ಹೇಲು ತುಳಿದು ಮನೆಯೊಳಗೆ ಬಂದಂತೆ....
ಗಂಡ, ಹೆಂಡತಿ, ಮಕ್ಕಳು ಅನ್ಯೋನ್ಯವಾಗಿ ಬದುಕುತ್ತಿದ್ದರು. ಇದ್ದಕ್ಕಿದ್ದಂತೆಯೇ ಮನೆಯೊಳಗೆ ಏರುಪೇರು ಶುರುವಾಯಿತು. ಗಂಡ-ಹೆಂಡಿರಲ್ಲಿ ಜಗಳ. ಮಕ್ಕಳಿಗೆ ಗಾಬರಿ. ವಿಷಯವೇನೆಂದರೆ, ಈವರೆಗೆ ಗಂಡ-ಹೆಂಡತಿ ಪರಸ್ಪರ ಸಲಹೆ, ಅಭಿಪ್ರಾಯಗಳನ್ನು ಹಂಚಿಕೊಂಡು ಬದುಕನ್ನು ಮುನ್ನಡೆಸುತ್ತಿದ್ದರು. ಇತ್ತೀಚೆಗೆ ಗಂಡನಿಗೆ ಹೊರಗಿನಿಂದ ಕೆಲವರು ಸಲಹೆ ನೀಡತೊಡಗಿದ್ದರು. ‘‘ಅಯ್ಯೋ ಆ ಆಸ್ಪತ್ರೆಗೆ ಹೋಗಿರೋದಾ....ನಿನಗೆ ಹುಚ್ಚು. ಪತ್ನಿಯ ಮಾತುಗಳನ್ನು ಜಾಸ್ತಿ ಕೇಳಿದರೆ ಕೆಟ್ಟು ಹೋಗ್ತೀಯ ಅಷ್ಟೇ...’’
‘‘ಆ ಅಂಗಡಿಯಿಂದ ಯಾಕೆ ಮಾರಾಯ ಕೊಂಡುಕೊಳ್ಳುವುದು...ಎಲ್ಲ ಹೆಂಡತಿಯ ಕೈಗೆ ಒಪ್ಪಿಸಿದರೆ ನಿನಗೆ ಕಷ್ಟ ಇದೆ....’’
‘‘ಮಕ್ಕಳನ್ನು ಹಾಗೆ ಬೆಳೆಸುವುದಾ....’’
ಇಂತಹ ಬೇಕಾಬಿಟ್ಟಿ ಸಲಹೆಗಳನ್ನು ಕೇಳುತ್ತಾ ಗಂಡನಿಗೆ, ತಾನು ಪತ್ನಿಯ ಮಾತುಗಳನ್ನು ಕೇಳಿ ನಿರ್ಧಾರ ತೆಗೆದುಕೊಳ್ಳುತ್ತಿದ್ದೇನೆಯೋ...ಅಥವಾ ಪತ್ನಿಗೆ ಏನೂ ತಿಳುವಳಿಕೆಯಲ್ಲವೋ ಎಂಬ ಅನುಮಾನ ಶುರುಹಚ್ಚತೊಡಗಿತು. ತನಗೆ ತಾನೆ ಕೀಳರಿಮೆಯಿಂದ ನರಳ ತೊಡಗಿದ. ನಿಧಾನಕ್ಕೆ ಮನೆಯಲ್ಲಿ ಪತ್ನಿಯ ತಪ್ಪುಗಳನ್ನು ಹುಡುಕಲು ಶುರು ಹಚ್ಚಿದ.
ಪರರ ಮಾತುಗಳನ್ನು ಕೇಳಿ ಮನೆಯಲ್ಲಿ ರಂಪ ಮಾಡುವುದೆಂದರೆ, ಹೊರಗೆ ಹೇಲು ತುಳಿದು ಮನೆಯೊಳಗೆ ಪ್ರವೇಶಿಸಿದ ಹಾಗೆ. ಮನೆಯೆಲ್ಲ ದುರ್ವಾಸನೆ ಹರಡತೊಡಗುತ್ತದೆ. ಕೆಲವೊಮ್ಮೆ ತಿಳಿಯದೆಯೇ ನಾವು ಮಲಿನ ವಸ್ತುವನ್ನು ತುಳಿಯುವುದಿದೆ. ಆದರೆ ಮನೆಯೊಳಗೆ ಕಾಲಿಡುವ ಮೊದಲು ಕಾಲನ್ನು ಶುಚಿಗೊಳಿಸಿ ಒಳಪ್ರವೇಶಿಸಬೇಕು. ಪರರು ಅನೇಕ ಸಂದರ್ಭಗಳಲ್ಲಿ ಮಾತುಗಳನ್ನಾಡುವುದೇ ಮನೆಗಳನ್ನು ಮುರಿಯುವುದಕ್ಕೆ. ಅದನ್ನು ವಿಮರ್ಶೆಗೆ ಒಡ್ಡಿ, ತಲೆಯಿಂದ ಅಳಿಸಿ, ಒಳಿತುಯಾವುದು, ಕೆಡುಕು ಯಾವುದು ಎನ್ನುವುದನ್ನು ಸ್ವಂತಿಕೆಯಿಂದ ನಿರ್ಧರಿಸಿದಾಗ ಸಮಸ್ಯೆಗಳು ಹುಟ್ಟುವುದಿಲ್ಲ. ಮನೆಯ ಹೊಣೆಗಾರಿಕೆ ಗಂಡ-ಹೆಂಡತಿ ಇಬ್ಬರದ್ದೂ ಕೂಡ. ಪತ್ನಿಯ ಕುರಿತಂತೆ ಪತಿ, ಪತಿಯ ಕುರಿತಂತೆ ಪತ್ನಿ ನಂಬಿಕೆ ಕಳೆದುಕೊಂಡು ಪರರ ಮಾತುಗಳ ಮೇಲೆ ನಂಬಿಕೆ ಇಟ್ಟು ಮನೆಯನ್ನು ನರಕ ಮಾಡುವುದೆಂದರೆ ಹೇಲು ತುಳಿದು ಮನೆಯೊಳಗೆ ಪ್ರವೇಶಿಸಿ ಅದರ ದುರ್ವಾಸನೆ ಮನೆಯೊಳಗೆ ತಂದಂತೆ. ತನ್ನ ಮನೆ ಮಕ್ಕಳ ಬಗ್ಗೆ ತನ್ನ ಪತಿ, ಅಥವಾ ತನ್ನ ಪತ್ನಿಗಿಂತ ಹೆಚ್ಚು ಕಾಳಜಿಯನ್ನು ಹೊರಗಿನವರು ತೋರಿಸಲಾರರು ಎನ್ನುವ ನಂಬಿಕೆ ಬಂದಾಗ, ಮನೆ ಸುಖ ಸಾಗರವಾಗುತ್ತದೆ.