ಕಾಡಿನಲ್ಲಿ ಕಲ್ಲು ಬಾಳೆ ಬೆಳೆಯುವುದೆಂದರೆ ಜೀವ ಜಗತ್ತನ್ನೇ ಸಾಕಿದಂತೆ...
ಲಲಿತ ಪ್ರಬಂಧ ಎಂದರೆ ಒಂದು ವಿಷಯವನ್ನು ಅದರೆಲ್ಲಾ ವಿವರಗಳೊಂದಿಗೆ ಲಾಲಿತ್ಯ ಪೂರ್ಣವಾಗಿ ಮಂಡಿಸುವ ಒಂದು ಅನನ್ಯ ಸಾಹಿತ್ಯಿಕ ವಿಧಾನ. ಕಥನಾತ್ಮಕವಾಗಿರುವ ಈ ಪ್ರಬಂಧಗಳಿಗೆ ವೈಯಕ್ತಿಕ ವಿವರಗಳೂ ಸೇರಿದ್ದರೆ, ವೈನೋದಿಕತೆಯೂ ಜೊತೆಗಿದ್ದರೆ ಅದರ ಓದಿನ ಸುಖವೇ ಬೇರೆ. ವ್ಯಕ್ತಿಯ ವೈಯಕ್ತಿಕ ಭಾವವಾದ ಪ್ರೀತಿ, ವಿಷಾದ, ನಿರಾಶೆ, ವಿಷಣ್ಣತೆ ಮತ್ತು ಆರ್ದ್ರತೆ ಸೇರಿರುವ ನೂರಾರು ಪ್ರಬಂಧಗಳು ಕನ್ನಡದಲ್ಲಿ ಲಭ್ಯ ಇವೆ. ಆದರೆ ಬಹುಪಾಲು ಪ್ರಬಂಧಗಳು ಪುರುಷ ಪುಂಗವರು ಬರೆದದ್ದು. ಹಾಗೆಂದು ಹೆಣ್ಣು ಮಕ್ಕಳು ಪ್ರಬಂಧವನ್ನೇ ಬರೆಯುವುದಿಲ್ಲ ಎಂದಲ್ಲ. ಸ್ವತಃ ಲಲಿತೆಯರಾದ ಮಹಿಳೆಯರು ಬರೆಯುವ ಪ್ರಬಂಧಗಳು ವಿಷಯ ಹಾಗೂ ಪ್ರಾಮಾಣಿಕ ಅಭಿವ್ಯಕ್ತಿಯಿಂದಾಗಿ ಗಮನ ಸೆಳೆಯುವಂತಹವು. ಹಾಗೆ ಪ್ರಬಂಧಗಳನ್ನು ಬರೆದ ಮಹಿಳೆಯರ ಪಟ್ಟಿಯೂ ದೊಡ್ಡದೇ ಇದೆ. ಸಾಂಪ್ರದಾಯಿಕ ಕುಟುಂಬದ ಹಿನ್ನೆಲೆಯ ಮಹಿಳೆ ಬರೆದ ‘ಕಜ್ಜಾಯ’ ದಂತಹುದೇ ಸವಿ ಮಧ್ಯಮ ವರ್ಗದ, ಮೇಲ್ವರ್ಗದ ಮತ್ತು ಸಾಮಾನ್ಯ ಜನ ವರ್ಗದ ಹೆಣ್ಣುಮಕ್ಕಳು ತಮ್ಮ ಅನನ್ಯ ಲೋಕ ಗ್ರಹಿಕೆಯನ್ನು ಪ್ರಬಂಧಗಳನ್ನಾಗಿಸಿದ್ದಾರೆ. ಆದರೆ ನೆಲ ಮೂಲದ ಮಹಿಳೆಯ ಪ್ರಕೃತಿ ಪ್ರಿಯತೆಯ ಹೆಣ್ತನ, ಸಾಮುದಾಯಿಕ ಬದುಕನ್ನು ಗೌರವಿಸುವ ಕೃಷಿ ಪ್ರಧಾನ್ಯತೆಯ ಮಥನ ಪ್ರಬಂಧವಾಗಿ ಸಿಕ್ಕುವುದು ದುರ್ಲಭ. ಅಂತಹ ಅಲಭ್ಯವನ್ನೂ ಲಭ್ಯವಾಗಿಸಿದವರು ಕಾಂತಬೈಲಿನ ಸಹನಾ. ಮೊದಲೇ ಹೇಳಿದಂತೆ ಕೃಷಿ ಬದುಕಿನ, ಪ್ರಕೃತಿ ಪ್ರಿಯ ಹೆಣ್ಣುಮಗಳಾದ ಶ್ರೀಮತಿ ಸಹನಾ ಕಾಂತಬೈಲು ಬರಹದಲ್ಲಿ ನಿರ್ಭಿಡೆಯ ವಾಚಾಳಿ. ಅವರು ಸಹಜವಾಗಿ ಹರಟುತ್ತಲೇ ವಿಷಯವೊಂದನ್ನು ಪ್ರಸ್ತುತ ಪಡಿಸಬಲ್ಲರು. ಲವಲವಿಕೆಯ, ಸಲೀಸು ಮಾತಿನಂತೆ ನಿರರ್ಗಳ ಹರಿಯುವ ಈ ಅಂತಃಕರಣದ ಜಲಧಿಯ ನಿನಾದ ಇವರ ಪ್ರಬಂಧಗಳಲ್ಲಿ ಕಾಣುವುದಷ್ಟೇ ಅಲ್ಲ, ಕೇಳಿಸುತ್ತದೆ.
ಆನೆ ಸಾಕಲು ಹೊರಟವಳು ಎಂಬ ಅವರ ಪ್ರಬಂಧಗಳ ಸಂಕಲನದಲ್ಲಿ ಇಪ್ಪತ್ತಾರು ಲೇಖನಗಳಿವೆ. ಉದಯವಾಣಿ ಪತ್ರಿಕೆಯಲ್ಲಿ ಅಂಕಣ ಬರಹಗಳಾಗಿ ಪ್ರಕಟವಾದ ಈ ಪ್ರಬಂಧಗಳಲ್ಲಿ ಕಾಡಿದೆ, ಕಾಡ ನಡುವೆ ಮನೆ ಮಾಡಿಕೊಂಡು ಅರಳಿದ ಬದುಕಿನ ವಿವರಗಳಿವೆ, ಆಧುನಿಕ ಕಾಲಕ್ಕೆ ತಕ್ಕ ಲ್ಯಾಪ್‌ಟಾಪ್ ಮೂಲಕ ಬರೆಯಲು ಹೊರಟ ಉಪಕ್ರಮ ಇದೆ. ಆದರೆ ಆ ಆಧುನಿಕತೆಯಲ್ಲಿಯೂ ಕಳೆದ ದಶಕದವರೆಗೆ ಊರಿಗೆ ಕರೆಂಟ್ ಸಂಪರ್ಕವೇ ಇರದೇ ಬುಡ್ಡಿ ದೀಪದ ಬೆಳಕಿನಲ್ಲಿ ಬದುಕಿ ಅರಳಿದ ಜೀವನೋತ್ಸಾಹವೂ ಇದೆ ಕರೆಂಟ್ ಇಲ್ಲದಿದ್ದರೆ ಏನಂತೆ - ನೈಸರ್ಗಿಕ ಸಂಪನ್ಮೂಲ ಬಳಸಿ ಸ್ವತಃ ಕರೆಂಟ್ ಉತ್ಪಾದಿಸಿದ ಅತ್ಯುತ್ಸಾಹವೂ ಇದೆ. ಊರು, ಕಾಡು, ನಗರ, ಯೂನಿವರ್ಸಿಟಿ, ಕೃಷಿ, ಹೈನುಗಾರಿಕೆ, ಜೇನು ಸಾಕಾಣಿಕೆ, ಕಲ್ಲ ಬಾಳೆಯ ಮಹತ್ತು, ಸಾಂಸಾರಿಕ ಸಾಂಸ್ಕೃತಿಕ ಆಯಾಮಗಳ ಹಲವು ಹತ್ತು, ಭಾಷಿಕ ಮತ್ತು ಸಹಜ ಜೀವನವೇ ಪಾರಿಭಾಷಿಕವಾದ ಸಂಸ್ಕೃತಿ ಎಂಬ ಸಂಸತ್ತು.... ಇರುವ ಇಪ್ಪತ್ತಾರು ಬರಹಗಳದ್ದೇ ಒಂದು ಜಗತ್ತು!!
ಎಲ್ಲವನ್ನೂ ನೇರವಾಗಿ ಹೇಳುವ, ಸಹಜತೆಯೇ ವೈನೋದಿಕವೂ ಆಗಿರುವ ಲಾಲಿತ್ಯ ಸಹನಾ ಕಾಂತಬೈಲು ಅವರ ಬರಹಗಳಲ್ಲಿ ಇದೆ. ಎಂದೇ ವೈಜ್ಞಾನಿಕ ವಿಷಯಗಳನ್ನು ಸರಳವಾಗಿ ಸಂವಹನಗೊಳಿಸಿ ಜನ ಪ್ರಿಯರಾದ ಹಿರಿಯ ಬರಹಗಾರ ನಾಗೇಶ ಹೆಗಡೆಯವರೂ ಮುನ್ನುಡಿಯಲ್ಲಿ ಈ ಬೆರಗನ್ನಷ್ಟೇ ತೆರೆದು ತೋರಿದ್ದಾರೆ. ಅವರು ಮುನ್ನುಡಿಯಲ್ಲಿ ಹೇಳಿದಂತೆ ಯಾರೂ ಈ ಬರಹಗಳ ಮಹತ್ತನ್ನಷ್ಟೇ ಹೇಳಬಹುದು, ಓದಿನ ಸುಖವನ್ನು ಹಂಚಲಾಗದು. ಹೂವ ವರ್ಣಿಸ ಬಹುದು, ಆ ಹೂವ ಸುಗಂಧವನ್ನೂ ಪರಿಚಯಿಸಬಹುದೇ!? ಅದು ನಾವೇ ಆಘ್ರಾಣಿಸಿದಾಗ ಮಾತ್ರ ಸಿಗುವ ಸುಖ - ಈ ಪುಸ್ತಕದ ಓದಿನ ಸುಖದಂತೆ.