ಕೊರೋನ ಭೀತಿ: ಕಲಬುರಗಿ ಸಂಪರ್ಕಿಸುವ ಎಲ್ಲಾ ಖಾಸಗಿ ಬಸ್‌ಗಳ ಸಂಚಾರ ಸ್ಥಗಿತ
ಕಲಬುರಗಿ, ಮಾ.18: ನಗರದಿಂದ ಹೊರಹೋಗುವ ಮತ್ತು ಒಳಬರುವ ಎಲ್ಲಾ ಖಾಸಗಿ ಬಸ್‌ಗಳ ಸಂಚಾರವನ್ನು ಸ್ಥಗಿತಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಬಿ.ಶರತ್ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಬುಧವಾರ ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿ ನಡೆದ ಖಾಸಗಿ ಟ್ರಾವೆಲರ್ಸ್ ಮತ್ತು ಬುಕ್ಕಿಂಗ್ ಏಜೆಂಟರ ಸಭೆಯಲ್ಲಿ ಮಾತನಾಡಿದ ಅವರು, ಬೆಂಗಳೂರು, ಇತರೆ ಜಿಲ್ಲೆಗಳು, ನೆರೆರಾಜ್ಯಗಳಾದ ಮಹಾರಾಷ್ಟ್ರ, ತೆಲಂಗಾಣ ಹಾಗೂ ಆಂಧ್ರಪ್ರದೇಶಗಳಿಗೆ ತೆರಳುವ ಮತ್ತು ಜಿಲ್ಲೆಯೊಳಗೆ ಬರುವ ಬಸ್‌ಗಳ ಸಂಚಾರ ನಿಲ್ಲಿಸಬೇಕು. ಈಗಾಗಲೇ ಬುಕ್ಕಿಂಗ್ ಮಾಡಿರುವ ಸೀಟುಗಳ ಟಿಕೆಟ್‌ಗಳನ್ನು ರದ್ದುಮಾಡುವಂತೆ ಬಸ್ ಮಾಲಕರು ಮತ್ತು ಏಜೆಂಟರಿಗೆ ಮುಂದಿನ ಆದೇಶದವರೆಗೆ ಇದನ್ನು ಪಾಲಿಸಬೇಕೆಂದು ಅವರು ಸೂಚನೆ ನೀಡಿದರು.
ಜಿಲ್ಲೆಯಲ್ಲಿ 17 ಚೆಕ್‌ಪೋಸ್ಟ್ ತೆರೆದಿದ್ದು, ಬಸ್‌ಗಳ ಸಂಚಾರದ ಮೇಲೆ ನಿಗಾವಹಿಸಲಾಗುತ್ತದೆ. ಸೂಚನೆಯನ್ನು ಮೀರಿ ಬಸ್‌ಗಳ ಓಡಾಟ ನಡೆಸಿದ್ದಲ್ಲಿ, ಅಂತಹ ವಾಹನಗಳನ್ನು ಜಪ್ತಿ ಮಾಡಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇತ್ತೀಚೆಗೆ ಕೆಲವರು ಮುಂಬೈ, ಪುಣೆ, ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಇಳಿದು, ಬಸ್‌ಗಳ ಮೂಲಕ ಕಲಬುರಗಿ ಜಿಲ್ಲೆಗೆ ಬಂದಿರುತ್ತಾರೆ. ಹಾಗಾಗಿ ಇದುವರೆಗೆ ಕಲಬುರಗಿ ನಗರ ಮತ್ತು ಜಿಲ್ಲೆಗೆ ಬಂದಿರುವ ಪ್ರಯಾಣಿಕರ ಸಂಪೂರ್ಣ ವಿವರ ನೀಡುವಂತೆಯೂ ಅವರು ಬಸ್ ಮಾಲಕರು ಮತ್ತು ಏಜೆಂಟರಿಗೆ ಸೂಚಿಸಿದರು.