ಆಗ ಪೀತ ಪತ್ರಿಕೋದ್ಯಮ, ಈಗ ಜೀತ ಪತ್ರಿಕೋದ್ಯಮ...!
![ಆಗ ಪೀತ ಪತ್ರಿಕೋದ್ಯಮ, ಈಗ ಜೀತ ಪತ್ರಿಕೋದ್ಯಮ...! ಆಗ ಪೀತ ಪತ್ರಿಕೋದ್ಯಮ, ಈಗ ಜೀತ ಪತ್ರಿಕೋದ್ಯಮ...!](https://www.varthabharati.in/sites/default/files/images/articles/2020/03/14/236318-1584208412.png)
ಇಂದು ತುರ್ತುಸ್ಥಿತಿ ಕಾಲದ ಘಟನೆ.
ಕಾರವಾರದಲ್ಲಿ ಒಬ್ಬ ವಯೋವೃದ್ಧ ಸಂಪಾದಕರು ಸಣ್ಣದೊಂದು ಪತ್ರಿಕೆ ನಡೆಸುತ್ತಿದ್ದರು. ಆ ಹಿರಿ ಮನುಷ್ಯ ತಮ್ಮ ಪತ್ರಿಕೆಯಲ್ಲಿ ಸತತವಾಗಿ ತುರ್ತುಸ್ಥಿತಿಯನ್ನು ಟೀಕಿಸಿ ಬರೆಯುತ್ತಲೇ ಇದ್ದರು. ಪೊಲೀಸರು ಸುಮ್ಮನಿರಲು ಸಾಧ್ಯವೇ? ಒಬ್ಬ ಪೇದೆಯನ್ನು ಕಳಿಸಿ ಠಾಣೆಗೆ ಬರುವಂತೆ ಹೇಳಿ ಕಳಿಸಿದರು. ಆದರೆ ಆ ಮನುಷ್ಯ ‘‘ನನಗೆ ವಯಸ್ಸಾಗಿದೆ. ನೀವೇ ಕರೆದುಕೊಂಡು ಹೋದರೆ ಬರುತ್ತೇನೆ’’ ಎಂದರು! ಸರಿ, ಜೀಪು ಕಳಿಸಿ ಅವರನ್ನು ಕರೆಸಿಕೊಳ್ಳಲಾಯಿತು. ಎಲ್ಲೆಲ್ಲೂ ಪೊಲೀಸ್ ಅತಿರೇಕದ ಭಯಾನಕ ಕಥೆಗಳು ಗಾಳಿಯಲ್ಲಿ ತೇಲಾಡುತ್ತಿದ್ದ ಕಾಲವದು.
ಆ ಹಿರಿಯರು ಬಂದು ಠಾಣಾಧಿಕಾರಿ ಮುಂದೆ ಕುಳಿತರು. ಅಧಿಕಾರಿ ಕಠೋರವಾಗಿ ಮಾತನಾಡಿದ:
‘‘ನೀವು ನಿಮ್ಮ ಪತ್ರಿಕೆಯಲ್ಲಿ ಹೀಗೇ ಎಮರ್ಜೆನ್ಸಿ ವಿರುದ್ಧ ಬರೀತಾ ಇದ್ರೆ ನಾವು ಸುಮ್ಮನಿರೋಕ್ಕಾಗಲ್ಲ’’
‘‘ಏನು ಮಾಡ್ತೀರಿ?’’
‘‘ನಿಮ್ಮ ಮೇಲೆ ಆ್ಯಕ್ಷನ್ ತಗೋಬೇಕಾಗುತ್ತೆ’’
‘‘ತಗೋಳಿ ಆ್ಯಕ್ಷನ್ನು...’’
‘‘.....’’
ಇನ್‌ಸ್ಪೆಕ್ಟರ್ ಕಣ್ಣ ಮುಂದಿನ ಆಕೃತಿ ನಿರುಕಿಸಿದ. ಹಣ್ಣಾದ ದೇಹ. ಹರುಕು ಕೋಟು, ಕಚ್ಚೆ ಪಂಚೆ. ತಲೆ ಮೇಲೊಂದು ರುಮಾಲು. ಕೈಯಲ್ಲಿ ಕೋಲು. ಈ ಇಳಿವಯಸ್ಸಿನ ಧೀರನ ಮೇಲೆ ಏನು ’ಆ್ಯಕ್ಷನ್’ ತೆಗೆದುಕೊಳ್ಳಲು ಸಾಧ್ಯ?
‘‘ಮುಂದೆ ಹೀಗೆಲ್ಲ ಬರೀಬೇಡಿ’’
‘‘ನಾನು ಮುಂದೆಯೂ ಹೀಗೇ ಬರೀತೇನೆ’’!
‘‘....’’
ಇನ್‌ಸ್ಪೆಕ್ಟರ್‌ಗೆ ಏನು ಹೇಳಬೇಕೋ ತೋಚಲಿಲ್ಲ. ಊದಿದರೆ ಹಾರಿಹೋಗುವಂತಿದ್ದ ಮುದುಕ ಸವಾಲಾಗಿ ಕೂತಿದ್ದಾನೆ. ಆತನ ಮುಂದೆ ತಾನೇ ಅಸಹಾಯಕ! ಕಡೆಗೆ ಇನ್‌ಸ್ಪೆಕ್ಟರ್, ಬಿದ್ದರೂ ಮೀಸೆ ಮಣ್ಣಾಗಿಲ್ಲ ಎಂಬಂತೆ ’ಆಯ್ತು ಹೊರಡಿ ನೀವು’ ಎಂದ. ‘‘ನೀವು ಕರಕೊಂಡು ಬಂದಿದೀರಿ. ನೀವೇ ಕರಕೊಂಡೋಗಿ ಬಿಡಿ...!’’
ದೂಸರಾ ಮಾತಿಲ್ಲದೆ, ಮರ್ಯಾದೆಯಿಂದ ಅವರನ್ನು ಜೀಪಿನಲ್ಲಿ ವಾಪಸು ಬಿಟ್ಟು ಬರಲಾಯಿತು. ಇದು ಉತ್ತರ ಕನ್ನಡ ಜಿಲ್ಲೆಯ ನನ್ನ ಪತ್ರಕರ್ತ ಮಿತ್ರ ಹೇಳಿದ ಕಥೆ. ಅಂದು ಆ ಹಣ್ಣು ಮನುಷ್ಯ, ಇಡೀ ಪತ್ರಕರ್ತ ಸಂಕುಲದ ನಿರ್ಭೀತಿ ಮತ್ತು ಕರ್ತವ್ಯನಿಷ್ಠೆಯ ದ್ಯೋತಕವಾಗಿ ನಿಂತಿದ್ದ. ಇದು ಒಂದು ಕಥೆಯಾಯಿತು. ಎಮರ್ಜೆನ್ಸಿಯಲ್ಲಿ ಹೀಗೆ ನಿಜಕ್ಕೂ ಹಲವಾರು ಗಂಡಾಂತರಗಳನ್ನು ಮೈಮೇಲೆ ಎಳೆದುಕೊಂಡು ಹೋರಾಡಿದ ಎಷ್ಟೋ ಸಣ್ಣ ಪತ್ರಿಕೆಗಳ/ ಅನಾಮಿಕ ಪತ್ರಕರ್ತರ ಕಥೆ ಕೇಳಿದ್ದೇವೆ. ಅದೂ ಹೋಗಲಿ. ರಾಮನಾಥ ಗೋಯೆಂಕಾರಂತಹ ದಿಗ್ಗಜರು ಸಹ ತಮ್ಮ ‘ಇಂಡಿಯನ್ ಎಕ್ಸ್‌ಪ್ರೆಸ್’ ಪತ್ರಿಕೆಯನ್ನೇ ಕಿತ್ತುಕೊಳ್ಳಲು ಬಂದರೂ ಜಗ್ಗದೆ ಸರ್ವಾಧಿಕಾರಿ ಆಡಳಿತದ ವಿರುದ್ಧ ಸೆಣೆಸಿದ ವೀರೋಚಿತ ಪರಂಪರೆಯೂ ನಮಗಿದೆ.
ನಾವು ಪತ್ರಕರ್ತರು ಅಂದುಕೊಂಡಾಗಲೆಲ್ಲ ನಮ್ಮ ಮನದಲ್ಲಿ ಹೆಮ್ಮೆ ಉಕ್ಕಿಸುವುದು ಇಂತಹ ಹೋರಾಟ, ಧ್ಯೇಯನಿಷ್ಠೆ, ಸ್ವತಂತ್ರ ಮನೋವೃತ್ತಿಯ ನಿದರ್ಶನಗಳೇ. ಪತ್ರಿಕೆ ಎಂದರೆ ಶಾಶ್ವತ ವಿರೋಧಪಕ್ಷ ಅನ್ನುವುದು ಆಗ ನಮ್ಮ ನರನಾಡಿಗಳಲ್ಲಿ ಹರಿಯುತ್ತಿದ್ದ ತಿಳಿವಳಿಕೆ. ಹಾಗೆಂದು ಆ ದಿನಗಳಲ್ಲಿ ಭ್ರಷ್ಟ ಪತ್ರಕರ್ತರಿರಲಿಲ್ಲವೇ? ಸ್ವಂತದ ಲಾಭಕ್ಕಾಗಿ, ಎಂಜಲು ಕಾಸಿಗಾಗಿ ಮಾರಿಕೊಂಡವರು ಇರಲಿಲ್ಲವೇ? ಅಧಿಕಾರ ದಲ್ಲಾಳಿಗಳಾಗಿ ಮಾರ್ಪಟ್ಟ ವರದಿಗಾರರು ಇರಲಿಲ್ಲವೇ? ಬ್ಲಾಕ್‌ಮೇಲ್‌ನಿರತ ಪೀತ ಪತ್ರಕರ್ತರಿರಲಿಲ್ಲವೇ? ಖಂಡಿತ ಇದ್ದರು. ಆದರೆ ಒಟ್ಟು ಪತ್ರಿಕಾ ಲೋಕ ಅವರನ್ನು ಮರ್ಯಾದಸ್ಥರೆಂದು ಮನ್ನಿಸುತ್ತಿರಲಿಲ್ಲ. 90ರ ದಶಕದವರೆಗೆ ಪರಿಸ್ಥಿತಿ ಹೆಚ್ಚೂಕಮ್ಮಿ ಹೀಗೇ ಇತ್ತು. ನಿಜ, ಆರಂಭದಿಂದಲೂ ಮಾಧ್ಯಮಗಳು ಮೇಲು ಜಾತಿ/ ಮೇಲು ವರ್ಗದ ಹಿತಾಸಕ್ತಿಗಳ ಕಾವಲುಗಾರರಾಗಿದ್ದವು. ಬಹುತೇಕ ಮುಖ್ಯವಾಹಿನಿ ಪತ್ರಿಕೆಗಳಿಗೆ ಸಾಮಾಜಿಕ ನ್ಯಾಯ ಎಂದರೇನೆಂಬ ಕಲ್ಪನೆಯೇ ಇರಲಿಲ್ಲ. ಹಾಗೆ ನೋಡಿದರೆ, ಆ ಪರಿಸ್ಥಿತಿಯಲ್ಲಿ ಇಂದಿಗೂ ಮೂಲಭೂತ ಬದಲಾವಣೆಯಾಗಿಲ್ಲ. ಅಷ್ಟಾದರೂ ಒಟ್ಟಾರೆಯಾಗಿ ಪತ್ರಿಕಾ ವೃತ್ತಿ ಮರ್ಯಾದಸ್ಥ ಕಸುಬೇ ಆಗಿತ್ತು!
ಆದರೆ 90ರ ದಶಕದಿಂದೀಚೆಗೆ ಮಾಧ್ಯಮ ಕ್ಷೇತ್ರದಲ್ಲೊಂದು ಭೂಕಂಪ ಸಂಭವಿಸಿತು.
ಜಾಗತೀಕರಣದ ಬಾಲ ಹಿಡಿದು ದೃಶ್ಯ ಮಾಧ್ಯಮಗಳು, ಅದರಲ್ಲೂ ಸುದ್ದಿ ವಾಹಿನಿಗಳು ಡ್ರಾಯಿಂಗ್ ರೂಮುಗಳಲ್ಲಿ ಪ್ರತ್ಯಕ್ಷವಾದವು. ಕೊಲ್ಲಿ ಯುದ್ಧದ ದೃಶ್ಯಾವಳಿಯನ್ನು ಸಿಎನ್‌ಎನ್ ಉಪಗ್ರಹ ವಾಹಿನಿ ಒಳಮನೆಗೆ ತರುವ ಮೂಲಕ ಜಾಗತೀಕರಣದ ಯುದ್ಧ ಆರಂಭವಾಗಿತ್ತು.
ಜಾಗತೀಕರಣ ಎಂದರೇನು?
ಒಂದೇ ಮಾತಿನಲ್ಲಿ ಹೇಳುವುದಾದರೆ ವ್ಯಾಪಾರ. ಇನ್ನೂ ನಿಖರವಾಗಿ ಹೇಳುವುದಾದರೆ, ವ್ಯಾಪಾರ ಎಂಬ ಹೆಸರಿನ ಯುದ್ಧ. ಈ ವ್ಯಾಪಾರಕ್ಕೆ ಇಡೀ ಪ್ರಪಂಚವೇ ಮಾರುಕಟ್ಟೆ ಮತ್ತು ಪ್ರತಿಯೊಂದು ಬಾಬತ್ತೂ ಸರಕು ಮಾತ್ರ. ಸುದ್ದಿಯೂ ಸರಕೇ. ಭಾವನೆಗಳೂ ಸರಕೇ. ಕಣ್ಣೀರು, ಹಸಿವು, ಅವಮಾನ, ಸಂಸಾರದ ಗುಟ್ಟು-ಎಲ್ಲವೂ ಸರಕುಗಳೇ. ಈ ‘ಸರಕು ಸಾಗಣೆ’ಯ ಕಸುಬಿನಲ್ಲಿ ಹುಮ್ಮಸ್ಸಿನಿಂದ ಮುಂದಾದ ಸುದ್ದಿ ಚಾನಲ್‌ಗಳು ತಮ್ಮ ಅಬ್ಬರದಲ್ಲಿ ಪತ್ರಿಕೋದ್ಯಮದ ವ್ಯಾಖ್ಯಾನವನ್ನೇ ಬದಲಿಸಿಬಿಟ್ಟವು. ಯಾವುದು ಸುದ್ದಿ ಎಂಬ ತಿಳಿವಳಿಕೆಯನ್ನೇ ಬುಡಮೇಲು ಮಾಡಿದವು. ಚಾನೆಲ್‌ಗಳು ಎಷ್ಟೆಂದರೂ ತಮ್ಮ ಸರಕುಗಳನ್ನು ಬಿಕರಿ ಮಾಡುವ ‘ಸುದ್ದಿ ಮಾಲ್’ಗಳು ಮಾತ್ರ.... ಯಾರೋ ಒಬ್ಬ ರಾಜಕೀಯ ಮುಖಂಡನ ‘ಸೆಕ್ಸ್ ಸಿಡಿ’ಯನ್ನು ಕನ್ನಡದ ಎಲ್ಲ ಚಾನೆಲ್‌ಗಳು ಇಡೀ ದಿನ ಪ್ರಸಾರ ಮಾಡಿದ್ದನ್ನು ನಾವು ನೋಡಿಲ್ಲವೇ? ಒಟ್ಟು ಈ ಪಲ್ಲಟದ ಪರಿಣಾಮವಾಗಿ ಕಂಗೆಟ್ಟಿದ್ದು ಮುದ್ರಣ ಮಾಧ್ಯಮ. ಪತ್ರಿಕೆಗಳು ಮೊದಲ ಬಾರಿ ತಮ್ಮ ಓದುಗ ವಲಯದ ನಿರೀಕ್ಷೆಯೇನು ಎಂದು ತಿಳಿಯದೆ ಗೊಂದಲಕ್ಕೀಡಾದವು. ಗೌರವಾನ್ವಿತ ದಿನಪತ್ರಿಕೆಗಳು ಕೂಡ ಚಡಪಡಿಸುತ್ತ, ದಿನೇ ದಿನೇ ರೋಚಕಗೊಳ್ಳುತ್ತ ಟ್ಯಾಬ್ಲಾಯ್ಡೀಕರಣಗೊಂಡವು.... ಇದು ಸ್ಥೂಲವಾಗಿ ಇಂದು ನಮ್ಮ ಮಾಧ್ಯಮಗಳ ಪಾಡು.
ಇನ್ನೊಂದು ಕಡೆ ಈ ಮಹಾ ಗೊಂದಲದ, ಅಲ್ಲೋಲ ಕಲ್ಲೋಲದ ಒಡಲಲ್ಲೇ ಸಮಾಜದ ಹೆಣಿಗೆ ಕೂಡ ಸುಪ್ತವಾಗಿ ಬದಲಾಗುತ್ತ ಹೋಯಿತು. ಅದುವರೆಗೆ, ಸರಕಾರವೆಂಬುದು ದುಡಿವ ಕೈಗಳಿಗೆ ಉದ್ಯೋಗ, ಹಸಿದ ಹೊಟ್ಟೆಗೆ ಅನ್ನ, ಘನತೆಯ ಬದುಕುಗಳನ್ನು ಒದಗಿಸಬೇಕು; ಸಮಾಜದಲ್ಲಿ ಎಲ್ಲ ಬಗೆಯ ಮೇಲು ಕೀಳು ತಾರತಮ್ಯವನ್ನು ಮೂಲೋತ್ಪಾಟನೆ ಮಾಡಲು ಮುಂದಾಗಬೇಕು ಎಂಬಿತ್ಯಾದಿ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೆವು. ಅದು ನಮ್ಮ ಸಂವಿಧಾನ ಹಾಕಿ ಕೊಟ್ಟ ಚೌಕಟ್ಟು. ಈಗ ಅದೂ ಬದಲಾಯಿತು.
ಇಂದು ಭಾರತದ ದನಿಯಾಗಿ ಹೊಸದೊಂದು ತಾಳ್ಮೆಗೇಡಿ ತಲೆಮಾರು ಅವತರಿಸಿದೆ. ಯಾವುದಕ್ಕೂ ಕಾಯಲು, ಯಾವುದನ್ನೂ ಹಂಚಿಕೊಳ್ಳಲು ತಯಾರಿರದ ಈ ಸಮೂಹ, ಸಾಮಾಜಿಕ ನ್ಯಾಯ, ಮೀಸಲಾತಿ, ಹಂಚುಣ್ಣುವ ತತ್ವ- ಇವೆಲ್ಲದರ ವಿರುದ್ಧ ಅಸಹನೆಯಿಂದ ಕುದಿಯುತ್ತಿದೆ. ‘‘ಮಾರುಕಟ್ಟೆ ಸೆಳೆತಗಳೇ ಒಬ್ಬೊಬ್ಬರಿಗೂ ಸಿರಿವಂತಿಕೆಯನ್ನು ತಂದುಕೊಡಲಿವೆ; ಆ ಮಾರುಕಟ್ಟೆಯಿಂದಲೇ ಬಲಿಷ್ಠವಾದ ಮೇಲ್ಜಾತಿ ಹಿಂದೂ ಸಾಮ್ರಾಜ್ಯ ಸ್ಥಾಪನೆಯಾಗಲಿದೆ; ಮತ್ತು ನಮ್ಮ ಪ್ರಧಾನಿ ನರೇಂದ್ರ ಮೋದಿಯವರೇ ಇದರ ಚಾಲಕ ಶಕ್ತಿ’’ ಎಂದು ನಂಬಿಕೊಂಡಿರುವ ಈ ಸಮೂಹಕ್ಕೆ ಪ್ರಜಾಪ್ರಭುತ್ವವೇ ಕಾಲ್ತೊಡಕಾಗಿ ಕಾಣುತ್ತಿದೆ.
ಇಂದು ಭಾರತದ ಅರ್ಥವ್ಯವಸ್ಥೆ ಕುಸಿದು ಪಾತಾಳ ಸೇರಿದೆ. ನೋಟು ರದ್ದು, ದಿಕ್ಕೇಡಿ ಜಿಎಸ್‌ಟಿಗಳ ಮೂಲಕ ಹಣಕಾಸು ಸ್ಥಿತಿಯನ್ನು ಹಳ್ಳ ಹಿಡಿಸಿದ ನಮ್ಮನ್ನು ಆಳುವವರಿಗೆ ಇದನ್ನು ರಿಪೇರಿ ಮಾಡುವುದು ಹೇಗೆಂಬ ಕಲ್ಪನೆಯೂ ಇದ್ದಂತಿಲ್ಲ. ನಿರುದ್ಯೋಗ ಹಿಂದೆಂದೂ ಇಲ್ಲದ ಮಟ್ಟಿಗೆ ಪೆಡಂಭೂತವಾಗಿ ಬೆಳೆದಿದೆ; ಗೋರಕ್ಷಣೆ ಹೆಸರಿನ ಭಯೋತ್ಪಾದನೆ ದಲಿತರು, ಮುಸ್ಲಿಮರ ರಕ್ತ ಚೆಲ್ಲಾಡುತ್ತಿದ್ದರೂ ಜನ ಆರ್ಟಿಕಲ್ 370, ಅಯೋಧ್ಯ ತೀರ್ಪುಗಳಿಗೆ ರೋಮಾಂಚನಗೊಂಡು ಮೈ ಮರೆತಿದ್ದಾರೆ. ಕೇಳಬೇಕಾದ ಯಾವ ಪ್ರಶ್ನೆಯನ್ನೂ ಯಾರೂ ಕೇಳುತ್ತಿಲ್ಲ. ಒಂದು ವೇಳೆ ಕೇಳಿದರೆ ಪ್ರಶ್ನೆ ಎತ್ತಿದವನಿಗೆ ಆ ಕೂಡಲೇ ‘ದೇಶದ್ರೋಹಿ’ ಎಂಬ ಹಣೆಪಟ್ಟಿ ಬೀಳುತ್ತದೆ. ಒಟ್ಟಾರೆ ಅವ್ಯಕ್ತ ಭೀತಿ ಇಡೀ ಸಮಾಜವನ್ನು ಆವರಿಸುತ್ತಿದೆ. ಅಷ್ಟಾದರೂ ದೇಶ ಆಕ್ರಮಣಶೀಲ ಭಜನೆಯಲ್ಲಿ ಮುಳುಗಿಹೋಗಿದೆ; ನಮಗೊಬ್ಬ ಬಲಿಷ್ಠ ಸರ್ವಾಧಿಕಾರಿ ಬೇಕೆಂದು ಜಪ ಮಾಡುತ್ತಿದೆ...!
ಈ ಹಿಂಸಾಲೋಲುಪ ಪರಿಸ್ಥಿತಿಯಲ್ಲಿ ಕಣ್ಗಾವಲಿನ ಕರ್ತವ್ಯ ನಿರ್ವಹಿಸುವುದು ಮಾಧ್ಯಮಗಳ ಹೊಣೆಯಾಗಿತ್ತು. ಮಾಧ್ಯಮಗಳು ಮೈಯೆಲ್ಲ ಕಣ್ಣಾಗಿ, ಮಲಗಿದ್ದ ಜನರನ್ನು ಎಚ್ಚರಿಸಬೇಕಿತ್ತು. ‘‘ಪತ್ರಿಕೆಯೆಂದರೆ ಶಾಶ್ವತ ವಿರೋಧಪಕ್ಷ’’. ನಮಗೆಲ್ಲ ಕಲಿಸಿದ್ದು ಅದನ್ನೇ ಅಲ್ಲವೇ? ಆದರೆ ನಮ್ಮ ಮಾಧ್ಯಮಗಳು, ವಿಶೇಷವಾಗಿ ಸುದ್ದಿ ವಾಹಿನಿಗಳು- ಇಂದು ಇದೇ ಭಜನಾ ಮಂಡಳಿಯ ಸದಸ್ಯತ್ವ ಪಡೆದು ಕೂತಿವೆ! ಜನಹಿತದ ಯಾವ ಮಾತೂ ಆಡದೆ ಹಾಸ್ಯಾಸ್ಪದ ನಕಲಿಶಾಮರಾಗಿ ಕುಣಿಯುತ್ತಿವೆ. ದೇಶಾದ್ಯಂತ ಇಂದು ಈ ಭಜನಾ ಮಂಡಳಿಯಿಂದ ಹೊರಗಿರುವ ಪತ್ರಿಕೆಗಳು ಮತ್ತು ವಾಹಿನಿಗಳು ಬೆರಳೆಣಿಕೆಯಷ್ಟು ಮಾತ್ರ. ನಿಜ. ಯಾವ ಸರಕಾರವಾದರೂ ಮಾಧ್ಯಮಗಳನ್ನು ತನ್ನ ಅಂಕೆಯಲ್ಲಿರಿಸಿಕೊಳ್ಳಲು ಸದಾ ಹವಣಿಸುವುದು ಸಹಜ. ಪ್ರಸಕ್ತ ಸರಕಾರವಂತೂ ಮಾಧ್ಯಮ ನಿಯಂತ್ರಣವನ್ನು ಕುಶಲ ಕಲೆಯ ಮಟ್ಟಕ್ಕೊಯ್ದಿದೆ. ಆದರೆ ಇದಕ್ಕೆ ಮುಂಚೆ ಯಾವಾಗಲೂ ಮಾಧ್ಯಮಗಳೇ ಸ್ವಯಂಸ್ಫೂರ್ತಿಯಿಂದ ಹೀಗೆ ಸಾಷ್ಟಾಂಗ ಬಿದ್ದು ಮುಜುರೆ ಒಪ್ಪಿಸಿರಲಿಲ್ಲ. ಆದರೀಗ ಮಾಧ್ಯಮಗಳು ಇಂದಿನ ಅರಸೊತ್ತಿಗೆಯ ಹಿಂದೂತ್ವವಾದಿ, ಬಂಡವಾಳವಾದಿ ತಾತ್ವಿಕತೆಗೆ ಮನಸಾ ಜೈಕಾರ ಹಾಕುತ್ತ ಜೀತಕ್ಕಿಳಿದಿವೆ!... ವ್ಯಂಗ್ಯ ಚಿತ್ರಕಾರ ದಿನೇಶ್ ಕುಕ್ಕುಜಡ್ಕ ಈಚೆಗೆ ‘ನ್ಯಾಯಾಂಗ, ಕಾರ್ಯಾಂಗ, ಶಾಸಕಾಂಗ ಎಲ್ಲ ಸಾಷ್ಟಾಂಗ’ ಎಂದು ಗೇಲಿ ಮಾಡಿದ್ದರು. ಆ ಪಟ್ಟಿಗೆ ಈಗ ಪತ್ರಿಕಾ ರಂಗವನ್ನೂ ಸೇರಿಸಿಕೊಳ್ಳಬಹುದು.
ಮುಂಚೆ ಪೀತ ಪತ್ರಿಕೋದ್ಯಮವೇ ದೊಡ್ಡ ಬೇನೆ ಎಂದು ಪರಿಗಣಿಸಲಾಗುತ್ತಿತ್ತು. ಈಗ ಅದಕ್ಕಿಂತಲೂ ಸಹಸ್ರ ಪಟ್ಟು ಅಪಾಯಕಾರಿಯಾದ ಜೀತ ಪತ್ರಿಕೋದ್ಯಮ ನಮ್ಮ ಕಣ್ಣ ಮುಂದಿದೆ...
ಕೃಪೆ: ಮಾಧ್ಯಮ ಟ್ವೆಂಟಿ 20- ಪತ್ರಕರ್ತರ ಸಹಕಾರ ಸಂಘದ ಸ್ಮರಣ ಸಂಚಿಕೆ.