ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾಯಿತೆ ಅಲ್ಪಸಂಖ್ಯಾತರ ಕಲ್ಯಾಣ ?
ಬೆಂಗಳೂರು, ಮಾ.10: ರಾಜ್ಯದ ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯು 2020-21ನೇ ಸಾಲಿನ ಬಜೆಟ್‌ನಲ್ಲಿ ನಿರೀಕ್ಷಿತ ಮಟ್ಟದ ಅನುದಾನ ಪಡೆಯುವಲ್ಲಿ ವಿಫಲವಾಗಿದ್ದು, ಪ್ರಮುಖವಾಗಿ ಶಿಕ್ಷಣ, ಉದ್ಯೋಗಕ್ಕೆ ಸಂಬಂಧಿಸಿದ ಯೋಜನೆಗಳೇ ಸರಕಾರದಿಂದ ನಿರ್ಲಕ್ಷಕ್ಕೊಳಗಾದವು.
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗೆ ಸಂಬಂಧಿಸಿದಂತೆ ಪ್ರತಿ ವರ್ಷ ಹೊಸದಾಗಿ 2-3 ಹೊಸ ಯೋಜನೆಗಳು ಸೇರ್ಪಡೆಗೊಂಡು, ಹಳೆಯ ಯೋಜನೆಗಳನ್ನು ಮುಂದುವರಿಸಲಾಗುತ್ತಿತ್ತು. 2012-13ರವರೆಗೆ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಲ್ಲಿ 12 ಯೋಜನೆಗಳು ಜಾರಿಯಲ್ಲಿದ್ದವು. ಆದರೆ, 2013-14 ರಿಂದ 2019-20 ಅವಧಿಯಲ್ಲಿ ಯೋಜನೆಗಳ ಸಂಖ್ಯೆ 31ಕ್ಕೆ ಏರಿಕೆಯಾದವು.
ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಗೆ ಕಳೆದ ಐದು ವರ್ಷಗಳಲ್ಲಿ ಬಿಡುಗಡೆಯಾಗಿರುವ ಅನುದಾನದ ಪೈಕಿ ಶೇ.95ಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಖರ್ಚು ಮಾಡಲಾಗಿದೆ. ಆದರೆ, 2019-20ನೇ ಸಾಲಿನಲ್ಲಿ ಶೇ.65ರಷ್ಟು ಮಾತ್ರ ಅನುದಾನ ಖರ್ಚು ಮಾಡಲಾಗಿದೆ ಎಂದು ತಿಳಿದು ಬಂದಿದೆ.
ಇಲಾಖೆಯ ಅಧಿಕಾರಿಗಳ ನಿರ್ಲಕ್ಷತನ ದಿಂದಾಗಿ 2020-21ನೇ ಸಾಲಿನಲ್ಲಿ ಅಲ್ಪಸಂಖ್ಯಾ ತರ ಕಲ್ಯಾಣಕ್ಕೆ ಸಿಗುತ್ತಿದ್ದ ಅನುದಾನ ಕಡಿತವಾಗಿದೆ ಎಂದು ಹೇಳಲಾಗುತ್ತಿದೆ. ಅಲ್ಪಸಂಖ್ಯಾತರ ಅಭಿವೃದ್ಧಿ ನಿಗಮಕ್ಕೆ 2019-20ನೇ ಸಾಲಿನಲ್ಲಿ 227.40 ಕೋಟಿ ರೂ.ನೀಡಲಾಗಿತ್ತು. 2020-21ನೇ ಸಾಲಿನಲ್ಲಿ 125.04 ಕೋಟಿ ರೂ.ಗಳಿಗೆ ಇಳಿಕೆ ಮಾಡಲಾಗಿದೆ.
ರಾಜ್ಯ ಅಲ್ಪಸಂಖ್ಯಾತರ ಆಯೋಗಕ್ಕೆ 2019-20ನೇ ಸಾಲಿನಲ್ಲಿ 1.88 ಕೋಟಿ ರೂ.ಅನುದಾನ ನೀಡಲಾಗಿತ್ತು. 2020-21ರಲ್ಲಿ ಅನುದಾನವನ್ನು ಕೇವಲ 1 ಕೋಟಿ ರೂ., ರಾಜ್ಯ ಉರ್ದು ಅಕಾಡಮಿಗೆ 2019-20ರಲ್ಲಿ 2.15 ಕೋಟಿ ರೂ. ನೀಡಲಾಗಿತ್ತು. 2020-21ರಲ್ಲಿ ಕೇವಲ 1 ಕೋಟಿರೂ.ಹಂಚಿಕೆ ಮಾಡಲಾಗಿದೆ. ಕೈ ಬಿಟ್ಟಿರುವ ಯೋಜನೆಗಳು?: ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡಲು ನೀಡುತ್ತಿದ್ದ ವಿದ್ಯಾರ್ಥಿವೇತನ, ಎಸೆಸೆಲ್ಸಿ-ಪಿಯುಸಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉತ್ತೇಜನ, ಬಿ.ಇಡಿ, ಡಿ.ಇಡಿ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉತ್ತೇಜನ, ನರ್ಸಿಂಗ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಉತ್ತೇಜನ, ಕೌಶಲ ಅಭಿವೃದ್ಧಿ, ವೃತ್ತಿ ಆಧಾರಿತ ತರಬೇತಿ, ಐಟಿಐ ತರಬೇತಿ, ಖಾಸಗಿ ವಸತಿ ನಿಲಯಗಳಿಗೆ ನೀಡುತ್ತಿದ್ದ ಅನುದಾನ, ಬಿದಾಯಿ(ಶಾದಿ ಭಾಗ್ಯ), ಶಾದಿ ಮಹಲ್‌ಗಳ ನಿರ್ಮಾಣ, ಐಐಎಂ, ಐಐಟಿಗೆ ಆಯ್ಕೆಯಾಗುವ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನ, ಮೆಡಿಕಲ್ ಹಾಗೂ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಸ್ಟಡಿ ಕಿಟ್.
ಉರ್ದು ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಯ ದೃಷ್ಟಿಯಿಂದ ಜಾರಿಗೆ ತಂದಿದ್ದ ಮುಖ್ಯಮಂತ್ರಿಗಳ 9 ಅಂಶಗಳ ಕಾರ್ಯಕ್ರಮ, ಸೇನೆಯಲ್ಲಿ ನೇಮಕಾತಿ ಪಡೆಯಲು ನೀಡುತ್ತಿದ್ದ ತರಬೇತಿ, ಪತ್ರಿಕೋದ್ಯಮ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ತರಬೇತಿ ಯೋಜನೆಗಳನ್ನು 2020-21ನೇ ಸಾಲಿನ ಬಜೆಟ್‌ನಲ್ಲಿ ಕೈ ಬಿಡಲಾಗಿದೆ.
ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ 2017-18ನೇ ಸಾಲಿನಲ್ಲಿ 175 ಕೋಟಿ ರೂ., 2018-19ನೇ ಸಾಲಿನಲ್ಲಿ 165 ಕೋಟಿ ರೂ., 2019-20ನೆ ಸಾಲಿನಲ್ಲಿ 90 ಕೋಟಿ ರೂ. ಒದಗಿಸಲಾಗಿತ್ತು. 2020-21ನೇ ಸಾಲಿನ ಬಜೆಟ್‌ನಲ್ಲಿ 200 ಕೋಟಿ ರೂ. ನೀಡುವುದಾಗಿ ಘೋಷಿಸಲಾಗಿದೆ. ಆದರೆ, ಬಜೆಟ್ ವಾಲ್ಯೂಮ್‌ನಲ್ಲಿ ಈ ಮೊತ್ತವನ್ನು 55 ಕೋಟಿ ರೂ.ಗಳೆಂದು ತೋರಿಸಲಾಗಿದೆ.
ಕ್ರೈಸ್ತರ ಅಭಿವೃದ್ಧಿ ಯೋಜನೆಯಡಿ ಚರ್ಚ್‌ಗಳ ದುರಸ್ತಿ ಹಾಗೂ ನವೀಕರಣ, ಸಮುದಾಯ ಭವನಗಳ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ, ಅನಾಥಾಲಯ, ವೃದ್ಧಾಶ್ರಮ, ವಿದ್ಯಾರ್ಥಿವೇತನ, ಕೌಶಲಾಭಿವೃದ್ಧಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲಾಗುತ್ತದೆ. ಜೊತೆಗೆ, ಕ್ರೈಸ್ತರಿಗೂ ಬಿದಾಯಿ ಯೋಜನೆ, ವಿದೇಶದಲ್ಲಿ ಉನ್ನತ ವ್ಯಾಸಂಗ ಮಾಡುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಹಾಗೂ ನರ್ಸಿಂಗ್ ತರಬೇತಿಯನ್ನು ನೀಡಲಾಗುತ್ತಿತ್ತು.
ರಾಜ್ಯದಲ್ಲಿ ಅಲ್ಪಸಂಖ್ಯಾತರ ಜನಸಂಖ್ಯೆ ಪ್ರಮಾಣ
2011ರ ಜನಗಣತಿಯ ಪ್ರಕಾರ ರಾಜ್ಯದಲ್ಲಿರುವ ಮತೀಯ ಅಲ್ಪಸಂಖ್ಯಾತರ ಪೈಕಿ ಮುಸ್ಲಿಮರು-78.94 ಲಕ್ಷ (ಶೇ.12.91), ಕ್ರೈಸ್ತರು-11.43 ಲಕ್ಷ (ಶೇ.1.87), ಜೈನರು- 4.40 ಲಕ್ಷ (ಶೇ.0.72), ಸಿಖ್ಖರು-28 ಸಾವಿರ(ಶೇ.0.05), ಬೌದ್ಧರು-95 ಸಾವಿರ (ಶೇ.0.72) ಹಾಗೂ ಪಾರ್ಸಿಗಳು-11 ಮಂದಿ.
ಅಲ್ಪಸಂಖ್ಯಾತರ ಕಲ್ಯಾಣಕ್ಕೆ ಅನುದಾನ ಹಂಚಿಕೆ
2011-12ರಲ್ಲಿ 391.57 ಕೋಟಿ ರೂ.
2012-13ರಲ್ಲಿ 444.81 ಕೋಟಿ ರೂ.
2013-14ರಲ್ಲಿ 769.39 ಕೋಟಿ ರೂ.
2014-15ರಲ್ಲಿ 911.67 ಕೋಟಿ ರೂ.
2015-16ರಲ್ಲಿ 998.39 ಕೋಟಿ ರೂ.
2016-17ರಲ್ಲಿ 1,527.37 ಕೋಟಿ ರೂ.
2017-18ರಲ್ಲಿ 2,221.20 ಕೋಟಿ ರೂ.
2018-19ರಲ್ಲಿ 2,231.34 ಕೋಟಿ ರೂ.
2019-20ರಲ್ಲಿ 2,020.41 ಕೋಟಿ ರೂ.
2020-21ರಲ್ಲಿ 1,276.32 ಕೋಟಿ ರೂ.