ಅನಾಮಿಕ ಯೋಧರ ಮೇಲೆ ಚೆಲ್ಲಿದ ಹೊಸಬೆಳಕು 'ಕೊನೆಯ ಹೀರೋಗಳು'

Update: 2023-11-06 05:30 GMT

ಸ್ವಾತಂತ್ರ್ಯ ಹೋರಾಟಕ್ಕಾಗಿ ತಮ್ಮ ಮನೆ, ಆಸ್ತಿ-ಪಾಸ್ತಿ, ಬಂಧು ಬಳಗ ಎಲ್ಲವನ್ನೂ ಕಳೆದುಕೊಂಡವರಿದ್ದಾರೆ. ನೂರು ವಸಂತಗಳನ್ನು ಕಂಡಿರುವ ಈ ಚೇತನಗಳನ್ನು ಗುರುತಿಸದ, ಗೌರವಿಸದ ಒಂದು ಬಗೆಯ ವಿಸ್ಮತಿಗೆ ವರ್ತಮಾನದ ಸಮಾಜ ಜಾರಿದೆ. ಯಾವ ಚರಿತ್ರೆಯ ಪುಟಗಳಲ್ಲಿಯೂ ದಾಖಲಾಗದೆ ಈ ಹೋರಾಟಗಾರರು ಕಣ್ಮರೆಯಾಗುತ್ತಿದ್ದಾರೆ. ಮಾಗಿದ ಹಣ್ಣೆಲೆಗಳು ಉದುರುವ ಮುನ್ನವೇ ನೇರವಾಗಿ ಅವರ ಮುಖೇನ ಸ್ವಾತಂತ್ರ್ಯ ಚಳವಳಿಯ ಅನುಭವಗಳನ್ನು ಕೇಳುವ,ದಾಖಲಿಸುವ ಕಾರ್ಯವನ್ನು ಗ್ರಾಮೀಣ ಭಾರತದ ಹಲವು ಆಯಾಮಗಳನ್ನು ಗಂಭೀರವಾಗಿ ದೇಶದ ಮಾಧ್ಯಮಗಳಿಗೆ ವರದಿ ಮಾಡುತ್ತಿರುವ ಪಿ.ಸಾಯಿನಾಥ್ ಅವರು ತಮ್ಮ ‘ದಿ ಲಾಸ್ಟ್ ಹಿರೋಸ್: ಫುಟ್ ಸೋಲ್ಜರ್ಸ್ ಆಫ್ ಇಂಡಿಯನ್ ಫ್ರೀಡಂ’ ಕೃತಿಯಲ್ಲಿ ದಾಖಲಿಸಿದ್ದಾರೆ. ಈ ಹಿಂದೆ ಅವರ ಬಹುಚರ್ಚಿತ ‘ಬರ ಅಂದ್ರೆ ಎಲ್ಲರಿಗೂ ಇಷ್ಟ’ ಕೃತಿಯನ್ನು ಕನ್ನಡಕ್ಕೆ ತಂದಿದ್ದ ಹಿರಿಯ ಪತ್ರಕರ್ತ ಜಿ.ಎನ್.ಮೋಹನ್ ಅವರೇ ಈ ಕೃತಿಯನ್ನು ಕೂಡ ‘ಕೊನೆಯ ಹಿರೋಗಳು-ಭಾರತ ಸ್ವಾತಂತ್ರ್ಯದ ಕಾಲಾಳು ಯೋಧರು’ ಹೆಸರಿನಲ್ಲಿ ಕನ್ನಡದ ಓದುಗರಿಗೆ ಸಮರ್ಥವಾಗಿ ಅನುವಾದಿಸಿ ಒದಗಿಸಿದ್ದಾರೆ.

ಎಲ್ಲಿಯೂ ಅಧಿಕೃತವಾಗಿ ದಾಖಲಾಗದ ದೇಶದ ವಿವಿಧ ರಾಜ್ಯಗಳ 16 ಸ್ವಾತಂತ್ರ್ಯಯೋಧರ ವಿಭಿನ್ನ ಮಾರ್ಗದ ಹೋರಾಟಗಳು ಈ ಕೃತಿಯಲ್ಲಿ ದಾಖಲಾಗಿವೆ. ಆ ಮೂಲಕ ತಮ್ಮ ಬಾಳಮುಸ್ಸಂಜೆಯಲ್ಲಿರುವ ಹಿರಿಯ ಜೀವಗಳಲ್ಲಿ ಒಂದು ಸಮಾಧಾನದ ಸಾರ್ಥಕ ಭಾವವನ್ನು ಈ ಪುಸ್ತಕ ಸಾಧ್ಯವಾಗಿಸಿದೆ.

ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ವಿಟಾ ಗ್ರಾಮದ ಹೌಸಾಬಾಯಿ ಪಾಟೀಲ ಅವರು ತಮ್ಮ ಎಳೆಯ ವಯಸ್ಸಿನಲ್ಲಿಯೇ ಭವಾನಿ ನಗರದ ಪೊಲೀಸ್ ಠಾಣೆಯೊಂದನ್ನು ಲೂಟಿ ಮಾಡಿ ಬ್ರಿಟಿಷರ ವಿರುದ್ಧ ಬಂಡಾಯವೆದ್ದು ಪೊಲೀಸರನ್ನು ಮೋಸಗೊಳಿಸಲು, ಗಂಡ ಹೆಂಡತಿಯರಂತೆ ಜಗಳವಾಡುವ ಸನ್ನಿವೇಶ ಸೃಷ್ಟಿ ಮಾಡುತ್ತಾರೆ. ಪೊಲೀಸರಿಗೆ ಸಂದೇಹ ಬಾರದಂತೆ ಪರಿಣಾಮಕಾರಿಯಾಗಿ ಅಭಿನಯಿಸಲು ನಾಟಕದ ಗಂಡನಿಂದ ನಿಜವಾದ ಹೊಡೆತ ತಿನ್ನುವ ಆಕೆಯ ಮನೋಸ್ಥೈರ್ಯ ಇಂದಿಗೂ ಮೈ ಜುಮ್ಮೆನ್ನಿಸುವಂತಿದೆ. 1942ರಲ್ಲಿ ನಡೆದ ಕ್ವಿಟ್ ಇಂಡಿಯಾ ಚಳವಳಿಯಿಂದ ಭ್ರಮನಿರಸನಗೊಂಡು 1943ರಲ್ಲಿ ಬ್ರಿಟಿಷರ ಆಡಳಿತದಿಂದ ತಾನು ಮುಕ್ತ ಎಂದು ಸ್ವಯಂ ಘೋಷಣೆ ಮಾಡಿಕೊಂಡಿದ್ದ ಮಹಾರಾಷ್ಟ್ರದ ಸತಾರಾದಲ್ಲಿ ‘ಪ್ರತಿ ಸರಕಾರ’ ಅಥವಾ ತಾತ್ಕಾಲಿಕ ಸರಕಾರ ಅಸ್ತಿತ್ವಕ್ಕೆ ಬಂದಿತ್ತು. ಹೌಸಾಬಾಯಿಯ ತಂದೆ ನಾನಾ ಪಾಟೀಲ ಈ ಸರಕಾರದ ಮುಖ್ಯಸ್ಥರಾಗಿದ್ದರು. ಈ ಪ್ರತಿ ಸರಕಾರದ ಸಶಸ್ತ್ರ ವಿಭಾಗವಾಗಿದ್ದ ‘ತೂಫಾನ್ ಸೇನೆಯ’ ಯೋಧೆಯಾಗಿ ನಡೆಸಿದ ಕ್ರಾಂತಿಕಾರಕ ಹೋರಾಟಗಳು, ಪೋರ್ಚುಗೀಸರ ವಸಾಹತು ಗೋವಾದಲ್ಲಿ ಭೂಗತ ಚಟುವಟಿಕೆಗಳನ್ನು ನಡೆಸಿ ನಡುರಾತ್ರಿಯಲ್ಲಿ ಕಟ್ಟಿಗೆಯ ಪೆಟ್ಟಿಗೆಯೊಂದರ ಮೇಲೆ ಕುಳಿತು ಮಾಂಡೋವಿ ನದಿ ದಾಟಿದ ಹೌಸಾಬಾಯಿಯ ಧೈರ್ಯ ಅಸೀಮವಾದುದು. ಬ್ರಿಟಿಷರ ವಿರುದ್ಧ ಹೋರಾಡಿ ತನ್ನದೆನ್ನುವ ಎಲ್ಲವನ್ನೂ ಕಳೆದುಕೊಂಡ ಈ ತಾಯಿ ತನ್ನ ಇಳಿವಯಸ್ಸಿನಲ್ಲಿಯೂ ತಾನು ಅಂತಹ ದೊಡ್ಡದು ಅಥವಾ ಮಹಾನ್ ಅನ್ನುವಂಥದ್ದೇನೂ ಮಾಡಿಲ್ಲ ಎಂಬ ನಿಗರ್ವ ಭಾವದಲ್ಲಿ ಸರಳವಾಗಿ ಆ ದಿನಗಳ ಕುರಿತು ಹೇಳುವುದು ನೂರು ನೈತಿಕ ಪಾಠಗಳಿಗೆ ಸಮನಾಗಿ ಕಾಣುತ್ತದೆ. ಜೀವಿತದ ಕೊನೆಯವರೆಗೂ ಆ ಎಚ್ಚರ ಉಳಿಸಿಕೊಂಡೇ ಬದುಕಿದ ಮತ್ತು ಇಂದಿನ ಪೀಳಿಗೆಗೂ ತಮ್ಮ ಇಳಿವಯಸ್ಸಿನಲ್ಲಿಯೂ ‘‘ಯಾವತ್ತೂ ನಿದ್ರೆಗೆ ಜಾರಬೇಡಿ’’ ಎಂಬ ಸಂದೇಶವನ್ನು ನೀಡುತ್ತ ಮಹಾನ್ ಯೋಧೆಯ ಪರಿಚಯದೊಂದಿಗೆ ಪ್ರಾರಂಭವಾಗುವ ಈ ಕೃತಿಯಲ್ಲಿ ಇಂತಹ ಹಲವು ಧ್ರುವತಾರೆಗಳು ಪ್ರಕಾಶಮಾನವಾಗಿ ಮಿನುಗುತ್ತಿವೆ.

ಸ್ವಾತಂತ್ರ್ಯಕ್ಕಾಗಿ ಪ್ರಾಣಕೊಡುವುದರಲ್ಲಿ ಆದಿವಾಸಿ, ಬುಡಕಟ್ಟುಗಳ ಜನ ಎಂದಿಗೂ ಮೊದಲಿಗರಾಗಿರುತ್ತಾರೆ.ಆದರೆ ಸ್ವಾತಂತ್ರ್ಯದ ಸೌಕರ್ಯಗಳನ್ನು ಪಡೆಯುವಾಗ ಕೊನೆಯವರಾಗಿಯೇ ಉಳಿಯುವ ಅನೇಕ ಬುಡಕಟ್ಟುಗಳ ವೀರಗಾಥೆ ದೇಶದಲ್ಲಿವೆ. ಇಂತಹದ್ದೇ ಒಂದು ಬುಡಕಟ್ಟು ವರ್ಗವಾಗಿರುವ ಒಡಿಶಾದ ಸಬರ್ ಬುಡಕಟ್ಟಿನ ಮಹಿಳೆ ದೆಮಾತಿ ಡೆ ಸಬರ್ ‘ಸಾಲಿಹಾನ್’ ಅವರು ಬ್ರಿಟಿಷರ ಆಡಳಿತಕ್ಕೆ ಪ್ರತಿರೋಧ ಒಡ್ಡಿದ್ದ ತಮ್ಮ ತಂದೆಯ ಮೇಲೆ ಹಲ್ಲೆ ನಡೆಯುತ್ತಿದ್ದುದನ್ನು ಪ್ರತಿಭಟಿಸುತ್ತಾರೆ. ತನ್ನ 16ನೇ ವಯಸ್ಸಿನಲ್ಲೇ ಸುಮಾರು 40 ಯುವತಿಯರ ಗುಂಪು ಕಟ್ಟಿಕೊಂಡು ಲಾಠಿ ತಿರುಗಿಸುವ ಸಮರ ಕಲೆ ರೂಢಿಸಿಕೊಂಡು ಬ್ರಿಟಿಷ್ ಅಧಿಕಾರಿಗಳ ಮೇಲೆ ದಾಳಿ ಮಾಡುವ ಸಾಹಸ ನಮ್ಮ ಇತಿಹಾಸದ ಪುಟಗಳಲ್ಲಿ ಎಲ್ಲಿಯೂ ಉಲ್ಲೇಖವಾಗಿಲ್ಲ. ಆಕೆಯ ಹುಟ್ಟೂರಿನಲ್ಲಿಯೇ ಸ್ಥಾಪಿಸಲ್ಪಟ್ಟಿರುವ ಸ್ಮಾರಕದಲ್ಲಿಯೂ ತಂದೆ ಕಾರ್ತಿಕ್ ಸಬರ್ ಹಾಗೂ ಮಗಳು ದೆಮಾತಿ ಡೆ ಸಬರ್ ಅವರ ಹೆಸರುಗಳು ಬರೆಯಲ್ಪಡದೆ ನಿರ್ಲಕ್ಷಿಸಲ್ಪಟ್ಟಿರುವ ಅಂಶ ನಮ್ಮ ಪ್ರಜ್ಞಾಹೀನತೆ ಅಥವಾ ಔದಾಸೀನ್ಯಕ್ಕೆ ಹಿಡಿದ ಕನ್ನಡಿ ಎನ್ನಬಹುದು.

ಪಂಜಾಬ್‌ನ ಹೋಷಿಯಾರ್‌ಪುರ್ ಜಿಲ್ಲೆಯ ರಾಮಘರ್ ಗ್ರಾಮದ ಭಗತ್‌ಸಿಂಗ್ ಜುಗ್ಗಿಯಾ ಎಂಬ ಪ್ರತಿಭಾವಂತ ಬಾಲಕ 1939ರಲ್ಲಿ ಮೂರನೇ ತರಗತಿಗೆ ಪ್ರಥಮ ಸ್ಥಾನ ಪಡೆದುದಕ್ಕಾಗಿ ಬ್ರಿಟಿಷ್ ಅಧಿಕಾರಿಯೊಬ್ಬರಿಂದ ಬಹುಮಾನ ಸ್ವೀಕರಿಸಲು ವೇದಿಕೆ ಏರುತ್ತಾನೆ. ಆ ಅಧಿಕಾರಿ ‘‘ಬ್ರಿಟಾನಿಯಾ ಜಿಂದಾಬಾದ್ ಹಿಟ್ಲರ್ ಮುರ್ದಾಬಾದ್’’ ಎಂದು ಘೋಷಣೆ ಕೂಗಲು ಹೇಳುತ್ತಾನೆ. ತಕ್ಷಣ ಎಚ್ಚೆತ್ತ ಬಾಲಕ ‘‘ಬ್ರಿಟಾನಿಯಾ ಮುರ್ದಾಬಾದ್, ಹಿಂದೂಸ್ಥಾನ್ ಜಿಂದಾಬಾದ್’’ ಎಂದು ಘೋಷಣೆ ಕೂಗುತ್ತಾನೆ. ಪರಿಣಾಮವಾಗಿ ಛಡಿ ಏಟು ತಿಂದು, ಅಪಾಯಕಾರಿ ಹಾಗೂ ಕ್ರಾಂತಿಕಾರಿ ಎಂಬ ಹಣೆಪಟ್ಟಿಯೊಂದಿಗೆ ಶಾಲೆಯಿಂದ ಉಚ್ಚಾಟನೆಗೊಂಡ ಈ ಪ್ರತಿಭಾವಂತ ವಿದ್ಯಾರ್ಥಿ ಶಿಕ್ಷಣವನ್ನು 3ನೇ ತರಗತಿಗೆ ಮೊಟಕುಗೊಳಿಸಿ, ಸ್ವಾತಂತ್ರ್ಯ ಹೋರಾಟದ ಭೂಗತ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುತ್ತಾನೆ. ದೇಶ ವಿಭಜನೆಯ ಸಂದರ್ಭದ ಕೋಮುಘರ್ಷಣೆಗಳಿಗೆ ಪ್ರತ್ಯಕ್ಷ ಸಾಕ್ಷಿಯಾಗಿರುವ ಭಗತ್‌ಸಿಂಗ್ ಜುಗ್ಗಿಯಾ ಆ ಬಗ್ಗೆ ತೀವ್ರ ನೋವನ್ನು ತಮ್ಮ ಜೀವಿತದ ಇಳಿಗಾಲದಲ್ಲಿಯೂ ಹೊಂದಿದ್ದರು. ಸ್ವಾತಂತ್ರ್ಯಕ್ಕಾಗಿ ಎಂದೂ ಹೋರಾಡದ ವ್ಯಕ್ತಿ, ಸಂಸ್ಥೆ, ಪಕ್ಷಗಳ ಬಗ್ಗೆ ಅವರಲ್ಲಿದ್ದ ಸಾತ್ವಿಕ ಆಕ್ರೋಶವನ್ನು ಕೃತಿಕಾರರು ಮನ ಮುಟ್ಟುವಂತೆ ದಾಖಲಿಸಿದ್ದಾರೆ.

ರಾಜಸ್ಥಾನದ ಅಜ್ಮೀರ್‌ನ ಜಾದೂಗಾರ್ ಬಸ್ತಿಯ ಶೋಭಾರಾಂ ಗೆಹೆರ್ವರ್ ಅವರೂ ಭೂಗತ ಚಟುವಟಿಕೆಗಳನ್ನು ನಡೆಸಿದ ಹೋರಾಟಗಾಥೆಯ ಜೊತೆಗೆ ಗಾಂಧಿ ಮತ್ತು ಅಂಬೇಡ್ಕರ್ ಇಬ್ಬರೂ ಕೂಡ ದೇಶದ ರಥದ ಎರಡು ಗಾಲಿಗಳಿದ್ದಂತೆ. ಮಹಾತ್ಮರ ಸಿದ್ಧಾಂತಗಳಲ್ಲಿ ಮಹತ್ವ ಕಂಡರೆ ಅದನ್ನು ಪಾಲಿಸುವೆ, ಬಾಬಾಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಅವರ ವಿಚಾರಗಳಲ್ಲಿ ಹಿರಿದಾದುದು ಕಂಡಾಗ ಅದನ್ನೂ ಹಿಂಬಾಲಿಸುವೆ ಎನ್ನುವ ನುಡಿಗಳು ಅವರ ವೈಚಾರಿಕತೆಯ ಎತ್ತರವನ್ನು ಮಾರ್ಮಿಕವಾಗಿ ಚಿತ್ರಿಸುತ್ತವೆ.

ತೆಲಂಗಾಣದ ಹೈದರಾಬಾದಿನ ಮಲ್ಲು ಸ್ವರಾಜ್ಯಂ ಎಂಬ ವೀರವನಿತೆ ಕವಣೆಕಲ್ಲಿನ ಮೂಲಕ ತೆಲಂಗಾಣ ಜನಹೋರಾಟದಲ್ಲಿ ಭಾಗವಹಿಸಿದ ಪರಿ ಸೋಜಿಗಗೊಳಿಸುತ್ತದೆ. ಮಾಹಿತಿ ತಂತ್ರಜ್ಞಾನದ ಈ ಯುಗದಲ್ಲಿ ಲ್ಯಾಪ್‌ಟಾಪ್, ಮೊಬೈಲ್ ಇನ್ನೂ ಏನೇನೋ ತನಗೆ ಅವುಗಳ ಹೆಸರುಗಳು ಕೂಡ ಗೊತ್ತಿರದ ಅತ್ಯಾಧುನಿಕ ಉಪಕರಣಗಳಿವೆ. ಅವುಗಳನ್ನು ಅನ್ಯಾಯದ ವಿರುದ್ಧ ಹೋರಾಡುವ ಅಸ್ತ್ರಗಳನ್ನಾಗಿಸಿಕೊಳ್ಳಬೇಕು ಎಂಬ ಆಕೆಯ ಸಲಹೆಯನ್ನು ಸಮಕಾಲೀನ ಟೆಕ್ಕಿ ಪೀಳಿಗೆ ಕೇಳಿಸಿಕೊಳ್ಳಬೇಕು. ಸಿಪಿಎಂ ಪಕ್ಷದ ನಿಷ್ಠಾವಂತ ಕಾರ್ಯಕರ್ತೆಯಾಗಿದ್ದ ಇವರು ಪಕ್ಷದ ಸೂಚನೆ ಮೇರೆಗೆ 1978ರ ವಿಧಾನಸಭಾ ಚುನಾವಣೆಯಲ್ಲಿ ಸೂರ್ಯಪೇಟೆ ಜಿಲ್ಲೆಯ ತುಂಗತುರ್ತಿ ಕ್ಷೇತ್ರದಿಂದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ತಮ್ಮ ಸಹೋದರನ ವಿರುದ್ಧವೇ ಜಯಗಳಿಸುತ್ತಾರೆ. ರಾಜಕೀಯ ಸಿದ್ಧಾಂತಗಳನ್ನು ಕುಟುಂಬದ ಸಂಬಂಧಗಳಿಗೂ ಮೀರಿ ಎತ್ತರದಲ್ಲಿರಿಸಿದ್ದ ಅವರ ನಿಲುವು, ಆಕೆಯ ವ್ಯಕ್ತಿತ್ವದ ದರ್ಶನ ಮಾಡಿಸುತ್ತದೆ.

ಕ್ಯಾಪ್ಟನ್ ಬಾವು ಎಂದೇ ಕರೆಯಲ್ಪಡುತ್ತಿದ್ದ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕುಂದಲ್ ಗ್ರಾಮದ ರಾಮಚಂದ್ರ ಶ್ರೀಪತಿ ಲಾಡ್ ಅವರು, ನಾನಾ ಪಾಟೀಲ ನೇತೃತ್ವದ ಸ್ವಯಂ ಘೋಷಿತ ಪ್ರತಿ ಸರಕಾರದ ಸಶಸ್ತ್ರ ವಿಭಾಗವಾಗಿದ್ದ ‘ತೂಫಾನ್ ಸೇನೆ’ಯ ಯೋಧರಾಗಿ ಪುಣೆ-ಮೀರಜ್ ರೈಲಿನ ಮೇಲೆ ದಾಳಿ ಮಾಡಿ, ಒಂದೇ ಒಂದು ಗುಂಡು ಹಾರಿಸದೆ 19,175 ರೂ.ಗಳನ್ನು ಲೂಟಿ ಮಾಡಿ, ಪ್ರತಿ ಸರಕಾರದ ಮೂಲಕ ಬಡವರಿಗೆ ಹಂಚಿದ್ದರು. ಅವರ ಹೋರಾಟದ ಸಂಗಾತಿ ರಾಮಪುರ ಗ್ರಾಮದ ಗಣಪತಿ ಬಾಲ ಯಾದವ್ ಅವರ ವೀರಗಾಥೆ ಕಾಲಾಳು ಯೋಧರ ಬಗೆಗಿನ ಗೌರವವನ್ನು ನೂರ್ಮಡಿಗೊಳಿಸುವಂತಿವೆ.

ಒಡಿಶಾದ ನಾಲ್ವರು ಯೋಧರ ವೀರಗಾಥೆಗಳು

ಸ್ವಾತಂತ್ರ್ಯಯೋಧರೆಂದು ಅಧಿಕೃತವಾಗಿ ಗುರುತಿಸಿ ಪಿಂಚಣಿ ನೀಡಲು ಪ್ರಭುತ್ವಗಳು ಕೆಲವು ಮಾನದಂಡಗಳನ್ನು ರೂಪಿಸಿಕೊಳ್ಳುವುದು ಸರಿ, ಆದರೆ ಅದೆಷ್ಟೋ ನೈಜ ಯೋಧರು ಸ್ವಾತಂತ್ರ್ಯಕ್ಕಾಗಿ ತಮ್ಮ ಪ್ರಾಣ ಪಣಕ್ಕಿಟ್ಟು ಹೋರಾಡಿದ್ದರೂ ಆಡಳಿತದ ಮಾನದಂಡಗಳಿಗೆ ಅವರು ದಾಖಲೆಗಳನ್ನು ಸಲ್ಲಿಸಲು ಪರದಾಡುವ ಸ್ಥಿತಿ ತಂದೊಡ್ಡುತ್ತದೆ. ಕನಿಷ್ಠ ಪಕ್ಷ ತಮ್ಮನ್ನು ಸ್ವಾತಂತ್ರ್ಯಯೋಧರೆಂದು ಗುರುತಿಸಿದರೆ ಅದುವೇ ದೊಡ್ಡ ಗೌರವ ಎಂದು ಭಾವಿಸುವ ಉದಾತ್ತ ಆಶಯದಲ್ಲಿ ಬಡತನದೊಂದಿಗೆ ಬದುಕು ಸವೆಸಿದ ಒಡಿಶಾದ ನಾಲ್ವರು ಯೋಧರ ಜೀವನಗಾಥೆಗಳು ಈ ಕೃತಿಯ ಪ್ರಮುಖ ಅಧ್ಯಾಯಗಳೆನಿಸಿವೆ.

ಒಡಿಶಾದ ನವರಂಗಪುರ್ ಪಟ್ಟಣದ ಬಾಜಿ ಮುಹಮ್ಮದ್, 1942ರ ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಭಾಗವಹಿಸಿ ಬ್ರಿಟಿಷರ ದೌರ್ಜನ್ಯ ಅನುಭವಿಸಿದ್ದರು. ಇದೇ ಹಿರಿಯ ವ್ಯಕ್ತಿ 50 ವರ್ಷಗಳ ನಂತರ 1992ರಲ್ಲಿ ಬಾಬರಿ ಮಸೀದಿ ಉರುಳಿದ ಸಂದರ್ಭದಲ್ಲಿಯೂ ಪೊಲೀಸರಿಂದ ರಕ್ತ ಬರುವಂತೆ ಹೊಡೆತ ತಿಂದರು ಎಂಬ ಸತ್ಯ ಓದುಗನ ಮನ ಕಲಕುತ್ತದೆ. ತಮ್ಮ ಮೇಲೆ ಎಷ್ಟೇ ಹಿಂಸಾತ್ಮಕ ದೌರ್ಜನ್ಯ ನಡೆದರೂ ಕೂಡ ಶಾಂತಿ ಮತ್ತು ಅಹಿಂಸೆಯ ನಿಜ ಪಾಲಕರಾಗಿ ಚಳವಳಿಯನ್ನು ಮುನ್ನಡೆಸಿದ ಬಾಜಿ ಮುಹಮ್ಮದ್ ಅವರ ಬದ್ಧತೆ ಯಾವತ್ತಿಗೂ ಮಾದರಿಯೇ ಎನ್ನಿಸುವಂತಿದೆ.

ಪ್ರಭುತ್ವ ಯಾವಾಗಲೂ ತನ್ನ ವಿರುದ್ಧ ಇರುವವರನ್ನು ದ್ರೋಹಿಗಳೆಂದೇ ಬಗೆಯುತ್ತದೆ. ಕ್ವಿಟ್ ಇಂಡಿಯಾ ಚಳವಳಿಯಲ್ಲಿ ಬಹಳ ದೊಡ್ಡ ಪ್ರಮಾಣದಲ್ಲಿ ಪ್ರತೀ ಮನೆಯಿಂದಲೂ ಗಂಡು ಹಾಗೂ ಹೆಣ್ಣುಮಕ್ಕಳು ಭಾಗವಹಿಸಿದ್ದ ಒಡಿಶಾದ ಬಾರ್ಗರ್ ಜಿಲ್ಲೆಯ ಪಾನಿಮೋರಾ ಗ್ರಾಮದ ಹೆಸರನ್ನೇ ಬ್ರಿಟಿಷರು ‘ಬದ್ಮಾಷ್ ಗಾಂವ್’ ಎಂದು ಕರೆದು ದಾಖಲಿಸುವ ವಿವರಗಳನ್ನು ಚಾಮರು ಫರೀದಾ ಹಾಗೂ ಜಿತೇಂದ್ರ ಪ್ರಧಾನ್ ಎಂಬ ಹೋರಾಟದ ಹಿರಿಯ ಜೀವಗಳು ಆರ್ದ್ರವಾಗಿ ಹೇಳಿವೆ.

ಕರ್ನಾಟಕದ ಎಚ್.ಎಸ್.ದೊರೆಸ್ವಾಮಿ ಅವರು ಸ್ವಾತಂತ್ರ್ಯ ಹೋರಾಟದಲ್ಲಿ ಭೂಗತರಾಗಿ ನಡೆಸಿದ ಚಟುವಟಿಕೆಗಳು, ಬ್ರಿಟಿಷರು ಒಂದು ಪತ್ರಿಕೆ ಮುಚ್ಚಿಸಿದರೆ ಇನ್ನೊಂದು ಹೆಸರಿನಲ್ಲಿ ಮುಂದುವರಿಸಲು ಒಂದಕ್ಕಿಂತ ಹೆಚ್ಚು ಪತ್ರಿಕೆಗಳ ಶೀರ್ಷಿಕೆಗಳನ್ನು ಮುಂಚಿತವಾಗಿಯೇ ನೋಂದಾಯಿಸಿ ಇಟ್ಟುಕೊಳ್ಳುವ ಅವರ ಮುಂಜಾಗ್ರತೆ ಅಂದಿನ ಆಡಳಿತದ ಕ್ರಮಕ್ಕೆ ಹೋರಾಟಗಾರರು ತೆಗೆದುಕೊಳ್ಳುತ್ತಿದ್ದ ಮುನ್ನೆಚ್ಚರಿಕೆಗಳನ್ನು ಅರ್ಥಮಾಡಿಸುತ್ತದೆ.

ತಮಿಳುನಾಡಿನ ಚೆನ್ನೈನ ಎನ್.ಶಂಕರಯ್ಯ, ಆರ್.ನಲ್ಲಕುನ್ನು, ಪಶ್ಚಿಮ ಬಂಗಾಳದ ಪುರುಲಿಯಾ ಜಿಲ್ಲೆಯ ಚೇಪುವಾ ಗ್ರಾಮದ ಬಬಾನಿ ಮಹತೋ, ತೇಲು ಮಹತೋ ಮತ್ತಿತರ ಮಹನೀಯರ ಹೋರಾಟದ ಬದುಕಿನ ಮೇಲೆ ಬೆಳಕು ಚೆಲ್ಲಿರುವ ಈ ಕೃತಿ ನಮ್ಮ ಚರಿತ್ರೆಯಲ್ಲಿ ಅಲಕ್ಷಿಸಲ್ಪಟ್ಟಿರುವ ಅಸಂಖ್ಯ ಅನಾಮಧೇಯ ಹೋರಾಟಗಾರರ ಬದುಕಿಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಲ್ಲಿಸಿದ ದೊಡ್ಡ ಗೌರವದಂತಿದೆ.

ಇಲ್ಲಿನ ಪ್ರತಿಯೊಂದು ಬರಹದ ಕೊನೆಯಲ್ಲಿ ನೀಡಲಾಗಿರುವ ಕ್ಯೂ ಆರ್ ಕೋಡ್ ಮೂಲಕ ಪೀಪಲ್ ಆರ್ಕೈವ್ ಆಫ್ ರೂರಲ್ ಇಂಡಿಯಾ(PARI)ದ ಸ್ವಾತಂತ್ರ್ಯ ಯೋಧರ ಗ್ಯಾಲರಿಗೆ ತಲುಪಲು ಸಾಧ್ಯವಾಗಿಸಿರುವುದು ತಂತ್ರಜ್ಞಾನದ ವಿಶೇಷ ಅನುಕೂಲವಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ಮಂಜುನಾಥ ಡಿ.ಡೊಳ್ಳಿನ

contributor

Similar News