ಇದು ಪ್ರಭುತ್ವ ಪ್ರಾಯೋಜಿತ ಹತ್ಯಾಕಾಂಡ

Update: 2020-03-01 18:36 GMT

ಈ ಹತ್ಯಾಕಾಂಡ ಮತ್ತು ದೊಂಬಿ ನಡೆಯುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಮಾತ್ರ ವಲ್ಲ ಅನೇಕ ಕಡೆ ಶಾಮೀಲಾಗಿದ್ದರು. ನೊಂದವರ ಕಣ್ಣೀರು ಒರೆಸಿ ಸಾಂತ್ವನ ಹೇಳಲು ಬರಬೇಕಾಗಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ತಾವು ಕೇಸರಿವಾಲಾ ಆಗಿದ್ದನ್ನು ತೋರಿಸಿಕೊಂಡರು. ತಕ್ಷಣ ಹಿಂಸಾಚಾರ ತಡೆಯಲು ನಿಗಾ ವಹಿಸಬೇಕಾಗಿದ್ದ ಕೇಂದ್ರ ಗೃಹ ಮಂತ್ರಿ ದಂಗೆ ನಿಂತ ಐದು ದಿನಗಳ ನಂತರ ಕಳ್ಳ ನಿದ್ದೆಯಿಂದ ಎಚ್ಚೆತ್ತು ಗಲಭೆಗೆ ಪ್ರತಿಪಕ್ಷಗಳು ಕಾರಣ ಎಂದು ‘ಗೋಲಿ ಮಾರೋ ಸಾಲೊಂಕೊ’ಎಂದು ಪ್ರಚೋದಿಸಿದವರನ್ನು ರಕ್ಷಿಸಿದರು.


ದೇಶದ ರಾಜಧಾನಿ ದಿಲ್ಲಿಯಲ್ಲಿ ಐದು ದಿನಗಳ ಕಾಲ ನಡೆದ ಭೀಕರ ಹಿಂಸಾಚಾರ ಈಗ ನಿಂತಿದೆ. ಆದರೆ, ಬೀದಿಯಲ್ಲಿ ಇನ್ನೂ ರಕ್ತವಿದೆ. ಮೇಲ್ನೋಟಕ್ಕೆ ದಿಲ್ಲಿ ತಣ್ಣಗಾಗಿದೆ. ಆದರೆ ಆಸರೆಯಾಗಿದ್ದ ಸೂರು ಕಳೆದುಕೊಂಡು ಬೀದಿಗೆ ಬಿದ್ದವರ ನಿಟ್ಟುಸಿರು, ಎಳೆ ಕಂದಮ್ಮಗಳನ್ನು ಕಳೆದುಕೊಂಡ ತಾಯಂದಿರ ರೋದನ, ಹೆತ್ತವರನ್ನು ಕಳೆದುಕೊಂಡ ಕಂದಮ್ಮಗಳ ಆಕ್ರಂದನ, ಮನೆ ನಡೆಸುವ ಜೊತೆಗಾರ ಹೆಣವಾಗಿ ಬಿದ್ದ ಘೋರ ದೃಶ್ಯ ಕಂಡು ದಿಕ್ಕು ತಪ್ಪಿ ನಿಂತ ಸೋದರಿಯರ ಬಿಕ್ಕಳಿಕೆ ಇನ್ನೂ ಮಾರ್ದನಿಸುತ್ತಲೆ ಇದೆ. ಇವರ ಬದುಕು ಹೊರಗೆ ಬರಲಾಗದ ಕಾರ್ಗತ್ತಲ ಕೂಪಕ್ಕೆ ನೂಕಲ್ಪಟ್ಟಿದೆ. ಇದು ಕೋಮು ಗಲಭೆಯಲ್ಲ, ಕೋಮು ಹತ್ಯಾಕಾಂಡ. 2002ರಲ್ಲಿ ಗುಜರಾತ್‌ನಲ್ಲಿ ನಡೆದ ಮಾರಣ ಹೋಮದ ಪುನರಾವರ್ತನೆ.

ಈ ದೇಶಕ್ಕೆ ಹಿಂಸಾಚಾರ ಹೊಸದಲ್ಲ. ದೇಶ ವಿಭಜನೆಯಾದಾಗ ಉತ್ತರ ಭಾರತ ಹಿಂದೆಂದೂ ಕಂಡರಿಯದ ಕೋಮು ಗಲಭೆಯಿಂದ ತತ್ತರಿಸಿತು. ಮನೆ ಮಾರು ಕಳೆದುಕೊಂಡು ಲಕ್ಷಾಂತರ ಜನ ಬೀದಿಗೆ ಬಿದ್ದರು. ಆದರೆ ಆಗ ಗಾಂಧಿ ಇದ್ದರು. ಉರಿಯುತ್ತಿದ್ದ ಕೋಲೂರತ್ತ ಕಲ್ಲು ಮುಳ್ಳು ತುಳಿಯುತ್ತ ನೌಕಾಲಿಗೆ ಹೋಗಿ ಬೆಂಕಿ ಆರಿಸಿದರು. ಆಗ ನೆಹರೂ ಪ್ರಧಾನಿಯಾಗಿದ್ದರು. ದಿಲ್ಲಿಯ ಚಾಂದನಿ ಚೌಕನಲ್ಲಿ ಚಾಕು ಚೂರಿಗಳೊಂದಿಗೆ ಜನ ಹೊಡೆದಾಟಕ್ಕಿಳಿದಾಗ ಎಲ್ಲೆಡೆ ಬೆಂಕಿ ಆವರಿಸಿದಾಗ ನೆಹರೂ ಅಲ್ಲಿ ಬರಿಗೈಲಿ ಧಾವಿಸಿ ಶಾಂತಿಯ ಹಣತೆ ಬೆಳಗಿದರು. ಮಾರಾಮಾರಿಗಿಳಿದಿದ್ದ ಜನ ಜವಾಹರಲಾಲರ ಮಾತಿಗೆ ಬೆಲೆ ಕೊಟ್ಟರು. ಇದು ಅವರ ನೈತಿಕ ಶಕ್ತಿ. ಯಾಕೆಂದರೆ ಜವಾಬ್ದಾರಿ ಸ್ಥಾನದಲ್ಲಿದ್ದು ಕಣ್ಸನ್ನೆ ಮಾಡಿ ದಂಗೆಗೆ ಪ್ರಚೋದಿಸುತ್ತಿದ್ದ ದಗಾಕೋರರು ಅವರಾಗಿರಲಿಲ್ಲ. ಶಾಂತಿ ಪಾಲನೆ ಮಾಡಬೇಕಿದ್ದ ಪೊಲೀಸರ ಕೈಯನ್ನು ಅಂದಿನ ಗೃಹಮಂತ್ರಿ ವಲ್ಲಭಭಾಯಿ ಪಟೇಲ್ ಕಟ್ಟಿ ಹಾಕಲಿಲ್ಲ. ಅಂತಲೇ ವಿಭಜನೆಯ ಗಾಯ ನಿಧಾನವಾಗಿ ಮಾಯುತ್ತ ಬಂತು. ಆಗ ನಡೆದದ್ದು ಹಿಂದೂ ಮುಸ್ಲಿಮ್ ಗಲಭೆ. ಆದರೆ ಈಗ ನಡೆಯುತ್ತಿರುವದು ಗಲಭೆಯಲ್ಲ, ವ್ಯವಸ್ಥಿತ ಹತ್ಯಾಕಾಂಡ.

1947ರ ನಂತರ ದೇಶ ನಿಧಾನವಾಗಿ ಅಭಿವೃದ್ಧಿಯತ್ತ ಸಾಗಿತು. ಇದು ಟಾಟಾ ಬಿರ್ಲಾರಿಗೆ ಬಂದ ಸ್ವಾತಂತ್ರ ಎಂದು ಕವಿ ಸಿದ್ದಲಿಂಗಯ್ಯನವರು ಪದ್ಯ ಬರೆದರೂ ಕೂಡ ಅಸಮಾನತೆ ನಿವಾರಣೆಯಾಗದಿದ್ದರೂ ಕೂಡ ಜನಸಾಮಾನ್ಯರ ದೈನಂದಿನ ಬದುಕು ಕಷ್ಟ ತಾಪತ್ರಯಗಳ ನಡುವೆ ನಿರಾತಂಕವಾಗಿತ್ತು. ಇಂದು ಭಾರತ ಜಗತ್ತಿನ ಶಕ್ತಿಶಾಲಿ ರಾಷ್ಟ್ರವಾಗಿ ಹೊರ ಹೊಮ್ಮಿದ್ದರೆ, ಅದಕ್ಕೆ ಕಾರಣ ಬಾಬಾಸಾಹೇಬರ ಸಂವಿಧಾನ ಮತ್ತು ಸ್ವಾತಂತ್ರಾನಂತರ ದೇಶಕ್ಕೆ ದೊರೆತ ನೆಹರೂ ನಾಯಕತ್ವ. ಭಾರತ ಯಾವುದೇ ಧರ್ಮಕ್ಕೆ ಜನಾಂಗಕ್ಕೆ ಸೇರಿದ ರಾಷ್ಟ್ರವಲ್ಲ. ಇದು ಇಲ್ಲಿ ನೆಲೆಸಿದ ಇದನ್ನು ಕಟ್ಟಿದ ಎಲ್ಲರ ದೇಶ. ನಾವು ಹಿಂದೂ ಅಲ್ಲ, ಮುಸ್ಲಿಮ್ ಅಲ್ಲ, ಕ್ರೈಸ್ತ ಅಲ್ಲ. ನಾವು ಭಾರತೀಯರು ಮಾತ್ರ ಎಂಬುದು ಅಂಬೇಡ್ಕರ್ ರೂಪಿಸಿದ ಸಂವಿಧಾನದ ಸಂದೇಶ.

ಇದು ಎಲ್ಲ ಭಾರತೀಯರಿಗೂ ಸೇರಿದ ದೇಶವೆಂದು ಒಪ್ಪಿಕೊಳ್ಳದ ಇದರ ಮೇಲೆ ಒಂದು ಧರ್ಮದ, ಸಮುದಾಯದ ಜಾತಿ ಶ್ರೇಣೀಕರಣದ ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹೊರಟವರಿಗೆ ಅಡ್ಡಿಯಾಗಿರುವುದು ಬಾಬಾಸಾಹೇಬರ ಈ ಸಂವಿಧಾನ. ಅದನ್ನು ನೇರವಾಗಿ ವಿರೋಧಿಸಲಾಗದೆ ಅದರ ವಿರುದ್ಧ ನಡೆದ ಮನುವಾದಿ ಸಂಚಿನ ಭಾಗ ಈ ಕೋಮು ಹತ್ಯಾಕಾಂಡಗಳು.

ಈ ಜಗತ್ತಿನಲ್ಲಿ ಭಾರತದಂತಹ ದೇಶ ಇನ್ನೊಂದಿಲ್ಲ. ಇಲ್ಲಿ ಹಿಂದೂ ಮುಸ್ಲಿಮರು ಮಾತ್ರವಿಲ್ಲ. ವೈದಿಕಶಾಹಿ ವಿರುದ್ಧ ಬಂಡೆದ್ದ ಜೈನಧರ್ಮ, ಬೌದ್ಧ ಧರ್ಮ, ಲಿಂಗಾಯತ ಧರ್ಮ, ಸಿಖ್ ಧರ್ಮ ಹಾಗೂ ಯಾವುದೇ ಧರ್ಮಕ್ಕೆ ಸೇರದ ಆದಿವಾಸಿಗಳು, ಅಲೆಮಾರಿಗಳು, ಸಿದ್ದಿಗಳು... ಹೀಗೆ ಇದು ಸಾವಿರಾರು ಜನ ಸಂಸ್ಕೃತಿಗಳ ಸಂಗಮ. ಇದು ವೈದಿಕ ಹಿಂದೂರಾಷ್ಟ್ರ ವಾದರೆ ನಾಶವಾಗಿ ಹೋಗುತ್ತದೆ ಎಂದು ಅಂಬೇಡ್ಕರ್ ಎಂಟು ದಶಕಗಳ ಹಿಂದೆಯೆ ಹೇಳಿದ್ದರು.

ಈ ನೆಲದಲ್ಲಿ ನೆಲೆಸಿದ ಎಲ್ಲರೂ ಒಂದಾಗಿದ್ದರೆ, ಇದಕ್ಕೆ ಸೋಲಿಲ್ಲ. ನಾವು ಜಾತಿ, ಧರ್ಮದ ಹೆಸರಿನಲ್ಲಿ ಕಚ್ಚಾಡಿದಾಗಲೆಲ್ಲ, ಇದು ವಿದೇಶಿ ದಾಳಿಕೋರರ ಆಕ್ರಮಣಕ್ಕೆ ಬಲಿಯಾಗಿದೆ. ನಾವೆಲ್ಲರೂ ಕೂಡಿ ಬಾಳಬೇಕೆಂದೆ ನಮ್ಮ ಸಂವಿಧಾನದ ನಿರ್ಮಾಪಕರು ಇದನ್ನು ಒಕ್ಕೂಟ ಎಂದು ಕರೆದರು. ಈ ಒಕ್ಕೂಟ ಸುರಕ್ಷಿತವಾಗಿ ಉಳಿಯಬೇಕಿದ್ದರೆ ಇದನ್ನು ಒಂದು ಧರ್ಮದ ರಾಷ್ಟ್ರವನ್ನಾಗಿ ಮಾಡುವ ಹುನ್ನಾರ ನಿಲ್ಲಬೇಕು. ವಾಟ್ಸ್‌ಆ್ಯಪ್ ಯೂನಿವರ್ಸಿಟಿಗಳ ಮೂಲಕ ತಪ್ಪು ಮಾಹಿತಿ ಹರಡಿ, ಹಿಟ್ಲರನ ಮಂತ್ರಿ ಗೊಬ್ಬೆಲ್ಸನಂತೆ ಒಂದು ಸುಳ್ಳನ್ನು ನೂರು ಬಾರಿ ಹೇಳಿ ಅದನ್ನೇ ಸತ್ಯವೆಂದು ನಂಬಿಸುವ ಮಸಲತ್ತು ನಿಲ್ಲಬೇಕು. ಈ ಪ್ರಯೋಗ ಜರ್ಮನಿ, ಇಟಲಿಗಳಲ್ಲಿ ವಿಫಲಗೊಂಡಿದೆ ಎಂಬುದನ್ನು ಮರೆಯಬಾರದು.

ಇಲ್ಲಿ ಹಿಂಸಾಚಾರ ನಡದೇ ಇಲ್ಲವೆಂದಲ್ಲ, 1992ರ ಡಿಸೆಂಬರ್ 6ರ ನಂತರ ಭಾರತದ ಚಿತ್ರವೇ ಬದಲಾಯಿತು. ಗಾಂಧಿ ಹತ್ಯೆಯ ನಂತರ ಬಾಲ ಮುದುರಿಕೊಂಡಿದ್ದ ಶಕ್ತಿಗಳ ಪರ್ವಕಾಲ ಆರಂಭವಾಯಿತು. ಆ ನಂತರ ಈ ದೇಶ ನೆಮ್ಮದಿ ಕಾಣಲಿಲ್ಲ. ಈ ದೇಶದ ಬಿಜೆಪಿಯ ಮೊದಲ ಪ್ರಧಾನ ಮಂತ್ರಿ ಎಂಬ ಲೇವಡಿಗೊಳಗಾದ ಪಿ.ವಿ. ನರಸಿಂಹರಾವ್ ಕಾಲದಲ್ಲಿ ಉರುಳಿಸಲಾದ ಬಾಬರಿ ಮಸೀದಿ ಬರೀ ಒಂದು ಕಟ್ಟಡವಾಗಿದ್ದರೆ ಹೋಗಲಿ ಎನ್ನಬಹುದು. ಆದರೆ, ಅದರ ನೆಲಸಮದೊಂದಿಗೆ ಸೌಹಾರ್ದ ಭಾರತದ ಅಡಿಪಾಯವೂ ಕುಸಿಯತೊಡಗಿತು. ಮೊದಲು ಕೋಮು ಗಲಭೆಗಳು ಈ ದೇಶದಲ್ಲಿ ನಡೆಯುತ್ತಿದ್ದವು. ಆದರೆ, 2002ರ ಗುಜರಾತ್‌ನಲ್ಲಿ ನಡೆದ ಹಿಂಸಾಚಾರ ಕೋಮು ಗಲಭೆಯಲ್ಲ, ಅದು ಘೋರ ಹತ್ಯಾಕಾಂಡ. ಅದಕ್ಕೆ ನಾನೆಂದೂ ಕೋಮು ಗಲಭೆ ಎಂದು ಕರೆಯುವುದಿಲ್ಲ. ಅದು ಒಂದು ಸಮುದಾಯದ ಜನರ ವ್ಯವಸ್ಥಿತ ಹತ್ಯಾಕಾಂಡ.

ಅದೊಂದೇ ಅಲ್ಲ, 1984ರಲ್ಲಿ ಇಂದಿರಾ ಗಾಂಧಿಯವರ ಹತ್ಯೆಯಾದಾಗ ದಿಲ್ಲಿಯಲ್ಲಿ ನಡೆದದ್ದು ಕೂಡ ಸಿಖ್ಖರ ಹತ್ಯಾಕಾಂಡ. ಗುಜರಾತ್ ಹತ್ಯಾಕಾಂಡ ಸಮರ್ಥಿಸಿಕೊಳ್ಳಲು ಅದನ್ನು ಉಲ್ಲೇಖಿಸುವುದು ಅನಗತ್ಯ.

ಈಗ ದಿಲ್ಲಿಯಲ್ಲಿ ನಡೆದಿರುವುದೂ ಕೂಡ ಗುಜರಾತ್ ಮಾದರಿ ಹತ್ಯಾಕಾಂಡ. ಇದು ಆಕಸ್ಮಿಕವಾಗಿ ನಡೆದಿಲ್ಲ. ಅತ್ಯಂತ ಪೂರ್ವ ತಯಾರಿಯಿಂದ ನಡೆದ ಮಾರಣ ಹೋಮ. ಕರಾಳ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ, ಎನ್‌ಆರ್‌ಸಿ ಹಾಗೂ ಎನ್‌ಪಿಆರ್) ವಿರುದ್ಧ ದಿಲ್ಲಿಯಲ್ಲಿ ಗಾಂಧಿ ಮಾರ್ಗದಲ್ಲಿ ಶಾಂತಿಯುತವಾಗಿ ನಡೆದ ಹೋರಾಟವನ್ನು ವಿಫಲಗೊಳಿಸಲು ನಡೆದ ನರಮೇಧ. ಈ ಹತ್ಯಾಕಾಂಡಕ್ಕೆ ಮುನ್ನ ಬಿಜೆಪಿ ನಾಯಕ ಕಪಿಲ ಮಿಶ್ರಾ, ‘ದೇಶದ ಕಾನೂನಿನ ವಿರುದ್ಧ ನಡೆದ ಚಳವಳಿ ನಿಲ್ಲದಿದ್ದರೆ ಟ್ರಂಪ್ ಬಂದು ಹೋದ ನಂತರ ಬೀದಿಗಿಳಿದು ಪಾಠ ಕಲಿಸುತ್ತೇವೆ’ ಎಂದು ಬಹಿರಂಗವಾಗಿ ಬೆದರಿಕೆ ಹಾಕಿದ್ದ.

ಇದಕ್ಕೂ ಮುನ್ನ ದಿಲ್ಲಿ ವಿಧಾನಸಭಾ ಚುನಾವಣೆಯಲ್ಲಿ ಕೇಂದ್ರ ಮಂತ್ರಿ ಅನುರಾಗ ಠಾಕೂರ ಬಹಿರಂಗ ಸಭೆಯಲ್ಲಿ, ‘ದೇಶ್‌ಕೆ ಗದ್ದಾರೋಂಕೋ, ಗೋಲಿ ಮಾರೋ ಸಾಲೊಂಕೊ’ ಎಂದು ಘೋಷಣೆ ಹಾಕಿ ಜನರಿಂದ ಕೂಗಿಸಿದ. ಇದೆಲ್ಲದರ ಪರಿಣಾಮವಾಗಿ ಹಿಂಸೆ ಆರಂಭವಾಯಿತು. ದೊಣ್ಣೆಗಳು, ಕಬ್ಬಿಣದ ಸರಳುಗಳು, ಲೋಹದ ಕೊಳವೆಗಳು ಹಿಡಿದು ಬೀದಿಯಲ್ಲಿ ನುಗ್ಗಿ ಬಂದ ಪುಂಡ ಹುಡುಗರು ಮುಸಕುಧಾರಿಗಳು ಮುಸ್ಲಿಮರ ಮನೆ, ಅಂಗಡಿ, ಗ್ಯಾರೇಜುಗಳನ್ನು ಹುಡುಕಿ ಬೆಂಕಿ ಹಚ್ಚಿದರು. ದಿಲ್ಲಿ ಪೊಲೀಸರು ಈ ಮುಸುಕುಧಾರಿ ಗೂಂಡಾಗಳ ಜೊತೆ ಶಾಮೀಲಾದರು. ಗೂಂಡಾಗಳ ದಾಳಿಯಿಂದ ಗಾಯಗೊಂಡ ರಕ್ತ ಸಿಕ್ತ ಯುವಕರನ್ನು ಪುನಃ ತಮ್ಮ ಲಾಠಿಯಿಂದ ತಿವಿದ ಪೊಲೀಸರು ‘ನಿಮಗೆ ಆಜಾದಿ ಬೇಕೇ’ ಎಂದು ಹಿಂಸಿಸಿದರು. ಇದು ಹಿಂದೂ ಮುಸ್ಲಿಮ್ ಗಲಭೆಯಲ್ಲ, ಸಂಘಪರಿವಾರದ ಪ್ರಚೋದನೆಯಿಂದ ಸರಕಾರದ ಮೌನ ಸಮ್ಮತಿಯಿಂದ ನಡೆದ ಹತ್ಯಾಕಾಂಡ.

ಈ ಹತ್ಯಾಕಾಂಡದ ಬಗ್ಗೆ ಪ್ರಚೋದಕ ಭಾಷಣ ಮಾಡಿದ ಬಿಜೆಪಿ ನಾಯಕರು ಹಾಗೂ ಕೇಂದ್ರ ಮಂತ್ರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲು ಹರ್ಷ ಮಂದರ್ ಮತ್ತಿತರ ನಾಗರಿಕ ಹಕ್ಕುಗಳ ಹೋರಾಟಗಾರರು ದಿಲ್ಲಿ ಹೈಕೋರ್ಟ್‌ನ ಮೊರೆ ಹೋದರು. ಈ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಮುರಳೀಧರ್ ತಲವಂತ ಸಿಂಗ ಅವರಿದ್ದ ಪೀಠ ಹಿಂಸೆ ಪ್ರಚೋದಕ ಬಿಜೆಪಿ ನಾಯಕರ ವಿರುದ್ಧ ಎಫ್‌ಐಆರ್ ದಾಖಲಿಸಲು ವಿಫಲಗೊಂಡ ಪೊಲೀಸರನ್ನು ತರಾಟೆಗೆ ತೆಗೆದುಕೊಂಡು 24 ತಾಸುಗಳಲ್ಲಿ ಎಫ್‌ಐ ಆರ್ ದಾಖಲಿಸಲು ಸೂಚಿಸಿತು. ಇದಾದ ಮಾರನೇ ದಿನ ಈ ನ್ಯಾಯಾಧೀಶರನ್ನು ಮಧ್ಯರಾತ್ರಿ ಎತ್ತಂಗಡಿ ಮಾಡಲಾಯಿತು.ಇವರ ವರ್ಗಾವಣೆ ನಂತರ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಧೀಶರು ಕೇಂದ್ರ ಸರಕಾರದ ಕೋರಿಕೆಯನ್ನು ಮನ್ನಿಸಿ ಎಫ್‌ಐಆರ್ ದಾಖಲಿಸಲು ನಾಲ್ಕು ವಾರಗಳ ಕಾಲಾವಕಾಶ ನೀಡಿದರು.

ಈ ಹತ್ಯಾಕಾಂಡ ಮತ್ತು ದೊಂಬಿ ನಡೆಯುವಾಗ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದರು. ಮಾತ್ರ ವಲ್ಲ ಅನೇಕ ಕಡೆ ಶಾಮೀಲಾಗಿದ್ದರು. ನೊಂದವರ ಕಣ್ಣೀರು ಒರೆಸಿ ಸಾಂತ್ವನ ಹೇಳಲು ಬರಬೇಕಾಗಿದ್ದ ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್, ತಾವು ಕೇಸರಿವಾಲಾ ಆಗಿದ್ದನ್ನು ತೋರಿಸಿಕೊಂಡರು. ತಕ್ಷಣ ಹಿಂಸಾಚಾರ ತಡೆಯಲು ನಿಗಾ ವಹಿಸಬೇಕಾಗಿದ್ದ ಕೇಂದ್ರ ಗೃಹ ಮಂತ್ರಿ ದಂಗೆ ನಿಂತ ಐದು ದಿನಗಳ ನಂತರ ಕಳ್ಳ ನಿದ್ದೆಯಿಂದ ಎಚ್ಚೆತ್ತು ಗಲಭೆಗೆ ಪ್ರತಿಪಕ್ಷಗಳು ಕಾರಣ ಎಂದು ‘ಗೋಲಿ ಮಾರೋ ಸಾಲೊಂಕೊ’ಎಂದು ಪ್ರಚೋದಿಸಿದವರನ್ನು ರಕ್ಷಿಸಿದರು. ನಾಲ್ಕನೇ ದಿನ ಮೌನ ಮುರಿದ ಪ್ರಧಾನಿ ಸ್ಮಶಾನ ಶಾಂತಿ ನೆಲೆಸಿದಾಗ ಶಾಂತಿಗೆ ಮನವಿ ಮಾಡಿದರು.

ಇದು ಭಾರತದ ದುರಂತ. ಭಾರತ ಹಿಂದೂ ರಾಷ್ಟ್ರ. ಈ ದೇಶದ ಅಲ್ಪಸಂಖ್ಯಾತರು ಯಾವುದೇ ನಾಗರಿಕ ಸೌಲಭ್ಯಗಳನ್ನು ಕೇಳದೇ ಬಿದ್ದುಕೊಂಡಿರಬೇಕೆಂದು ಆರೆಸ್ಸೆಸ್‌ನ ಎರಡನೇ ಸರಸಂಘಚಾಲಕ ಮಾಧವ ಸದಾಶಿವ ಗೋಳ್ವಾಲ್ಕರ್ ಹೇಳಿದ್ದರು. ಈಗ ಅಧಿಕಾರದಲ್ಲಿ ಇರುವವರು ಅವರ ಶಿಷ್ಯರು. ತಮ್ಮ ಸಿದ್ಧಾಂತದ ಜಾರಿಯ ಭಾಗವಾಗಿ ಮೌನ ತಾಳಿದ್ದಾರೆ. ಇದಕ್ಕೆ ಪೂರ್ವಭಾವಿಯಾಗಿ ಸಂಘದ ಕಾರ್ಯಕರ್ತರು ಹೊಸ ಪೀಳಿಗೆಯ ತರುಣರ ಮೆದುಳಿನಲ್ಲಿ ಜನಾಂಗೀಯ ದ್ವೇಷದ ವಿಷಪ್ರಾಶನ ಮಾಡಿದ್ದಾರೆ. ಆದರೆ ಬುದ್ಧ, ಬಸವ, ಅಂಬೇಡ್ಕರ್, ವಿವೇಕಾನಂದ, ಗಾಂಧೀಜಿ ಜನಿಸಿದ ಈ ನೆಲಕ್ಕೆ ಇದನ್ನೆಲ್ಲ ಹಿಮ್ಮೆಟ್ಟಿಸಿ ಉಳಿಯುವ, ಬೆಳೆಯುವ ಶಕ್ತಿ ಇದೆ. ಸತ್ಯಕ್ಕೆ ಗೆಲುವು ಇದ್ದೇ ಇದೆ. ಸುಳ್ಳಿನ ಆಯುಷ್ಯ ಕಡಿಮೆ. ಬೆಳಕು ಬಂದೇ ಬರುತ್ತದೆ.

ಒಣ ಮಾತಿನ ರಾಷ್ಟ್ರಪ್ರೇಮ ಕೆಲಸಕ್ಕೆ ಬರುವುದಿಲ್ಲ. ವಾಸ್ತವವಾಗಿ ದೇಶದ ಆರ್ಥಿಕ, ಸಾಂವಿಧಾನಿಕ ಬುನಾದಿ ಅಲುಗಾಡುತ್ತಿದೆ. ಆರ್ಥಿಕ ಪರಿಸ್ಥಿತಿ ಹಳ್ಳದಿದೆ. ಅಧಿಕಾರಕ್ಕೆ ಬರುವ ಮುನ್ನ 50 ರೂಪಾಯಿಗೆ ಲೀಟರ್ ಪೆಟ್ರೋಲಿಯಂ ಕೊಡವುದಾಗಿ ಹೇಳಿದರು. ಅದೀಗ 90 ರೂಪಾಯಿ ಆಗಿದೆ. ವರ್ಷಕ್ಕೆ 2 ಕೋಟಿಯಂತೆ 5 ವರ್ಷದಲ್ಲಿ 10 ಕೋಟಿ ಉದ್ಯೋಗ ಸೃಷ್ಟಿಸುವುದಾಗಿ ಹೇಳಿದರು. ಆದರೆ ವಾಸ್ತವವಾಗಿ 20 ಕೋಟಿ ಉದ್ಯೋಗಗಳು ಮಾಯವಾಗಿವೆ.

ಇವರು ಅಧಿಕಾರಕ್ಕೆ ಬರುವ ಮುನ್ನ 350 ರೂಪಾಯಿಗೆ ಸಿಗುತ್ತಿದ್ದ ಗ್ಯಾಸ್ ಸಿಲಿಂಡರ್ ಬೆಲೆ ಈಗ 900 ರೂಪಾಯಿ ದಾಟಿದೆ. ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಪ್ರಜೆಯ ಬ್ಯಾಂಕ್ ಖಾತೆಗೆ ತಲಾ 15 ಲಕ್ಷ ರೂಪಾಯಿ ಹಾಕುವುದಾಗಿ ಹೇಳಿದರು. ಆದರೆ ಬ್ಯಾಂಕುಗಳಲ್ಲಿ ಮಿನಿಮಮ್ ಬ್ಯಾಲನ್ಸ್ ಇಲ್ಲವೆಂದು ದಂಡ ಹಾಕುತ್ತಿದ್ದಾರೆ. ಈ ದಂಡದ ಹಣವೆ 4 ಸಾವಿರ ಕೋಟಿ ರೂಪಾಯಿ ಆಗಿದೆ.

ನಷ್ಟದಲ್ಲಿರುವ ಸರಕಾರದ ಉದ್ಯಮಗಳಿಗೆ ಪುನಶ್ಚೇತನ ನೀಡುವುದಾಗಿ ಹೇಳಿದರು. ಆದರೆ ಲಾಭದಲ್ಲಿ ಇರುವ ಉದ್ಯಮಗಳನ್ನು ಒಂದೊಂದಾಗಿ ಮಾರಾಟ ಮಾಡುತ್ತಿದ್ದಾರೆ. ಜೀವ ವಿಮೆ ಜೀವ ಬಿಡುತ್ತಿದೆ. ಜಿಡಿಪಿ ಪಾತಾಳಕ್ಕೆ ಕುಸಿದಿದೆ. ಈ ವೈಫಲ್ಯವನ್ನು ಮುಚ್ಚಿಕೊಳ್ಳಲು ಈಗ ಪೌರತ್ವ ಕಾನೂನು ತಂದು ಅದನ್ನು ವಿರೋಧಿಸುವವರನ್ನೆಲ್ಲ ದೇಶದ್ರೋಹಿ ಎಂದು ಕರೆದು ಅವಮಾನಿಸಲಾಗುತ್ತಿದೆ. ದೊರೆಸ್ವಾಮಿ ಅವರಂಥವರನ್ನು ಯತ್ನಾಳರಂಥವರು ಪಾಕ್ ಏಜೆಂಟ್ ಎಂದು ಕರೆಯುತ್ತಿದ್ದಾರೆ. ಈ ಮೂರ್ಖರಿಗೆ ತಮಗೂ ಕೊನೆಯೆಂಬುದು ಇದೆ ಎಂದು ಗೊತ್ತಿಲ್ಲ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News