ಚಾಂದಪಾಶಾ ಎಂಬ ಸಮನ್ವಯ ಚೇತನ

Update: 2020-04-12 17:35 GMT

ನಮ್ಮ ನಾಡಿನ ಹಳ್ಳಿಗಳಿಗೆ ಹೋದರೆ ಚಾಂದಪಾಶಾರಂತಹ ಅನೇಕ ಸೌಹಾರ್ದ ಸಂಕೇತಗಳನ್ನು ಕಾಣುತ್ತೇವೆ. ಈ ಚಾಂದಪಾಶಾರನ್ನು ಐದನೇ ವಯಸ್ಸಿನಲ್ಲೇ ತಮ್ಮ ಮಠಕ್ಕೆ ಕರೆದುಕೊಂಡು ಬಂದ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲ್ಯಾಣದಯ್ಯನವರು ತಮ್ಮ ಮಠದಲ್ಲೇ ಇಟ್ಟುಕೊಂಡು ಅಕ್ಷರ ಕಲಿಸಿದರು. ತಮ್ಮ ಕೊಠಡಿಯಲ್ಲಿ ತಮ್ಮ ಜೊತೆಗೇ ಇರಿಸಿಕೊಂಡಿದ್ದರು. ಚಾಂದಪಾಶಾರನ್ನು ಉತ್ತಮ ಕನ್ನಡ ಪಂಡಿತರನ್ನಾಗಿಸುವ ಆಸೆ ಈ ಸ್ವಾಮಿಯವರಿಗಿತ್ತು.



ಕೊರೋನ ವೈರಸ್‌ಗಿಂತ ಕೋಮು ವೈರಸ್‌ಗಳು ಎಲ್ಲರ ನೆಮ್ಮದಿ ಹಾಳು ಮಾಡಿರುವ ಈ ನಾಡಿನಲ್ಲಿ ಎಲ್ಲ ಮುಗಿದೇ ಹೋಯಿತು ಎನ್ನುವಾಗ ಚಾಂದಸಾಬ್ ಇನಾಮದಾರರಂಥವರು ಒಮ್ಮೆಲೇ ನೆನಪಿಗೆ ಬರುತ್ತಾರೆ. ಇಲ್ಲ ಮುಗಿದಿಲ್ಲ. ಬಹುತ್ವ ಭಾರತ ಇನ್ನೂ ಜೀವಂತವಾಗಿದೆ, ನಿರಂತರವಾಗಿರುತ್ತದೆ ಎಂದು ಭರವಸೆ ಮೂಡಿಸುತ್ತಾರೆ. ಯಾದಗಿರಿ ಜಿಲ್ಲೆಯ ಶಹಾಪುರದ ಚಾಂದಸಾಬ್ ಜೊತೆ ಮಾತಾಡಲು ಕುಳಿತರೆ ಹೊತ್ತು ಹೋಗಿದ್ದೇ ಗೊತ್ತಾಗುವುದಿಲ್ಲ.
ಅವರನ್ನು ಕೆಲವರು ಸೈಯದ್ ಚಾಂದಸಾಬ್ ಇನಾಮದಾರ ಎಂದು ಕರೆಯುತ್ತಾರೆ. ಇನ್ನು ಕೆಲವರು ಶಾರ್ಟ್ ಕಟ್ ಆಗಿ ಚಾಂದ್‌ಸಾಬ್ ಎನ್ನುತ್ತಾರೆ. ಆದರೆ ಶಹಾಪುರ, ಸುರಪುರ ಭಾಗದ ಬಹತೇಕ ಜನ ಅವರನ್ನು ಚಾಂದ್ ಪಾಶಾ ಮಾಸ್ತರ ಎನ್ನುತ್ತಾರೆ.

ಸೂಫಿಗಳ, ಶರಣರ ಸಮನ್ವಯದ ನೆಲವಾದ ಕಲ್ಯಾಣ ಕರ್ನಾಟಕದಲ್ಲಿ ಇಂತಹ ಅನೇಕ ಸೌಹಾರ್ದ ಶಿಖರಗಳು ಗೊಚರಿಸುತ್ತವೆ. ಈ ಚಾಂದಸಾಬರು ನನಗೆ ಪರಿಚಯವಾಗಿದ್ದು ತುಂಬ ಆಕಸ್ಮಿಕವಾಗಿ. ಸಗರ ನಾಡು ಸರಪುರ, ಶಹಾಪುರಗಳನ್ನು ನೋಡಲು ಯುವ ಮಿತ್ರ ರಾಘವೇಂದ್ರ ಹಾರಣಗೇರಾ ಮತ್ತು ದೇವೇಂದ್ರಪ್ಪ ಅವರು ಆಹ್ವಾನಿಸಿದಾಗ ನಾನು ಅಲ್ಲಿಗೆ ಹೋದೆ.

ಅಲ್ಲಿ ಸಿಕ್ಕವರು ಸೈಯದ್ ಚಾಂದಸಾಬ್ ಇನಾಮದಾರ. ಜೇವರ್ಗಿ ತಾಲೂಕಿನ ಚಾಂದಸಾಬ್ ಮತ್ತು ಜೈನಬಿ ಅವರ ಉದರದಲ್ಲಿ ಜನಿಸಿದ ಸೈಯದ್ ಇನಾಮದಾರ ತುಂಬ ಚಿಕ್ಕ ವಯಸ್ಸಿನಲ್ಲಿ ಮನೆಯಿಂದ ದೂರವಾಗಿ ಸಿಂದಗಿ ತಾಲೂಕಿನ ಲಿಂಗಾಯತ ಮಠವೊಂದರಲ್ಲಿ ಬೆಳೆದು ವ್ಯಾಸಂಗ ಮಾಡಿದರು.

ಈ ಹೊನ್ನಳ್ಳಿ ಕಲ್ಯಾಣದಯ್ಯ ವೀರ ಘಂಟಯ್ಯ ಸ್ವಾಮಿಗಳಿಗೂ ಸೈಯದ್‌ಸಾಬ್ ತಂದೆ ಚಾಂದ ಸಾಬರಿಗೂ ಅವಿನಾಭಾವ ಸಂಬಂಧ. ಬಡತನದಲ್ಲಿ ಮಗನ ವಿದ್ಯಾಭ್ಯಾಸ ಅಸಾಧ್ಯ ಎಂದು ಚಾಂದಸಾಬ್ ಕೈ ಚೆಲ್ಲಿದಾಗ, ಪುಟ್ಟ ಹುಡುಗ ಸೈಯದ್‌ನನ್ನು ಮಠಕ್ಕೆ ಕರೆದುಕೊಂಡು ಹೋಗಿ ಅಕ್ಷರ ಕಲಿಸಿದವರು ಇದೇ ವೀರ ಘಂಟಯ್ಯ ಸ್ವಾಮಿ. ಹೀಗೆ ವ್ಯಾಸಂಗ ಮಾಡಿ ಪ್ರಾಥಮಿಕ, ಪ್ರೌಢ ಶಾಲಾ ಶಿಕ್ಷಕರಾಗಿ, ಪದವಿಪೂರ್ವ ಕಾಲೇಜು ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿದ ಸೈಯದ್ ಸಾಬ್ ಕನ್ನಡ ಶಿಕ್ಷಕರು.

ಇಂತಹ ಸೈಯದ್ ಸಾಹೇಬರಿಗೆ ಕೆಲ ತಿಂಗಳ ಹಿಂದೆ ಶಹಾಪುರದ ಜನರು ಆತ್ಮೀಯ ಸನ್ಮಾನ ಸಮಾರಂಭ ಏರ್ಪಡಿಸಿ ಗೌರವಿಸಿದರು. ಈ ಕಾರ್ಯಕ್ರಮ ಇಡೀ ಊರ ಜನರ ಕಾರ್ಯಕ್ರಮವಾಗಿತ್ತು. ಜಾತಿ, ಧರ್ಮದ ಹಂಗಿಲ್ಲದೆ ಸಾವಿರಾರು ಜನ ಸೇರಿದ್ದರು. ಅವರ ಶಿಷ್ಟ ಬಳಗ ತುಂಬಾ ದೊಡ್ಡದು. ಅವರು ಒಂದೇ ಸಮುದಾಯಕ್ಕೆ ಸೇರಿದವರಲ್ಲ. ಎಲ್ಲ ಸಮುದಾಯದ ಜನರು ಅವರ ಶಿಷ್ಯ ಬಳಗದಲ್ಲಿದ್ದಾರೆ. ಯಾರಿಗೂ ಎಂದಿಗೂ ಬಿರುಸಾಗಿ, ಏಕ ವಚನದಲ್ಲಿ ಮಾತನಾಡದ ಸೈಯದ್‌ಸಾಬ್ ಇನಾಮದಾರ ಮಾತನಾಡುವ ಕನ್ನಡ ಕೇಳಬೇಕು. ಅದು ಈ ನೆಲದ ಮಣ್ಣಿನಲ್ಲಿ ಒಡ ಮೂಡಿದ ಕನ್ನಡ. ಸೈಯದ್ ಸಾಹೇಬರು ನಿವೃತ್ತರಾಗಿದ್ದರೂ ಶಹಾಪುರದ ಶಾಸಕ ಶರಣಬಸಪ್ಪಗೌಡ ದರ್ಶನಾಪುರ ಅವರ ಕಾಲೇಜಿನಲ್ಲಿ ಅವರ ಒತ್ತಾಸೆಯ ಮೇರೆಗೆ ಈಗಲೂ ಈ 75ನೇ ವಯಸ್ಸಿನಲ್ಲೂ ಸೇವೆ ಸಲ್ಲಿಸುತ್ತಿದ್ದಾರೆ.

ಸೈಯದ್ ಸಾಬ್ ಇನಾಮದಾರ ತಮ್ಮ ಬದುಕೇ ಒಂದು ಪವಾಡ ಎಂದು ಹೇಳುತ್ತಾರೆ. ಅವರು ಐದನೇ ವಯಸ್ಸಿನಲ್ಲಿ ಇದ್ದಾಗ ರಜಾಕಾರರ ಹಾವಳಿ ತೀವ್ರಗೊಂಡಾಗ ಇವರ ಕುಟುಂಬ ದಿಕ್ಕಾಪಾಲಾಯಿತು. ಶರಣಗೌಡ ಇನಾಮದಾರ ಇವರ ಕುಟುಂಬವನ್ನು ರಕ್ಷಿಸಿದರು. ನಂತರ ಕಾಲರಾ ರೋಗ ವ್ಯಾಪಕವಾಗಿ ಹಬ್ಬಿ ತಾಯಿ ಜೈನಬಿ ತೀರಿಕೊಂಡರು. ಮುಂದೆ ಹೊನ್ನಳ್ಳಿಯ ಲಿಂಗಾಯತ ಮಠವೇ ಇವರನ್ನು ಓದಿಸಿ ಈ ಎತ್ತರಕ್ಕೆ ತಂದು ನಿಲ್ಲಿಸಿದೆ.

ಸೈಯದ್ ಚಾಂದಸಾಬ್ ಇನಾಮದಾರ ಜೊತೆಗೆ ಮಾತಾಡುವಾಗ ಅನೇಕ ಬಾರಿ ಅವರು ಇಂದಿನ ಕೋಮು ವೈಷಮ್ಯದ ವಾತಾವರಣದ ಬಗ್ಗೆ ತೀವ್ರ ಆತಂಕ ವ್ಯಕ್ತಪಡಿಸುತ್ತಾರೆ. ‘ಬಾಲ್ಯದಲ್ಲಿ ನಾನು ಎಲ್ಲ ಜಾತಿ, ಧರ್ಮದ ಮಕ್ಕಳೊಂದಿಗೆ ಬೆಳೆದೆ. ನನ್ನ ಆತ್ಮೀಯ ಬಾಲ್ಯದ ಗೆಳೆಯ ಗೌಡಪ್ಪಗೌಡ ಮತ್ತು ನಾನು ಒಂದೇ ತಾಯಿಯ ಎದೆಯ ಹಾಲು ಕುಡಿದು ಬೆಳೆದವರು. ನಾವು 4ನೇ ವಯಸ್ಸಿನಲ್ಲಿ ಇದ್ದಾಗ ಗೌಡಪ್ಪಗೌಡನ ತಾಯಿ ತೀರಿಕೊಂಡರು. ಆಗ ನನ್ನ ತಾಯಿ ಜೈನಬಿಯ ಎದೆಯ ಹಾಲನ್ನು ನಾನು ಮತ್ತು ಗೌಡಪ್ಪಗೌಡ ಜೊತೆ ಸೇರಿ ತೊಡೆಯೇರಿ ಕುಡಿದೆವು. ಇದು ನನ್ನ ಬಾಲ್ಯದ ಬದುಕು’ ಎಂದು ಸೈಯದ್ ಸಾಹೇಬರು, ಇಂದಿನ ಕೋಮು ದ್ವೇಷದ ಅಮಾನವೀಯತೆ ಬಗ್ಗೆ ಆತಂಕ ವ್ಯಕ್ತಪಡಿಸುತ್ತಾರೆ.

ನಮ್ಮ ನಾಡಿನ ಹಳ್ಳಿಗಳಿಗೆ ಹೋದರೆ ಚಾಂದಪಾಶಾರಂತಹ ಅನೇಕ ಸೌಹಾರ್ದ ಸಂಕೇತಗಳನ್ನು ಕಾಣುತ್ತೇವೆ. ಈ ಚಾಂದಪಾಶಾರನ್ನು ಐದನೇ ವಯಸ್ಸಿನಲ್ಲೇ ತಮ್ಮ ಮಠಕ್ಕೆ ಕರೆದುಕೊಂಡು ಬಂದ ಬಿಜಾಪುರ ಜಿಲ್ಲೆಯ ಸಿಂದಗಿ ತಾಲೂಕಿನ ಕಲ್ಯಾಣದಯ್ಯನವರು ತಮ್ಮ ಮಠದಲ್ಲೇ ಇಟ್ಟುಕೊಂಡು ಅಕ್ಷರ ಕಲಿಸಿದರು. ತಮ್ಮ ಕೊಠಡಿಯಲ್ಲಿ ತಮ್ಮ ಜೊತೆಗೇ ಇರಿಸಿಕೊಂಡಿದ್ದರು. ಚಾಂದಪಾಶಾರನ್ನು ಉತ್ತಮ ಕನ್ನಡ ಪಂಡಿತರನ್ನಾಗಿಸುವ ಆಸೆ ಈ ಸ್ವಾಮಿಯವರಿಗಿತ್ತು.

ಅದರಂತೆ ಚಾಂದಪಾಶಾ ಓದಿ ಪಾಸಾಗುತ್ತಾ ಬಂದರು. ರಮಝಾನ್ ತಿಂಗಳು ಬಂದರೆ ಚಾಂದಸಾಬರಿಗೆ ಮಠದ ಸ್ವಾಮಿಗಳೇ ಉಪವಾಸದ ವ್ಯವಸ್ಥೆ ಮಾಡುತ್ತಿದರು. ನಮಾಝ್ ಮಾಡಲು ತಾವೇ ಚಾಂದ ಸಾಬರನ್ನು ಕಳಿಸಿಕೊಡುತ್ತಿದ್ದರು. ಅನ್ನ ಮತ್ತು ಅಕ್ಷರದ ಆಸರೆ ನೀಡಿದೆನೆಂದು ಸ್ವಾಮಿಗಳು ಚಾಂದಪಾಶಾ ಮೇಲೆ ತಮ್ಮ ಲಿಂಗಾಯತ ಧರ್ಮದ ಪ್ರಭಾವ ಬೀರಲು ಎಂದೂ ಯತ್ನಿಸಲಿಲ್ಲ.

ಮುಂದೆ ಸಿಂದಗಿ ಮಠದ ಕಲ್ಯಾಣದಯ್ಯ ಸ್ವಾಮಿಗಳೇ ಸೈಯದ್ ಚಾಂದಪಾಶಾ ಅವರಿಗೆ ಮುಮ್ತಾಝ್ ಎಂಬ ಕನ್ಯೆಯನ್ನು ಹುಡುಕಿ ಮದುವೆ ಮಾಡುತ್ತಾರೆ. ವಿವಾಹದ ನಂತರ ಚಾಂದಪಾಶಾ ಕನ್ನಡ ಶಿಕ್ಷಕರಾಗಿ, ಶಾಲೆ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ಈಗ ಯಾದಗಿರಿ ಜಿಲ್ಲೆಯ ಶಹಾಪುರದಲ್ಲಿ ವಿಶ್ರಾಂತ ಜೀವನ ಸಾಗಿಸುತ್ತಿದ್ದಾರೆ. ಈಗಲೂ ಸ್ಥಳೀಯ ಕಾಲೇಜಿಗೆ ಹೋಗಿ ನಿತ್ಯವೂ ಪಾಠ ಮಾಡುತ್ತಾರೆ.

ಕಲಬುರಗಿ ಜಿಲ್ಲೆಯ ಜೇವರ್ಗಿ ಅಲ್ಲದೇ ಯಾದಗಿರಿ ಜಿಲ್ಲೆಯ ಶಹಾಪುರ ಮತ್ತು ಸುರಪುರ ತಾಲೂಕುಗಳಲ್ಲಿ ಚಾಂದಪಾಶಾ ಅವರನ್ನು ಎಲ್ಲರೂ ಮಾಮಾ, ಅಣ್ಣಾ, ಕಾಕಾ ಎಂದೇ ಮಾತಾಡಿಸುತ್ತಾರೆ. ಚಾಂದ ಪಾಶಾ ಅವರೂ ಜನರನ್ನು ಹಾಗೇ ಕರೆಯುತ್ತಾರೆ.

 ಸುಂದರವಾದ ಕನ್ನಡ ಕೇಳಬೇಕೆಂದರೆ ಸೈಯದ್ ಚಾಂದ ಸಾಬ್ ಇನಾಮದಾರ ಅವರೊಂದಿಗೆ ಮಾತಾಡಬೇಕು. ತಮ್ಮ ಶಿಷ್ಯರು, ಪುಟ್ಟ ಮಕ್ಕಳು ಸೇರಿದಂತೆ ಯಾರೊಂದಿಗೂ ಏಕ ವಚನದಲ್ಲಿ ಮಾತನಾಡದ ಚಾಂದ ಸಾಬರಿಗೆ ಅಪಾರ ಶಿಷ್ಯ ಬಳಗವಿದೆ.
ಇಂತಹ ಚಾಂದ ಬಾಶಾ ಅವರಿಗೆ ಅವರ ಶಿಷ್ಯಕೋಟಿ ವಿಶೇಷವಾಗಿ ರಾಘವೇಂದ್ರ ಹಾರಣಗೇರಾ ಅವರು ಸಂಪಾದಿಸಿದ ಅಭಿನಂದನ ಗ್ರಂಥವನ್ನು ಒಮ್ಮೆ ಓದಿದರೆ ಅವರ ಅಪರೂಪದ ವ್ಯಕ್ತಿತ್ವ ಅರ್ಥವಾಗುತ್ತದೆ.

ಸೈಯದ್ ಚಾಂದ ಸಾಬರಂಥ ಲಕ್ಷಾಂತರ ಚೇತನಗಳು ಈ ನೆಲದಲ್ಲಿವೆ. ಈ ಸೌಹಾರ್ದದ ಸೆಲೆಗಳಿಂದಲೇ ಅಲ್ಲಿ ಭಾತೃತ್ವ ಬೇರು ಬಿಟ್ಟಿದೆ. ಈ ಭಾವೈಕ್ಯದ ಬಳ್ಳಿಯನ್ನು ಹೊಸಕಿ ಹಾಕಲು ದುಷ್ಟ ಜೀವ ವಿರೋಧಿ ಶಕ್ತಿಗಳು ಎಷ್ಟೇ ಹುನ್ನಾರ ನಡೆಸುತ್ತ ಬಂದರೂ ಬಹುತ್ವ ಭಾರತ ಅಬಾಧಿತವಾಗಿ ಉಳಿದಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News