ ಇಲ್ಲವೇ ಪೂರ್ಣವಾಗಿ ಅಳಿಸಿಹಾಕುವ ಕ್ರಿಯೆಗೂ ಸದಾ ಸಿದ್ಧವಾಗಿಯೇ ಇರುತ್ತದೆ ಎಂಬ ಸೂಚನೆಯನ್ನು ಈ ಕಾದಂಬರಿ ಚಂದ್ರಿಯ ಮೂಲಕ ನೀಡಲೆತ್ನಿಸುತ್ತದೆ.
ಕೇಂದ್ರಪಾತ್ರದ ಹೆಸರು ಚಂದ್ರಿ ಸಂಸ್ಕಾರವನ್ನು ನೆನಪಿಸುತ್ತದೆ. ಸಂಸ್ಕಾರದಲ್ಲಿನ ಚಂದ್ರಿಗೆ ಅರ್ಪಿಸಿಕೊಳ್ಳುವ, ತನ್ನ ಜೀವನವೇ ಅವರಿಗೆ ಮುಡಿಪಾಗಿಸುವ, ಪರಮ ಪುಣ್ಯವೆಂಬ ಭಾವವಿದ್ದರೆ. ‘ಧಾವತಿ’ಯ ಚಂದ್ರಿಗೆ ಬದುಕನ್ನು ಹಸನಾಗಿಸಿಕೊಳ್ಳುವ, ಅವಕಾಶವಾದಿ ಗಂಡಸರನ್ನು ದೂರಮಾಡುತ್ತ ಜೀವನ ಪ್ರೀತಿ ನೀಡುವ ಹೊಸಬರನ್ನು ಆಶೆಗಣ್ಣುಗಳಿಂದ ಹುಡುಕುವ, ಅವರಿಂದಲೂ ಅವಮಾನಕ್ಕೊಳಗಾಗಿ ಮತ್ತೆ ಸುಂದರ ಬದುಕಿಗಾಗಿ ನಿರಂತರ ನಡೆಸುವ ಶೋಧದಂತೆ ಚಂದ್ರಿಯ ಪಾತ್ರ ಕಟ್ಟಿಕೊಂಡಿದೆ. ಎಂತಹ ಸಂದರ್ಭ ಬಂದರೂ ಬದುಕನ್ನು ಕಟ್ಟಿಕೊಳ್ಳಲೇಬೇಕೆಂಬ ಹಠಮಾರಿತನ ಮತ್ತು ಅದಮ್ಯ ಆಸೆಯನ್ನು ಬಿಡದೆ ಇಡೀ ಕಥನ ಸಾಗುತ್ತಿರುತ್ತದೆ. ಆದರೆ ಕೊನೆಗೆ ದುರಂತಗೊಳ್ಳುವುದು ಆರಂಭದ ಅವಳ ಕೆಚ್ಚಿಗೆ ವ್ಯತಿರಿಕ್ತವಾಗಿ ನಿಂತುಬಿಡುತ್ತದೆ. ಹಠಮಾರಿತನದಿಂದ ಬದುಕನ್ನು ಸವಾಲಾಗಿ ಕಟ್ಟಿಕೊಳ್ಳುವ ಚಂದ್ರಿ ಪಾತ್ರ ಕೊನೆಯ ಎರಡು ಪುಟಗಳಲ್ಲಿ ಪೇಲವವಾಗಿ ಕಾಣುತ್ತದೆ. ಬಲವಂತವಾಗಿ ಮುಗಿಸಿದಂತೆನಿಸುತ್ತದೆ. ಇನ್ನೊಂದು ಸಾಧ್ಯತೆಯನ್ನು ಯೋಚಿಸಬಹುದಿತ್ತಲ್ಲ ಎನಿಸಿಬಿಡುತ್ತದೆ. ಮಸಣದಿಂದ ಶುರುವಾಗಿ ಮಸಣದಲ್ಲೇ ಮುಗಿತಾಯವಾಗುತ್ತದೆ.
ಚಂದ್ರಿ ನಡೆದಂತೆ ‘ಧಾವತಿ’ ನಡೆಯುತ್ತಿದ್ದರೂ ಅದು ಇತರೆಡೆಯೂ ಕಣ್ಣಾಸಿ ಹರಡಿಕೊಳ್ಳುತ್ತದೆ. ಧಾವತಿ ಇದಷ್ಟನ್ನೇ ನಮ್ಮ ಮುಂದಿಡುವುದಿಲ್ಲ. ಪ್ಯಾಂಟಪ್ಪನಾಗಿ ಬದಲಾದ ಕದಿರಪ್ಪ, ಸದಾ ಆತುಕೊಳ್ಳುವ ಮಾವ ಚಿಕ್ಕೀರಪ್ಪ, ಗಸ್ತಿಯನ್ನೇ ಮೈದುಂಬಿಕೊಂಡಿರುವ ತಮ್ಟೆ ರಾಮಣ್ಣ, ಮಿಡಿವ ಹುಸೇನ್ ಸಾಬ್, ಮೈನೇರ್ದಾಗಿನ ವಸಿಗೆ ಆಚರಣೆ, ಹಾಡು-ಹಸೆ, ಸಂತಿ, ಟೂರಿಂಗ್ ಟಾಕೀಸ್ .. ಅನೇಕ ಅನುಭವಗಳು ಹಾಸು ಹೊದ್ದಿವೆ.. ಜೀವನ ಪ್ರೀತಿಯನ್ನು ಹಂಚುವ ಅದಕ್ಕಾಗಿ ಪರಿತಪಿಸುವ ಮಹಿಳೆಯನ್ನು ಒಳಗೊಂಡಂತೆ ಬದುಕಿನ ಅನಂತತೆಯನ್ನು ಹುಡುಕಲು ಯತ್ನಿಸುತ್ತದೆ.
‘ಧಾವತಿ’ ನಿರಾಳವಾಗಿ ಓದಿಸಿಕೊಳ್ಳುತ್ತ ಭಾಷೆಯ ಫಲುಕುಗಳನ್ನು, ಸೊಗಸುಗಳನ್ನು ಇಡೀ ಕಥನ ಕಣ್ಣೆದುರಿಗೆ ತಂದಿಡುತ್ತದೆ. ಸ್ಥಳೀಯಕ್ಕೆ ಇನ್ನೂ ಸ್ಥಳೀಯವೆನಿಸುವ ನುಡಿಗಟ್ಟುಗಳು ಇತ್ತೀಚಿನ ಕಥನಗಳಲ್ಲಿ ಕಾಣುತ್ತಿದ್ದೇವೆ. ಅದು ಅಗತ್ಯವೂ ಹೌದು. ಕೇರಿ, ಹಟ್ಟಿಗಳ ಮೂಲಕ ವಿಶ್ವಾತ್ಮಕಗೊಳ್ಳುವ ಬಗೆ ಇಂಥ ಕಥನಗಳ ಹೆಣಿಗೆಗಳಲ್ಲಿ ಕಾಣಬಹುದು. ಭಾಷೆಯನ್ನು ಕುಶಲಗಾರಿಕೆಯಿಂದ ಕಸುಬುಗಾರನಂತೆ ಕಟ್ಟಿರುವುದರಿಂದ ಕಥನಕ್ಕೆ ಓದುಗರನ್ನು ಹಿಡಿದಿಟ್ಟುಕೊಳ್ಳುವ ಗುಣ ಬಂದಿದೆ. ಈ ಭಾಷೆ, ನಿರೂಪಣಕ್ರಮಗಳು ಸರಳರೇಖೆಯ ನೆಲೆಯನ್ನು ದಾಟಿ ಒಂದಷ್ಟು ಕಾಲ ನಮ್ಮೊಳಗನ್ನು ಕಲಕಿಬಿಡುತ್ತದೆ. ದಾಟಿಸುವ ಬಗೆಯಲ್ಲಿ ಯಶಸ್ವಿಯಾಗಿದೆ. ಸುಖದ ‘ಧಾವತಿ’ ಹುಡುಕಾಟಕ್ಕೆ ನಮ್ಮನ್ನು ಸಿದ್ಧಗೊಳಿಸುತ್ತದೆ.