ಕಮ್ಯುನಿಸ್ಟ್ ಅಲ್ಪಸಂಖ್ಯಾತನೊಬ್ಬನ ತಲ್ಲಣ
ಇಮ್ತಿಯಾಜ್ ಹುಸೇನ್ ಅವರು ಹಿರಿಯ ಕಾರ್ಮಿಕ ಹೋರಾಟಗಾರರು. ರಾಜಕೀಯ ಸಂಘಟಕರು, ಸಾಮಾಜಿಕ ಕಾರ್ಯಕರ್ತರು. ಒಂದು ಕಾಲದ ಕಾಮ್ರೆಡ್. ಬಳಿಕ ಕಾಂಗ್ರೆಸ್ ಪಕ್ಷಕ್ಕೆ ಹೋದರೂ, ಅಲ್ಲೂ ಕಾರ್ಮಿಕ ವೌಲ್ಯಗಳನ್ನು ಎತ್ತಿ ಹಿಡಿದವರು. ಇದೀಗ ಹುಸೇನ್ ಅವರು ‘ಹೆಜ್ಜೆ ಗುರುತುಗಳು ’ ಹೆಸರಿನಲ್ಲಿ ತಮ್ಮ ಆತ್ಮಕತನವನ್ನು ಬರೆದಿದ್ದಾರೆ.
ಕಮ್ಯುನಿಸ್ಟನೊಬ್ಬನ ಬದುಕಿನ ಕಥನ ಉಳಿದ ರಾಜಕೀಯ ಸಂಘಟಕರ ಕಥನಕ್ಕಿಂತ ಭಿನ್ನವಾಗಿರುವಂತಹದು. ಇದೇ ಸಂದರ್ಭದಲ್ಲಿ ಮುಸ್ಲಿಮ್ ಸಮುದಾಯದ ವ್ಯಕ್ತಿಯೊಬ್ಬ ಕಮ್ಯುನಿಸ್ಟನಾಗುವ ಸಂದರ್ಭ ಉಳಿದವರ ಅನುಭವಕ್ಕಿಂತ ಭಿನ್ನವಾದುದು. ಕಮ್ಯುನಿಸ್ಟ್ ಪಕ್ಷದೊಳಗೂ ‘ಇಸ್ಲಾಮಾಫೋಬಿಯಾ’ ಲಕ್ಷಣಗಳು ಹೆಚ್ಚಿರುವುದರಿಂದ ಮತ್ತು ಇತ್ತ ಮುಸ್ಲಿಮ್ ಸಮುದಾಯದೊಳಗೆ ಕಮ್ಯುನಿಸ್ಟನೊಬ್ಬನನ್ನು ಸ್ವೀಕರಿಸುವ ಮನಸ್ಥಿತಿ ಬೇರೆಯೇ ಇರುವುದರಿಂದ ಇವರ ಆತ್ಮಕತೆ ಭಿನ್ನವಾಗಿ, ಕುತೂಹಲಕರವಾಗಿ ಕಾಡುತ್ತದೆ. ವಿಶೇಷವೆಂದರೆ ‘ನಿಮ್ಮಿಡನಿದ್ದೂ ನಿಮ್ಮಂತಾಗದೆ’ ಎನ್ನುವಂತೆ, ಕಮ್ಯುನಿಸ್ಟ್ ಆಗಿದ್ದರೂ ಕೋಮುಗಲಭೆಯ ಸಂದರ್ಭದಲ್ಲಿ ಅವರು ಮುಸ್ಲಿಮನಾಗಿಯೇ ನೋವನ್ನನುಭವಿಸಬೇಕಾಯಿತು. ‘ತನ್ನ ಸಂತ್ರಸ್ತ ಸಮುದಾಯದೊಂದಿಗೆ ಗುರುತಿಸಿಕೊಳ್ಳುವುದು’ ಅವರಿಗೆ ಅನಿವಾರ್ಯವಾಯಿತು. ಈ ಬಗ್ಗೆಯೂ ಅವರು ಅತ್ಯಂತ ತಲ್ಲಣದಿಂದ ಬರೆದುಕೊಂಡಿದ್ದಾರೆ.
‘...ಇಲ್ಲಿಯ ಪ್ರತಿ ಹೆಜ್ಜೆಯೂ ಬದುಕಿನ ಅನೇಕ ವಿವರಗಳನ್ನು ಸೂಚಿಸುತ್ತವೆ. ಆ ಹೆಜ್ಜೆಗಳು ಒಣ ವರದಿಗಳಲ್ಲ ಬದಲಿಗೆ ಇಡೀ ಬದುಕನ್ನು ಆಮೂಲಾಗ್ರವಾಗಿ ಪರಿವರ್ತಿಸಿರುವ ತಿರುವುಗಳಾಗಿವೆ. ಬಾಲ್ಯದಿಂದ ಈತನಕ ಆ ತಿರುವುಗಳಿಂದ ಇಮ್ತಿಯಾಜ್ ಎನ್ನುವ ಸಣ್ಣ ವ್ಯಕ್ತಿತ್ವವು ಎಲ್ಲರ ಗಮನ ಸೆಳೆಯುವ ಪ್ರಮುಖ ವ್ಯಕ್ತಿತ್ವವಾಗಿ ರೂಪಾಂತರವಾಗಿರುವುದೊಂದು ವಿಸ್ಮಯಕರ. ತನ್ನ ಬದುಕಿನ ತಿರುವುಗಳಿಗೆ ಮತ್ತು ಪರಿವರ್ತನೆಗಳಿಗೆ ಚಿಕ್ಕ ವಯಸ್ಸಿನಲ್ಲಿಯೇ ತಾನು ಕಂಡುಕೊಂಡ ಚಳವಳಿಗಳು, ದೊಡ್ಡ ಪ್ರಮಾಣದಲ್ಲಿ ಬದುಕಿನ ಮೇಲೆ ಪ್ರಭಾವಿಸಿರುವ ಧಾತುಗಳನ್ನು ಅಚ್ಚುಕಟ್ಟಾಗಿ ಕಟ್ಟಿಕೊಟ್ಟಿದ್ದಾರೆ...’ ಎಂದು ಬೆನ್ನುಡಿಯಲ್ಲಿ ಕೃತಿಯ ಕುರಿತಂತೆ ಪ್ರೊ. ಸಿ.ಕೆ. ಮಹೇಶ್ ಅರ್ಥಪೂರ್ಣವಾಗಿ ಬರೆಯುತ್ತಾರೆ.
ಇಲ್ಲಿ ಇಮ್ತಿಯಾಜ್ ಅವರು ಏಕಕಾಲದಲ್ಲಿ ಮುಸ್ಲಿಮ್ ಸಮುದಾಯವನ್ನು, ಪಿಂಜಾರ ಸಮುದಾಯವನ್ನು ಪ್ರತಿನಿಧಿಸುವುದು....ಜೊತೆಗೆ ಇವೆಲ್ಲವನ್ನು ಮೀರಿ ಮಾನವ ಕುಲವನ್ನು ಪ್ರತಿನಿಧಿಸುವ ತವಕ ವಿಶೇಷವಾದುದು.
ಸಹನಾ ಪ್ರಕಾಶನ ದಾವಣಗೆರೆ ಈ ಕೃತಿಯನ್ನು ಹೊರತಂದಿದೆ. ಕೃತಿಯ ಒಟ್ಟು ಪುಟಗಳು 190. ಮುಖಬೆಲೆ 150 ರೂಪಾಯಿ. ಆಸಕ್ತರು 94485 34347 ದೂರವಾಣಿಯನ್ನು ಸಂಪರ್ಕಿಸಬಹುದು.