ಕ್ಲಿನಿಕ್ ನಲ್ಲಿದ್ದ ವೈದ್ಯರಿಗೆ ಕೊರೋನ ಸೋಂಕು: 900 ಮಂದಿ ಕ್ವಾರಂಟೈನ್ ನಲ್ಲಿ

Update: 2020-03-26 09:38 GMT

ಹೊಸದಿಲ್ಲಿ: ರಾಜಧಾನಿಯ ಮೊಹಲ್ಲಾ ಕ್ಲಿನಿಕ್ ಒಂದರ ವೈದ್ಯರಿಗೆ ಕೊರೋನ ಸೋಂಕು ದೃಢಗೊಂಡ ನಂತರ ಅವರ ಸಂಪರ್ಕಕ್ಕೆ ಬಂದ ಸುಮಾರು 900 ಮಂದಿಯನ್ನು ಕ್ವಾರಂಟೈನ್‍ನಲ್ಲಿರಿಸಲಾಗಿದೆ.

ಸೌದಿ ಅರೇಬಿಯಾದಿಂದ ವಾಪಸಾದ 38 ವರ್ಷದ  ಮಹಿಳೆಯೊಬ್ಬರು ಕೊರೋನ ಲಕ್ಷಣಗಳಿದ್ದ ಹಿನ್ನೆಲೆಯಲ್ಲಿ ಈ ವೈದ್ಯರ ಕ್ಲಿನಿಕ್‍ ಗೆ ಮಾರ್ಚ್ 10ರಂದು ಭೇಟಿ ಕೊಟ್ಟ ನಂತರ ವೈದ್ಯರಿಗೆ ಸೋಂಕು ತಗಲಿರಬೇಕೆಂದು ಊಹಿಸಲಾಗಿದೆ. ವೈದ್ಯರ ಕ್ಲಿನಿಕ್‍ ಗೆ ಭೇಟಿ ಕೊಟ್ಟ ಐದು ದಿನಗಳ ನಂತರ ಮಹಿಳೆಗೆ ಕೊರೋನ ಸೋಂಕಿರುವುದು ದೃಢಪಟ್ಟಿತ್ತು. ಆಕೆ ಆಗಮಿಸಿದ್ದಾಗ ವಿಮಾನ ನಿಲ್ದಾಣಕ್ಕೆ ಆಕೆಯನ್ನು ಕರೆತರಲು ಬಂದಿದ್ದ ತಾಯಿ, ಸೋದರ ಹಾಗೂ ಇಬ್ಬರು ಪುತ್ರಿಯರು ಹಾಗೂ ಒಬ್ಬ ಸಂಬಂಧಿಗೂ ಕೊರೋನ ಸೋಂಕು ತಗಲಿದೆ. ಮಹಿಳೆಯ ನೆರೆಹೊರೆಯ ಸುಮಾರು 74 ಜನರ ಮೇಲೆ ನಿಗಾ ಇರಿಸಲಾಗಿದೆ.

ಸದ್ಯ ಕ್ವಾರಂಟೈನ್‍ ಗೊಳಗಾದ ಎಲ್ಲಾ 900 ಮಂದಿ 14 ದಿನ ಎಲ್ಲಿಯೂ ಹೊರ ಹೋಗುವಂತಿಲ್ಲ ಎಂದು ದಿಲ್ಲಿ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ಹೇಳಿದ್ದಾರೆ. ವೈದ್ಯರ ಪತ್ನಿ ಹಾಗೂ ಹದಿಹರೆಯದ ಪುತ್ರಿಗೂ ಈ ಕೊರೋನ ಸೋಂಕು ತಗಲಿದೆ. ದಿಲ್ಲಿಯಲ್ಲಿ ಒಟ್ಟು ಕೊರೋನ ಸೋಂಕಿತರ ಸಂಖ್ಯೆ 36ಕ್ಕೆ ತಲುಪಿದೆ.

ಈ ಘಟನೆ ನಂತರ ಪ್ರತಿಕ್ರಿಯಿಸಿರುವ ಸಿಎಂ ಅರವಿಂದ್ ಕೇಜ್ರಿವಾಲ್ ದಿಲ್ಲಿಯ ಎಲ್ಲಾ ಮೊಹಲ್ಲಾ ಕ್ಲಿನಿಕ್‍ಗಳು ಎಂದಿನಂತೆ ಕಾರ್ಯಾಚರಿಸಲಿವೆ ಎಂದಿದ್ದಾರೆ. ಕೊರೋನ ಸೋಂಕಿತರಿಗೆ ಚಿಕಿತ್ಸೆ ನೀಡುವ ವೈದ್ಯರು ಹಾಗೂ ದಾದಿಯರನ್ನೂ ಕೊರೋನ ಪರೀಕ್ಷೆಗೆ ಒಳಪಡಿಸಲಾಗುವುದು ಎಂದು ದಿಲ್ಲಿ ಸರಕಾರ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News