ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ ಏನಾಗ್ತಿತ್ತು!

Update: 2020-03-15 04:46 GMT

ಕಳೆದ ಎರಡು ತಿಂಗಳಿಂದ ಇಡೀ ಜಗತ್ತು ಕೊರೋನ ಜ್ವರದ ಬಗ್ಗೆ ಮಾತನಾಡುತ್ತಿದೆ. ಡಿಸೆಂಬರ್ 2019ರಲ್ಲಿ ಚೀನಾದ ಹುಬೈ, ವುಹಾನ್‌ನಲ್ಲಿ ಮೊದಲಿಗೆ ಪತ್ತೆಯಾದ ಕೊರೋನ ಇಂದು ಜಗತ್ತಿನ ಬಹುಭಾಗದಲ್ಲಿ ಹರಡಿ ತಲ್ಲಣವನ್ನುಂಟು ಮಾಡಿದೆ. 9ನೇ ಮಾರ್ಚ್ 2020ರ ವೇಳೆಗೆ 1,13,000 ಪ್ರಕರಣಗಳು ದಾಖಲಾಗಿದ್ದು, ಅದರಲ್ಲಿ 5,800 ಪ್ರಕರಣಗಳು ಗಂಭೀರವೆಂದು ಪರಿಗಣಿಸಲಾಗಿದೆ. ಚೀನಾದಲ್ಲಿ 3,900 ಜನರು ಹಾಗೂ ಇಟಲಿ, ದಕ್ಷಿಣ ಕೊರಿಯ, ಇರಾನ್ ಸೇರಿದಂತೆ ಇತರ ದೇಶಗಳಲ್ಲಿ 880 ಜನರು ಈ ರೋಗದಿಂದ ಸಾವನ್ನಪ್ಪಿದ್ದಾರೆ. ರೋಗ ಕಾಣಿಸಿಕೊಂಡ ಕೇವಲ ಮೂರು ತಿಂಗಳ ಅವಧಿಯಲ್ಲಿ ಪ್ರಪಂಚದಾದ್ಯಂತ ಅತೀ ಹೆಚ್ಚು ಜನರನ್ನು ಬಲಿ ಪಡೆದ ರೋಗ ಇದಾಗಿದ್ದು ಜನರಲ್ಲಿ ಆತಂಕ ಸೃಷ್ಟಿಸಿದೆ. ಇಂತಹ ರೋಗಗಳು ಈ ಜಗತ್ತಿಗೆ ಹೋಸತೇನಲ್ಲ. ಈ ಹಿಂದೆಯೂ ಇಂತಹ ಮಾರಣಾಂತಿಕ ಕಾಯಿಲೆಗಳು ಬಂದು ಹೋಗಿವೆ. ಪ್ಲೇಗ್‌ನಂತಹ ಮಹಾರೋಗವನ್ನು ನಿಯಂತ್ರಿಸಲಾಯಿತು. ಪೋಲಿಯೊದಂತಹ ಗಂಭೀರ ಕಾಯಿಲೆಗೆ ಔಷಧ ಕಂಡುಹಿಡಿಯಲಾಯಿತು. ಪ್ರತಿದಿನವೂ ಜಗತ್ತಿನ ನಾನಾ ಭಾಗಗಳ ಜನರು ವಿವಿಧ ಕಾಯಿಲೆಗಳಿಗೆ ತುತ್ತಾಗುತ್ತಲೇ ಇದ್ದಾರೆ. ಜಗತ್ತಿನಲ್ಲಿ ಕಾಣಿಸಿಕೊಳ್ಳುವ ಎಲ್ಲಾ ರೋಗಗಳಿಗೂ ಔಷಧ ಇದ್ದಿದ್ದರೆ ಚೆನ್ನಾಗಿರುತ್ತಿತ್ತು ಎಂಬುದು ಎಲ್ಲರ ಆಶಯ. ಆದರೆ ಎಲ್ಲಾ ರೋಗಗಳಿಗೂ ಇದುವರೆಗೂ ಔಷಧ ಕಂಡುಹಿಡಿಯಲಾಗಿಲ್ಲ ಅಲ್ಲವೇ? ಒಂದು ವೇಳೆ ಎಲ್ಲಾ ರೋಗಗಳಿಗೂ ಔಷಧ ಇದ್ದಿದ್ದರೆ ಏನಾಗ್ತಿತ್ತು! ಎಂಬುದೇ ಈ ಬರಹದ ಕಿರು ಸಾರಾಂಶ.

ಎಲ್ಲಾ ರೋಗಕ್ಕೂ ಔಷಧ ಇದ್ದಿದ್ದರೆ ಏನಾಗ್ತಿತ್ತು! ಎಂದು ಕಲ್ಪಿಸಿಕೊಳ್ಳುವುದು ಸುಲಭ. ಆದರೆ ಅದರ ಆಚರಣೆ ತುಂಬಾ ಕಠಿಣ. ಜಗತ್ತು ಈ ಹಿಂದೆಯೂ ಕೆಲ ಗಂಭೀರ ರೋಗಗಳನ್ನು ಎದುರಿಸಿದೆ. ಕೆಲವು ರೋಗಗಳಿಗೆ ಇಂದಿಗೂ ಔಷಧ ಕಂಡುಹಿಡಿಯಲಾಗಿಲ್ಲ. ಆದರೆ ಅಂತಹ ಕಾಯಿಲೆಗಳು ಹರಡದಂತೆ ನಿಯಂತ್ರಣ ಮಾಡಲು ಹಲವಾರು ಆಯ್ಕೆಗಳಿವೆ. ಉದಾಹರಣೆಗೆ ಕಳೆದ ದಶಕದ ಹಿಂದೆ ಏಡ್ಸ್ ರೋಗ ಇಡೀ ಜಗತ್ತನ್ನು ತಲ್ಲಣಗೊಳಿಸಿತ್ತು. ಇಂದಿಗೂ ಏಡ್ಸ್ ಕಾಯಿಲೆಗೆ ನಿರ್ದಿಷ್ಟವಾದ ಔಷಧ ಇರದಿದ್ದರೂ ಅದರ ನಿಯಂತ್ರಣ ಸಾಧ್ಯವಾಗಿದೆ. ಎಲ್ಲಾ ಕಾಯಿಲೆಗಳಿಗೆ ಔಷಧ ಕಂಡುಹಿಡಿಯಲು ಸಾಧ್ಯವೇ? ಎಂಬ ಪ್ರಶ್ನೆಯೇ ಪ್ರಶ್ನಾತೀತ. ಏಕೆಂದರೆ ಕಾಯಿಲೆಗೆ ಔಷಧ ರೋಗಿಯ ವಯಸ್ಸು, ವಾಸಿಸುವ ಪರಿಸರ ಹಾಗೂ ಅವನ ದೈಹಿಕ ಸಾಮಥರ್ಯ್ಗಳನ್ನು ಅವಲಂಬಿಸಿದೆ. ಕೆಲವು ಕಾಯಿಲೆಗಳು ಔಷಧಕ್ಕಿಂತ ರೋಗಿಯು ಅನುಸರಿಸುವ ನಿಯಂತ್ರಣ ಕ್ರಮಗಳನ್ನು ಅವಲಂಬಿಸಿರುತ್ತದೆ. ಇಂದು ಬಹುತೇಕ ಕಾಯಿಲೆಗಳಿಗೆ ಔಷಧ ಇದ್ದಾಗ್ಯೂ ಸಾವಿರಾರು ಜನರು ಕಾಯಿಲೆಗಳಿಂದ ಸಾಯುತ್ತಲೇ ಇದ್ದಾರೆ. ಅಂದರೆ ರೋಗ ನಿಯಂತ್ರಣ ನಿಯಮಗಳ ಅನುಪಾಲನೆಯಲ್ಲಿ ಬಹುತೇಕರು ಸೋಲುತ್ತಿದ್ದಾರೆ. ಅಧಿಕ ರಕ್ತದೊತ್ತಡ, ಮಧುಮೇಹ, ಪಾರ್ಶ್ವವಾಯು, ಹೃದಯದ ಕಾಯಿಲೆ, ಕ್ಯಾನ್ಸರ್‌ನಂತಹ ರೋಗಗಳಿಗೆ ಔಷಧ ಲಭ್ಯವಿದ್ದರೂ ಸರಿಯಾದ ಚಿಕಿತ್ಸಕ ಕ್ರಮಗಳನ್ನು ಅನುಸರಿಸದೇ ಇರುವುದರಿಂದ ಸಾಕಷ್ಟು ರೋಗಿಗಳು ಸಾವನ್ನಪ್ಪುತ್ತಿದ್ದಾರೆ. ಎಲ್ಲಾ ರೋಗಗಳಿಗೆ ಔಷಧ ದೊರೆತ್ತಿದ್ದರೆ ರೋಗಿಗಳಿಲ್ಲದೇ ಆಸ್ಪತ್ರೆಗಳು ಬಣಗುಡುತ್ತಿದ್ದವು. ವೈದ್ಯರು ಕೆಲಸವಿಲ್ಲದೇ ವ್ಯರ್ಥವಾಗಿ ಕಾಲಹರಣ ಮಾಡಬೇಕಾಗುತ್ತಿತ್ತು. ಕ್ರಮೇಣವಾಗಿ ಆಸ್ಪತ್ರೆಗಳೆಲ್ಲ ಮುಚ್ಚುತ್ತಿದ್ದವು. ವೈದ್ಯರು ಬೇರೆ ವೃತ್ತಿಯನ್ನು ಹುಡುಕಬೇಕಾಗುತ್ತಿತ್ತು. ಆರೋಗ್ಯಕ್ಕಾಗಿ ಹೆಚ್ಚು ಹಣ ವ್ಯಯವಾಗುತ್ತಿರಲಿಲ್ಲ. ರೋಗಗಳಿಗೆ ಔಷಧ ಇದ್ದರೆ ಮಾನವರು ಕಾಯಿಲೆಗಳಿಂದ ನರಳುತ್ತಿರಲಿಲ್ಲ ಹಾಗೂ ಸಾಯುತ್ತಿರಲಿಲ್ಲ. ಮಾನವರ ಜೀವಿತ ಅವಧಿ ಹೆಚ್ಚಾಗುತ್ತಿತ್ತು. ಇದ್ದಕ್ಕಿದ್ದಂತೆ ಎಲ್ಲಾ ಕಾಯಿಲೆಗಳು ಕಣ್ಮರೆಯಾಗಿದ್ದರೆ ಜಗತ್ತಿನ ಜನಸಂಖ್ಯೆ ಖಂಡಿತವಾಗಿ ಹೆಚ್ಚುತ್ತಿತ್ತು. ಆಗ ಎಲ್ಲೆಲ್ಲೂ ಮಾನವರೇ ತುಂಬಿರುತ್ತಿದ್ದರು. ಆಹಾರಕ್ಕಾಗಿ ಪರಸ್ಪರ ಕಚ್ಚಾಡಿಕೊಳ್ಳುತ್ತಿದ್ದರು. ಭೂಮಿಯ ಮೇಲೆ ಆಹಾರದ ಪ್ರಮಾಣ ಕಡಿಮೆಯಾಗುತ್ತಿತ್ತು. ಗಿಡ ಮರಗಳ ಸಂಖ್ಯೆ ತುಂಬಾ ಕಡಿಮೆಯಾಗಿ ಅರಣ್ಯ ಸಂಪೂರ್ಣವಾಗಿ ನಾಶವಾಗುತ್ತಿತ್ತು. ಕಾಂಕ್ರಿಟ್ ಕಾಡು ಹೆಚ್ಚಾಗಿ ಮನೆಗಳ ಸಂಖ್ಯೆ ದುಪ್ಪಟ್ಟಾಗುತ್ತಿತ್ತು. ಪರಿಸರ ಮಾಲಿನ್ಯದ ಪ್ರಮಾಣ ಹೆಚ್ಚಾಗಿ ಹವಾಮಾನ ವೈಪರೀತ್ಯಗಳು ಉಂಟಾಗುತ್ತಿದ್ದವು. ರೋಗಗಳಿಗೆ ಔಷಧ ಇದ್ದಿದ್ದರೆ ಜನರಿಗೆ ಕನಿಷ್ಠ ವಿಶ್ರಾಂತಿಯೂ ಇರುತ್ತಿರಲಿಲ್ಲ. ಆರೋಗ್ಯದ ಬಗ್ಗೆ ಯಾರೂ ಕಾಳಜಿ ವಹಿಸುತ್ತಲೇ ಇರಲಿಲ್ಲ ಅಲ್ಲವೇ?

Writer - ಆರ್.ಬಿ. ಗುರುಬಸವರಾಜ

contributor

Editor - ಆರ್.ಬಿ. ಗುರುಬಸವರಾಜ

contributor

Similar News