ಲಾಕ್‍ಡೌನ್ ಎಫೆಕ್ಟ್: ಹಲವು ರಾಜ್ಯಗಳ ಬ್ಲಡ್ ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ
ಹೊಸದಿಲ್ಲಿ, ಎ.3: ಕೊರೋನ ಸಾಂಕ್ರಾಮಿಕ ಹರಡುವುದನ್ನು ತಡೆಯಲು ದೇಶಾದ್ಯಂತ ಮೂರು ವಾರಗಳ ಲಾಕ್‍ಡೌನ್ ಜಾರಿಯಲ್ಲಿದ್ದು, ಪರಿಣಾಮವಾಗಿ ಹಲವು ರಾಜ್ಯಗಳ ಬ್ಲಡ್‍ಬ್ಯಾಂಕ್‍ಗಳಲ್ಲಿ ರಕ್ತದ ಕೊರತೆ ವ್ಯಾಪಕವಾಗಿದೆ. ಲಾಕ್‍ಡೌನ್‍ನಿಂದಾಗಿ ರಕ್ತದಾನ ಬಹುತೇಕ ನಿಂತಿದೆ. ಆದರೆ ಶಸ್ತ್ರಚಿಕಿತ್ಸೆಗಳು ಬಹುತೇಕ ಸ್ಥಗಿತಗೊಂಡಿದ್ದು, ರಸ್ತೆ ಅಪಘಾತಗಳೂ ಕನಿಷ್ಠವಾಗಿರುವುದರಿಂದ ಬೇಡಿಕೆ ಸರಿದೂಗಿಸಲು ಬ್ಲಡ್‍ಬ್ಯಾಂಕ್‍ಗಳು ಹರಸಾಹಸ ಮಾಡುತ್ತಿವೆ.
ರಕ್ತ ಹಾಗೂ ರಕ್ತದ ಉತ್ಪನ್ನಗಳಿಗೆ ಸಾಮಾನ್ಯ ಬೇಡಿಕೆ ಕುಸಿದಿದ್ದರೂ, ತೀವ್ರ ಅಸ್ವಸ್ಥರು, ರಕ್ತ ಸಂಬಂಧಿ ಅಸ್ವಸ್ಥತೆ ಹೊಂದಿದವರು, ಕ್ಯಾನ್ಸರ್ ರೋಗಿಗಳು, ಪ್ಲೇಟ್ಲೆಟ್ ಪೂರಣ ಅಗತ್ಯವಿರುವ ರೋಗಿಗಳು, ಹೆರಿಗೆ ಸಂದರ್ಭದಲ್ಲಿ ರಕ್ತಪೂರಣ ಅಗತ್ಯವಿರುವ ಮಹಿಳೆಯರು ಹಾಗೂ ಅಪಘಾತದ ರೋಗಿಗಳಿಗೆ ಅಗತ್ಯ ರಕ್ತ ಪೂರೈಸಲೇಬೇಕಾದ ಅನಿವಾರ್ಯತೆ ಇದೆ.
ದೊಡ್ಡ ಪ್ರಮಾಣದ ರಕ್ತದಾನ ಶಿಬಿರಗಳನ್ನು ಆಯೋಜಿಸದಂತೆ ಸರ್ಕಾರ ನಿಷೇಧ ಹೇರಿದ್ದರೂ, ತೀವ್ರ ಕೊರತೆ ಪರಿಸ್ಥಿತಿ ಉದ್ಭವಿಸುವುದನ್ನು ತಡೆಯಲು ಸಣ್ಣ ಪ್ರಮಾಣದ ಶಿಬಿರಗಳನ್ನು ಆಯೋಜಿಸಲು ಅನುಮತಿ ನೀಡಿದೆ.
ರಕ್ತದಾನ ಶಿಬಿರಗಳನ್ನು ನಿಷೇಧಿಸಿದ್ದು, ಜನ ಮನೆಗಳಿಂದ ಹೊರಬರಲು ಭಯಪಡುತ್ತಿದ್ದಾರೆ ಎಂದು ಪುಣೆಯ ರಕ್ತ ಮರುಪೂರಣ ಮಂಡಳಿಯ ಅಧಿಕಾರಿಯೊಬ್ಬರು ಹೇಳುತ್ತಾರೆ. ಆದರೆ ಸಾಮಾಜಿಕ ಅಂತರ ಕಾಯ್ದುಕೊಂಡು ಒಂದು ಬಾರಿಗೆ ನಾಲ್ಕರಿಂದ ಐದು ಮಂದಿ ರಕ್ತದಾನ ಮಾಡಲು ವ್ಯವಸ್ಥೆ ಮಾಡುವಂತೆ ಸಂಘ ಸಂಸ್ಥೆಗಳಿಗೆ ಮನವಿ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ.
ತಲಸ್ಸೇಮಿಯಾ ಮತ್ತು ಸಿಕಲ್ ಸೆಲ್ ಅನೀಮಿಯಾದಂಥ ಪ್ರಕರಣಗಳು ಅಧಿಕ ಇರುವ ಕೇಂದ್ರ ಭಾರತ ಹಾಗೂ ವಿದರ್ಭ ಪ್ರದೇಶದಲ್ಲಿ ಪರಿಸ್ಥಿತಿ ನಿಜಕ್ಕೂ ಕಳವಳಕಾರಿ. ಇಲ್ಲಿ ಸಾವಿರಾರು ಮಂದಿಗೆ ಪ್ರತಿದಿನ ರಕ್ತ ಮರುಪೂರಣ ಅಗತ್ಯವಿದೆ ಎಂದು ನಾಗ್ಪುರದ ತಲಸ್ಸೇಮಿಯಾ ಮತ್ತು ಸಿಕಲ್‍ಸೆಲ್ ಸೆಂಟರ್ ನಿರ್ದೇಶಕ ಡಾ.ವಿನಯ್ ಋಗ್ವಾನಿ ಹೇಳುತ್ತಾರೆ. ರಕ್ತದ ಕೊರತೆ ತಡೆಯಲು ಮಹಾರಾಷ್ಟ್ರ ಆರೋಗ್ಯ ಸಚಿವ ರಾಜೇಶ್ ತೋಪೆ, ಮಿನಿ ರಕ್ತದಾನ ಶಿಬಿರಗಳನ್ನು ಆಯೋಜಿಸಲು ಅನುಮತಿ ನೀಡಿದ್ದಾರೆ. ಇದರಿಂದಾಗಿ ಮುಂಬೈನಲ್ಲಿ 20 ದಿನಕ್ಕೆ ಅಗತ್ಯವಾಗುವಷ್ಟು ರಕ್ತ ಲಭ್ಯವಿದೆ ಎಂಧು ಥಿಂಕ್ ಫೌಂಡೇಷನ್ ಸರ್ಕಾರೇತರ ಸಂಸ್ಥೆಯ ವಿನಯ್ ಶೆಟ್ಟಿ ಹೇಳುತ್ತಾರೆ.
ಕೇರಳದಲ್ಲಿ ಸಾವಿರಾರು ರಕ್ತದಾನ ಶಿಬಿರಗಳು ರದ್ದಾಗಿದ್ದು, ತೀವ್ರ ಕೊರತೆ ಹಿನ್ನೆಲೆಯಲ್ಲಿ ಬ್ಲಡ್‍ಬ್ಯಾಂಕ್‍ಗಳಲ್ಲೇ ರಕ್ತದಾನ ಶಿಬಿರ ಆಯೋಜಿಸಲು ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ ಆದೇಶ ನೀಡಿದೆ ಎಂದು ಆಲ್ ಕೇರಳ ಬ್ಲಡ್ ಡೋನರ್ಸ್ ಸೊಸೈಟಿ ಅಧ್ಯಕ್ಷ ಲಿಡಾ ಜಾಕೋಬ್ ಹೇಳಿದ್ದಾರೆ.