ತೇಲ್ತುಂಬ್ಡೆ ಸುತ್ತ ಹೆಣೆದ ಸಂಚಿನ ಬಲೆ

Update: 2020-04-19 18:05 GMT

ಕೊರೋನ ವೈರಸ್ ಜೊತೆಗೆ ಫ್ಯಾಶಿಸ್ಟ್ ಪಿಡುಗನ್ನೂ ಎದುರಿಸಿ ಹೋರಾಡದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ. ಈ ಕೊರೋನಕ್ಕೂ ಇವರು ಹಿಂದೂ,_ ಮುಸ್ಲಿಮ್ ಬಣ್ಣ ಕೊಡುತ್ತಿದ್ದಾರೆ. ಹೊಸ ತಲೆಮಾರಿನ ಮೆದುಳಿನಲ್ಲಿ ನಂಜು ತುಂಬಿದ್ದಾರೆ. ಈ ಪ್ರಾಣ ಘಾತುಕ ನಂಜಿಗೆ ಔಷಧಿ ನೀಡಲು ತೇಲ್ತುಂಬ್ಡೆ ಅಂತಹವರು ನಮ್ಮ ಜೊತೆಗೆ ಇರಬೇಕು, ಜೈಲಿನ ಹೊರಗಿರಬೇಕು. ಅಂದರೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರಬೇಕು, ಅದನ್ನು ಕಾಪಾಡುವುದೇ ನಮ್ಮೆಲ್ಲರ ಏಕೈಕ ಕಾರ್ಯಸೂಚಿಯಾಗಬೇಕಾಗಿದೆ.


ಕಳೆದ ತಿಂಗಳು ಮಾರ್ಚ್ 24 ರಂದು ಪ್ರಧಾನಿ ನರೇಂದ್ರ ಮೋದಿ ಒಮ್ಮಿಂದೊಮ್ಮೆಲೆ ರಾತ್ರಿ 8 ಗಂಟೆಗೆ ಟಿ.ವಿ.ಯಲ್ಲಿ ಪ್ರತ್ಯಕ್ಷರಾಗಿ ಕೊರೋನ ಅಪಾಯದ ಬಗ್ಗೆ ವಿವರಿಸಿ ಅಂದೇ ರಾತ್ರಿ 12 ಗಂಟೆಯಿಂದ ದೇಶವ್ಯಾಪಿ ಲಾಕ್‌ಡೌನ್ ಎಂದು ಘೋಷಿಸಿದಾಗ ಇಡೀ ದೇಶವೇ ಎಲ್ಲ ಮತಭೇದ ಬದಿಗಿಟ್ಟು ಅವರನ್ನು ಬೆಂಬಲಿಸಿತು. ರಾಷ್ಟ್ರೀಯ ವಿಪತ್ತು ಎದುರಾದಾಗ ಎಲ್ಲ ಪಕ್ಷಗಳು ಭಿನ್ನಾಭಿಪ್ರಾಯ ಮರೆತು ಬೆಂಬಲಿಸಿದವು. ಇಂತಹ ಸನ್ನಿವೇಶದಲ್ಲಿ ಅಧಿಕಾರರೂಢ ಪಕ್ಷವೂ ತನ್ನ ಎಲ್ಲ ಹಿಡನ್, ಓಪನ್ ಅಜೆಂಡಾಗಳನ್ನು ಗಂಟುಕಟ್ಟಿ ಸಂದೂಕಿನಲ್ಲಿಟ್ಟು ಕೊರೋನದಿಂದ ರಾಷ್ಟ್ರವನ್ನು ಕಾಪಾಡಲು ಮುಂದಾಗಬೇಕಾಗಿತ್ತು. ಆದರೆ ಬಿಜೆಪಿ ಆ ರೀತಿ ನಡೆದುಕೊಳ್ಳಲಿಲ್ಲ. ಕೊರೋನ ವಿರುದ್ಧ ರಾಷ್ಟ್ರವ್ಯಾಪಿ ಸಮರ ಆರಂಭವಾದಾಗಲೇ ಮಧ್ಯಪ್ರದೇಶದಲ್ಲಿ ಆಪರೇಷನ್ ಕಮಲ ಕರಾಮತ್ತು ಮಾಡಿ ಕಮಲನಾಥ್ ನೇತೃತ್ವದ ಕಾಂಗ್ರೆಸ್ ಸರಕಾರವನ್ನು ಉರುಳಿಸಿ ಶಿವರಾಜ್ ಸಿಂಗ್ ಚವ್ಹಾಣರನ್ನು ಮುಖ್ಯ ಮಂತ್ರಿಯನ್ನಾಗಿ ಮಾಡಲಾಯಿತು. ಆತ ಮುಖ್ಯಮಂತ್ರಿಯಾಗಿ ಒಂದು ತಿಂಗಳಾಗುತ್ತ ಬಂದರೂ ಮಂತ್ರಿ ಮಂಡಲ ರಚಿಸಲಾಗದೆ ಅಲ್ಲಿ ಕೊರೋನ ತಡೆ ಕಾರ್ಯಾಚರಣೆಗೆ ಹಿನ್ನೆಡೆಯಾಗಿದೆ. ಆ ರಾಜ್ಯದ ಆರೋಗ್ಯ ಇಲಾಖೆ ಕಾರ್ಯದರ್ಶಿ ಸೇರಿದಂತೆ ಆ ಇಲಾಖೆಯ ಬಹುತೇಕ ಸಿಬ್ಬಂದಿ ಕೊರೋನದ ಪರಿಣಾಮವಾಗಿ ಕ್ವಾರಂಟೈನ್‌ನಲ್ಲಿದ್ದಾರೆ.

ಇದೇ ಸಂದರ್ಭದಲ್ಲಿ ಆನಂದ್ ತೇಲ್ತುಂಬ್ಡೆ ಅವರ ಬಂಧನವು ಹೆಚ್ಚು ಸುದ್ಧಿಯಾಯಿತು. ಅಂತರ್‌ರಾಷ್ಟ್ರೀಯ ಮಟ್ಟದ ಪ್ರತಿಭಾನ್ವಿತ ಲೇಖಕ, ಚಿಂತಕ ಅಂತಲೆ ನೋಮ್ ಚೋಮಸ್ಕಿಯಂತಹವರು ತೇಲ್ತುಂಬ್ಡೆ ಬಂಧನ ಕೂಡದು ಎಂದು ಆಗ್ರಹಿಸಿದರು. ಆದರೆ ಸುಪ್ರೀಂಕೋರ್ಟ್ ನ್ಯಾಯಾಧೀಶರು ಕರಗಲಿಲ್ಲ. ಮೋದಿ ಅವರು 2014ರಲ್ಲಿ ಅಧಿಕಾರಕ್ಕೆ ಬಂದ ನಂತರ ದೇಶದ ಸಂವಿಧಾನಿಕ ಸಂಸ್ಥೆಗಳನ್ನು ಒಂದೊಂದಾಗಿ ನಿಷ್ಕ್ರಿಯಗೊಳಿಸುತ್ತ ಬಂದರು. ಸ್ವಾತಂತ್ರದ 7 ದಶಕಗಳವರೆಗೆ ನ್ಯಾಯಾಂಗದ ಸ್ವಾಯತ್ತತೆಗೆ ಧಕ್ಕೆ ಉಂಟಾಗಿರಲಿಲ್ಲ. ಮೋದಿ ನೇತೃತ್ವದ ಬಿಜೆಪಿ ಸರಕಾರ ಬಂದ ನಂತರ ನ್ಯಾಯಾಂಗವೂ ತನ್ನ ಸ್ವಾಯತ್ತತೆಯನ್ನು ಕಳೆದುಕೊಂಡಿತು.ಇದು ಬರೀ ವ್ಯಕ್ತಿಯಾಗಿ ಮೋದಿ ಅವರ ಮಸಲತ್ತು ಅನ್ನುವುದಕ್ಕಿಂತ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ತೆರೆ ಮರೆ ಕೈವಾಡ ಅಂದರೆ ಹೆಚ್ಚು ಸೂಕ್ತವಾಗುತ್ತದೆ.

ಆನಂದ್ ತೇಲ್ತುಂಬ್ಡೆ ಯಾರೆಂದು ಎಲ್ಲರಿಗೂ ಗೊತ್ತಿದೆ. ದಲಿತ ಅಸ್ಪಶ್ಯ ಸಮುದಾಯದ ಮೂಕ ಸಂಕಟಕ್ಕೆ ಧ್ವನಿಯಾಗಿ ಬರೆಯುತ್ತ ಬಂದ ಆನಂದ್ ತೇಲ್ತುಂಬ್ಡೆ ಬಾಬಾ ಸಾಹೇಬರ ಮೊಮ್ಮಗಳು ರಮಾಬಾಯಿ ಅವರನ್ನು ವಿವಾಹವಾಗಿದ್ದಾರೆ. ಅಂತಲೆ ಈ ಬಂಧನದ ಮುನ್ನ ಅಂಬೇಡ್ಕರ್ ಅವರ ಕುಟುಂಬದ ಸದಸ್ಯರು ಪ್ರಕಾಶ ಅಂಬೇಡ್ಕರ್ ಅವರ ನೇತೃತ್ವದಲ್ಲಿ ಒಂದಾಗಿ ಈ ಬಂಧನದ ವಿರುದ್ಧ ರಾಷ್ಟ್ರಪತಿ ಮತ್ತು ಪ್ರಧಾನಿಗೆ ಪತ್ರ ಬರೆದು ತೇಲ್ತುಂಬ್ಡೆ ಜೀವಕ್ಕೆ ಗಂಡಾಂತರವಿದೆ, ಅವರ ಬಂಧನ ಬೇಡ ಎಂದು ಮನವಿ ಮಾಡಿದರು. ಆದರೆ ಪ್ರಯೋಜನವಾಗಲಿಲ್ಲ. ಸುಪ್ರೀಂಕೋರ್ಟ್ ಅವರ ಜಾಮೀನು ಅರ್ಜಿಯನ್ನು ತಿರಸ್ಕರಿಸಿತು. ಹೀಗಾಗಿ ತೆಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ ರಾಷ್ಟ್ರೀಯ ತನಿಖಾ ದಳದ ಮುಂದೆ ಹಾಜರಾದರು.

 ಇಡೀ ದೇಶ ಕೊರೋನ ವೈರಸ್‌ನಿಂದ ತತ್ತರಿಸಿ ಹೋಗಿದೆ. ಭಾರತ ಮಾತ್ರವಲ್ಲ ವಿಶ್ವವೇ ಕಂಗಾಲಾಗಿದೆ. ಇಂತಹ ಸಂದರ್ಭದಲ್ಲಿ ಚುನಾಯಿತ ಸರಕಾರವೊಂದರ ಆದ್ಯತೆ ಏನೀರಬೇಕು ಎಂದು ಪ್ರಶ್ನಿಸಿದರೆ ಸಣ್ಣ ಮಗು ಕೂಡ ಮೊದಲು ಈ ಪಿಡುಗಿನಿಂದ ಮನುಷ್ಯರನ್ನು ಬಚಾವ್ ಮಾಡಿ ಎಂಬುದಾಗಿರುತ್ತದೆ. ಆದರೆ ನಮ್ಮ ಮೋದಿ ನೇತೃತ್ವದ ಬಿಜೆಪಿ ಸರಕಾರ ಕೊರೋನ ವಿರುದ್ಧ ಸಮರದ ಜೊತೆ ರಾಷ್ಟ್ರದ ಜನತಾಂತ್ರಿಕ ವ್ಯವಸ್ಥೆಯ ಅಡಿಪಾಯವನ್ನೇ ನಾಶ ಮಾಡುವ ಅಜೆಂಡಾ ಜಾರಿಗೆ ತರಲು ಹೊರಟಿದೆ.ಇದಕ್ಕೆ ಪ್ರತ್ಯಕ್ಷ ಉದಾಹರಣೆ ಆನಂದ್ ತೇಲ್ತುಂಬ್ಡೆ ಮತ್ತು ಗೌತಮ್ ನವ್ಲಾಖಾ ಬಂಧನ.

ತೇಲ್ತುಂಬ್ಡೆ ಮಾತ್ರವಲ್ಲ, ಹಿಂದು ಪತ್ರಿಕೆಯ ಮಾಜಿ ಸಂಪಾದಕ ಸದ್ಯ ವೈರ್ ಆನ್‌ಲೈನ್ ಪತ್ರಿಕೆ ಸಂಪಾದಕ ಸಿದ್ಧಾರ್ಥ ವರದರಾಜನ್ ಮೇಲೆ ಉತ್ತರ ಪ್ರದೇಶದ ಯೋಗಿ ಸರಕಾರ ಎಫ್‌ಐಆರ್ ಹಾಕಿದೆ. ಈ ಲಾಕ್‌ಡೌನ್ ದಿನಗಳಲ್ಲಿ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರೆದು ಹಾಜರಾಗಲು ಸಿದ್ಧಾರ್ಥ ವರದರಾಜನ್ ದೂರದ ದಿಲ್ಲಿಯಿಂದ ಅಲಹಾಬಾದ್‌ಗೆ ಬರಬೇಕಾಗಿದೆ. ಹೀಗೆ ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರದ ಅಣತಿಯಂತೆ ದೇಶದ ಲೇಖಕರು, ಪತ್ರಕರ್ತರು ಕಲಾವಿದರ ಮೇಲೆ ಫ್ಯಾಶಿಸ್ಟ್ ದಾಳಿ ಆರಂಭವಾಗಿದೆ.

ಇಂತಹ ಸಂದರ್ಭದಲ್ಲಿ ನ್ಯಾಯಾಲಯ ರಕ್ಷಣೆಗೆ ಬರುತ್ತದೆ ಎಂಬ ನಂಬಿಕೆ ಈವರಗೆ ಇತ್ತು.ಈಗ ಅದೂ ಉಳಿದಿಲ್ಲ. ಹೇಳಿದಂತೆ ಕೇಳದ ನ್ಯಾಯಮೂರ್ತಿ ಲೋಯಾ ಅವರ ಗತಿ ಏನಾಯಿತು ಎಂದು ಎಲ್ಲರಿಗೂ ಗೊತ್ತಿದೆ. ಹೇಳಿದಂತೆ ಕೇಳಿದವರು ರಾಜ್ಯಸಭಾ ಸದಸ್ಯತ್ವದ ಬಹುಮಾನವನ್ನೂ ಗಿಟ್ಟಿಸಿಕೊಂಡಿದ್ದಾರೆ.

ಹಿಂದೂ ಜಾತಿ ವ್ಯವಸ್ಥೆಯ ವಿರುದ್ಧ ಬರವಣಿಗೆಯ ಮೂಲಕ ವೈಚಾರಿಕ ಜಾಗೃತಿ ಮೂಡಿಸುತ್ತ ಬಂದ ತೇಲ್ತುಂಬ್ಡೆ ಅನೇಕ ಬಾರಿ ನೇರವಾಗಿ ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡರು. 2002ರಲ್ಲಿ ಗುಜರಾತ್ ಹತ್ಯಾಕಾಂಡ ನಡೆಯಿತು. ಆಗ ಒಂದು ಸಾವಿರ ಜನರನ್ನು ಹಾದಿ ಬೀದಿಯಲ್ಲಿ ಕೊಚ್ಚಿಕೊಂದು ಹಾಕಲಾಯಿತು. ಇದನ್ನು ಬಲವಾಗಿ ಖಂಡಿಸಿದ ತೇಲ್ತುಂಬ್ಡೆ ಮೋದಿ ಅವರನ್ನು ಹಿಟ್ಲರ್‌ಗೆ ಹೋಲಿಕೆ ಮಾಡಿದರು. ಆಗಿನಿಂದ ತೇಲ್ತುಂಬ್ಡೆ ಅವರ ಬಾಯಿ ಮುಚ್ಚಿಸಲು, ಲೇಖನಿ ಸ್ಥಗಿತಗೊಳಿಸಲು ನಾಗಪುರದ ಸಂವಿಧಾನೇತರ ಶಕ್ತಿ ಕೇಂದ್ರ ಮಸಲತ್ತು ನಡೆಸುತ್ತ ಬಂತು.

ಈ ನೆಲದಲ್ಲಿ ಇದು ಹೊಸದೇನಲ್ಲ ಸಮಾನತೆಗಾಗಿ ಧ್ವನಿಯೆತ್ತಿದ ಬಸವಣ್ಣ, ಸಂತ ತುಕಾರಾಮ, ಚೋಕಾಮೇಳ ಅವರ ಗತಿ ಏನಾಗಿದೆ ಎಂದು ಎಲ್ಲರಿಗೂ ಗೊತ್ತಿದೆ. ಏಕಲವ್ಯನ ಬೆರಳು ಕತ್ತರಿಸಿದವರಿಗೆ ಕತ್ತು ಕತ್ತರಿಸುವುದನ್ನು ಯಾರೂ ಹೇಳಿಕೊಡಬೇಕಾಗಿಲ್ಲ.

ಇದೇ ಮೋದಿ ಸರಕಾರ ಇನ್ನೊಂದೆಡೆ ಈ ದೇಶದ ಮಹಾನ್ ವಿದ್ವಾಂಸ, ಗೋವಾ ಐಐಟಿ ಪ್ರೊಫೆಸರ್ ಆನಂದ್ ತೇಲ್ತುಂಬ್ಡೆ ಮತ್ತು ಮಾನವ ಹಕ್ಕುಗಳ ಹೋರಾಟಗಾರ ಗೌತಮ್ ನವ್ಲಾಖಾ ಅವರನ್ನು ಬಂಧನಕ್ಕೆ ಗುರಿಪಡಿಸಿದೆ. ಇದಕ್ಕಾಗಿ ಸುಪ್ರೀಂಕೋರ್ಟ್‌ನ್ನು ಬಳಸಿಕೊಳ್ಳಲಾಗಿದೆ.

ಆನಂದ್ ತೇಲ್ತುಂಬ್ಡೆ ಅವರ ಬಗ್ಗೆ ದೇಶದ ಇಂದಿನ ಆಳುವ ಪಕ್ಷಕ್ಕೆ ಈ ಪರಿ ಕೋಪವಿರಲು ಕಾರಣವಿದೆ. ಮನುವಾದಿ ಹಿಂದೂ ರಾಷ್ಟ್ರವನ್ನು ಕಟ್ಟಲು ಹೊರಟ ಸಂಘಪರಿವಾರ ಅದಕ್ಕಾಗಿ ದಲಿತ, ಹಿಂದುಳಿದ ಸಮುದಾಯಗಳನ್ನು ಬುಟ್ಟಿಗೆ ಹಾಕಿಕೊಳ್ಳಲು ಷಡ್ಯಂತ್ರ ರೂಪಿಸಿದೆ. ಅದಕ್ಕಾಗಿ ದೇಶದ ಎಲ್ಲ ಮಹಾಪುರುಷರನ್ನು ಹೈಜಾಕ್ ಮಾಡಿಕೊಳ್ಳಲು ಯತ್ನಿಸುತ್ತಿದೆ. ಆರೆಸ್ಸೆಸ್‌ನಲ್ಲಿ ಅಂತಹ ಐಕಾನ್‌ಗಳಿಲ್ಲ. ಅದಕ್ಕಾಗಿ ಅದು ಭಗತ್‌ಸಿಂಗ್ ಅವರನ್ನು ಬಳಸಿಕೊಳ್ಳಲು ಯತ್ನಿಸಿತು. ಆದರೆ ಭಗತ್ ಎಡಪಂಥೀಯ ಎಂದು ಬೆಳಕಿಗೆ ಬಂದಾಗ ಹಿಂದೆ ಸರಿಯಿತು. ಅದೇ ರೀತಿ ಅಂಬೇಡ್ಕರ್ ಅವರನ್ನು ತನ್ನ ಐಕಾನ್ ಮಾಡಿಕೊಳ್ಳಲು ಯತ್ನಿಸುತ್ತ ಬಂತು. ಅದಕ್ಕೆ ಮಹಾರಾಷ್ಟ್ರದಲ್ಲಿ ಮಾತ್ರವಲ್ಲ ದೇಶದಲ್ಲಿ ಮುಖ್ಯ ಅಡ್ಡಿಯಾದವರು ಆನಂದ್‌ತೇಲ್ತುಂಬ್ಡೆ. ಮನುವಾದಿ ಶಕ್ತಿಗಳ ಹುನ್ನಾರದ ವಿರುದ್ಧ ವೈಚಾರಿಕ ಸಮರವನ್ನೇ ಸಾರಿದ ತೇಲ್ತುಂಬ್ಡೆ ಬಾಬಾ ಸಾಹೇಬರ ಸಾಹಿತ್ಯದ ಮೇಲೆ ಬೆಳಕು ಚೆಲ್ಲುವ ಹಲವಾರು ಪುಸ್ತಕಗಳನ್ನು ಬರೆದರು. ಅಂಬೇಡ್ಕರ್ ಹಿಂದೂರಾಷ್ಟ್ರ ಸಿದ್ಧಾಂತವನ್ನು ಹೇಗೆ ವಿರೋಧಿಸಿದ್ದರು ಎಂದು ದಾಖಲೆ ಸಹಿತ ಸಾಬೀತುಪಡಿಸಿದರು. ಇದು ಫ್ಯಾಶಿಸ್ಟ್ ಶಕ್ತಿಗಳಿಗೆ ನುಂಗಲಾಗದ ತುತ್ತಾಯಿತು.

ಸಾಮಾಜಿಕ ನ್ಯಾಯದ ಪರವಾಗಿ, ಜಾತಿ ಪದ್ಧತಿಯ ವಿರೋಧವಾಗಿ ಧ್ವನಿಯೆತ್ತುವವರನ್ನು ಈ ದೇಶದ ಆಳುವ ವರ್ಗ ಅಂತಹವರನ್ನು ನಕ್ಸಲೀಯರೆಂದು, ಮಾವೋವಾದಿಗಳೆಂದು ಕರೆದು ಜೈಲಿಗೆ ತಳ್ಳುತ್ತ ಬಂದಿದೆ.ಈಗಾಗಲೇ ಕವಿ ವರವರರಾವ್( 80 ವರ್ಷ) ಸೇರಿದಂತೆ ಅನೇಕ ಸಾಹಿತಿ, ಬುದ್ಧಿಜೀವಿಗಳನ್ನು ಪುಣೆಯ ಜೈಲಿನಲ್ಲಿ ಹಾಕಲಾಗಿದೆ. ಈಗ ಆನಂದ್ ತೇಲ್ತುಂಬ್ಡೆ ಅವರಿಗೂ ಅದೇ ಹಣೆಪಟ್ಟಿ ಕಟ್ಟಿ ಜಾಮೀನು ನಿರಾಕರಿಸಿ ಸೆರೆ ಮನೆಗೆ ತಳ್ಳಲಾಗಿದೆ. ನೇರವಾಗಿ ರಾಷ್ಟ್ರೀಯ ತನಿಖಾ ದಳ( ಎನ್‌ಐಎ) ತನಿಖೆ ನಡೆಸಲಿದೆ.

ಇದು ಭಾರತದ ಇಂದಿನ ಸ್ಥಿತಿ. ಡಾ.ಅಂಬೇಡ್ಕರ್ ಬದುಕಿದ್ದರೆ ಅವರನ್ನು ಮಾವೋವಾದಿಯೆಂದು ಜೈಲಿಗೆ ತಳ್ಳಲು ಇಂದಿನ ಫ್ಯಾಶಿಸ್ಟ್ ಆಳುವ ವರ್ಗ ಹಿಂಜರಿಯುತ್ತಿರಲಿಲ್ಲ. ಗಾಂಧೀಜಿಗಂತೂ ನ್ಯಾಯಾಲಯದ ಆಚೆ ಇವರು ಯಾವ ಗತಿಗಾಣಿಸಿದರೆಂದು ಎಲ್ಲರಿಗೂ ಗೊತ್ತಿದೆ. ಕೊರೋನ ವೈರಸ್ ಜೊತೆಗೆ ಫ್ಯಾಶಿಸ್ಟ್ ಪಿಡುಗನ್ನೂ ಎದುರಿಸಿ ಹೋರಾಡದಿದ್ದರೆ ಭಾರತಕ್ಕೆ ಭವಿಷ್ಯವಿಲ್ಲ. ಈ ಕೊರೋನಕ್ಕೂ ಇವರು ಹಿಂದೂ,_ ಮುಸ್ಲಿಮ್ ಬಣ್ಣ ಕೊಡುತ್ತಿದ್ದಾರೆ. ಹೊಸ ತಲೆಮಾರಿನ ಮೆದುಳಿನಲ್ಲಿ ನಂಜು ತುಂಬಿದ್ದಾರೆ. ಈ ಪ್ರಾಣ ಘಾತುಕ ನಂಜಿಗೆ ಔಷಧಿ ನೀಡಲು ತೇಲ್ತುಂಬ್ಡೆ ಅಂತಹವರು ನಮ್ಮ ಜೊತೆಗೆ ಇರಬೇಕು, ಜೈಲಿನ ಹೊರಗಿರಬೇಕು. ಅಂದರೆ ಪ್ರಜಾಪ್ರಭುತ್ವ ಸುರಕ್ಷಿತವಾಗಿರಬೇಕು, ಅದನ್ನು ಕಾಪಾಡುವುದೇ ನಮ್ಮೆಲ್ಲರ ಏಕೈಕ ಕಾರ್ಯಸೂಚಿಯಾಗಬೇಕಾಗಿದೆ.

Writer - ಸನತ್ ಕುಮಾರ್ ಬೆಳಗಲಿ

contributor

Editor - ಸನತ್ ಕುಮಾರ್ ಬೆಳಗಲಿ

contributor

Similar News

ನಾಸ್ತಿಕ ಮದ