ತೇಲ್ತುಂಬ್ಡೆ, ನವ್ಲಾಖಾ ಬಂಧನ ರಾಜಕೀಯ ಪ್ರೇರಿತ: ನೇಪಾಳಿ ಚಿಂತಕರು

Update: 2020-04-18 14:26 GMT
ಡಾ.ಆನಂದ ತೇಲ್ತುಂಬ್ಡೆ

ಹೊಸದಿಲ್ಲಿ,ಎ.18: ಎಲ್ಗಾರ್ ಪರಿಷದ್ ಪ್ರಕರಣದಲ್ಲಿ ಖ್ಯಾತ ವಿದ್ವಾಂಸ ಹಾಗೂ ಸಾಮಾಜಿಕ ಕಾರ್ಯಕರ್ತ ಡಾ.ಆನಂದ ತೇಲ್ತುಂಬ್ಡೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ ನವ್ಲಾಖಾ ಅವರ ಬಂಧನಗಳನ್ನು 215ರಷ್ಟು ನೇಪಾಳಿ ಸಾಹಿತಿಗಳು, ಸಂಶೋಧಕರು, ವಿದ್ವಾಂಸರು, ಕಲಾವಿದರು ಮತ್ತು ಇತರ ವೃತ್ತಿಪರರು ಶನಿವಾರ ಹೇಳಿಕೆಯೊಂದರಲ್ಲಿ ಖಂಡಿಸಿದ್ದಾರೆ. ತೇಲ್ತುಂಬ್ಡೆ ಮತ್ತು ನವ್ಲಾಖಾ ಅವರು ಎ.14ರಂದು ಶರಣಾದ ಬಳಿಕ ಅವರನ್ನು ಬಂಧಿಸಲಾಗಿದೆ.

“ತೇಲ್ತುಂಬ್ಡೆ ಮತ್ತು ನವ್ಲಾಖಾ ಅವರ ವಿರುದ್ಧ ಕರಾಳ ಅಕ್ರಮ ಚಟುವಟಿಕೆಗಳ ತಡೆ ಕಾಯ್ದೆಯನ್ನು ಹೇರಲಾಗಿದೆ. ನೇಪಾಳದಲ್ಲಿ ದಲಿತ ಚಳವಳಿಯ ಸ್ನೇಹಿತನಾಗಿರುವ ತೇಲ್ತುಂಬ್ಡೆ ಅವರು ಜಾತಿ ವ್ಯವಸ್ಥೆಯ ಬಗ್ಗೆ ವ್ಯಾಪಕವಾಗಿ ಬರೆದಿದ್ದಾರೆ ಮತ್ತು ದಲಿತರ ಹಕ್ಕುಗಳಿಗಾಗಿ ಅವಿರತವಾಗಿ ಶ್ರಮಿಸಿದ್ದಾರೆ. ನೇಪಾಳದಲ್ಲಿ ಸಾಂವಿಧಾನಿಕ ಸುಧಾರಣೆಗಳ ಬಗ್ಗೆ ಕಾಳಜಿ ವಹಿಸಿದ್ದ ಅವರು,ಭಾರತೀಯ ಸಂವಿಧಾನದಲ್ಲಿ ತಾನು ಕಂಡಿರುವ ಲೋಪಗಳು ನೇಪಾಳದಲ್ಲಿ ಪುನರಾವರ್ತನೆಯಾಗಬಾರದು ಎಂದು ಬಯಸಿದ್ದರು” ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ತೇಲ್ತುಂಬ್ಡೆ ಮತ್ತ ನವ್ಲಾಖಾ ಅವರ ಬಂಧನಗಳು ರಾಜಕೀಯ ಪ್ರೇರಿತವಾಗಿವೆ ಎಂದು ಆರೋಪಿಸಿರುವ ಚಿಂತಕರು,ಇದು ಭಾರತದಲ್ಲಿಯ ದಲಿತರು, ಒಬಿಸಿಗಳು, ಆದಿವಾಸಿಗಳು ಹಾಗೂ ಭಾರತದ ಜಾತ್ಯತೀತ ಸಂವಿಧಾನದಲ್ಲಿ ನಂಬಿಕೆ ಹೊಂದಿರುವವರಿಗೆ ಒಂದು ಸಂದೇಶವಾಗಿದೆ ಎಂದಿದ್ದಾರೆ.

ಸರಕಾರವನ್ನು ಪದಚ್ಯುತಗೊಳಿಸಲು ಸಂಚು ರೂಪಿಸುತ್ತಿದ್ದ ಆರೋಪದಲ್ಲಿ ಬಂಧಿಸಲ್ಪಟ್ಟಿರುವ ತೇಲ್ತುಂಬ್ಡೆ,ನವ್ಲಾಖಾ ಮತ್ತು ಇತರ ಹೋರಾಟಗಾರರಿಗೆ ವಿಲಕ್ಷಣ ಕಿರುಕುಳ ನೀಡುವುದರಲ್ಲಿ ಭಾರತೀಯ ಅಧಿಕಾರಿಗಳು ತೊಡಗಿದ್ದಾರೆ. ಹೋರಾಟಗಾರರು ಎರಡು ವರ್ಷಗಳಿಂದ ಬಂಧನದಲ್ಲಿದ್ದರೂ ವಿಚಾರಣೆ ನಡೆಸುವ ಲಕ್ಷಣಗಳು ಕಾಣುತ್ತಿಲ್ಲ ಎಂದಿರುವ ಅವರು,ಭಾರತ ಸರಕಾರವು ತೇಲ್ತುಂಬ್ಡೆ ಮತ್ತು ನವ್ಲಾಖಾ ಅವರ ಆರೋಗ್ಯ ಅಪಾಯಗಳನ್ನು ಕಡೆಗಣಿಸಿದೆ ಮತ್ತು ಅವರು ಜೈಲಿನಲ್ಲಿ ಮೃತಪಟ್ಟರೆ ಅದು ವಿಶ್ವದ ಆತ್ಮಸಾಕ್ಷಿಗೆ ಕಳಂಕವಾಗಲಿದೆ ಎಂದಿದ್ದಾರೆ.

ದಲಿತರ ಹಕ್ಕುಗಳನ್ನು ತಾವು ಒಗ್ಗಟ್ಟಿನಿಂದ ಬೆಂಬಲಿಸುತ್ತಿದ್ದೇವೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದ್ದು, ಪೌರ ಸ್ವಾತಂತ್ರ್ಯಗಳ ಮೇಲಿನ ದಾಳಿಗಳನ್ನು ನಿಲ್ಲಿಸುವಂತೆ ಭಾರತ ಸರಕಾರವನ್ನು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News