ಕೊರೋನಾ ಸುತ್ತಮುತ್ತ ಕಂಡ ಸತ್ಯ

Update: 2020-03-15 18:17 GMT

ಅನೇಕ ಬಾರಿ ಸಾವಿರಾರು ಮೈಲಿ ದೂರದ ಚಂದ್ರ ಮತ್ತು ಸೂರ್ಯನಿಗೆ ಗ್ರಹಣ ಉಂಟಾದಾಗ ಭೂಮಿಯ ಮೇಲಿರುವ ನಮ್ಮ ಮೇಲೆ ಉಂಟಾಗುವ ಅದರ ದುಷ್ಪರಿಣಾಮದ ಬಗ್ಗೆ ನಮ್ಮ ಖಾಸಗಿ ಚಾನೆಲ್‌ಗಳು ಅಡ್ಡನಾಮ, ಉದ್ದನಾಮಗಳನ್ನು ಹಣೆಗೆ ಉಳಿದುಕೊಂಡ ಜ್ಯೋತಿಷಿಗಳನ್ನು, ಸಾಧು ಸನ್ಯಾಸಿಗಳನ್ನು ಸ್ಟುಡಿಯೋಗೆ ಕರೆದು ಅವರಿಂದ ಸಾಮಾನ್ಯ ಜನರಿಗೆ ಭಯ ಹುಟ್ಟಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಆದರೆ ಈ ಬಾರಿ ಕೊರೋನ ವೈರಸ್ ಅಪ್ಪಳಿಸಿದಾಗ ಯಾವ ಟಿವಿ ವಾಹಿನಿಗಳಲ್ಲೂ ಈ ಭಯೊತ್ಪಾದಕರು ಕಾಣಲಿಲ್ಲ.


ಒಮ್ಮಿಂದೊಮ್ಮೆಲೆ ಅಪ್ಪಳಿಸಿದ ಕೊರೋನ ವೈರಸ್ ವಿಶ್ವದ ಅನೇಕ ದೇಶಗಳಂತೆ ಭಾರತದ ಜನಸಾಮಾನ್ಯರ ದೈನಂದಿನ ಬದುಕನ್ನು ಅಸ್ತವ್ಯಸ್ತಗೊಳಿಸಿದೆ. ಜೊತೆಗೆ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆಯ ಅವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಅದರಲ್ಲೂ ಇದಕ್ಕೆ ಮೊದಲು ಬಲಿಯಾಗಿದ್ದು ಕಲಬುರಗಿಯ ವ್ಯಕ್ತಿ ಎಂದು ಗೊತ್ತಾದಾಗ ಸಹಜವಾಗಿ ಆತಂಕವುಂಟು ಮಾಡಿದೆ. ರಾಜ್ಯ ಸರಕಾರ ಅಗತ್ಯವಿಲ್ಲದಿದ್ದರೂ ರಾಜ್ಯದಲ್ಲಿ ಆಪತ್ ಸ್ಥಿತಿ ಘೋಷಿಸಿ ಏಳು ದಿನಗಳ ಕಾಲ ರಾಜ್ಯದಲ್ಲಿ ನಡೆಯುವ ಸಭೆ, ಸಮಾರಂಭ, ಮದುವೆ, ರಥೋತ್ಸವ, ಜಾತ್ರೆ, ಮಾಲ್, ಸಿನೆಮಾ, ಬೇಸಿಗೆ ಶಿಬಿರ ಕ್ರೀಡಾಕೂಟ ಹೀಗೆ ಎಲ್ಲವನ್ನೂ ನಿರ್ಬಂಧಿಸಿದೆ. ಒಂದು ವಾರ ಕಾಲ ನಾಡಿನ ಎಲ್ಲ ಶಾಲೆ, ಕಾಲೇಜುಗಳಿಗೆ ರಜೆ ನೀಡಿದೆ.

ಈ ಕೊರೋನ ಅಥವಾ ಕೋವಿಡ್ ಅಪ್ಪಳಿಸಿದ ಪರಿಣಾಮವಾಗಿ ನಿದ್ರಾವಸ್ಥೆಯಲ್ಲಿದ್ದ ನಮ್ಮ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಒಮ್ಮಿಂದೊಮ್ಮೆಲೆ ಎಚ್ಚತ್ತು ಕಾರ್ಯೋನ್ಮುಖವಾಗಿದ್ದರೂ ಅದರ ಅನೇಕ ಲೋಪಗಳು ಬಯಲಿಗೆ ಬರತೊಡಗಿವೆ. ರಾಜ್ಯದ ಅನೇಕ ಗ್ರಾಮೀಣ ಮತ್ತು ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಎದ್ದು ಕಾಣುತ್ತದೆ. ಕೊರೋನದಂತಹ ಪಿಡುಗು ಅಪ್ಪಳಿಸಿದಾಗ ಅದನ್ನು ಎದುರಿಸುವ ಸಿದ್ಧತೆ ನಮ್ಮ ಸರಕಾರಿ ದವಾಖಾನೆಗಳಲ್ಲಿರಲಿಲ್ಲ. ಕೊರೋನ ಸೋಂಕಿನ ಪರಿಣಾಮವಾಗಿ ಅಸುನೀಗಿದ 76ರ ವಯೊವೃದ್ಧನ ಪರದಾಟ ನಮ್ಮ ಸಾರ್ವಜನಿಕ ವೈದ್ಯಕೀಯ ವ್ಯವಸ್ಥೆಯ ಮೇಲೆ ಬೆಳಕು ಚೆಲ್ಲಿದೆ. ಸೋಂಕು ತಗುಲಿದ ಈತನ ಸಂಬಂಧಿಕರು ಮೊದಲು ಖಾಸಗಿ ಆಸ್ಪತ್ರೆಗಳಿಗೆ ಅಲೆದಾಡಿದ್ದಾರೆ. ಅಲ್ಲಿ ಯಾರೂ ಸ್ಪಂದಿಸಿಲ್ಲ. ನಂತರ ಹೈದರಾಬಾದ್‌ಗೆ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಅಲ್ಲಿ ಯಾವ ಆಸ್ಪತ್ರೆಯಲ್ಲೂ ಚಿಕಿತ್ಸೆ ಲಭ್ಯವಾಗಿಲ್ಲ. ವೈದ್ಯಕೀಯ ಪ್ರೊಟೊಕಾಲ್ ಪ್ರಕಾರ ಕೊರೋನದಂತಹ ವೈರಸ್ ಬಂದಿದೆ ಎಂದು ಶಂಕೆಗೊಳಗಾದ ಆತನನ್ನು ಹೈದರಾಬಾದ್‌ಗೆ ಕರೆದೊಯ್ಯಲು ಅವಕಾಶ ನೀಡಬಾರದಿತ್ತು. ಆತನಿದ್ದ ಕಲಬುರಗಿಯಲ್ಲೆ ಆತನಿಗೆ ಪ್ರತ್ಯೇಕ ಚಿಕಿತ್ಸಾ ವಾರ್ಡ್ ತೆಗೆದು ಅಲ್ಲೇ ಇರಿಸಬೇಕಾಗಿತ್ತು. ಸೌದಿಯಿಂದ ಬಂದಾಗಲೆ ಆತನಿಗೆ ಜ್ವರ, ಕೆಮ್ಮು ನೆಗಡಿ ಕಾಣಿಸಿಕೊಂಡಿದೆ. ಆತ ಆಸ್ಪತ್ರೆಗೆ ಎಡತಾಕಿದ್ದಾನೆ. ಆದರೂ ಆತ ಬೇರೆಡೆ ಹೋಗಲು ಅವಕಾಶ ನೀಡಬಾರದಿತ್ತು.

ಮುಂಚೆ ಇನ್ನೂ ಅಭಿವೃದ್ಧಿ ಪಥದಲ್ಲಿದ್ದ ನಮ್ಮ ಸರಕಾರಿ ಆರೋಗ್ಯ ವ್ಯವಸ್ಥೆ ತೊಂಬತ್ತರ ದಶಕದ ನಂತರ ದೇಶದಲ್ಲಿ ಜಾಗತೀಕರಣದ ನವ ಉದಾರವಾದಿ ಆರ್ಥಿಕ ನೀತಿಯ ಪ್ರವೇಶದ ನಂತರ ಅಸ್ತವ್ಯಸ್ತವಾಗುತ್ತ ಬಂತು. ಜನರನ್ನು ಸುಲಿಗೆ ಮಾಡುವ ಖಾಸಗಿ ಮಲ್ಟಿಸ್ಪೆಶಾಲಿಟಿ ಹೈಟೆಕ್ ಆಸ್ಪತ್ರೆಗಳು ಬಂದವು. ಇಂತಹ ಆಸ್ಪತ್ರೆಗಳು ಬೆಳೆದಂತೆ ಸರಕಾರದ ಆಸ್ಪತ್ರೆಗಳು ಸೊರಗುತ್ತ ಬಂದವು. ಖಾಸಗಿ ಆಸ್ಪತ್ರೆಗಳಿಗೆ ಹೋದವರು ಚಿಕಿತ್ಸೆಗಾಗಿ ಮನೆ ಮಾರಾಟ ಮಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿ ಎಷ್ಟೋ ದಿನಗಳಾಗಿವೆ. ಹೀಗಾಗಿ ಕಾಸಿಲ್ಲದ ಅಮಾಯಕ ಜನ ದಾರಿ ಕಾಣದೆ ನಕಲಿ ಸಾಧು ಸನ್ಯಾಸಿಗಳ ಮತ್ತು ಬಾಬಾಗಳಿಂದ ಬೂದಿ ಪಡೆಯುವುದು ಅದನ್ನು ಕಾಯಿಲೆ ಪೀಡಿತರ ಹಣೆಗೆ ತಿಕ್ಕುವುದು, ಮಂತ್ರಿಸಿದ ತಾಯತ ತಂದು ಕಟ್ಟುವುದು ಸಾಮಾನ್ಯವಾಗಿದೆ. ಈಗ ಅಧಿಕಾರದಲ್ಲಿರುವ ರಾಜಕಾರಣಿಗಳು ತಮ್ಮದೇ ಆದ ಮೆಡಿಕಲ್ ಕಾಲೇಜುಗಳು ಹಾಗೂ ಹೈಟೆಕ್ ಆಸ್ಪತ್ರೆಗಳನ್ನು ಹೊಂದಿರುವುದರಿಂದ ಅವರಿಗೆ ಸರಕಾರದ ಆಸ್ಪತ್ರೆಗಳನ್ನು ಸುಧಾರಿಸುವ ಆಸಕ್ತಿ ಇಲ್ಲ. ಆದರೆ ಕೊರೋನದಂತಹ ವೈರಾಣುಗಳು ಅಪ್ಪಳಿಸಿದಾಗ ಕೇವಲ ಹಣ ಗಳಿಸುವುದಕ್ಕಾಗಿ ಆರಂಭವಾದ ಖಾಸಗಿ ಆಸ್ಪತ್ರೆಗಳಲ್ಲಿ ಸ್ಪಂದನೆ ಇಲ್ಲವೆ ಚಿಕಿತ್ಸೆ ಲಭ್ಯವಾಗುವುದಿಲ್ಲ. ಆಗ ಸರಕಾರದ ಆಸ್ಪತ್ರೆಗಳು ಈ ಸಾಮಾಜಿಕ ಹೊಣೆಗಾರಿಕೆ ನಿಭಾಯಿಸಲು ಮುಂದಾಗಬೇಕಾಗುತ್ತದೆ.

ಹಾಗೆ ನೋಡಿದರೆ ಭಾರತದಲ್ಲಿ ಬ್ರಿಟಿಷರು ಬರುವುದಕ್ಕಿಂತ ಮೊದಲು ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಎಂಬುದೇ ಇರಲಿಲ್ಲ. ನಮ್ಮಲ್ಲಿ ಎಲ್ಲವೂ ಇತ್ತೆಂದು ಹೇಳುವುದು ಬರೀ ಒಣ ಅಭಿಮಾನದ ಮಾತಾಗುತ್ತದೆ. ನಮ್ಮಲ್ಲಿ ಪ್ರಾಚೀನ ಚಿಕಿತ್ಸಾ ಪದ್ಧತಿ ಇದ್ದರೂ ಅದು ಅಭಿವೃದ್ಧಿಯಾಗಲಿಲ್ಲ.ಮೂಢನಂಬಿಕೆ, ಕಂದಾಚಾರದಲ್ಲಿ ಮುಳುಗಿ ಏಳುತ್ತಿದ್ದ ಈ ನೆಲದಲ್ಲಿ ಆಧುನಿಕ ವೈಜ್ಞಾನಿಕ ಆವಿಷ್ಕಾರಗಳಿಗೆ ಅವಕಾಶವಿರಲಿಲ್ಲ. ನಮ್ಮಲ್ಲಿ ಶಸ್ತ್ರಚಿಕಿತ್ಸೆ ಮೊದಲೆ ಇತ್ತು. ಗಣಪತಿಯ ಮುಂಡರುಂಡದ ಜೋಡಣೆ ಮಾಡಿದ್ದು ಅದರಿಂದಲೇ ಎಂದು ನಮ್ಮ ಪ್ರಧಾನ ಸೇವಕರು ಹೇಳಿ ನಗೆಗೀಡಾಗಿದ್ದರು. ಆದರೆ ಅವರ ಶಿಷ್ಯರು, ಸಂಘಪರಿವಾರದ ಕಟ್ಟಾಳುಗಳು ಇಂದಿಗೂ ಗೋವಿನ ಮೂತ್ರ ಕುಡಿದರೆ ಕ್ಯಾನ್ಸರ್ ಕಾಯಿಲೆ ನಿವಾರಣೆಯಾಗುತ್ತದೆ ಎಂದು ಆಗಾಗ ಹೇಳಿ ಉಚಿತ ಮನರಂಜನೆ ನೀಡುತ್ತಿರುತ್ತಾರೆ.

ಅನೇಕ ಬಾರಿ ಸಾವಿರಾರು ಮೈಲಿ ದೂರದ ಚಂದ್ರ ಮತ್ತು ಸೂರ್ಯನಿಗೆ ಗ್ರಹಣ ಉಂಟಾದಾಗ ಭೂಮಿಯ ಮೇಲಿರುವ ನಮ್ಮ ಮೇಲೆ ಉಂಟಾಗುವ ಅದರ ದುಷ್ಪರಿಣಾಮದ ಬಗ್ಗೆ ನಮ್ಮ ಖಾಸಗಿ ಚಾನೆಲ್‌ಗಳು ಅಡ್ಡನಾಮ, ಉದ್ದನಾಮಗಳನ್ನು ಹಣೆಗೆ ಉಳಿದುಕೊಂಡ ಜ್ಯೋತಿಷಿಗಳನ್ನು, ಸಾಧು ಸನ್ಯಾಸಿಗಳನ್ನು ಸ್ಟುಡಿಯೋಗೆ ಕರೆದು ಅವರಿಂದ ಸಾಮಾನ್ಯ ಜನರಿಗೆ ಭಯ ಹುಟ್ಟಿಸುವ ಕಾರ್ಯಕ್ರಮಗಳನ್ನು ಪ್ರಸಾರ ಮಾಡುತ್ತಾರೆ. ಆದರೆ ಈ ಬಾರಿ ಕೊರೋನ ವೈರಸ್ ಅಪ್ಪಳಿಸಿದಾಗ ಯಾವ ಟಿವಿ ವಾಹಿನಿಗಳಲ್ಲೂ ಈ ಭಯೊತ್ಪಾದಕರು ಕಾಣಲಿಲ್ಲ. ಇದರ ಸೋಂಕಿಗೆ ಅವರೂ ಹೆದರಿರಬೇಕು. ಅಮಾಯಕ ಜನರಿಗೆ ಬದುಕುವ ಶೈಲಿಯನ್ನು ಕಲಿಸುವುದಾಗಿ ಅವರ ತಲೆಯನ್ನು ನುಣ್ಣಗೆ ಬೋಳಿಸುವ ನಕಲಿ ಗುರುವೂ ಈ ಬಾರಿ ಪತ್ತೆ ಇಲ್ಲ. ಸೂರ್ಯನಿಗೆ ಕೈ ಅಡ್ಡ ಹಿಡಿದು ನಿಲ್ಲಿಸುವುದಾಗಿ ಬುರುಡೆ ಬಿಡುವ ಕಪಟಾನಂದನೂ ಕಾಣಲಿಲ್ಲ. ಇನ್ನು ಭಕ್ತರು ತಮ್ಮ ದೇವರ ದೇಗುಲಕ್ಕೆ ಬೀಗ ಜಡಿದು ಬಂಧನದಲ್ಲಿಟ್ಟರು. ದೇವರ ಮೊರೆ ಹೋಗಬೇಕಾದವರು ಸರಕಾರದ ಆಸ್ಪತ್ರೆಗಳ ಬಾಗಿಲಿಗೆ ಬಂದು ವೈದ್ಯರ ಬಳಿ ಸಾಲು ಹಚ್ಚ ಬೇಕಾಯಿತು.

ಹಾಗೆ ನೋಡಿದರೆ ನಮ್ಮ ದೇಶದಲ್ಲಿ ಸುವ್ಯವಸ್ಥಿತ ಆಸ್ಪತ್ರೆಗಳು ಆರಂಭವಾಗಿದ್ದು ಕ್ರೈಸ್ತ ಮಿಷನರಿಗಳಿಂದ. ಅದಕ್ಕಿಂತ ಮೊದಲು ಇಲ್ಲಿ ಯಾವ ಕಾಯಿಲೆಗೂ ಪರಿಣಾಮಕಾರಿ ಚಿಕಿತ್ಸೆ ಸಿಗುತ್ತಿರಲಿಲ್ಲ. ಕುಷ್ಠ ರೋಗ ಬಂದರೆ ಕಾಡಿಗೆ ಹೋಗಿ ಬಿಸಾಡಿ ಬರುವ ನೀಚತನ ಮತ್ತು ಕ್ರೌರ್ಯ ಇಲ್ಲಿತ್ತು. ಕಳೆದ ಶತಮಾನದ ಆರಂಭದಲ್ಲಿ ಕೋಲ್ಕತಾದಲ್ಲಿ ಮದರ ತೆರೆಸಾ ಎಂಬ ತಾಯಿ ಇಂತಹ ನೂರಾರು ಕುಷ್ಠ ರೋಗಿಗಳಿಗೆ ತಾನೇ ಕೈಯಾರೆ ಚಿಕಿತ್ಸೆ ನೀಡಿ ಬದುಕಿಸಿದರು. ಅಂತಹ ಮಾತೆಯನ್ನು ಮತಾಂತರಿ ಎಂದು ಹಿಯಾಳಿಸಿದ ವಿಷಜಂತುಗಳು ನಮ್ಮಲ್ಲಿವೆ.

ಈ ವಾಸ್ತವವನ್ನು ಒಪ್ಪಿಕೊಂಡು ಇಂತಹ ಹೊಸ ಮಾರಕ ಸವಾಲುಗಳನ್ನು ಎದುರಿಸಬೇಕಾಗಿದೆ. ವೈಜ್ಞಾನಿಕ ಸಂಶೋಧನೆಗಳಲ್ಲಿ ಸಾಕಷ್ಟು ಮುಂದುವರಿದಿರುವ ಭಾರತ ತೊಂಬತ್ತರ ದಶಕದ ನಂತರ ಮಂದಿರ, ಮಸೀದಿ, ಗೊರಕ್ಷಣೆ ರಾಜಕೀಯದಲ್ಲಿ ಮುಳುಗಿ ಮತ್ತೆ ಅಜ್ಞಾನದ ಕಾರ್ಗತ್ತಲ ಕೂಪದ ಕಡೆ ಹೊರಳಿ ನಿಂತಾಗ ಕೊರೋನದಂತಹ ಪಿಡುಗು ಅಪ್ಪಳಿಸಿದೆ. ಇದನ್ನು ಇಡೀ ದೇಶ ಒಂದಾಗಿ ಎದುರಿಸಬೇಕಾಗಿದೆ. ಇಂತಹ ಸಂದರ್ಭಗಳಲ್ಲಿ ಜನರಲ್ಲಿ ತಿಳುವಳಿಕೆ ಮೂಡಿಸಬೇಕಾದ ಮಾಧ್ಯಮಗಳು ಅದರಲ್ಲೂ ವಿದ್ಯುನ್ಮಾನ ಮಾಧ್ಯಮಗಳು ಜನರಲ್ಲಿ ಭಯ, ಭೀತಿಯನ್ನು ಉಂಟು ಮಾಡುತ್ತಿವೆ.

ಈ ಕರೋನ ಭೀತಿಯಿಂದ ದೇವಾಲಯದ ಬಾಗಿಲುಗಳೂ ಮುಚ್ಚುತ್ತಿವೆ.ಆದರೆ ಆಸ್ಪತ್ರೆಗಳ ದ್ವಾರಗಳು ರೋಗಿಗಳ ಚಿಕಿತ್ಸೆಗೆ ಮುಕ್ತವಾಗಿವೆ. ಯಾತ್ರಾಸ್ಥಳಗಳಿಗೆ ಬರುವವರ ಸಂಖ್ಯೆ ಕಡಿಮೆಯಾಗಿದೆ, ಆದರೂ ಗೋಮೂತ್ರ ಕುಡಿದರೆ ಕರೋನ ಕಾಯಿಲೆ ನಿವಾರಣೆಯಾಗುತ್ತದೆ ಎಂದು ಹೇಳುವ ಅಲ್ಪಮತಿಗಳು ಅಲ್ಲಲ್ಲಿ ಕಾಣುತ್ತಿವೆ.

ಕೊರೋನದ ಅತ್ಯಂತ ದುಷ್ಪರಿಣಾಮ ಉಂಟಾಗಿರುವುದು ಕಡು ಬಡವರಿಗೆ. ಅಂದೇ ದುಡಿದು, ಅಂದೇ ಕೂಲಿ ಪಡೆದು ಮನೆಗೆ ಅಕ್ಕಿ, ಜೋಳ ತಂದು ಬೇಯಿಸಿ ತಿನ್ನುವವರ ಆದಾಯಕ್ಕೆ ಖೋತಾ ಆಗಿ ಅವರ ಹೊಟ್ಟೆಗೆ ತಣ್ಣೀರು ಪಟ್ಟಿ ಬಿದ್ದಿದೆ. ಆಟೊ ಚಾಲಕರು, ಟ್ಯಾಕ್ಸಿ ಚಾಲಕರು ಗಳಿಕೆಯಿಲ್ಲದೆ ಕಂಗಾಲಾಗಿದ್ದಾರೆ. ಭಾರತದ ಆರ್ಥಿಕತೆಗೂ ಚೇತರಿಸಲಾಗದ ಏಟು ಬಿದ್ದಿದೆ. ಕಳೆದ ಆರು ವರ್ಷಗಳಿಂದ ಹಳ್ಳ ಹಿಡಿದ ದೇಶದ ಆರ್ಥಿಕತೆ ಪುನಶ್ಚೇತನ ಪಡೆಯಲು ಸಾಕಷ್ಟು ಸಮಯಬೇಕಾಗುತ್ತದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ