ಪಂಜಾಬ್: ಲಾಕ್‌ಡೌನ್ ಉಲ್ಲಂಘಿಸಿ ಗುಂಪೊಂದರ ದಾಳಿ, ಪೊಲೀಸ್ ಅಧಿಕಾರಿ ಕೈ ಕತ್ತರಿಸಿದ ದುಷ್ಕರ್ಮಿಗಳು

Update: 2020-04-12 18:22 GMT

ಪಟಿಯಾಲ, ಎ.12: ಪಂಜಾಬ್‌ನ ಪಟಿಯಾಲ ಜಿಲ್ಲೆಯ ತರಕಾರಿ ಮಾರುಕಟ್ಟೆಯಲ್ಲಿ ರವಿವಾರ ಬೆಳಗ್ಗೆ ಜನರ ಗುಂಪೊಂದು ಲಾಕ್‌ಡೌನ್ ಉಲ್ಲಂಘಿಸಿ ರಸ್ತೆಗಿಳಿದಿದ್ದಲ್ಲದೆ ಪೊಲೀಸರ ಮೇಲೆ ದಾಳಿ ನಡೆಸಿದೆ. ದಾಳಿಕೋರರು ಓರ್ವ ಪೊಲೀಸ್ ಅಧಿಕಾರಿಯ ಕೈಯನ್ನು ಕತ್ತರಿಸಿದ್ದಾರೆ. ಇನ್ನಿಬ್ಬರು ಪೊಲೀಸ್ ಸಿಬ್ಬಂದಿಗೆ  ಕೂಡ ಗಾಯವಾಗಿದೆ.

ಕಾರಿನಲ್ಲಿ ಬಂದಿದ್ದ ಗುಂಪು ರಸ್ತೆಯಲ್ಲಿದ್ದ ಬ್ಯಾರಿಕೇಡ್‌ಗೆ ಢಿಕ್ಕಿ ಹೊಡೆದಿತ್ತು. ಇವರನ್ನು ತಡೆಯಲು ಹೋಗಿರುವ ಸಹಾಯಕ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಹರ್ಜೀತ್ ಸಿಂಗ್ ಕೈಗೆ ಗಂಭೀರ ಗಾಯವಾಗಿದ್ದು, ಸಿಂಗ್ ಅವರನ್ನು ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ನಿಹಾಂಗ್‌ನ್ನು ಹೊತ್ತ ವಾಹನ ಇಂದು ಬೆಳಗ್ಗೆ 6ರ ಸುಮಾರಿಗೆ ತರಕಾರಿ ಮಾರುಕಟ್ಟೆಯಲ್ಲಿ ಹಲವು ಬ್ಯಾರಿಕೇಡ್‌ಗಳಿಗೆ ಢಿಕ್ಕಿ ಹೊಡೆದು ಮುನ್ನುಗ್ಗಿತ್ತು. ವಾಹನವನ್ನು ತಡೆದಿದ್ದ ಪೊಲೀಸರು ಕರ್ಫ್ಯೂ ಪಾಸ್ ತೋರಿಸುವಂತೆ ಕೇಳಿದ್ದರು.ಲಾಕ್‌ಡೌನ್‌ನ್ನು ಉಲ್ಲಂಘಿಸಿದ ಗುಂಪು ಪೊಲೀಸರ ಮೇಲೆ ದಾಳಿ ನಡೆಸಿದೆ ಎಂದು ಪಂಜಾಬ್ ಪೊಲೀಸ್ ಮುಖ್ಯಸ್ಥ ದಿನಕರ ಗುಪ್ತಾ ತಿಳಿಸಿದ್ದಾರೆ.

 ಪೊಲೀಸರ ಮೇಲೆ ದಾಳಿ ನಡೆಸಿದ ಬಳಿಕ ಗುಂಪು ನಿಹಾಂಗ್ ಗುರುದ್ವಾರ ಸಾಹೇಬ್‌ನತ್ತ ಓಡಿ ಅವಿತುಕೊಂಡಿತು. ವಿಶೇಷ ಕಾರ್ಯಾಚರಣೆ ಗುಂಪಿನೊಂದಿಗೆ ಗುರುದ್ವಾರಕ್ಕೆ ತೆರಳಿದ್ದ ಪೊಲೀಸರು ದಾಳಿಕೋರರಲ್ಲಿ ಶರಣಾಗುವಂತೆ ಕೋರಿದರು. ಎರಡು ಗಂಟೆಯ ಬಳಿಕ ಗುರುದ್ವಾರವನ್ನು ಪ್ರವೇಶಿಸಿದ ಸ್ಥಳೀಯ ಸರಪಂಚ ಅರ್ಧಗಂಟೆ ಮಾತುಕತೆ ನಡೆಸಿ ದಾಳಿಕೋರರು ಪೊಲೀಸರಿಗೆ ಶರಣಾಗುವಂತೆ ಮಾಡಿದ್ದಾರೆ. ದಾಳಿಕೋರರು ಕತ್ತಿ ಹಾಗೂ ಚಾಕುಗಳನ್ನು ಹಿಡಿದುಕೊಂಡಿದ್ದರು. ಸ್ಪೋಟಕಗಳಾಗಿ ಬಳಸಬಹುದಾದ ಗ್ಯಾಸ್ ಸಿಲಿಂಡರ್‌ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ದಾಳಿಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದು, ಇತರರನ್ನು ವಿಚಾರಣೆ ನಡೆಸುತ್ತಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಬಲದೊಂದಿಗೆ ಗುರುದ್ವಾರದ ಬಳಿಗೆ ತೆರಳಿದ ಪೊಲೀಸರು ಶರಣಾಗುವಂತೆ ಸೂಚಿಸಿದರೂ ದಾಳಿಕೋರರು ನಿರಾಕರಿಸಿದ್ದಾರೆ. ಶರಣಾಗುವಂತೆ ಮನವೊಲಿಸಲು ಸುಮಾರು ಎರಡೂವರೆ ಗಂಟೆ ಮಾತುಕತೆ ನಡೆಸಿದ ಬಳಿಕ ಸ್ಥಳೀಯ ಮುಖಂಡರ ನೇತೃತ್ವದಲ್ಲಿ ಸಂಧಾನಕಾರರು ಗುರುದ್ವಾರದ ಒಳಗೆ ಪ್ರವೇಶಿಸಿದ್ದಾರೆ. ನಂತರ ಸುಮಾರು ಅರ್ಧಗಂಟೆ ಮಾತುಕತೆ ನಡೆದ ಬಳಿಕ ದಾಳಿಕೋರರು ಶರಣಾಗಿದ್ದಾರೆ.

ಅವರಿಂದ ಖಡ್ಗ, ಕತ್ತಿ ಹಾಗೂ ಗ್ಯಾಸ್ ಸಿಲಿಂಡರ್ ವಶಕ್ಕೆ ಪಡೆಯಲಾಗಿದೆ. ಗ್ಯಾಸ್ ಸಿಲಿಂಡರ್ ಅನ್ನು ಸ್ಫೋಟಕದಂತೆ ಬಳಸುವ ಸಾಧ್ಯತೆಯಿತ್ತು . ಘಟನೆಗೆ ಸಂಬಂಧಿಸಿ ಮೂವರನ್ನು ಬಂಧಿಸಲಾಗಿದ್ದು, ಮತ್ತೂ ಮೂವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News