ದುಡಿಯುವ ಕೈಗಳಿಗೆ ಕೆಲಸವಿಲ್ಲ; ಹೆಚ್ಚುತ್ತಿದೆ ಹಸಿವಿನ ಬೇನೆ
►ನ್ಯಾಯಬೆಲೆ ಅಂಗಡಿಗಳಲ್ಲಿ ಸಿಗುತ್ತಿಲ್ಲ ಪಡಿತ
►ಅಗತ್ಯ ವಸ್ತುಗಳಿಗೆ ಸಾಮಾನ್ಯ ಜನರ ಸರ್ಕಸ್
ಚಿಕ್ಕಮಗಳೂರು, ಮಾ.29: ಲಾಕ್‌ಡೌನ್‌ನಿಂದಾಗಿ ಜಿಲ್ಲೆಯಲ್ಲಿ ದುಡಿದೇ ಬದುಕಬೇಕಾದ ಕೃಷಿ, ಕೂಲಿ ಕಾರ್ಮಿಕರಿಗೆ ಕೆಲಸವೂ ಸಿಗದಂತಾಗಿದ್ದು, ಕೂಲಿ ಕೆಲಸವೂ ಇಲ್ಲದೇ ಕೈಯಲ್ಲಿ ಕಾಸೂ ಇಲ್ಲದೆ, ನ್ಯಾಯಬೆಲೆ ಅಂಗಡಿಗಳಲ್ಲಿ ಹೆಚ್ಚುವರಿ ಪಡಿತರವೂ ಧಕ್ಕದೇ ಬಡಜನರು ಹಸಿವಿನಿಂದ ನರಳಾಡುವ ಸ್ಥಿತಿ ನಿರ್ಮಾಣವಾಗಿದೆ. ಹೊಟ್ಟೆ ಪಾಡಿಗಾಗಿ ಜಿಲ್ಲೆಯ ಕಾಫಿ ತೋಟಗಳಿಗೆ ಬಂದಿರುವ ಅಸ್ಸಾಂನಂತಹ ಹೊರ ರಾಜ್ಯಗಳ ಕಾರ್ಮಿಕರ ಸ್ಥಿತಿ ದೇವರಿಗೆ ಪ್ರೀತಿ ಎಂಬಂತಾಗಿದೆ.
ಕೊರೋನ ವೈರಸ್ ಸೋಂಕು ಹರಡುವುದನ್ನು ತಡೆಯಲು ಸರಕಾರಗಳ ಆದೇಶದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಇಡೀ ಜಿಲ್ಲೆಯನ್ನು ಲಾಕ್‌ಡೌನ್ ಮಾಡಿದೆ. ಜನರೂ ಸೋಂಕಿನ ಭೀತಿಯಿಂದಾಗಿ ಮನೆಗಳಲ್ಲೇ ಠಿಕಾಣಿ ಹೂಡಿದ್ದಾರೆ. ಚಿಕ್ಕಮಗಳೂರು ನಗರ ಸೇರಿದಂತೆ ಜಿಲ್ಲೆಯ ಶೃಂಗೇರಿ, ಕೊಪ್ಪ, ಕಡೂರು, ಮೂಡಿಗೆರೆ, ತರೀಕೆರೆ ನರಸಿಂಹರಾಜಪುರ ತಾಲೂಕು ಕೇಂದ್ರಗಳು ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಸಾರ್ವಜನಿಕರು, ಕಾರ್ಮಿಕರು ಮನೆಗಳಿಂದ ಹೊರಬರಲೂ ಹೆದರುವ ಪರಿಸ್ಥಿತಿ ನಿರ್ಮಾಣವಾಗಿದೆ. ವೈರಸ್ ಸೋಂಕಿನ ಭೀತಿ ಒಂದೆಡೆಯಾದರೆ ಕರ್ಫ್ಯೂ ಜಾರಿಯಲ್ಲಿರುವುದರಿಂದ ಪೊಲೀಸರ ಲಾಠಿ ಏಟಿನ ಆತಂಕದಿಂದ ಜನರು ಅಗತ್ಯ ವಸ್ತುಗಳನ್ನೂ ಖರೀದಿ ಮಾಡಲೂ ಹೊರಗೆ ಬಾರದಂತಾಗಿದೆ.
ಕಾಫಿನಾಡು ಕಾರ್ಮಿಕರನ್ನು ಹೆಚ್ಚು ಹೊಂದಿರುವ ಜಿಲ್ಲೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾರ್ಮಿಕರು ಹೆಚ್ಚಾಗಿ ಕಾಫಿ, ಅಡಿಕೆ ತೋಟಗಳಲ್ಲಿ ಕೂಲಿ ಕೆಲಸ ಮಾಡುತ್ತಾ ಜೀವನ ಸಾಗಿಸುತ್ತಿದ್ದಾರೆ. ಇನ್ನು ಜಿಲ್ಲೆಯ ಬಯಲು ಪ್ರದೇಶದಲ್ಲಿ ಬಡಜನರು ಕೃಷಿ ಕಾರ್ಮಿಕರಾಗಿ ದುಡಿದು ಬದುಕು ಸಾಗಿಸುತ್ತಿದ್ದಾರೆ. ಮಲೆನಾಡಿನ ಕಾಫಿ ತೋಟಗಳಲ್ಲಿ ದೂರದ ಅಸ್ಸಾಂ ರಾಜ್ಯದಿಂದ ಕೆಲಸ ಅರಸಿ ಬಂದಿರುವ ಸಾವಿರಾರು ಕಾರ್ಮಿಕರು ಕೂಲಿ ಕೆಲಸ ಮಾಡುತ್ತಿದ್ದು, ಕೊರೋನ ವೈರಸ್ ದೇಶ, ರಾಜ್ಯ, ಜಿಲ್ಲೆಯಲ್ಲುಂಟು ಮಾಡಿರುವ ಬಂದ್‌ನ ವಾತಾವರಣದಿಂದಾಗಿ ಸ್ಥಳೀಯ ಕಾರ್ಮಿಕರಿಗೆ ಕೂಲಿ ಸಿಗದಂತಾಗಿದ್ದರೆ, ಹೊರ ರಾಜ್ಯ ಗಳಿಂದ ಮಲೆನಾಡು ಭಾಗದ ಕಾಫಿ ತೋಟಗಳಿಗೆ ಬಂದಿರುವ ಸಾವಿರಾರು ಕೂಲಿ ಕಾರ್ಮಿಕರಿಗೆ ಕಾಫಿ ತೋಟಗಳಲ್ಲಿ ಕೆಲಸವಿಲ್ಲದೇ ತಮ್ಮ ರಾಜ್ಯಕ್ಕೂ ತೆರಳಲಾಗಿದೆ ಅತಂತ್ರ ಸ್ಥಿತಿಯಲ್ಲಿದ್ದಾರೆ.
ಜಿಲ್ಲೆಯ ಮೂಡಿಗೆರೆ, ಕೊಪ್ಪ, ಶೃಂಗೇರಿ, ನರಸಿಂಹರಾಜಪುರ, ತರೀಕೆರೆ ತಾಲೂಕುಗಳಲ್ಲಿ ಹೆಚ್ಚಿರುವ ನೂರಾರು ಕಾಫಿ ತೋಟಗಳಲ್ಲಿ ಕಾಫಿ ಕಟಾವಿನ ಕೆಲಸಕ್ಕೆ ದೂರದ ಅಸ್ಸಾಂ ಮೂಲದ ಸಾವಿರಾರು ಕಾರ್ಮಿಕರು ಕಳೆದ ಮೂರು ತಿಂಗಳ ಹಿಂದೆಯೇ ಆಗಮಿಸಿದ್ದಾರೆ. ಇದೀಗ ಕಾಫಿ ತೋಟಗಳಲ್ಲಿ ಕಾಫಿ ಕೊಯ್ಲು ಕೆಲಸ ಮುಗಿದಿದ್ದು, ಕಾರ್ಮಿಕರಿಗೆ ತೋಟಗಳಲ್ಲಿ ತೋಟಗಳ ಮಾಲಕರು ಯಾವುದೇ ಕೆಲಸ ನೀಡುತ್ತಿಲ್ಲ. ರಾಜ್ಯ ಹಾಗೂ ಜಿಲ್ಲಾದ್ಯಂತ ಲಾಕ್‌ಡೌನ್ ಇರುವುದರಿಂದ ಯಾವುದೇ ಸಾರಿಗೆ ಸೌಲ್ಯಗಳಿಲ್ಲದ ಪರಿಣಾಮ ಕೆಲಸ ಇಲ್ಲದ ಅಸ್ಸಾಂ ಮೂಲದ ಕಾರ್ಮಿಕರು ತಮ್ಮ ಊರುಗಳಿಗೆ ಹಿಂದಿರುಗಲು ಸಾಧ್ಯವಾಗುತ್ತಿಲ್ಲ.
ಕಾಫಿ ತೋಟಗಳಲ್ಲಿರುವ ಲೈನ್ ಮನೆಗಳಲ್ಲಿ ಸದ್ಯ ವಾಸವಿರುವ ಕಾರ್ಮಿಕರು ಕಾಫಿ ಕೊಯ್ಲು ಮಾಡಿ ಸಂಪಾದಿಸಿದ ಹಣ ಖಾಲಿಯಾಗಿದ್ದು, ಕಾರ್ಮಿಕರಿಗೆ ಸದ್ಯ ಯಾವುದೇ ಕೆಲಸವೂ ಇಲ್ಲದ ಪರಿಣಾಮ ಕಾರ್ಮಿಕರಿಗೆ ಅಗತ್ಯ ವಸ್ತುಗಳು, ಆಹಾರ ಸಾಮಗ್ರಿಗಳನ್ನು ಕೊಳ್ಳಲೂ ಕೈಯಲ್ಲಿ ಹಣವಿಲ್ಲದಂತಾಗಿದೆ. ಇನ್ನು ಈ ಕಾರ್ಮಿಕರ ಬಳಿ ಪಡಿತರ ಚೀಟಿಗಳಿವೆಯಾದರೂ ಅವೆಲ್ಲವೂ ಅಸ್ಸಾಂ ರಾಜ್ಯದಲ್ಲಿ ನೋಂದಾಯಿಸಲ್ಪಟ್ಟಿರುವುದರಿಂದ ಸ್ಥಳೀಯ ನ್ಯಾಯಬೆಲೆ ಅಂಗಡಿಗಳಲ್ಲಿ ಇವುಗಳಿಗೆ ಪಡಿತರ ಸಿಗುವುದಿಲ್ಲ. ಇಡೀ ಜಿಲ್ಲೆಯಲ್ಲಿ ಬಂದ್ ಇರುವುದರಿಂದ ಕಾರ್ಮಿಕರು ಲೈನ್ ಮನೆಗಳಿಂದ ಹೊರಬಂದು ಅಗತ್ಯ ವಸ್ತುಗಳನ್ನು ಕೊಳ್ಳಲು ಸಾಧ್ಯವಾಗುತ್ತಿಲ್ಲವಾಗಿದ್ದು, ಕಾರ್ಮಿಕರು ಇದೀಗ ಹಸಿವಿನಿಂದ ನರಳಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಕೊಪ್ಪತಾಲೂಕಿನ ಜಯಪುರ ಸಮೀಪದ ಕೌಳಿ ಎಸ್ಟೇಟ್‌ನಲ್ಲಿ ಕೂಲಿ ಕೆಲಸಕ್ಕೆ ಅಸ್ಸಾಂನಿಂದ ಆಗಮಿಸಿರುವ ನೂರಾರು ಕಾರ್ಮಿಕರು ಎಸ್ಟೇಟ್‌ನ ಲೈನ್‌ಮನೆಗಳಲ್ಲಿ ವಾಸವಿದ್ದು, ಕಾಫಿ ಕಟಾವು ಕೆಲಸ ಮುಗಿಸಿ ತಮ್ಮ ರಾಜ್ಯಕ್ಕೆ ಹಿಂದಿರುಗಲು ಅಣಿಯಾಗಿದ್ದರು. ಇದೇ ಸಂದರ್ಭವೇ ಕೊರೋನ ವೈರಸ್ ಸೋಂಕಿನ ಹೆಮ್ಮಾರಿ ಕಾಟ ಹೆಮ್ಮರವಾಗಿ ಇಡೀ ದೇಶವನ್ನು ಕಾಡಿದ್ದು, ಪರಿಣಾಮ ಇಡೀ ದೇಶಾದ್ಯಂತ ಲಾಕ್‌ಡೌನ್ ಮಾಡಲಾಗಿದೆ.
ಜಿಲ್ಲೆಯಲ್ಲೂ ಲಾಕ್‌ಡೌನ್ ಜಾರಿಯಲ್ಲಿರುವುದರಿಂದ ಈ ಕಾರ್ಮಿಕರು ಸದ್ಯ ಅಸ್ಸಾಂಗೆ ಹಿಂದಿರುಗಲೂ ಆಗದೆ, ಹಣ, ಪಡಿತರದಂತಹ ಸಾಮಗ್ರಿಗಳಿಲ್ಲದೆ ಕೂಲಿ ಕಾರ್ಮಿಕರ ಮನೆಗಳಲ್ಲೂ ಬದುಕಲು ಆಗುತ್ತಿಲ್ಲ. ಇನ್ನೊಂದು ವಾರ ಹೇಗೋ ಬದುಕಬಹುದು ಬಳಿಕ ಕೈಯಲ್ಲಿರುವ ಹಣ ಸಂಪೂರ್ಣವಾಗಿ ಖಾಲಿಯಾಗುತ್ತದೆ. ಲಾಕ್‌ಡೌನ್ ಮುಗಿಯುವವರೆಗೆ ಇಲ್ಲೇ ಕೆಲಸ ಮಾಡಿಕೊಂಡು ಇರೋಣ ಎಂದರೆ ಎಸ್ಟೇಟ್‌ಗಳಲ್ಲಿ ಈಗ ಯಾವುದೇ ಕೆಲಸ ನೀಡುತ್ತಿಲ್ಲ. ಊರುಗಳಿಗೆ ಹಿಂದಿರುಗೋಣ ಎಂದರೆ ಯಾವುದೇ ಸಾರಿಗೆ ವ್ಯವಸ್ಥೆ ಇಲ್ಲ ಎಂದು ಕೌಳಿ ಎಸ್ಟೇಟ್‌ನ ಕಾರ್ಮಿಕರು ತಮ್ಮ ಅಳಲು ಹೇಳಿಕೊಳ್ಳುತ್ತಿದ್ದಾರೆ.
ಜಿಲ್ಲೆಯಲ್ಲಿನ ವಿವಿಧ ಕಾಫಿ ತೋಟಗಳಲ್ಲಿರುವ ಸಾವಿರಾರು ಕಾರ್ಮಿಕರು ಇಂತದ್ದೇ ಪರಿಸ್ಥಿತಿಯನ್ನು ಅನುವಿಸುತ್ತಿದ್ದು, ಕೆಲಸವೂ ಇಲ್ಲದೇ, ಊರಿಗೂ ಹಿಂದಿರುಗಲಾಗದೇ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದು, ಒಪ್ಪೊತ್ತಿನ ಊಟಕ್ಕೂ ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಇನ್ನು ಜಿಲ್ಲೆಯಾದ್ಯಂತ ಲಾಕ್‌ಡೌನ್ ಇರುವುದರಿಂದ ಕೆಲ ಸಮಾಜ ಸೇವಕರು ಅನಾಥರು, ನಿರ್ಗತಿಕರು, ಸಂಕಷ್ಟದಲ್ಲಿರುವ ಕಾರ್ಮಿಕರಿಗೆ ಅಗತ್ಯ ವಸ್ತುಗಳು, ಆಹಾರ ಪೂರೈಕೆ ಮಾಡುವ ಕೆಲಸ ಮಾಡುತ್ತಿದ್ದಾರಾದರೂ ಅಸ್ಸಾಂ ಮೂಲದ ಕಾರ್ಮಿಕರಿಗೆ ನೀಡುತ್ತಿಲ್ಲ ಎಂದು ಕಾರ್ಮಿಕರೇ ಹೇಳುತ್ತಾರೆ. ಇನ್ನು ಸ್ಥಳೀಯ ಎಸ್ಟೇಟ್ ಮಾಲಕರು, ಜನಪ್ರ ತಿನಿಧಿಗಳು, ಕಾರ್ಮಿಕರನ್ನು ತೋಟಗಳಿಗೆ ಕರೆ ತಂದಿರುವ ಮಧ್ಯವರ್ತಿಗಳೂ ಈ ಕಾರ್ಮಿಕರ ಸಮಸ್ಯೆ, ಗೋಳು, ಹಸಿವು ನಿವಾರಣೆಗೆ ಯಾವುದೇ ನೆರವಾಗುತ್ತಿಲ್ಲ ಎಂದು ಅವರು ದೂರುತ್ತಿದ್ದಾರೆ.
ಒಟ್ಟಾರೆ ಜಿಲ್ಲಾದ್ಯಂತ ಕೊರೋನ ವೈರಸ್ ಸೋಂಕಿನ ಭೀತಿಯಿಂದಾಗಿ ಕೃಷಿ, ಕೂಲಿ ಕಾರ್ಮಿಕರ ಬದುಕು ಅಕ್ಷರಶಃ ನರಕವಾಗುತ್ತಿದ್ದು, ಲಾಕ್‌ಡೌನ್ ಆದೇಶದ ಆರಂಭದಲ್ಲೇ ಇಂತಹ ಪರಿಸ್ಥಿತಿ ನಿರ್ಮಾಣವಾಗಿದರೆ ಇನ್ನೂ ಕೆಲ ದಿನಗಳು ಕಳೆದರೆ ಈ ಕಾರ್ಮಿಕರು ಹಾಗೂ ಅವರನ್ನೇ ಆಶ್ರಯಿಸಿರುವ ವೃದ್ಧರು, ಮಕ್ಕಳು ಹಸಿವಿನಿಂದ ಸಾಯುವುದನ್ನು ತಪ್ಪಿಸಲು ಸಾಧ್ಯವಿಲ್ಲ ಎಂಬ ಅಭಿಪ್ರಾಯ ಸಾರ್ವಜನಿಕರದ್ದು. ಇಂತಹ ಕರುಣಾಜನರ ಸ್ಥಿತಿ ಕಾರ್ಮಿಕರ ಬದುಕನ್ನು ನಾಶಮಾಡುವ ಮುನ್ನ ಸರಕಾರ, ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ಸಂಘ ಸಂಸ್ಥೆಗಳು ಇಂತಹ ಅಸಹಾಯಕ ಕಾರ್ಮಿಕರ ಬದುಕಿಗೆ ನೆರವು ನೀಡಲು ಮುಂದಾಗಬೇಕಿದೆ.